ದೇಶದ ರಾಷ್ಟ್ರಪತಿಯಾಗಲು ಏನು ಮಾಡಬೇಕು ಎಂದು ಕೇಳಿದ ವಿದ್ಯಾರ್ಥಿಯ ಪ್ರಶ್ನೆಗೆ ಪ್ರಧಾನಿ ಮೋದಿ ಕೊಟ್ಟ ಉತ್ತರ ಹೀಗಿತ್ತು…

ಬೆಂಗಳೂರು: ದೇಶದ ಪಾಲಿಗೆ ಮಹತ್ವದ್ದಾಗಿದ್ದ ಚಂದ್ರಯಾನ-2ಗೆ ಹಿನ್ನಡೆಯಾದ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಬಳಿಕ ಹಲವಾರು ವಿದ್ಯಾರ್ಥಿಗಳೊಂದಿಗೆ ಚಟುಕು ಸಂವಾದ ನಡೆಸಿದರು. ಈ ವೇಳೆ ದೇಶದ ರಾಷ್ಟ್ರಪತಿಯಾಗಲು ಏನು ಮಾಡಬೇಕು ಎನ್ನುವ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ್ದಾರೆ.

ಭಾರತದ ರಾಷ್ಟ್ರಪತಿಯಾಗುವುದು ನನ್ನ ಉದ್ದೇಶ. ಹಾಗಾಗಿ ನಾನು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-2 ಇಳಿಯುವುದನ್ನು ವೀಕ್ಷಿಸಲು ಇಸ್ರೋ ‘ಬಾಹ್ಯಾಕಾಶ ರಸಪ್ರಶ್ನೆ’ ಸ್ಪರ್ಧೆಯಿಂದ ಆಯ್ಕೆಯಾದ ವಿದ್ಯಾರ್ಥಿಯೊಬ್ಬ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾನೆ.

ಬಾಲಕನ ಈ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮಾತ್ರ ಏಕೆ? ಪ್ರಧಾನಮಂತ್ರಿ ಯಾಕಾಗಬಾರದು ಎಂದು ಮರು ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ನಡೆದ ಚುಟುಕು ಸಂವಾದದಲ್ಲಿ, ಜೀವನದಲ್ಲಿ ಗುರಿಯು ದೊಡ್ಡದಾಗಿರಬೇಕು ಮತ್ತು ಅವುಗಳನ್ನು ಚಿಕ್ಕ ಚಿಕ್ಕ ಭಾಗಗಳನ್ನಾಗಿ ಮಾಡಿಕೊಂಡು ಹೋಗಬೇಕು. ಬಳಿಕ ಚಿಕ್ಕ ಚಿಕ್ಕ ಗುರಿಗಳನ್ನೇ ಸಾಧಿಸುತ್ತಾ ಹೋಗಬೇಕು. ನೀವು ಈ ಹಿಂದೆ ಯಾವುದನ್ನು ಕಳೆದುಕೊಂಡಿದ್ದೀರೋ ಅದನ್ನು ಮರೆತುಬಿಡಿ. ನಿಮ್ಮ ಜೀವನದ ಮುಂದಿನ ಹಾದಿಯಲ್ಲಿ ನಿರಾಸೆ ಪ್ರವೇಶಮಾಡದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಈ ವೇಳೆ ಮತ್ತೊಬ್ಬ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದ ಪ್ರಧಾನಿ ಮೋದಿ, ಮನೆಗೆ ಹೋದ ಬಳಿಕ ಜನರಿಗೆ ಏನೆಂದು ಹೇಳುವೆ? ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಕೆ, ಚಂದ್ರಯಾನ – 2 ವಿಕ್ರಂ ಲ್ಯಾಂಡರ್‌ ಸಂಪರ್ಕ ಕಳೆದುಕೊಂಡಿತು ಎಂದು ಹೇಳುವೆ ಎಂದು ಉತ್ತರಿಸಿದರು.

ವಿದ್ಯಾರ್ಥಿಗಳೊಂದಿಗಿನ ಸಂವಾದದ ಬಳಿಕ ಹುರಿದುಂಬಿಸುವ ಮಾತುಗಳನ್ನಾಡಿದ ಮೋದಿ ಆಟೋಗ್ರಾಫ್‌ ಮತ್ತು ಫೋಟೊಗಳಿಗೆ ಪೋಸ್‌ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಸಂಚಲನ ಸೃಷ್ಟಿಮಾಡಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *