ದೇಶಾದ್ಯಂತ ಎನ್​ಆರ್​ಸಿ? ರಾಜ್ಯಸಭೆಯಲ್ಲಿ ಮುನ್ಸೂಚನೆ ನೀಡಿದ ಗೃಹ ಸಚಿವ ಅಮಿತ್ ಷಾ

ನವದೆಹಲಿ: ದೇಶದ ಯಾವುದೇ ಭಾಗದಲ್ಲಿಯೂ ನುಸುಳು ಕೋರರಿಗೆ ಜಾಗವಿಲ್ಲ. ಇದೇ ಕಾರಣಕ್ಕಾಗಿ ಬಿಜೆಪಿ ಪ್ರಣಾಳಿಕೆ ಯಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ)ಅನುಷ್ಠಾನದ ಪ್ರಸ್ತಾಪ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.

ಭಾರತದ ಯಾವುದೇ ಭಾಗದಲ್ಲಿ ನುಸುಳುಕೋರರು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಭಾರತ ಇದನ್ನು ಸಹಿಸುವುದಿಲ್ಲ. ಅಂತಾರಾಷ್ಟ್ರೀಯ ಕಾನೂನು ಹಾಗೂ ಎನ್​ಆರ್​ಸಿ ಮೂಲಕ ಅವರನ್ನು ದೇಶದಿಂದ ಹೊರಹಾಕ ಲಾಗುವುದು. ನುಸುಳುಕೋರರ ಪತ್ತೆಗೆ ದೇಶಾದ್ಯಂತ ಎನ್​ಆರ್​ಸಿ ಅನುಷ್ಠಾನಗೊಳಿಸಲಾಗುವುದು ಎಂಬ ಭರವಸೆಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಷಾ ಸ್ಪಷ್ಟಪಡಿಸಿದ್ದಾರೆ.

ಅಸ್ಸಾಂ ಒಪ್ಪಂದದ ಪ್ರಕಾರ ಸುಪ್ರೀಂಕೋರ್ಟ್ ನಿಗಾದಲ್ಲಿ ಎನ್​ಆರ್​ಸಿ ಜಾರಿಗೊಳಿಸಲಾಗಿದೆ. ಇದೇ ಪ್ರಕ್ರಿಯೆ ದೇಶಾದ್ಯಂತ ನಡೆಸ ಬೇಕಾಗಬಹುದು ಎಂದು ಷಾ ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮಬಂಗಾಳ ಸೇರಿ ದೇಶದ ಕೆಲ ರಾಜ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ರೋಹಿಂಗ್ಯಾ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿರುವ ಸಂದೇಹವಿದೆ. ಪಶ್ಚಿಮಬಂಗಾಳದಲ್ಲಿ ಅಕ್ರಮ ನುಸುಳುಕೋರರ ವಿಚಾರವೇ ಪ್ರಮುಖ ರಾಜಕೀಯ ವಿಷಯವಾಗಿದೆ. ಆದರೆ ಎನ್​ಆರ್​ಸಿಗೆ ಸ್ಥಳೀಯ ಟಿಎಂಸಿ ಸರ್ಕಾರದ ವಿರೋಧವಿದೆ. ಈ ಹಂತದಲ್ಲಿ ಕೇಂದ್ರ ಗೃಹ ಸಚಿವರ ಈ ಹೇಳಿಕೆ ಕುತೂಹಲ ಮೂಡಿಸಿದೆ.

1083 ಅಧಿಕಾರಿಗಳ ವಜಾ: ಕರ್ತವ್ಯ ಲೋಪದ ಆರೋಪದ ಮೇಲೆ ಕಳೆದ 5 ವರ್ಷಗಳಲ್ಲಿ ಗೃಹ ಇಲಾಖೆಯ 1083 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಪಾರದರ್ಶಕ ಆಡಳಿತಕ್ಕಾಗಿ ಈ ರೀತಿಯ ವ್ಯವಸ್ಥೆ ಮುಂದುವರಿಸಲಾಗು ವುದು ಎಂದು ರಾಜ್ಯಸಭೆಗೆ ಷಾ ತಿಳಿಸಿದ್ದಾರೆ.

ಗಣಿಗಾರಿಕೆ ಮೇಲೆ ಉಪಗ್ರಹ ನಿಗಾ: ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕಾಗಿ ಸರ್ಕಾರ ಉಪಗ್ರಹದ ಮೂಲಕ ನಿಗಾ ಇರಿಸಿದೆ. ದೇಶದ ಎಲ್ಲ ಗಣಿಗಾರಿಕೆ ಪ್ರದೇಶಗಳನ್ನು ಉಪಗ್ರಹಗಳ ಮೂಲಕ ಮ್ಯಾಪಿಂಗ್ ಮಾಡಲಾಗಿದೆ ಎಂದು ಲೋಕಸಭೆಗೆ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಉದ್ಯೋಗ ಖಾತ್ರಿ ಶಾಶ್ವತವಲ್ಲ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಶಾಶ್ವತವಲ್ಲ. ಬಡತನ ನಿಮೂಲನೆಗೆ ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸುತ್ತಿದ್ದು, ಅದು ಯಶಸ್ವಿಯಾಗುತ್ತಿದ್ದಂತೆ ಈ ಯೋಜನೆಗಳು ಅರ್ಥ ಕಳೆದುಕೊಳ್ಳಲಿವೆ. ಆದಾಗ್ಯೂ ಯುಪಿಎ-2ರ ಅವಧಿಯಲ್ಲಿ ಉದ್ಯೋಗ ಖಾತ್ರಿಗೆ 3.58 ಲಕ್ಷ ಕೋಟಿ ರೂ. ನೀಡಿದ್ದರೆ, ಕಳೆದ 5 ವರ್ಷಗಳಲ್ಲಿ 5.77 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಮಧ್ಯರಾತ್ರಿವರೆಗೆ ಲೋಕ ಕಲಾಪ

ಲೋಕಸಭೆ ಅಧಿವೇಶನಗಳು ನೆಪ ಮಾತ್ರಕ್ಕಾಗುತ್ತಿವೆ ಎಂಬ ಆರೋಪದ ಮಧ್ಯೆ ಈ ಬಾರಿ ಮಧ್ಯರಾತ್ರಿವರೆಗೂ ಕಲಾಪ ನಡೆಯುತ್ತಿರುವುದು ವಿಶೇಷ. ರೈಲ್ವೆ ಸುಧಾರಣೆ ಸಂಬಂಧಿಸಿ ಮಧ್ಯರಾತ್ರಿವರೆಗೆ ಸಚಿವರು ಹಾಗೂ ಸಂಸದರು ಚರ್ಚೆ ನಡೆಸಿದ್ದು ಸುದ್ದಿಯಾಗಿತ್ತು. ಬರೋಬ್ಬರಿ 18 ವರ್ಷಗಳ ಬಳಿಕ ಮಧ್ಯರಾತ್ರಿವರೆಗೂ ಚರ್ಚೆ ನಡೆದಿತ್ತು. ಈಗ ಕೃಷಿ ವಲಯದ ಸಮಸ್ಯೆಗೆ ಸಂಬಂಧಿಸಿ ಮಂಗಳವಾರ ತಡರಾತ್ರಿ 12 ಗಂಟೆವರೆಗೂ ಚರ್ಚೆ ನಡೆದಿದೆ. ಸಾಲಮನ್ನಾ, ಕೃಷಿಕರ ಆದಾಯ ಹೆಚ್ಚಳ, ರೈತರ ಆತ್ಮಹತ್ಯೆ, ನೀರಾವರಿ ಸೇರಿ ಇತರ ವಿಚಾರಗಳ ಬಗ್ಗೆ ಸಂಸದರು ಹಾಗೂ ಸಚಿವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಚರ್ಚೆಗಳ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಆರೋಗ್ಯಕರ ಕಲಾಪಗಳಿಂದ ಸದನದ ಘನತೆ ಹೆಚ್ಚುತ್ತದೆ ಎಂದಿದ್ದಾರೆ. ಇದರೊಂದಿಗೆ ನರೇಂದ್ರ ಮೋದಿ 2.0 ಸರ್ಕಾರದಲ್ಲಿ ಲೋಕಸಭೆ ಕಲಾಪದ ಉತ್ಪಾದಕತೆ ಶೇ.116ಕ್ಕೆ ಏರಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಅತ್ಯಧಿಕವಾಗಿದೆ.

ಬಿಎಸ್​ಎನ್​ಎಲ್​ಗೆ ಕಾಯಕಲ್ಪ

ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ಗೆ ಶೀಘ್ರವೇ ಕಾಯಕಲ್ಪ ನೀಡಲಾಗುವುದು ಎಂದು ದೂರಸಂಪರ್ಕ ಖಾತರಾಜ್ಯ ಸಚಿವ ಸಂಜಯ್ ಧೋತ್ರೆ ತಿಳಿಸಿದ್ದಾರೆ. ಪರಿಹಾರ ಸೂತ್ರ ತಯಾರಾಗಿದ್ದು ಫಲಿತಾಂಶ ಶೀಘ್ರವೇ ಗೋಚರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 15 ಸಾವಿರ ಕೋಟಿ ರೂ.ಗಳಿಗೂ ಅಧಿಕ ಸಾಲದಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಸ್​ಎನ್​ಎಲ್​ಗೆ ಸಿಬ್ಬಂದಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ.

ಎನ್​ಐಎ ತಿದ್ದುಪಡಿಗೆ ರಾಜ್ಯಸಭೆ ಸಮ್ಮತಿ

ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆ ಸಮ್ಮತಿಸಿದೆ. ಲೋಕಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದ್ದ ತಿದ್ದುಪಡಿ ವಿಧೇಯಕವನ್ನು ಧ್ವನಿ ಮತದ ಮೂಲಕ ರಾಜ್ಯಸಭೆ ಅಂಗೀಕರಿಸಿದೆ. ಈ ತಿದ್ದುಪಡಿಯಿಂದ ಸೈಬರ್ ಭಯೋತ್ಪಾದನೆ, ಮಾನವ ಕಳ್ಳ ಸಾಗಣೆ, ನಕಲಿ ನೋಟು ಮಾರಾಟ ಹಾಗೂ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಪ್ರಕರಣಗಳು ಕೂಡ ಎನ್​ಐಎ ವ್ಯಾಪ್ತಿಗೆ ಬರಲಿದೆ.