More

    ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

    ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ ಸಂಬಂಧ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ತಿಳಿಸಿದರು.

    ಜಿಪಂ ಸಭಾಂಗಣದಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಂಗಗಳ ಹಾವಳಿ ಕುರಿತು ಬುಧವಾರದ ಸಂಚಿಕೆ ‘ವಿಜಯವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಸಭೆಯಲ್ಲಿ ಪ್ರದರ್ಶಿಸಿದ ಸದಸ್ಯ ಕೆ.ಆರ್.ಮಹೇಶ್ ಒಡೆಯರ್, ಕಡೂರು ತಾಲೂಕಿನ ಸಿದ್ದರಾಮನಹಳ್ಳಿ ಅಡಕೆ ತೋಟಗಳಲ್ಲಿ ಮಂಗನ ಹಾವಳಿಗೆ ಸಂಬಂಧಿಸಿ ಅಗತ್ಯ ಕ್ರಮ ಕ್ರಮ ಕೈಗೊಳ್ಳಬಹುದಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

    ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂಜಯ್ ಮಾತನಾಡಿ, ಕಾಡುಪ್ರಾಣಿಗಳ ಹಾವಳಿ ಅರಣ್ಯ ಕಾಯ್ದೆ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಇಲಾಖೆಯೇ ಇದಕ್ಕೆ ಪರಿಹಾರ ನೀಡಬೇಕು ಎಂದರು.

    ಸಭೆ ಸೂಚನೆ ಮೇರೆಗೆ ಆಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಮಂಗಗಳ ಹಾವಳಿಗೆ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಕೈಗೊಳ್ಳಲು ಅವಕಾಶವಿದೆ. ಮಂಗಗಳನ್ನು ಹಿಡಿಯುವವರನ್ನು ಕರೆಸಿ ಬೋನ್ ಇರಿಸುವ ಮೂಲಕ ಅವುಗಳನ್ನು ಸೆರೆಹಿಡಿದು ಪಶ್ಚಿಮಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ತಾತ್ಕಾಲಿಕ ಪರಿಹಾರ ಕಲ್ಪಿಸಬಹುದು. ಆದರೆ ಪಶ್ಚಿಮಘಟ್ಟ ಪ್ರದೇಶಕ್ಕೆ ಬಿಟ್ಟಲ್ಲಿ ಕಾನೂನು ತೊಡಕು ಎದುರಾಗಲಿದೆ. ಶಾಶ್ವತ ಪರಿಹಾರವೆಂದರೆ ಮಳೆಗಾಲದಲ್ಲಿ ಹಳ್ಳಿಯಿಂದ ಹೊರಗೆ ಹಣ್ಣಿನ ಗಿಡ ಬೆಳೆಸಿ ಮಂಗಗಳನ್ನು ಆಕರ್ಷಿಸಬಹುದು ಎಂದರು. ಇದಕ್ಕೆ ಮಹೇಶ್ ಒಡೆಯರ್ ಸಮ್ಮತಿಸಿದರು.

    ಆರ್​ಎಫ್​ಒ ಮತ್ತು ಗ್ರಾಪಂ ಸದಸ್ಯರು ಬರೆದಿರುವ ಪತ್ರದಲ್ಲೂ ಈ ಬಗ್ಗೆ ಉಲ್ಲೇಖವಾಗಿದೆ ಎಂದು ಮಹೇಶ್ ಒಡೆಯರ್ ತಿಳಿಸಿದಾಗ, ಧ್ವನಿಗೂಡಿಸಿದ ಅಧ್ಯಕ್ಷ ಕೆ.ಎಚ್.ಮಹೇಂದ್ರ ಮತ್ತು ಸದಸ್ಯ ಕೆ.ಆರ್.ಪ್ರಭಾಕರ್, ಮಲೆನಾಡು, ಬಯಲುಸೀಮೆ ಭಾಗದಲ್ಲೂ ಮಂಗಗಳು ಮಾತ್ರವಲ್ಲ ಕಾಡುಕೋಣ, ಕಾಡು ಹಂದಿ, ಮತ್ತಿತರ ವನ್ಯಜೀವಿಗಳ ಹಾವಳಿಯಿಂದ ಬೆಳೆಹಾನಿಯಾಗುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿದೆ ಎಂದು ಗಮನ ಸೆಳೆದರು.

    ದೇವನೂರಲ್ಲಿ ನರೇಗಾ ಯೋಜನೆಯಡಿ ನಡೆದ ಕಾಮಗಾರಿ ಹಣ ದುರುಪಯೋಗವಾಗಿದೆ ಎಂಬ ಬಗ್ಗೆಯೂ ‘ವಿಜಯವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿದೆ. ಈ ಬಗ್ಗೆ ಸಿಇಒ ವಿವರಣೆ ಕೇಳಿ ತಾಪಂ ಇಒ ಅವರಿಗೆ ಪತ್ರ ಬರೆದಿದ್ದರು. ಸಾಮಾಜಿಕ ಅರಣ್ಯ ಇಲಾಖೆಯಿಂದ ಈ ಬಗ್ಗೆ ಮಾಹಿತಿ ಕೇಳಿದ್ದು, ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆ ಮಹೇಶ್ ಒಡೆಯರ್ ಆಗ್ರಹಿಸಿದರು.

    ಪಶು ಸಂಗೋಪನಾ ಇಲಾಖೆಯಲ್ಲಿ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ ಜಿಪಂನಿಂದ 40 ಸಾವಿರ ರೂ. ನೀಡಲಾಗುತ್ತಿದೆ. 22 ರಿಂದ 23 ಲಕ್ಷ ರೂ. ಅನುದಾನ ಜಿಪಂನಿಂದ ನೀಡಲಾಗುತ್ತಿದೆ. ಆದರೆ ಈ ಕಾರ್ಯಕ್ರಮ ಕೈಗೊಳ್ಳುವಾಗ ಸ್ಥಳೀಯ ಜಿಪಂ ಸದಸ್ಯರಿಗಾಗಲಿ, ಗ್ರಾಮಸ್ಥರಿಗಾಗಲಿ ಮಾಹಿತಿ ನೀಡುತ್ತಿಲ್ಲ. ಈ ಕುರಿತ ಜಾಹೀರಾತು ಫಲಕಗಳನ್ನಾದರೂ ಹಾಕಲಾಗಿದೆಯೇ ಎಂದು ಮಹೇಶ್ ಒಡೆಯರ್ ಪ್ರಶ್ನಿಸಿದರು.

    ಕೃಷಿ ಇಲಾಖೆಗೆ ಸಂಬಂಧಿಸಿ ಹಲವು ಯೋಜನೆಗಳಿವೆ. ರೈತರಿಗೆ ವಿವಿಧ ಸಲಕರಣೆ, ಗೊಬ್ಬರ ಮತ್ತಿತರ ಪರಿಕರ ನೀಡಲಾಗುತ್ತಿದೆ. ಆದರೆ ನೀವು ಮಾಡುವ ಕಾರ್ಯಕ್ರಮ ಸ್ಥಳೀಯ ಜಿಪಂ ಸದಸ್ಯರ ಗಮನಕ್ಕೇ ಬರುತ್ತಿಲ್ಲ ಎಂದು ಸದಸ್ಯರಾದ ಮಹೇಂದ್ರ ಮತ್ತು ಪ್ರಭಾಕರ್ ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕೃಷಿ ಅಧಿಕಾರಿಗಳೇ ಇಲ್ಲ. ಕಾರ್ಯನಿರ್ವಹಿಸುವುದೇ ಸಮಸ್ಯೆಯಾಗಿದೆ ಎಂದು ತಿಳಿಸಿದರು.

    ಅಧ್ಯಕ್ಷ ಮಹೇಂದ್ರ ಮಾತನಾಡಿ, ಅಧಿಕಾರಿಗಳು ತಮ್ಮ ಕೆಲಸದಲ್ಲಿ ಬೇಜವಾಬ್ದಾರಿ ತೋರಿಸದೆ ಇಚ್ಛಾಶಕ್ತಿಯಿಂದ ನಿರ್ವಹಿಸಬೇಕು. ಮಾ.31ರೊಳಗೆ ಎಲ್ಲ್ಲ ಕಾಮಗಾರಿ ಪೂರ್ಣಗೊಳಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎಂದರು.

    ಸ್ಥಾಯಿ ಸಮಿತಿ ಸದಸ್ಯರಾದ ಕೆ.ವಿ.ಪ್ರೇಮಾ ಮಂಜುನಾಥ್, ಅನುಸೂಯಾ ಗೋಪಿಕೃಷ್ಣ, ಸುಧಾ ಯೋಗೀಶ್, ಉಪ ಕಾರ್ಯದರ್ಶಿ ವೆಂಕಟೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts