ಪಕ್ಷ ಹಾಗೂ ಸದಸ್ಯರ ವಿರುದ್ಧ ಕೈ ತೋರಿಸುವವರ ಕೈಬೆರಳು ಕತ್ತರಿಸಬೇಕು: ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ

ಲಖನೌ: ಬಿಜೆಪಿ ಹಾಗೂ ಸದಸ್ಯರ ವಿರುದ್ಧ ಬೆರಳು ತೋರಿಸುವವರ ಕೈಬೆರಳನ್ನೇ ಕತ್ತರಿಸಬೇಕೆಂದು ಉತ್ತರ ಪ್ರದೇಶದ ಎತಾವಾ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಮ್​ ಶಂಕರ್​ ಕಠಾರಿಯಾ ಅವರು ನೀಡಿರುವ ಹೇಳಿಕೆ ಹೊಸ ವಿವಾದವನ್ನು ಸೃಷ್ಟಿ ಮಾಡಿದೆ.

ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷರೂ ಆಗಿರುವ ರಾಮ್​ ಶಂಕರ್​ ಕಠಾರಿಯಾ ಗುರುವಾರ ಎತವಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಇಂದು ಕೇಂದ್ರದಲ್ಲೂ ರಾಜ್ಯದಲ್ಲೂ ನಮ್ಮ ಸರ್ಕಾರವಿದೆ. ಒಂದು ವೇಳೆ ಯಾರಾದರೂ ನಮ್ಮ ವಿರುದ್ಧ ಬೆರಳುಗಳನ್ನು ತೋರಿದರೆ, ಆ ಬೆರಳನ್ನೇ ಕತ್ತರಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಮಾಯಾವತಿ ಸರ್ಕಾರವಿದ್ದಾಗ ತಮ್ಮ ಹಾಗೂ ಬಿಜೆಪಿ ನಾಯಕರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳ ಬಗ್ಗೆ ಮಾತನಾಡುತ್ತಾ ಮಾಯಾವತಿಯವರು ಎಷ್ಟು ಪ್ರಕರಣಗಳನ್ನಾದರೂ ನನ್ನ ವಿರುದ್ಧ ದಾಖಲಿಸಲಿ. ಅದರ ವಿರುದ್ಧ ನಾನು ಹೋರಾಡುತ್ತೇನೆ. ಆದರೆ, ನನ್ನ ಜೈಲಿಗೆ ಹಾಕಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಮಾಯಾವತಿಗೆ ಸವಾಲು ಹಾಕಿದರು.

ನನ್ನನ್ನು ಜೈಲಿಗಟ್ಟಲು ಮಾಯಾವತಿಯವರು ಅನೇಕ ಬಾರಿ ಪ್ರಯತ್ನಿಸಿದರು. ಅವರು ನನ್ನ ವಿರುದ್ಧ 29 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೂ ಕೂಡ ನಾನು ಅವರಿಗೆ ಹೆದರಿಲ್ಲ. ನಾನು ಭಾರಿ ಆತ್ಮವಿಶ್ವಾಸದಿಂದಲೇ ಅವರ ವಿರುದ್ಧ ಹೋರಾಡುತ್ತಿದ್ದೇನೆ. ನಮ್ಮ ವಿರುದ್ಧ ಯಾರು ಹುಬ್ಬೇರಿಸುತ್ತಾರೋ ಅವರ ವಿರುದ್ಧವೂ ಅದೇ ವರ್ತನೆಯನ್ನು ನಾವು ತೋರಬೇಕು. ನಾನು ಎಲ್ಲ ಪರಿಸ್ಥಿತಿಯಲ್ಲಿಯೂ ನಿಮ್ಮ ಜತೆಯಲ್ಲಿರುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

ಕಠಾರಿಯಾ ಅವರ ಸ್ವಕ್ಷೇತ್ರ ಆಗ್ರಾದಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್​ ನಿರಾಕರಿಸಿದ್ದರಿಂದ ಎತವಾದಿಂದ ಸ್ಪರ್ಧಿಸುತ್ತಿದ್ದಾರೆ. ಆಗ್ರಾಗೆ ಎಸ್​.ಪಿ.ಸಿಂಗ್​ ಬಾಘೇಲ ಅವರಿಗೆ ಟಿಕೆಟ್​ ನೀಡಲಾಗಿದೆ. (ಏಜೆನ್ಸೀಸ್​)