ಮೈಸೂರು: ಎಟಿಎಂಇ ಕಾಲೇಜ್ ಆಫ್ ಇಂಜಿನಿಯರಿಂಗ್ ತನ್ನ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ರಸ್ತೆ ಓಟ’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವನ್ಯ ಸಂಪತ್ತನ್ನು ರಕ್ಷಿಸಿ, ಪರಿಸರದ ಸಮತೋಲನ ಕಾಪಾಡಿ ಎಂಬ ಆಶಯದೊಂದಿಗೆ ಆಯೋಜಿಸಿದ್ದ ಓಟದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಸಾರ್ವಜನಿಕರು, ಕಾಲೇಜು ಅಧ್ಯಾಪಕ ಹಾಗೂ ಆಡಳಿತ ವರ್ಗ ಹಾಗೂ ವಿದ್ಯಾರ್ಥಿಗಳು ಓಟದಲ್ಲಿ ಭಾಗವಹಿಸಿದ್ದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭಗೊಂಡ ಓಟ, ದೊಡ್ಡ ಗಡಿಯಾರ, ಗಾಂಧಿವೃತ್ತ, ಸಯ್ಯಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ನೂರಡಿ ರಸ್ತೆ, ಮಾರ್ಗವಾಗಿ ಚಲಿಸಿ ಬಸವೇಶ್ವರ ವೃತ್ತ ಹಾಗೂ ಆರ್‌ಗೇಟ್ ಮೂಲಕ ಕೋಟೆ ಆಂಜನೇಸ್ವಾಮಿ ದೇವಸ್ಥಾನದಲ್ಲೇ ಅಂತ್ಯಗೊಂಡಿತು.
ಓಟಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿ ಮಾತನಾಡಿ, ಭಾರತದಲ್ಲಿ ಜೀವ ವೈವಿಧ್ಯತೆ ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ, ಇತ್ತೀಚೆಗೆ ವನ್ಯಜೀವಿಗಳನ್ನು ರಕ್ಷಿಸುವುದು ದೊಡ್ಡ ಸಮಸ್ಯೆಯಾಗಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿರುವುದು ಕಾಡುಗಳ ನಾಶಕ್ಕೆ ಕಾರಣವಾಗುತ್ತಿದೆ. ಯುವ ಸಮೂಹ ಈ ಬಗ್ಗೆ ಎಚ್ಚೆತ್ತು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಣ್ಯ ನಾಶ ಹೆಚ್ಚುತ್ತಿರುವುದರಿಂದ ತಾಪಮಾನ ಹಾಗೂ ಪ್ರವಾಹದಂತಹ ಅನಾಹುತ ಸಂಭವಿಸಲು ಕಾರಣವಾಗುತ್ತಿವೆ. ಮೈಸೂರು ಭಾಗದಲ್ಲಿ ಉತ್ತಮ ಅರಣ್ಯ ಸಂಪತ್ತು ಇದ್ದು, ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ಇಂತಹ ಓಟದಲ್ಲಿ ಯುವ ಪೀಳಿಗೆ ಭಾಗವಹಿಸುವುದರಿಂದ ಅರಣ್ಯದ ಮಹತ್ವ ತಿಳಿಯುತ್ತದೆ. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅರಣ್ಯದ ಬಗ್ಗೆ ಹೆಮ್ಮೆ, ಗೌರವ, ಪ್ರೀತಿ ಹೊಂದಬೇಕು ಎಂದರು. ಕಾಲೇಜಿನ ಗೌರವಾಧ್ಯಕ್ಷ ಎಲ್.ಅರುಣ್‌ಕುಮಾರ್, ಗೌರವ ಕಾರ್ಯದರ್ಶಿ ಕೆ.ಶಿವಶಂಕರ್, ಖಚಾಂಚಿ ಆರ್.ವೀರೇಶ್ ಇತರರಿದ್ದರು.