More

    ಅಭಿವೃದ್ಧಿ ನೆಪದಲ್ಲಿ ಕಣ್ಮರೆಯಾಗದಿರಲಿ ಕಾನನ

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಅಭಿಪ್ರಾಯ

    ವಿಜಯವಾಣಿ ಸುದ್ದಿಜಾಲ ಆನೇಕಲ್
    ಬೆಂಗಳೂರಿಗೆ ಹೊಂದಿಕೊಂಡಿರುವ ಬನ್ನೇರುಘಟ್ಟ ಅರಣ್ಯ ಪ್ರದೇಶದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಪೆಟ್ಟು ಬೀಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಅಭಿಪ್ರಾಯಪಟ್ಟರು.
    ಉದ್ಯಾನವನದಲ್ಲಿ ಆಯೋಜಿಸಿದ್ದ ವನ್ಯಜೀವಿ ಸಪ್ತಾಹದಲ್ಲಿ ಮಾತನಾಡಿ, ಪರಿಸರ ಸಮತೋಲನಕ್ಕೆ ಬನ್ನೇರುಘಟ್ಟ ಅರಣ್ಯ ತನ್ನದೇ ಆದ ಕೊಡುಗೆ ನೀಡುತ್ತಿದೆ. ಇಂತಹ ಜೀವ ಸೆಲೆಯನ್ನು ಜೋಪಾನವಾಗಿ ಕಾಪಾಡಿ, ಮುಂದಿನ ಪೀಳಿಗೆಗೆ ಉಳಿಸಬೇಕು ಎಂದರು.
    ಉದ್ಯಾನ ಕೇವಲ ಪ್ರವಾಸೋದ್ಯಮಕ್ಕೆ ಸೀಮಿತವಾಗದೆ ವನ್ಯಜೀವಿ, ಅರಣ್ಯ ಸಂರಕ್ಷಣೆಯಂತಹ ಕಾರ್ಯಕ್ರಮ ರೂಪಿಸಿ, ವಿದ್ಯಾರ್ಥಿಗಳಿಗಾಗಿ ನೇಚರ್ ಕ್ಲಬ್, 18 ವರ್ಷ ಮೇಲ್ಪಟ್ಟವರ ಯುವ ಸಮುದಾಯಕ್ಕಾಗಿ 15 ಭಾನುವಾರ ವಿಶೇಷ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
    ಬನ್ನೇರುಘಟ್ಟ ಉದ್ಯಾನ ನಾಗರಿಕರ ಸಹಭಾಗಿತ್ವಕ್ಕೆ ಆದ್ಯತೆ ನೀಡಿದ್ದು, ಯಾರು ಬೇಕಾದರೂ ನಮ್ಮೊಂದಿಗೆ ಪರಿಸರ ಸಂರಕ್ಷಣೆಗೆ ಕೈ ಜೋಡಿಸಬಹುದು. ಸಲಹೆ ಸೂಚನೆ ಸ್ವೀಕರಿಸಿ ಒಟ್ಟಾಗಿ ವನ್ಯಜೀವಿ, ಅರಣ್ಯ ಸಂರಕ್ಷಣೆಗೆ, ಪ್ರಗತಿ, ಜಾಗೃತಿಗೆ ಮುಂದಾಗೋಣ ಎಂದರು.
    ಸಂಗೀತ ನಿರ್ದೇಶಕ ವಾಸು ದೀಕ್ಷಿತ್ ಮಾತನಾಡಿ, ಈ ಹಿಂದಿನಿಂದಲೂ ಜಾನಪದ ಕಲಾವಿದರಿಂದ ಈಗಿನ ಸಂಗೀತ ನಿರ್ದೇಶಕರು, ಸಾಹಿತಿಗಳು ಅರಣ್ಯ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯುವಪೀಳಿಗೆ ವನ್ಯಜೀವಿ, ಪರಿಸರ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅರಣ್ಯ ಸಂರಕ್ಷಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನ ನಾವು ಪರಿಸರ ಪೂರಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದರು.
    ವನ್ಯಜೀವಿ ಸಪ್ತಾಹದ ಪ್ರಯುಕ್ತ ಅ.2ರಿಂದ 8ರವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಿದ್ದು, ಸೋಮವಾರ ಮುಂಜಾನೆ 7 ಗಂಟೆಗೆ 150ಕ್ಕೂ ಹೆಚ್ಚು ಪರಿಸರ ಆಸಕ್ತರ ಮೂರು ತಂಡಗಳು ಉದ್ಯಾನದ ಸಸ್ಯಹಾರಿ ಪ್ರಾಣಿಗಳ ಸಫಾರಿಯಲ್ಲಿ ಪ್ರಕೃತಿ ಚಾರಣ ನಡೆಸಿ, ಪರಿಸರ ತಜ್ಞರಿಂದ ಗಿಡ, ಚಿಟ್ಟೆ, ಇನ್ನಿತರ ಪ್ರಾಣಿಗಳ ಮಾಹಿತಿ ಪಡೆದವು.
    ನಂತರ ಹಿಲ್ ವ್ಯೆ ತೆರೆದ ಸಭಾಂಗಣದಲ್ಲಿ ಆಯೋಜಿಸಿದ್ದ ಸಪ್ತಾಹದಲ್ಲಿ ಸಂಗೀತ ನಿರ್ದೇಶಕ ವಾಸು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ, ಕಲಾವಿದ ಜಾನ್ ದೇವರಾಜ್, ಸಿಬ್ಬಂದಿ ಮಕ್ಕಳಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಉದ್ಯಾನವನದ ಬ್ರ್ಯಾಂಡಿಂಗ್ ಅಡಿ ನೂತನ ಲೋಗೋ ಬಿಡುಗಡೆ ಮಾಡಲಾಯಿತು. ವನ್ಯಜೀವಿ ಆರ್ಟ್ ಗ್ಯಾಲರಿ ಉದ್ಘಾಟಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts