ಪ್ರಧಾನಿ ಮೋದಿ ಎದುರಾಳಿಯಾಗಿ ವಾರಾಣಸಿಯಿಂದ ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಕೊನೆಗೂ ಸಿಕ್ಕಿತು ಉತ್ತರ…

ನವದೆಹಲಿ: ಇತ್ತೀಚೆಗಷ್ಟೇ ಅಧಿಕೃತವಾಗಿ ರಾಜಕೀಯ ಸೇರಿ ಹೊಸ ಸಂಚಲನ ಮೂಡಿಸಿರುವ ಪ್ರಿಯಾಂಕಾ ಗಾಂಧಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ, ಇಲ್ಲವಾ ಎನ್ನುವ ಕುರಿತು ಕುತೂಹಲ ಮುಂದುವರಿದಿರುವ ಬೆನ್ನಲ್ಲೇ ಅವರಿಂದು ಪಕ್ಷದ ಅಧ್ಯಕ್ಷರು ಬಯಸಿದರೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಸದ್ಯ ಕೇರಳದ ವಯನಾಡ್‌ನಲ್ಲಿ ಸೋದರ ರಾಹುಲ್‌ ಗಾಂಧಿ ಪರ ಪ್ರಚಾರ ಕೈಗೊಂಡಿರುವ ಪ್ರಿಯಾಂಕ ಅವರನ್ನು ಪ್ರಧಾನಿ ಮೋದಿ ಎದುರಾಳಿಯಾಗಿ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ಒಂದು ವೇಳೆ ನನ್ನ ಸ್ಪರ್ಧೆಯನ್ನು ಕಾಂಗ್ರೆಸ್‌ ಅಧ್ಯಕ್ಷರು ಬಯಸಿದರೆ ನಾನು ಖುಷಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ತಾಯಿ ಸೋನಿಯಾ ಗಾಂಧಿ ಕ್ಷೇತ್ರ ರಾಯ್‌ಬರೇಲಿಯಲ್ಲಿ ಪ್ರಿಯಾಂಕ ಚುನಾವಣೆ ಪ್ರಚಾರ ಕೈಗೊಂಡಿದ್ದ ವೇಳೆ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಅವರು, ನಕ್ಕು, ಅದು ವಾರಾಣಸಿಯಿಂದಲೇ ಯಾಕಾಗಬಾರದು ಎಂದಿದ್ದರು.

ಪೂರ್ವ ಉತ್ತರಪ್ರದೇಶದ ಚುನಾವಣೆಯ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣೆ ಘೋಷಣೆಯಾದಂದಿನಿಂದಲೂ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮೊದಲ ಬಾರಿಗೆ ಉತ್ತರ ಪ್ರದೇಶದ ಸೇರಿದಂತೆ ಅಸ್ಸಾಂ, ವಯನಾಡಿನಲ್ಲಿಯೂ ಪ್ರಚಾರ ನಡೆಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *