ರಸ್ತೆ ಅಗೆವರ ವಿರುದ್ಧ ಕ್ರಮವೇಕಿಲ್ಲ?

ಬೆಂಗಳೂರು: ನಗರದ ಹಲವೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ರಸ್ತೆಗಳನ್ನು ಅಗೆದು, ಅವುಗಳನ್ನು ಮುಚ್ಚದೇ ಬಿಟ್ಟಿದ್ದಾರೆ. ಕಾಮಗಾರಿ ನಡೆಯುತ್ತಿರುವ ವಿವರದ ಫಲಕಗಳನ್ನೂ ಹಾಕಿಲ್ಲ. ಇದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಮರೆಯಲ್ಲಿ ನಿಂತು ದಂಡ ವಸೂಲಿ ಮಾಡುವ ತಾವು, ಕಾಮಗಾರಿ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಅಡಚಣೆ ಮಾಡಿರುವವರ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ?

ಸಾರ್ವಜನಿಕರು ನಗರ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ ಪರಿ ಇದು.. ನಗರ ಸಂಚಾರ ಪೊಲೀಸರು ಶನಿವಾರ ಹಮ್ಮಿಕೊಂಡಿದ್ದ ‘ಜನಸ್ಪಂದನಾ ಸಭೆ’ಯಲ್ಲಿ ಪ್ರಶ್ನೆಗಳ ಸುರಿಮಳೆಯೇ ಇತ್ತು. ವಿವಿಧ ಸಂಘ ಸಂಸ್ಥೆಗಳು, ವಕೀಲರು ಸೇರಿ ನೂರಾರು ಜನರು ಸಂಚಾರಕ್ಕೆ ಸಂಬಂಧಿಸಿದ ಕುಂದು ಕೊರತೆಗಳನ್ನು ಅಧಿಕಾರಿಗಳ ಮುಂದೆ ತೋಡಿಕೊಂಡರು.

ಅಪೂರ್ಣ ಕಾಮಗಾರಿ: ಚಿಕ್ಕಪೇಟೆ, ಸುಲ್ತಾನ್​ಪೇಟೆ ಹಾಗೂ ಗಾಂಧಿನಗರದ ಹಲವೆಡೆ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ವರ್ಷವಾಗಿದೆ. ಇದುವರೆಗೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಜನರು ತಾಪತ್ರಯ ಪಟ್ಟುಕೊಂಡೇ ಓಡಾಡ ಬೇಕು. ವಾಹನ ಸವಾರರ ಪರಿಸ್ಥಿತಿ ಹೇಳತೀರದು. ಮಳೆ ಸಂದ ರ್ಭದಲ್ಲಿ ಎಲ್ಲಿ ಯಾರು ಬೀಳುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಇದಕ್ಕೆ ಕಾರಣರಾದವರ ವಿರುದ್ಧ ಏಕೆ ಕ್ರಮ ಜರುಗಿಸಬಾರದು ಎಂದು ಸುಲ್ತಾನ್​ಪೇಟೆ ನಿವಾಸಿ ಗೀತಾ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಎನ್.ರಮೇಶ್, ಚಿಕ್ಕಪೇಟೆಯಲ್ಲಿ ಒಳ ಚರಂಡಿ, ನೀರಿನ ಪೈಪ್ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಹೀಗಾಗಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಅಲ್ಲದೇ, ಟೆಂಡರ್ ಶ್ಯೂರ್ ಕಾಮಗಾರಿ ನಡೆಯುತ್ತಿರುವ ಬೋರ್ಡ್​ಗಳನ್ನು ಅಳವ ಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಶಾಲಾ ವಾಹನಗಳಿಂದ ಸಂಚಾರ ದಟ್ಟಣೆ: ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳನ್ನು ರ್ಪಾಂಗ್ ಸ್ಥಳಗಳಲ್ಲಿ ನಿಲ್ಲಿಸದೇ, ರಸ್ತೆ ಬದಿ ನಿಲ್ಲಿಸುತ್ತಿದ್ದಾರೆ. ಬಹುತೇಕ ಶಾಲೆಗಳು ಬೆಳಗ್ಗೆ 8.30ಕ್ಕೆ ಆರಂಭವಾಗುತ್ತವೆ. ಈ ವೇಳೆ ರಸ್ತೆ ಬದಿ ನಿಲ್ಲಿಸುತ್ತಾರೆ. ಅಲ್ಲದೇ, ವಾಹನಗಳಲ್ಲಿ ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ತುಂಬಿಸಿರುತ್ತಾರೆ. ಪೊಲೀಸರಿಗೂ ಗೊತ್ತಿದ್ದರೂ ಗೊತ್ತಿಲ್ಲದವರಂತೆ ಇದ್ದಾರೆ. ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಶಿವಾಜಿನಗರದ ಮೊಹಮದ್ ಶರೀಫ್ ಪ್ರಶ್ನಿಸಿದರು.

ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವವರು ಯಾರೇ ಆಗಿದ್ದರು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ನಿಯಮಗಳನ್ನು ಉಲ್ಲಂಘಿಸುವವರು ಯಾರೇ ಆಗಿದ್ದರೂ ಅವರನ್ನು ಮುಲಾಜಿಲ್ಲದೇ ಪ್ರಶ್ನಿಸಿ. ಅಂತಹ ಘಟನೆಗಳ ಮಾಹಿತಿಯನ್ನು ಪೊಲೀಸರಿಗೂ ತಿಳಿಸಿ. ವಾಹನಗಳಲ್ಲಿ ಮಕ್ಕಳನ್ನು ಅಪಾಯಕಾರಿ ರೀತಿ ತುಂಬಿಸಿರುವುದು ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಶಾಲಾ ಆವರಣದಲ್ಲಿ ರ್ಪಾಂಗ್ ವ್ಯವಸ್ಥೆ ಮಾಡಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗುವುದು ಎಂದರು.

ಕನ್ನಡಿ ಇಲ್ಲದ ವಾಹನಕ್ಕೂ ದಂಡ: ಬೈಕ್​ಗಳಿಗೆ ಕನ್ನಡಿಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಹಿಂಬದಿ ಸವಾರರನ್ನು ಗಮನಿಸದೇ ಹಾವಿನ ರೀತಿಯಲ್ಲಿ ವಾಹನ ಚಲಾಯಿಸುತ್ತಾರೆ. ಅಲ್ಲದೇ, ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್​ಗಳಿಂದ ಎದೆ ಹೊಡೆದುಹೋಗುವ ರೀತಿಯಲ್ಲಿ ಕಿರಿಕಿರಿ ಮಾಡುತ್ತಾರೆ. ಅಂತಹ ಸವಾರರಿಗೆ ದಂಡ ವಿಧಿಸಬೇಕು ಎಂದು ಚಂದ್ರಲೇಔಟ್​ನ ನಾರಾಯಣ ಸಲಹೆ ನೀಡಿದರು.

ಸಭೆಯಲ್ಲಿ ಬಿಬಿಎಂಪಿ, ಬಿಡಿಎ, ಜಲಮಂಡಳಿ, ರೈಲ್ವೆ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ಕುಡುಕರ ಗ್ರೂಪ್

ಕುಡಿದು ವಾಹನ ಚಲಾಯಿಸುವ ಕಿಡಿಗೇಡಿ ಯುವಕರು ‘ವಾಟ್ಸ್​ಆಪ್ ಗ್ರೂಪ್’ಗಳನ್ನು ಮಾಡಿಕೊಂಡಿದ್ದಾರೆ. ಇದರ ಮೂಲಕ ಪೊಲೀಸರು ತಪಾಸಣೆ ನಡೆಸುತ್ತಿರುವ ಮಾರ್ಗಗಳ ಬಗ್ಗೆ ರ್ಚಚಿಸುತ್ತಾರೆ. ವಾಟ್ಸ್​ಆಪ್ ಲೊಕೇಶನ್​ಗಳನ್ನು ಹಂಚಿಕೊಳ್ಳುತ್ತಾರೆ. ಈ ಬಗ್ಗೆ ಸಂಚಾರ ಪೊಲೀಸರು ನಿಗಾವಹಿಸಬೇಕು. ಅಲ್ಲದೇ, ಆಂಬುಲೆನ್ಸ್​ಗಳಿಗೆ ಸಿಗ್ನಲ್ ಬಳಿ ಎಡಭಾಗದಲ್ಲಿ ಸ್ಥಳ ಬಿಟ್ಟುಕೊಡಲು ಅವಕಾಶ ಕಲ್ಪಿಸಬೇಕು ಎಂದು ಬೆಂಗಳೂರು ಅಸೋಸಿಯೇಷನ್ ಕ್ಲಬ್​ನ ಸದಸ್ಯರೊಬ್ಬರು ಮನವರಿಕೆ ಮಾಡಿದರು.

ಸಿಎಂ ಸೂಚನೆ ಮೇರೆಗೆ ಸಭೆ

ಸಂಚಾರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು. ಜನಸ್ಪಂದನಾ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಸಂಚಾರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಸಾರ್ವಜನಿಕ ಸಭೆ ನಡೆಸಿದ್ದೇವೆ ಎಂದರು. ಸಾರ್ವಜನಿಕರಿಂದ ಸಂಚಾರಕ್ಕೆ ಸಂಬಂಧಿಸಿದ ಹಲವು ದೂರುಗಳು ಬಂದಿವೆ. ಸಮಸ್ಯೆಗಳ ನಿವಾರಣೆಗೆ ಕೊಟ್ಟಿರುವ ಸಲಹೆಗಳನ್ನು ಸ್ವೀಕರಿಸಲಾಗಿದೆ. ಈ ಸಂಬಂಧ ಅಧಿಕಾರಿಗಳ ಜತೆ ರ್ಚಚಿಸಿ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

Leave a Reply

Your email address will not be published. Required fields are marked *