ಮಮತಾ ಬ್ಯಾನರ್ಜಿ ತನಿಖೆಗೆ ಹೆದರಲು ಕಾರಣವೇನೆಂದು ಪ್ರಶ್ನಿಸಿದ ಕೇಂದ್ರ ಸಚಿವರು

ನವದೆಹಲಿ: ಬಹುಕೋಟಿ ಶಾರದಾ ಚಿಟ್​ಫಂಡ್​, ರೋಸ್​ವ್ಯಾಲಿ ಹಗರಣಕ್ಕೆ ಸಂಬಂಧಟ್ಟಂತೆ ಕೇಂದ್ರದ ವಿರುದ್ಧವೇ ಧರಣಿ ಕುಳಿತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಯಾವ ಕಾರಣಕ್ಕೆ ಹೆದರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಬಿಜೆಪಿ ಇಂದು ಹೇಳಿದೆ.

ಮಮತಾ ಬ್ಯಾನರ್ಜಿಯವರು ಹಗರಣದಿಂದ ತಮ್ಮನ್ನು ತಾವು ಪಾರು ಮಾಡಿಕೊಳ್ಳುತ್ತಿದ್ದಾರಾ? ತನಿಖೆಯನ್ನು ಎದುರಿಸಲು ಯಾಕೆ ಸಿದ್ಧರಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಕಟುವಾಗಿ ಪ್ರಶ್ನಿಸಿದ್ದಾರೆ.
ಹಗರಣದಿಂದ ಪಾರಾಗಲು ಸಾಕ್ಷಿಗಳನ್ನು ಮರೆಮಾಚುವ ಯತ್ನ ನಡೆಯುತ್ತಿದೆ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ. ಚಿಟ್​ಫಂಡ್​ ಹಗರಣದ ವಿರುದ್ಧ ತನಿಖೆ ನಡೆಸಲು ರಾಹುಲ್​ ಗಾಂಧಿಯವರ ಕಾಂಗ್ರೆಸ್​ ಪಕ್ಷ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ಬಿಜೆಪಿಯ ಪಾತ್ರವಿಲ್ಲ. ಕೋಲ್ಕತದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದಂತೆ ಆಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ, ಇದು ನರೇಂದ್ರ ಮೋದಿಯವರು ಹೇರಿದ್ದಲ್ಲ. ಮಮತಾ ಬ್ಯಾನರ್ಜಿಯವರೇ ನಿರ್ಮಿಸಿಕೊಂಡಿದ್ದು. ಸಿಬಿಐನಿಂದ ರಕ್ಷಿಸಿಕೊಳ್ಳಲು ಧರಣಿ ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅರಾಜಕತೆ
ಸ್ಮೃತಿ ಇರಾನಿಯವರು ಪ್ರತಿಕ್ರಿಯೆ ನೀಡಿದ್ದು, ಒಬ್ಬರು ಪೊಲೀಸ್​ ಅಧಿಕಾರಿಗೋಸ್ಕರ ಮುಖ್ಯಮಂತ್ರಿ ಧರಣಿ ಕುಳಿತಿದ್ದಾರೆ. ಅಲ್ಲಿ ಕರ್ತವ್ಯಕ್ಕಾಗಿ ತೆರಳಿದ ಸಿಬಿಐ ಅಧಿಕಾರಿಗಳ ರಕ್ಷಣೆಗೆ ಅರೆಸೈನಿಕ ಪಡೆಯ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಅಲ್ಲಿನ ಜನ ಹಿಂದೆಂದೂ ಕಾಣದ ಸನ್ನಿವೇಶ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.