ವಿಟ್ಲಕ್ಕೆ ಏಕಿಲ್ಲ ತಾಲೂಕು ಭಾಗ್ಯ?

<ಉಳ್ಳಾಲ, ಮೂಲ್ಕಿ ತಾಲೂಕು ಘೋಷಣೆ ಹಿನ್ನೆಲೆಯಲ್ಲಿ ಗರಿಗೆದರಿದ ರಾಜಕೀಯ> 

ನಿಶಾಂತ್ ಬಿಲ್ಲಂಪದವು ವಿಟ್ಲ

ಹಲವರಿಗೆ ರಾಜಕೀಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾದ ವಿಟ್ಲ ಪ್ರದೇಶ ರಾಜಕೀಯ ವ್ಯಕ್ತಿಗಳಿಂದ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಇದೆ. ವಿಟ್ಲ ತಾಲೂಕು ರಚನೆ ಕುರಿತ ಸುಮಾರು 40 ವರ್ಷಗಳ ಕನಸು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಹಾಗೆಯೇ ಉಳಿದಿದ್ದು, ಜನರು ತಾಲೂಕು ಕೇಂದ್ರಕ್ಕಾಗಿ ಅಲೆದಾಡುವುದು ಮುಂದುವರಿದಿದೆ.

2013ರಲ್ಲಿ ಬಿಜೆಪಿ ಸುಮಾರು 40 ಹೊಸ ತಾಲೂಕುಗಳನ್ನು ರಚಿಸುವುದಾಗಿ ಘೋಷಿಸಿತು. ಬಳಿಕ ಬಂದ ಸರ್ಕಾರವೂ ಕೆಲವೊಂದು ಹೆಚ್ಚುವರಿ ಸೇರ್ಪಡೆ ಮಾಡುವ ಕಾರ್ಯ ಮಾಡಿತು. ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ 2019ರ ಬಜೆಟ್‌ನಲ್ಲಿ ಹೊಸ ತಾಲೂಕು ಘೋಷಿಸಿದ್ದೂ ಅಲ್ಲದೆ, ದಕ್ಷಿಣ ಕನ್ನಡದ ಉಳ್ಳಾಲ, ಮೂಲ್ಕಿ ಪ್ರದೇಶವನ್ನೂ ಹೊಸ ತಾಲೂಕಾಗಿಸಲು ಮುಂದಾಗಿದೆ.

ಸುಮಾರು ನಾಲ್ಕು ದಶಕಕ್ಕೂ ಅಧಿಕ ಸಮಯದಿಂದ ವಿಟ್ಲವನ್ನು ತಾಲೂಕು ಕೇಂದ್ರವಾಗಿ ಮಾಡಿ ಎಂಬ ಕೂಗು ಇಲ್ಲಿದ್ದರೂ, ಯಾವುದೇ ಹೋರಾಟ ನಡೆಯದ ಪ್ರದೇಶಗಳು ತಾಲೂಕಾಗಿ ಘೊಷಣೆಯಾಗುತ್ತಿದೆ. ಹೋರಾಟಗಳ ಮೇಲೆ ಹೋರಾಟ ಮಾಡಿದರೂ ವಿಟ್ಲ ಭಾಗದ ಜನಪ್ರತಿನಿಧಿಗಳ ದಿವ್ಯ ಮೌನದಿಂದ ವಿಟ್ಲ ತಾಲೂಕಾಗಿಲ್ಲ. ಇದು ವಿಟ್ಲ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹೋರಾಟದ ಹಾದಿ: ಸರ್ಕಾರ 1973ರಲ್ಲಿ ತಾಲೂಕು ಪುನಾರಚನೆ ಬಗ್ಗೆ ಅಧ್ಯಯನ ನಡೆಸಲು ವಾಸುದೇವ ರಾವ್ ಸಮಿತಿಗೆ ವಿಟ್ಲದ ಬಾಬು ಶೆಟ್ಟಿ, ದೇವಸ್ಯ ನಾರಾಯಣ ಭಟ್, ಮಾಜಿ ಸಚಿವ ವಿಠಲದಾಸ ಶೆಟ್ಟಿ ಮನವಿ ನೀಡಿ ತಾಲೂಕು ರಚನೆಗೆ ಒತ್ತಾಯಿಸಿದ್ದರು. ಬಳಿಕ 1985ರಲ್ಲಿ ಹುಂಡೇಕರ್ ಸಮಿತಿ ಮುಂದೆ ಕೂಡೂರು ಕೃಷ್ಣ ಭಟ್ಟರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 2009ರಲ್ಲಿ ಮತ್ತೆ ಎಂ.ಬಿ.ಪ್ರಕಾಶ್ ಸಮತಿ ಮುಂದೆ ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಕರಪಾಡಿ, ಮುರುವ ಮಹಾಬಲ ಭಟ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 2013ರಲ್ಲಿ ಮುಖ್ಯಮಂತ್ರಿಗೆ ಪತ್ರ, 2018ರ ಜ.2ರಂದು ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ವಿಟ್ಲ ಪೇಟೆಯ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನ ತಡೆ ನಡೆಸಿ ತಾಲೂಕು ಹೋರಾಟ ಬೇಡಿಕೆ, 2018ರ ಫೆ.1ರಿಂದ ಮುಖ್ಯಮಂತ್ರಿಗಳಿಗೆ ಕಾರ್ಡ್ ಚಳವಳಿ ನಡೆಸಲಾಯಿತು.

ಇಲ್ಲಿದೆ ತಾಲೂಕು ಕೇಂದ್ರದ ಎಲ್ಲ ವ್ಯವಸ್ಥೆ: ಪೊಲೀಸ್ ಠಾಣೆ, ಸಮುದಾಯ ಆಸ್ಪತ್ರೆ, ನಾಡಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ಮೆಸ್ಕಾಂ ಉಪವಿಭಾಗ, ಸರ್ಕಾರಿ ಬಸ್ ನಿಲ್ದಾಣ, ಕೇಂದ್ರೀಯ ಅಡಕೆ ಸಂಶೋಧನಾ ಕೇಂದ್ರ, ಕ್ಯಾಂಪ್ಕೊ ಶಾಖೆ, ರಾಷ್ಟ್ರೀಯ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು, ಮಹಿಳಾ ಸೌಹಾದರ್ ಸಹಕಾರಿ ಬ್ಯಾಂಕ್, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸರ್ಕಾರಿ ಐಟಿಐ ಎಲ್ಲವನ್ನೂ ವಿಟ್ಲ ಹೊಂದಿದ್ದು, ತಾಲೂಕು ಕೇಂದ್ರದ ಎಲ್ಲ ವ್ಯವಸ್ಥೆಗಳು ಇಲ್ಲಿವೆ. ವಿಟ್ಲ ಹೋಬಳಿಯ ಹೆಚ್ಚಿನ ಗ್ರಾಮಸ್ಥರಿಗೆ 20-30 ಕಿ.ಮೀ. ದೂರದಲ್ಲಿರುವ ಬಂಟ್ವಾಳಕ್ಕೆ ಸಾಗುವುದು ವ್ಯಾವಹಾರಿಕವಾಗಿಯೂ ಆರ್ಥಿಕವಾಗಿಯೂ ಅನನುಕೂಲ. ಆದುದರಿಂದ ಅಗತ್ಯ ಪರಿಹಾರ ಕಂಡುಹಿಡಿಯುವ ಆವಶ್ಯಕತೆಯಿದೆ ಎನ್ನುವುದು ಇಲ್ಲಿನ ಸಾರ್ವಜನಿಕ ಅಭಿಪ್ರಾಯ.

ದೂರದ ನೆಪ ಈಗ ಇಲ್ಲ!: ವಿಟ್ಲದಿಂದ ಈಗಾಗಲೇ ತಾಲೂಕು ಕೇಂದ್ರ ಆಗಿರುವ ಪುತ್ತೂರು ಹಾಗೂ ಬಂಟ್ವಾಳದ ನಡುವೆ 40 ಕಿ.ಮೀ. ಅಂತರ ಇಲ್ಲ ಎಂದು ವಿಟ್ಲವನ್ನು ತಾಲೂಕು ಕೇಂದ್ರದ ಸ್ಥಾನದಿಂದ ಕೈಬಿಡಲಾಗಿದೆ. ಆದರೆ ಮಂಗಳೂರು ಆಸುಪಾಸಿನ ಉಳ್ಳಾಲ ಹಾಗೂ ಮೂಲ್ಕಿ ಭಾಗಕ್ಕೆ ಸಾಕಷ್ಟು ವಾಹನ ವ್ಯವಸ್ಥೆ ಇದ್ದರೂ ಈಗ ರಾಜಕೀಯ ಒತ್ತಡದಿಂದಾಗಿ ಅದು ಹೊಸ ತಾಲೂಕಾಗಿದೆ. ಈ ಹಿನ್ನೆಲೆಯಲ್ಲಿ 40 ಕಿ.ಮೀ. ಮೀಟರ್‌ಗ ದೂರ ಇಲ್ಲ ಎನ್ನುವುದು ನೆಪವಾಗದು.

ರಾಜಕೀಯ ಪ್ರಭಾವ ಇದ್ದರೆ ತಾಲೂಕು ಆಗುತ್ತಿದೆ. ನಾಲ್ಕು ದಶಕದ ಹೋರಾಟಗಳು ನಡೆದ ಭಾಗದಲ್ಲಿ ತಾಲೂಕು ಕೇಂದ್ರ ಆಗುತ್ತಿಲ್ಲ. ವಿಟ್ಲ ಭಾಗದ ಜನಪ್ರತಿನಿಧಿಗಳು ಯಾವ ಕಾರಣಕ್ಕೆ ಜನರಿಗೆ ವೇದಿಕೆಯಲ್ಲಿ ಕೂತು ಭರವಸೆಗಳನ್ನು ನೀಡುತ್ತಾರೆ ಎಂಬುದನ್ನು ಪ್ರಶ್ನಿಸುವ ಅವಶ್ಯಕತೆ ಇದೆ.
ರಾಮಣ್ಣ ಶೆಟ್ಟಿ ಪಾಳಿಗೆ
ಅಧ್ಯಕ್ಷರು, ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿ