ಪತ್ನಿಯನ್ನೇ ಕೊಂದಿದ್ದ ಆರೋಪಿ ಬಂಧನ

ಕೊಕಟನೂರ: ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿದ ಪತ್ನಿಯನ್ನೇ ಕೊಲೆಗೈದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸಿ ನಾಟಕವಾಡಿದ್ದ ಪತಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಅಪ್ಪಾಸಾಬ ಸುರಡೆ (42) ಬಂಧಿತ ಆರೋಪಿ. ಉಮಾಶ್ರೀ ಅಪ್ಪಾಸಾಬ ಸುರಡೆ (35) ಕೊಲೆಗೀಡಾದ ದುರ್ದೈವಿ.

ಘಟನೆಯ ವಿವರ: ಕೊಲೆ ಆರೋಪಿ ಅಪ್ಪಾಸಾಬ ತನ್ನ ಪತ್ನಿಯ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ವ್ಯಗ್ರನಾಗಿದ್ದ ಪತಿ, ಕೈ ಹಿಡಿದ ಪತ್ನಿಯನ್ನೇ ಕಲ್ಲಿನಿಂದ ಜಜ್ಜಿ ಬಸವೇಶ್ವರ ಏತ ನೀರಾವರಿ ಕಾಲುವೆ ಕಾಮಗಾರಿ ನಡೆದ ಸ್ಥಳದಲ್ಲಿ ಆಕೆಯ ಶವ ಬಚ್ಚಿಟ್ಟಿದ್ದ.

ಮಂಗಳವಾರ ಸಂಜೆ ಅಕ್ಕ-ಪಕ್ಕದ ನಿವಾಸಿಗಳು ಕಾಲುವೆ ಕಾಮಗಾರಿ ನಡೆದ ಸ್ಥಳದ ಕಡೆಗೆ ತೆರಳಿದಾಗ ಗಬ್ಬು ವಾಸನೆ ಕಂಡು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಥಣಿ ಪೊಲೀಸರು ಪರಿಶೀಲನೆ ನಡೆಸಿದಾಗ ಕಲ್ಲುಗಳ ಮಧ್ಯೆ ಶವ ದೊರೆತಿತ್ತು.

ಅನುಮಾನಗೊಂಡ ಅಥಣಿ ಪೊಲೀಸರು ಬುಧವಾರ ಅಪ್ಪಾಸಾಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ತಾನೇ ಕೊಲೆ ಮಾಡಿರುವುದಾಗಿ ಅಪ್ಪಾಸಾಬ ಒಪ್ಪಿಕೊಂಡಿದ್ದಾನೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್‌ಪಿ ರಾಮಗೊಂಡ ಬಸರಗಿ, ಸಿಪಿಐ ಅಲಿಸಾಬ್, ಪಿಎಸ್‌ಐ ಯು.ಎಸ್.ಅವಟಿ, ಸಿಬ್ಬಂದಿ ಪ್ರಕಾಶ ಕುರಿ, ಎಂ.ಡಿ ಹಿರೇಮಠ, ಎಂ.ಬಿ.ದೊಡಮನಿ ಇದ್ದರು.

Leave a Reply

Your email address will not be published. Required fields are marked *