ತಾತ-ಮೊಮ್ಮಕ್ಕಳ ಲೋಕ ರಂಗು

ಸಂಸತ್ ಇತಿಹಾಸದಲ್ಲಿ ಹೊಸ ಅಧ್ಯಾಯ | ಮೊಮ್ಮಕ್ಕಳ ಜತೆ ದೇವೇಗೌಡ ಸ್ಪರ್ಧೆ

|ಶಿವಕುಮಾರ ಮೆಣಸಿನಕಾಯಿ

ತಾತ ಮೊಮ್ಮಕ್ಕಳನ್ನು ದೇವಸ್ಥಾನಕ್ಕೋ, ಪ್ರವಾಸಕ್ಕೋ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರಿಲ್ಲಿ, ಮೊಮ್ಮಕ್ಕಳಿಬ್ಬರನ್ನು ರಾಷ್ಟ್ರದ ಶಕ್ತಿಕೇಂದ್ರವಾದ ಸಂಸತ್​ನೊಳಗೆ ಕರೆದೊಯ್ಯುವ ಪ್ರಯತ್ನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಾಕ್ಷಿಯಾಗಲಿದ್ದಾರೆ. ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದೇ ಆದಲ್ಲಿ ದೇಶದ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಪ್ರಥಮ ಎನಿಸಿಕೊಳ್ಳಲಿದೆ.

ಈತನಕ ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭೆಯವರೆಗೆ ಅಪ್ಪ-ಮಗ, ಗಂಡ-ಹೆಂಡತಿ, ಮಾವ-ಸೊಸೆ, ಅಣ್ಣ-ತಮ್ಮ, ಅತ್ತೆ-ಸೊಸೆ, ನಾದಿನಿಯರು, ನಾನಾ ರೀತಿಯ ರಕ್ತ ಸಂಬಂಧಿಗಳು ಸ್ಪರ್ಧಿಸಿದ ನೂರಾರು ನಿದರ್ಶನಗಳಿವೆ. ಆದರೆ ಲೋಕಸಭಾ ಚುನಾವಣೆಗೆ ತಾತ, ಮೊಮ್ಮಕ್ಕಳು ಒಟ್ಟಿಗೆ ಸ್ಪರ್ಧಿಸಿರುವ ಉದಾಹರಣೆಯೇ ಇಲ್ಲ. ತಾತ ಸಂಸತ್ ಸದಸ್ಯನಾಗಿದ್ದಾಗ ಮೊಮ್ಮಗ ವಿಧಾನಸಭೆಗೆ ಸ್ಪರ್ಧಿಸಿರುವುದನ್ನೂ ಕಾಣಬಹುದಾದರೂ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದಿಲ್ಲ. ನಿಖಿಲ್ ಮತ್ತು ಪ್ರಜ್ವಲ್ ಕ್ರಮವಾಗಿ ಮಂಡ್ಯ ಹಾಗೂ ಹಾಸನದಿಂದ ಕಣಕ್ಕಿಳಿಯಲಿದ್ದಾರೆ. ದೇವೇಗೌಡರು ಬೆಂಗಳೂರು ಉತ್ತರ ಅಥವಾ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ. ಅನಿರೀಕ್ಷಿತ ಬೆಳವಣಿಗೆಯಲ್ಲಿ ಕ್ಷೇತ್ರ ಬದಲಾಗಬಹುದೇ ಹೊರತು ಸ್ಪರ್ಧೆಯಂತೂ ಕಟ್ಟಿಟ್ಟ ಬುತ್ತಿ.

ಫ್ಯಾಮಿಲಿ ಪರಾಕಾಷ್ಠೆ

ಭಾರತದ ಅಧಿಕಾರ ರಾಜಕಾರಣದಲ್ಲಿ ವಂಶ ರಾಜಕಾರಣ ಬಗ್ಗೆ ದಶಕಗಳಿಂದ ಚರ್ಚೆ ನಡೆಯುತ್ತಲೇ ಇದೆ. ವಿಶೇಷವಾಗಿ ನೆಹರು ಮನೆತನದ ಕುರಿತಂತೆ ಕಟುಟೀಕೆಗಳೇ ಕೇಳಿಬಂದಿವೆ. ಆದಾಗ್ಯೂ ನೆಹರು ಮನೆತನದಲ್ಲೂ ತಾತ-ಮೊಮ್ಮಕ್ಕಳು ಏಕಕಾಲಕ್ಕೆ ಸ್ಪರ್ಧಿಸಿರುವ ನಿದರ್ಶನ ಇಲ್ಲ. ಜಮ್ಮು-ಕಾಶ್ಮೀರದ ಸಯೀದ್ ಹಾಗೂ ಅಬ್ದುಲ್ಲಾ ಕುಟುಂಬದಿಂದ ಕೇರಳದವರೆಗಿನ ಕಮ್ಯುನಿಸ್ಟ್ ಸರ್ಕಾರದ ತನಕ ಒಂದೇ ಕುಟುಂಬದ ಹಲವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರ ಭಾರತದ ಉತ್ತರಪ್ರದೇಶ, ಬಿಹಾರ, ಒಡಿಶಾ, ಪಂಜಾಬ್, ಮಹಾರಾಷ್ಟ್ರ, ಇತ್ತ ದಕ್ಷಿಣ ಭಾರತದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲೂ ವಂಶ ರಾಜಕಾರಣ ಹಾಸು ಹೊಕ್ಕಾಗಿದೆ. ವಂಶ ರಾಜಕಾರಣ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಎಂಬಂತೆ ದೇವೇಗೌಡರು ಕುಟುಂಬದ ಮೂರನೇ ತಲೆಮಾರು ಮೊದಲನೇ ತಲೆಮಾರಿನ ಜತೆ ಏಕಕಾಲಕ್ಕೆ ಸ್ಪರ್ಧೆಗೆ ಇಳಿಯುತ್ತಿದೆ. ಮೊದಲನೇ ತಲೆಮಾರಿನ ದೇವೇಗೌಡರು ಏಳನೇ ಬಾರಿಗೆ ಸಂಸತ್ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ಎರಡನೇ ತಲೆಮಾರಿನ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಹಾಗೂ ಎಚ್.ಡಿ.ರೇವಣ್ಣ ಸಂಪುಟ ದರ್ಜೆ ಸಚಿವರು. ಮೂರನೇ ತಲೆಮಾರಿನ ನಿಖಿಲ್ ಮತ್ತು ಪ್ರಜ್ವಲ್ ಮೊದಲ ಬಾರಿಗೆ ಸಂಸತ್ ಪ್ರವೇಶದ ಕನಸು ಕಾಣುತ್ತಿದ್ದಾರೆ.

ರಾಮನಗರದಲ್ಲೂ ವಿರೋಧವಿತ್ತು

ಬೆಂಗಳೂರು: ರಾಮನಗರ ಉಪಚುನಾವಣೆ ವೇಳೆ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೂ ವಿರೋಧ ಇತ್ತು. ಈಗಲೂ ನಿಖಿಲ್ ಸ್ಪರ್ಧೆಗೆ ಮಂಡ್ಯದಲ್ಲಿ ಕೆಲವರು ವಿರೋಧ ಸೃಷ್ಟಿ ಮಾಡಿದ್ದಾರೆ. ಇದರ ಹಿಂದೆ ಏನೇನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳವಾರ ಪದ್ಮನಾಭನಗರದಲ್ಲಿ

ಎಚ್.ಡಿ. ದೇವೇಗೌಡರ ಜತೆ ರ್ಚಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮನಗರದಲ್ಲಿ ಅನಿತಾ ಅವರು ಒಂದು ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದರು. ಅಂತಿಮವಾಗಿ ಯಾವುದು ಸರಿ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಜನತೆಗೆ ನಮ್ಮ ಕುಟುಂಬ ಯಾವತ್ತಿಗೂ ಅನ್ಯಾಯ ಮಾಡಿಲ್ಲ ಎಂದು ನಿಖಿಲ್ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ನಾನು ಹಾಸನದಲ್ಲಿ ಹುಟ್ಟಿ ರಾಮನಗರ ಜಿಲ್ಲೆಯಲ್ಲಿ ಗೆದ್ದಿದ್ದೇನೆ. ಸದಾನಂದಗೌಡರು ಮಂಗಳೂರಿನಿಂದ ಬಂದು ಬೆಂಗಳೂರಿನಲ್ಲಿ ಗೆದ್ದಿದ್ದಾರೆ. ಶೋಭಾ ಕರಂದ್ಲಾಜೆ ಯಶವಂತಪುರದಲ್ಲಿ ಗೆದ್ದು, ಆನಂತರ ಉಡುಪಿ-ಚಿಕ್ಕಮಗಳೂರಿಗೆ ಹೋಗಿದ್ದಾರೆ. ಮಂಡ್ಯದಲ್ಲಿ ಹುಟ್ಟಿದ ಬಿ.ಎಸ್. ಯಡಿಯೂರಪ್ಪನವರು ಶಿವಮೊಗ್ಗದಲ್ಲಿ ಗೆದ್ದಿದ್ದಾರೆ. ಹೀಗೆ ಎಲ್ಲರಿಗೂ ಅವರದೇ ಆದ ಸ್ವಾತಂತ್ರ್ಯವಿದೆ ಎಂದು ಸಿಎಂ ವಿಶ್ಲೇಷಿಸಿದರು. ಮೈಸೂರು ಲೋಕಸಭಾ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ಜತೆ ತಿಕ್ಕಾಟ ನಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ದೇವೇಗೌಡರು ಒಂದು ವಾರದಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.

ನಿಮ್ಮ (ಮಾಧ್ಯಮ) ಸ್ಟೋರಿಗಳಿಂದ ಚುನಾವಣೆ ನಡೆಯುವುದಿಲ್ಲ. ನಿಮ್ಮ ಸ್ಟೋರಿಗಳನ್ನು ನೀವು ಮಾಡಿ, ಚುನಾವಣೆ ನಾವು ಮಾಡುತ್ತೇವೆ. ಚುನಾವಣೆ ನಡೆಸುವುದು ನಮಗೆ ಗೊತ್ತಿದೆ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

ಸುಮಲತಾ ಮಂಡ್ಯದ ಯಜಮಾನ್ತಿ!

ಬೆಂಗಳೂರು: ಸುಮಲತಾ ಗೌಡ್ತಿ ಅಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಜೆಡಿಎಸ್ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ, ಇದೀಗ ಅಂಬರೀಷ್ ನಿಧನ ನಂತರ ಸುಮಲತಾ ರಾಜಕಾರಣಕ್ಕೆ ಬಂದಿರುವುದು ಕುಟುಂಬ ರಾಜಕೀಯ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ಹಳೇ ವಿವಾದಕ್ಕೆ ಮರುಜನ್ಮ ನೀಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಕುಟುಂಬ ರಾಜಕಾರಣ ಎಲ್ಲ ಕಡೆಗಳಲ್ಲೂ ಇದೆ. ಸುಮಲತಾ ರಾಜಕಾರಣಕ್ಕೆ ಬಂದಿರುವುದರಿಂದ ಅದೂ ಕುಟುಂಬ ರಾಜಕಾರಣವೇ ಎಂದು ಕುಟುಕಿದರು. ಮಂಡ್ಯದ ಗೌಡ್ತಿ ವಿಚಾರ ಮುಗಿದ ಅಧ್ಯಾಯ. ರೇವಣ್ಣ ಹೇಳಿಕೆ ಕೂಡ ಮುಗಿದ ವಿಚಾರವೇ. ಇದು ಮಂಡ್ಯದ ಯಜಮಾನ್ತಿ ವಿಚಾರ ಅಷ್ಟೇ. ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದು, ಚುನಾವಣಾ ಫಲಿತಾಂಶ ಹೊರಬಂದ ಬಳಿಕ ಸತ್ಯ ತಿಳಿಯುತ್ತದೆ ಎಂದ ಕೆಟಿಎಸ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ ಕುಟುಂಬ ಸೇರಿ ಎಲ್ಲ ಕಡೆಗಳಲ್ಲೂ ಕುಟುಂಬ ರಾಜಕಾರಣವಿದೆ. ಮಂಡ್ಯ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ಆಯ್ಕೆ ಮಾಡಬೇಕಾಗಿದೆ ಎಂದು ಸಮರ್ಥಿಸಿಕೊಂಡರು.

ದೇವೇ ಗೌಡರು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಹೀಗಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಕಾಂಗ್ರೆಸ್​ಗೆ ಕೇಳಿದ್ದೇವೆ. ಮೈಸೂರು ಆಗದಿದ್ದರೆ ತುಮಕೂರು ಕೊಡಬೇಕೆಂದೂ ಕೋರಿದ್ದೇವೆ. ಈ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ.

| ವೈಎಸ್​ವಿ ದತ್ತಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ

ಸಕ್ರಿಯ ವಂಶಾವಳಿ

ಬೀದರ್​ನಿಂದ ಚಾಮರಾಜನಗರದ ವರೆಗಿನ 28 ಕ್ಷೇತ್ರಗಳಲ್ಲಿ ವಂಶ ರಾಜಕಾರಣದ ಕುರುಹು ಢಾಳಾಗಿ ಕಾಣಿಸುತ್ತಿದೆ. ಈಶ್ವರ್ ಖಂಡ್ರೆ, ಮಲ್ಲಿಕಾರ್ಜುನ ಖರ್ಗೆ, ಪ್ರಕಾಶ್ ಹುಕ್ಕೇರಿ, ಪ್ರಶಾಂತ್ ದೇಶಪಾಂಡೆ, ನಿವೇದಿತ್ ಆಳ್ವ, ಬಿ.ವೈ.ರಾಘವೇಂದ್ರ, ಕೆ.ಎಚ್. ಮುನಿಯಪ್ಪ ಹೀಗೆ ತಂದೆ-ಮಕ್ಕಳ ರಾಜಕಾರಣದ ಪಟ್ಟಿ ದೊಡ್ಡದಿದೆ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಒಟ್ಟಿಗೆ ವಿಧಾನಸಭೆಗೆ ಬಂದಿದ್ದೂ ಆಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡರೆ ಕನಿಷ್ಠ ಶೇ.50 ಅಭ್ಯರ್ಥಿಗಳಿಗೆ ವಂಶ ರಾಜಕಾರಣದ ನಂಟು ಅಂಟಿಕೊಂಡಿರುವುದರಲ್ಲಿ ಸಂಶಯವೇ ಇಲ್ಲ.