ವಿವಾದದ ಬಿಸಿ ಏರಿಸಿದ ಮಂಕಡಿಂಗ್ ರನೌಟ್

ಜೈಪುರ: ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್​ಮನ್ ಜೋಸ್ ಬಟ್ಲರ್​ರನ್ನು ಮಂಕಡಿಂಗ್ ಮಾಡಿದ್ದು, ಸಹಜ ವರ್ತನೆ. ಉದ್ದೇಶಪೂರ್ವಕವಾದುದ್ದಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್.ಅಶ್ವಿನ್ ಹೇಳಿದ್ದರೂ, ರಾಜಸ್ಥಾನ ತಂಡದ ಟೀಮ್ ಮ್ಯಾನೇಜ್​ವೆುಂಟ್ ಇದರಿಂದ ಸಮಾಧಾನವಾಗಿಲ್ಲ. ನಾಯಕ ಅಜಿಂಕ್ಯ ರಹಾನೆ, ಕೋಚ್ ಪ್ಯಾಡಿ ಆಪ್ಟನ್ ಹಾಗೂ ತಂಡದ ರಾಯಭಾರಿ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್, ಅಶ್ವಿನ್​ರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವ ಕ್ರಿಕೆಟ್ ಲೋಕದಲ್ಲಿ ಈ ವಿಚಾರ ಪರ-ವಿರೋಧದ ಚರ್ಚೆಗೆ ಆಸ್ಪದ ನೀಡಿದ ಬೆನ್ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ಅಶ್ವಿನ್ ತಮ್ಮ ಶಿಷ್ಟಾಚಾರವನ್ನು ಪಾಲಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ. ಅದಲ್ಲದೆ, ಪಂದ್ಯದ ಅಧಿಕಾರಿಗಳೂ ತಮ್ಮ ಕರ್ತ್ಯವ್ಯವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದಿದೆ.

ಬ್ಯಾಟ್ಸ್​ಮನ್​ಅನ್ನು ಔಟ್ ಮಾಡಲು ಬೌಲರ್ ತನ್ನ ಕ್ರಿಕೆಟ್​ನ ಜ್ಞಾನವನ್ನು ಮಾತ್ರವೇ ಬಳಸಿಕೊಳ್ಳಬೇಕು. ಇದು ಕ್ರಿಕೆಟ್ ನೋಡುತ್ತಿರುವ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಈ ಪ್ರಕರಣವನ್ನು ನಿಭಾಯಿಸುವಲ್ಲಿ ಪಂದ್ಯದ ಅಧಿಕಾರಿಗಳು ವಿಫಲರಾಗಿದ್ದಾರೆ. ಆ ಪರಿಸ್ಥಿತಿಗೆ ತಕ್ಕಂತೆ ತೀರ್ಪು ನೀಡುವುದಾಗಿದ್ದರೆ, ಬಟ್ಲರ್​ರನ್ನು ನಾಟೌಟ್ ಎಂದು ಹೇಳಬೇಕಿತ್ತು. ಅಶ್ವಿನ್ ಕೂಡ ಕ್ರೀಡಾಸ್ಪೂರ್ತಿ ಹಾಗೂ ನಿಯಮವನ್ನು ಗಮನದಲ್ಲಿಟ್ಟುಕೊಳ್ಳಬೇಕಿತ್ತು. ಕ್ರಿಕೆಟ್ ಕೌಶಲದ ಮೂಲಕ ಮಾತ್ರವೇ ಬೌಲರ್​ವೊಬ್ಬ ಬ್ಯಾಟ್ಸ್​ಮನ್​ಅನ್ನು ಔಟ್ ಮಾಡಬೇಕೇ ಹೊರತು, ಇಂಥ ಕೌಶಲಗಳನ್ನು ಬಳಸಬಾರದು. ಹಾಗೇನಾದರೂ ಬ್ಯಾಟ್ಸ್ ಮನ್ ಇದರ ಲಾಭ ಪಡೆಯುತ್ತಿದ್ದರೆ, ನೇರ ಮಾರ್ಗದಲ್ಲಿಯೇ ಇದನ್ನು ತಿಳಿಸಬೇಕು. ಸ್ಪರ್ಧಾತ್ಮಕತೆ ಬಹಳ ಮುಖ್ಯ. ಅದರೊಂದಿಗೆ ಶಿಷ್ಟಾಚಾರದ ಮಟ್ಟವನ್ನು ನಾವು ಕಾಯ್ದುಕೊಳ್ಳಬೇಕಿದೆ’ ಎಂದಿದ್ದಾರೆ.

ರಾಜಸ್ಥಾನ ತಂಡದ ನಾಯಕ ಅಜಿಂಕ್ಯ ರಹಾನೆ, ಈ ವಿಚಾರದ ಬಗ್ಗೆ ತಾವು ಮಾತನಾಡುವುದಿಲ್ಲ ಎಂದು ಹೇಳಿದ್ದಲ್ಲದೆ, ಮ್ಯಾಚ್ ರೆಫ್ರಿಗಳು ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. ಶೇನ್ ವಾರ್ನ್ ಕೂಡ ಟ್ವಿಟರ್​ನಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಶ್ವಿನ್ ತಮ್ಮ ಕೀಳು ವರ್ತನೆಯಿಂದ ಬಹುಕಾಲ ನೆನಪಲ್ಲಿ ಉಳಿಯಲಿದ್ದಾರೆ ಎಂದು ಬರೆದಿದ್ದಾರೆ.

ಕ್ರೀಡಾಸ್ಪೂರ್ತಿ ಮರೆತ ಬಟ್ಲರ್

ಈ ರೀತಿಯಲ್ಲಿ ಔಟ್ ಮಾಡುವುದು ಬೆನ್ನಿಗೆ ಚೂರಿ ಹಾಕಿದಂತೆ. ಆದ ಕಾರಣ ಮಂಕಡಿಂಗ್​ಅನ್ನು ಎಲ್ಲರೂ ಟೀಕಿಸುತ್ತಾರೆ. ಇದು ನಿಮಗೆ ಫಲಿತಾಂಶ ನೀಡುತ್ತದೆ. ಆದರೆ, ಐಪಿಎಲ್​ನಂಥ ಜನಪ್ರಿಯ ಟೂರ್ನಿಯನ್ನು ಗೆಲ್ಲಲು ಇದರಿಂದ ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐನ ಇನ್ನೊಬ್ಬ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ಎರಡು ತಪು್ಪಗಳು ಎಂದಿಗೂ ಒಂದನ್ನು ಸರಿ ಮಾಡುವುದಿಲ್ಲ. ಮೈದಾನದಲ್ಲಿ ಆದ ಘಟನೆಯನ್ನು ಬಟ್ಲರ್ ಅಲ್ಲಿಯೇ ಬಿಟ್ಟು, ಪಂದ್ಯ ಮುಗಿದ ಬಳಿಕ ಅಶ್ವಿನ್​ರ ಕೈ ಕುಲುಕಬೇಕಿತ್ತು. ಪಂದ್ಯ ಮುಗಿದ ಬಳಿಕ ಅಶ್ವಿನ್​ರ ಕೈ ಕುಲುಕಲು ನಿರಾಕರಿಸುವ ಮೂಲಕ ಬಟ್ಲರ್ ಕೂಡ ಕ್ರೀಡಾಸ್ಪೂರ್ತಿಯನ್ನು ಮರೆತರು ಎಂದು ಹೇಳಿದ್ದಾರೆ.

ಈ ಸಾಹಸ ಮಾಡಲಾರೆ

ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಇಂಗ್ಲೆಂಡ್ ಬೌಲರ್ ಬೆನ್ ಸ್ಟೋಕ್ಸ್ ಈ ರೀತಿ ಮಾಡಿದರೆ ಭಾರತದ ಮಾಜಿ ಆಟಗಾರರು ಇದನ್ನು ಒಪು್ಪತ್ತಿದ್ದರೆ ಎಂದು ಟ್ವಿಟರ್​ನಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಕೊನೆಗೆ ಈ ಬಗ್ಗೆ ಸ್ವತಃ ಬೆನ್​ಸ್ಟೋಕ್ಸ್ ಪ್ರತಿಕ್ರಿಯೆ ನೀಡುವ ಮಟ್ಟಿಗೆ ಈ ಚರ್ಚೆ ನಡೆಯಿತು. ‘ವಿಶ್ವಕಪ್ ಫೈನಲ್​ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ನನಗೇನಾದರೂ ಮಂಕಡಿಂಗ್ ಮಾಡುವ ಅವಕಾಶ ಸಿಕ್ಕರೆ, ನಾನು ಎಂದೆಂದಿಗೂ ಈ ಸಾಹಸ ಮಾಡಲಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಅಶ್ವಿನ್​ರ ವರ್ತನೆಗಳೇ ಅವರನ್ನು ಪ್ರತಿನಿಧಿಸುತ್ತದೆ. ಪಂದ್ಯ ಮುಗಿದ ಬಳಿಕ ಅವರ ಆಟಗಾರರ ಕಣ್ಣುಗಳನ್ನು ನೋಡಿದಾಗ, ಸಹ ಆಟಗಾರರಿಗೆ ಇದು ಸಮ್ಮತಿ ಇದ್ದಂತಿರಲಿಲ್ಲ. ಆದರೆ, ನಾನು ಇದನ್ನು ಐಪಿಎಲ್ ಅಭಿಮಾನಿಗಳಿಗೆ ನಿರ್ಧರಿಸಲು ಬಿಡುತ್ತೇನೆ. ಈ ರೀತಿಯ ವರ್ತನೆಗಳನ್ನು ಪಂದ್ಯದಲ್ಲಿ ನೋಡಲು ಇಷ್ಟಪಡುತ್ತಾರೋ ಎನ್ನುವುದನ್ನು ಅವರೇ ನಿರ್ಧರಿಸಲಿ. ನಾವು ಇಲ್ಲಿರುವುದು ಕ್ರಿಕೆಟ್ ಆಡಿ ಅಭಿಮಾನಿಗಳನ್ನು ರಂಜಿಸಲು ಮಾತ್ರ. ಈ ಜವಾಬ್ದಾರಿಯ ಜತೆ ಕ್ರೀಡೆಯನ್ನು ಇಷ್ಟಪಡುವ ಯುವ ಮನಸ್ಸುಗಳಿಗೆ ಮಾದರಿಯಾಗಿ ಆಡಬೇಕು.

| ಪ್ಯಾಡಿ ಆಪ್ಟನ್ ರಾಜಸ್ಥಾನ ತಂಡದ ಕೋಚ್

ಮಂಕಡಿಂಗ್​ಗೆ ಒಪ್ಪಿಗೆ ಇರಲಿಲ್ಲ

ಬಿಸಿಸಿಐ ನೇರವಾಗಿ ಈ ವಿಚಾರದ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೇ ಇದ್ದರೂ, ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ನೆನಪಿರುವ ಹಾಗೆ ಹಿಂದೊಮ್ಮೆ ಮ್ಯಾಚ್ ರೆಫ್ರಿಗಳು ಹಾಗೂ ನಾಯಕರ ಸಭೆ ನಡೆದಿದ್ದ ವೇಳೆ, ಯಾವುದೇ ಕಾರಣಕ್ಕೂ ಮಂಕಡಿಂಗ್ ವರ್ತನೆಗಳನ್ನು ತೋರಬಾರದು ಎಂದು ನಿರ್ಧಾರ ಮಾಡಲಾಗಿತ್ತು. ಕೋಲ್ಕತದಲ್ಲಿ ನಡೆದ ಈ ಸಭೆಯಲ್ಲಿ ಬಹುಶಃ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಕೂಡ ಭಾಗಿಯಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಯಾವ ಆವೃತ್ತಿಗೆ ಮುನ್ನ ನಡೆದ ಸಭೆಯಲ್ಲಿ ಇದು ತೀರ್ವನವಾಗಿತ್ತು ಎನ್ನುವುದನ್ನು ತಿಳಿಸಿಲ್ಲ.