ನಿಮ್ಮ ಸರ್ಕಾರ ಪಾಕ್​ ಜನರಿಗೆ ವೀಸಾ ಕೊಡೋದಿಲ್ಲ ಆದ್ರೆ ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ ಎಂದು ಗಂಭೀರ್​ಗೆ ಟಾಂಗ್​ ಕೊಟ್ಟ ಅಫ್ರಿದಿ

ನವದೆಹಲಿ: ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್​ ಅಫ್ರಿದಿ ಅವರ ‘ಗೇಮ್​ ಚೇಂಜರ್​’ ಆತ್ಮಚರಿತ್ರೆ ಬಿಡುಗಡೆಯಾದಗಿನಿಂದ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​ ಹಾಗೂ​ ಅಫ್ರಿದಿ ನಡುವೆ ವಾಕ್ಸಮರ ನಡೆಯುತ್ತಿದ್ದು, ಗಂಭೀರ್​ ನೀಡಿದ್ದ ಹೇಳಿಕೆಗೆ ಇದೀಗ ಅಫ್ರಿದಿ ಕೂಡ ತಿರುಗೇಟು ನೀಡಿದ್ದಾರೆ.

ಗಂಭೀರ್​ ಅವರಿಗೆ ವ್ಯಕ್ತಿತ್ವವೇ ಇಲ್ಲ. ಅವರ ವರ್ತನೆಯೂ ಸರಿಯಿಲ್ಲ. ಅವರು ಬ್ರಾಡ್​ಮನ್​ ಮತ್ತು ಜೇಮ್ಸ್​ ಬಾಂಡ್​ನ ಮಿಶ್ರತಳಿಯಾಗಿದ್ದು, ಗಂಭೀರ್​ ವ್ಯಕ್ತಿತ್ವದವರನ್ನು ನಮ್ಮಲ್ಲಿ ಸರೈಲ್​(ಏನೇ ಹೇಳಿದರೂ ಕೋಪಿಸಿಕೊಳ್ಳುವುದು) ಎಂದು ಕರೆಯುತ್ತೇವೆ. ಕ್ರಿಕೆಟ್​ನಲ್ಲಿ ಗಂಭೀರ್​ ಅವರದ್ದು ಒಂದು ಪಾತ್ರವಷ್ಟೇ. ಆತನ ವರ್ತನೆಯಿಂದಲೇ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂತಹ ದಾಖಲೆಯನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗಂಭೀರ್​, ನೀವು ಅತಿಯಾಗಿ, ಮಿತಿಮೀರಿ ನಗುವ, ಉಲ್ಲಾಸದಿಂದ ಇರುವ ಮನುಷ್ಯ. ಹುಚ್ಚನಂತೆ ಭಾಸವಾಗುತ್ತೀರಿ. ಇರಲಿ, ವೈದ್ಯಕೀಯ ಚಿಕಿತ್ಸೆ ಕಾರಣಕ್ಕೆ ಭಾರತಕ್ಕೆ ಬರುವ ಪಾಕಿಸ್ತಾನದ ಜನರಿಗೆ ನಾವು ವೀಸಾ ನೀಡುತ್ತೇವೆ. ನೀವು ಬನ್ನಿ, ನಾನೇ ಖುದ್ದಾಗಿ ಒಂದೊಳ್ಳೆ ಮನಃಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇನೆ ಎಂದು ತಿರುಗೇಟು ನೀಡಿದ್ದರು.

ಇದೀಗ ಗಂಭೀರ್​ ಹೇಳಿಕೆಗೆ ಮರು ಮಾತನಾಡಿರುವ ಅಫ್ರಿದಿ, ಬಹುಶಃ ಗಂಭೀರ್​ ಅವರು ಕೆಲವು ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ನನಗನಿಸುತ್ತಿದೆ. ನಾನು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿನ ನಾನು ಗಂಭೀರ್​ ಅವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುತ್ತೇನೆ. ಸಾಮಾನ್ಯವಾಗಿ ಭಾರತ ಸರ್ಕಾರ ನಮ್ಮ ಜನರಿಗೆ ವೀಸಾ ಕೊಡುವುದಿಲ್ಲ. ಆದರೆ, ನಾವು ಭಾರತದಿಂದ ಬರುವ ಎಲ್ಲರನ್ನೂ ಸ್ವಾಗತಿಸುತ್ತೇವೆ. ನಮ್ಮ ಜನ, ನಮ್ಮ ಸರ್ಕಾರ ಯಾವಾಗಲೂ ಭಾರತೀಯರನ್ನು ಹಾಗೇ ಗೌತಮ್​ರನ್ನು ಸ್ವಾಗತಿಸುತ್ತದೆ. ಅವರು ಇಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುವುದಾರೆ, ನಾನು ವೀಸಾವನ್ನು ತಕ್ಷಣ ವ್ಯವಸ್ಥೆ ಮಾಡುತ್ತೇನೆ ಎಂದು ಟಾಂಗ್​ ನೀಡಿದ್ದಾರೆ.

ಕ್ರಿಕೆಟ್​ ಹೊರತುಪಡಿಸಿ ಹೊರ ಜಗತ್ತಿನಲ್ಲೂ ಎಂದೂ ಗಂಭೀರ್​ ಹಾಗೂ ಅಫ್ರಿದಿ ಅವರು ಒಳ್ಳೆಯ ಸ್ನೇಹಿತರಾಗಿರಲಿಲ್ಲ. 2007ರಲ್ಲಿ ಕಾನ್ಪುರದಲ್ಲಿ ನಡೆದ ಏಷಿಯಾ ಕಪ್​ ಪಂದ್ಯದ ವೇಳೆ ಉಭಯ ಆಟಗಾರರ ನಡುವೆ ಉಂಟಾದ ವಾಗ್ವಾದದಿಂದಾಗಿ ಇಬ್ಬರೂ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ದಂಡವನ್ನು ಕಟ್ಟಿದ್ದರು. (ಏಜೆನ್ಸೀಸ್​)