ಪತಿ ಹತ್ಯೆಗೆ ಪತ್ನಿ ಸ್ಕೆಚ್; ಸ್ಮಾರ್ಟ್ ಫೋನ್​ನಿಂದ ಬಯಲಾದ ಸಂಚು

ಬೆಂಗಳೂರು: ಪ್ರಿಯಕರನ ಜತೆಗೂಡಿ ಪತಿಯ ಹತ್ಯೆಗೆ ಸಂಚು ಮಾಡಿದ್ದ ಪತ್ನಿಯ ನಿಜಬಣ್ಣ ಮೊಬೈಲ್ ಕಾಲ್ ರೆಕಾರ್ಡಿಂಗ್​ನಲ್ಲಿ ಬಯಲಾಗಿದೆ. ಪ್ರಕರಣ ಪರಿಹಾರ ಕೇಂದ್ರದ ಮೆಟ್ಟಿಲೇರಿ ಕೊನೆಗೆ ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

ಕೆ.ಆರ್. ಪುರದ 34 ವರ್ಷದ ಸಿವಿಲ್ ಇಂಜಿನಿಯರ್ ಮತ್ತು ತುಮಕೂರಿನ 24 ವರ್ಷದ ಯುವತಿ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ 4 ವರ್ಷದ ಪುತ್ರನಿದ್ದಾನೆ. ಕುಟುಂಬ ಕೆ.ಆರ್. ಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿತ್ತು.

ಗೃಹಿಣಿಯಾಗಿದ್ದ ಪತ್ನಿಗೆ ಮನೆ ಮಾಲೀಕನ 24 ವರ್ಷದ ಪುತ್ರನ ಜತೆ ಸ್ನೇಹ ಬೆಳೆದಿದ್ದು, ಈ ವಿಚಾರ ಪತಿಗೆ ಗೊತ್ತಾಗಿದೆ. ಆಗ ಆತ ಮನೆಯನ್ನು ವಿಜಯನಗರಕ್ಕೆ ಸ್ಥಳಾಂತರ ಮಾಡಿದ್ದ. ಆದರೂ ಪತ್ನಿ, ಪ್ರಿಯಕರನ ಜತೆಗೆ ಮೊಬೈಲ್ ಸಂಭಾಷಣೆ ನಡೆಸುವುದನ್ನು ಬಿಟ್ಟಿರಲಿಲ್ಲ. ಕೊನೆಗೆ ಮೊಬೈಲ್ ಕಸಿದುಕೊಂಡು ಪತ್ನಿಗೆ ಪತಿ ಬುದ್ಧಿವಾದ ಹೇಳಿದ್ದ.

ಆದರೂ ಬಿಡದ ಪತ್ನಿ, ತನ್ನ ಅತ್ತೆಯ ಬಳಿಯಿದ್ದ ಮೊಬೈಲ್​ನಿಂದ ಪ್ರಿಯಕರನ ಜತೆ ಸಂಪರ್ಕ ಸಾಧಿಸಿದ್ದಳು. ತಿಂಗಳ ನಂತರ ತಾಯಿ, ನಿನ್ನ ಹೆಂಡತಿ ಮನೆ ಕೆಲಸ ಸರಿಯಾಗಿ ಮಾಡುವುದಿಲ್ಲ. ಸದಾ ಕಾಲ ಮೊಬೈಲ್ ಸಂಭಾಷಣೆಯಲ್ಲಿ ನಿರತವಾಗಿರುತ್ತಾಳೆ ಎಂದು ಪುತ್ರನಿಗೆ ದೂರು ಹೇಳಿದ್ದರು. ಆಗ ಪತಿಗೆ, ತನ್ನ ತಾಯಿಯ ಮೊಬೈಲ್ ಅನ್ನು ಪತ್ನಿ ಬಳಸುತ್ತಿರುವುದು ಗೊತ್ತಾಗಿದೆ.

ಆಗ ಪತಿ, ಹೊಸ ಸ್ಮಾರ್ಟ್ ಫೋನ್ ತಂದು ತಾಯಿಗೆ ಕೊಟ್ಟು ಸೊಸೆ ಕೇಳಿದರೆ ಕೊಡುವಂತೆ ಹೇಳಿದ್ದ. ಪತ್ನಿ ಮೊದಲಿನಂತೆ ಅತ್ತೆಯ ಮೊಬೈಲ್ ಪಡೆದು ಪ್ರಿಯಕರನಿಗೆ ಕರೆ ಮಾಡಿ ಮಾತನಾಡುತ್ತಿದ್ದಳು. ಕೆಲಸದಿಂದ ರಾತ್ರಿ ಮನೆಗೆ ವಾಪಸಾಗುತ್ತಿದ್ದ ಪತಿ, ತಾಯಿ ಮೊಬೈಲ್ ಪಡೆದು ಶೌಚಗೃಹಕ್ಕೆ ತೆರಳಿ ಆಡಿಯೋ ರೆಕಾರ್ಡಿಂಗ್ ಆಗಿದ್ದ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದ.

ಇತ್ತೀಚೆಗೆ ಪತ್ನಿ, ತನಗೆ ತಂದೆಯನ್ನು ನೋಡುವ ಆಸೆ ಉಂಟಾಗಿದೆ. ತುಮಕೂರಿಗೆ ಕರೆದುಕೊಂಡು ಹೋಗುವಂತೆ ಕೇಳಿದ್ದಳು. ಅಲ್ಲದೆ, ರೈಲು ನಿಲ್ದಾಣಕ್ಕೆ ಬೈಕ್​ನಲ್ಲಿ ಡ್ರಾಪ್ ಮಾಡುವಂತೆ ಒತ್ತಾಯಿಸಿದ್ದಳು. ಓಲಾ, ಉಬರ್ ಕ್ಯಾಬ್​ನಲ್ಲಿ ಹೋಗುವಂತೆ ಹೇಳಿದಾಗ, ನೀವೇ ಡ್ರಾಪ್ ಕೊಡಬೇಕೆಂದು ಪಟ್ಟು ಹಿಡಿದಿದ್ದಳು. ಆಕೆ ಈ ನಡೆ ಬಗ್ಗೆ ಅನುಮಾನ ಬಂದು ಹಿಂದಿನ ರಾತ್ರಿಯ ಕಾಲ್ ರೆಕಾರ್ಡಿಂಗ್ ಸಂಭಾಷಣೆ ಕೇಳಿಸಿಕೊಂಡಾಗ ಪ್ರಿಯಕರ ಜತೆಗೂಡಿ ಹತ್ಯೆಗೆ ಸ್ಕೆಚ್ ಹಾಕಿರುವುದು ಗೊತ್ತಾಗಿದೆ.

ಮರುದಿನ ಬೆಳಗ್ಗೆ ಪತಿ ಆಕೆಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ರೈಲು ನಿಲ್ದಾಣದ ಬದಲಿಗೆ ವಿಜಯನಗರ ಠಾಣೆಗೆ ಕರೆದೊಯ್ದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅಲ್ಲಿಂದ ದಂಪತಿಯನ್ನು ಪರಿಹಾರ ಕೇಂದ್ರಕ್ಕೆ ಕೌನ್ಸೆಲಿಂಗ್​ಗೆ ಪೊಲೀಸರು ಕಳುಹಿಸಿದ್ದರು. ಮತ್ತೊಂದೆಡೆ ಪ್ರಕರಣ ತನಿಖೆ ಕೈಗೊಂಡು ಪೊಲೀಸರು ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪರಿಹಾರ ಕೇಂದ್ರದಲ್ಲಿ ಕೌನ್ಸ್ಸೆಲಿಂಗ್ ಮಾಡಲು ಸಾಧ್ಯವಾಗದಿದ್ದಾಗ ಎರಡೂ ಕುಟುಂಬಗಳನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಬಳಿಕ ದಂಪತಿಗೆ ವಿಚ್ಛೇದನ ಪಡೆಯಲು ನಿರ್ಧರಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ತುಮಕೂರಿನಲ್ಲೂ ಪ್ಲ್ಯಾನ್: ಮೊಬೈಲ್ ಸಂಭಾಷಣೆಯನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಸಿವಿಲ್ ಇಂಜಿನಿಯರ್ ಪತ್ನಿಗೆ ತುಮಕೂರಿನಲ್ಲಿ ಮತ್ತೊಬ್ಬ ಪ್ರಿಯಕರ ಇರುವುದು ಬೆಳಕಿಗೆ ಬಂದಿದೆ. ರೈಲು ನಿಲ್ದಾಣದಲ್ಲಿ ಹತ್ಯೆ ತಪ್ಪಿದರೆ ತುಮಕೂರಿನಲ್ಲಿ ಕೊಲೆ ಮಾಡುವಂತೆ ಆತನ ಜತೆ ಪ್ಲಾ್ಯನ್ ಮಾಡಿರುವುದು ಬೆಳಕಿಗೆ ಬಂದಿದೆ.

ಬೈಕ್​ಗೆ ಕಾರಿನಿಂದ ಡಿಕ್ಕಿ ಹೊಡೆದು ಕೊಲ್ಲುವ ಸಂಚು

ರೈಲು ನಿಲ್ದಾಣಕ್ಕೆ ಪತಿಯ ಜತೆ ಬೈಕ್​ನಲ್ಲಿ ಬರುತ್ತೇನೆ. ಅಲ್ಲಿ ಇಳಿದು ನಿಲ್ದಾಣದ ಒಳಗೆ ತೆರಳುತ್ತಿದಂತೆ ಕಾರಿನಲ್ಲಿ ಬಂದು ಬೈಕ್​ಗೆ ಗುದ್ದಿ ಹತ್ಯೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸುವಂತೆ ಕೆ.ಆರ್.ಪುರದ ಪ್ರಿಯಕರನಿಗೆ ಹೇಳಿದ್ದಳು.

Leave a Reply

Your email address will not be published. Required fields are marked *