150 ಅಡಿ ಕುಗ್ಗಿದ ಚಂದಿರ!

ಮಾನವರಿಗೆ ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳಾಗುವುದು ಸಾಮಾನ್ಯ. ಬಾನ ಚಂದಿರನಿಗೂ ವಯಸ್ಸಾಯ್ತೇ? ಚಂದ್ರನ ಗಾತ್ರ ಕುಗ್ಗುತ್ತಾ ಸಾಗುತ್ತಿದ್ದು, ಇದರ ಪರಿಣಾಮವಾಗಿ ಚಂದಿರನ ಮೇಲ್ಮೈನಲ್ಲಿ ಸುಕ್ಕುಗಳೇಳುತ್ತಿವೆ. ಈ ಬದಲಾವಣೆಗಳಿಂದಾಗಿ ಚಂದ್ರನಲ್ಲಿ ಕಂಪನವೂ ಉಂಟಾಗುತ್ತಿದೆ ಎಂದು ನಾಸಾ ವಿಜ್ಞಾನಿಗಳು ಚಿತ್ರ ಸಮೇತ ಬಯಲಿಗೆಳೆದಿದ್ದಾರೆ. ಲೂನಾರ್ ರೆಕನ್ನೇಸ್ಸಾನ್ಸ್ ಆರ್ಬಿಟರ್ ತೆಗೆದಿರುವ 12 ಸಾವಿರಕ್ಕೂ ಅಧಿಕ ಫೋಟೋಗಳ ಅಧ್ಯಯನ ನಡೆಸಿ ಸಿದ್ಧಪಡಿಸಲಾಗಿರುವ ವರದಿ ಈಗ ಬಹಿರಂಗವಾಗಿದೆ.

ಬದಲಾವಣೆ ಏನು?

  • ಚಂದ್ರನ ಉತ್ತರ ಧ್ರುವದ ಹತ್ತಿರ ಜಲಾನಯನ ಪ್ರದೇಶ ಮಾರೆ ಫ್ರಿಗೋರಿಸ್​ನಲ್ಲಿ ಬಿರುಕುಗಳು ಕಂಡುಬಂದಿವೆ
  • ಭೂವಿಜ್ಞಾನಿಗಳ ದೃಷ್ಟಿಯಲ್ಲಿ ಮಾರೆ ಫ್ರಿಗೋರಿಸ್ ಮೃತಸ್ಥಳವೆಂದು ಪರಿಗಣಿಸಲಾಗುತ್ತದೆ
  • ಚಂದ್ರನಲ್ಲಿ ಭೂಮಿಯಲ್ಲಿರುವಂತೆ ಟೆಕ್ಟಾನಿಕ್ ಪ್ಲೇಟ್​ಗಳಿಲ್ಲ. ಆದರೂ ಚಂದ್ರನಲ್ಲಿನ ಉಷ್ಣಾಂಶ ಇಳಿಕೆಯಿಂದ ಟೆಕ್ಟಾನಿಕ್ ಚಟುವಟಿಕೆಗಳು ಕಂಡುಬಂದಿವೆ.
  • ಈ ಕಾರಣದಿಂದಲೇ ಚಂದ್ರನ ಮೇಲ್ಮೈನಲ್ಲಿ ಸುಕ್ಕುಗಳಾಗುತ್ತಿವೆ. ಈ ವಿದ್ಯಮಾನವನ್ನು ವಿಜ್ಞಾನಿಗಳು ದ್ರಾಕ್ಷಿಹಣ್ಣು ಒಣದ್ರಾಕ್ಷಿಯಾಗುವ ಪ್ರಕ್ರಿಯೆಗೆ ಹೋಲಿಸಿದ್ದಾರೆ.
  • ಚಂದ್ರನ ಒಳಭಾಗದಲ್ಲೂ ಕುಗ್ಗುವಿಕೆ ಪ್ರಕ್ರಿಯೆ ನಡೆದಿದೆ. ಈ ಕಾರಣದಿಂದ ಕಂಪನ ಕಂಡುಬರುತ್ತಿದೆ. ಹೀಗಾಗಿ ಕಳೆದ ನೂರಾರು ಮಿಲಿಯನ್ ವರ್ಷಗಳಲ್ಲಿ ಚಂದ್ರನ ಮೇಲ್ಮೈ ಅಂದಾಜು 150 ಅಡಿಗಳಷ್ಟು ಕುಗ್ಗಿದೆ.

ಬುಧ ಗ್ರಹವೂ ಕುಗ್ಗುತ್ತಿದೆ

ಸೌರಮಂಡಲದಲ್ಲಿರುವ ಗ್ರಹ, ಉಪಗ್ರಹಗಳ ನಡುವೆ ಹೋಲಿಕೆ ಮಾಡುವುದಾದರೆ ಚಂದ್ರನ ಜತೆಗೆ ಬುಧ ಗ್ರಹವೂ 600 ಮೈಲುಗಳಷ್ಟು ಉದ್ದ ಮತ್ತು 3 ಕಿಮೀಯಷ್ಟು ಎತ್ತರ ಕುಗ್ಗಿದೆ. ಚಂದ್ರನಲ್ಲಾಗುತ್ತಿರುವ ಈ ಕುಗ್ಗುವಿಕೆಯನ್ನು ಆಧರಿಸಿ ಅದರ ಹುಟ್ಟಿನ ಬಗ್ಗೆ ಅಧ್ಯಯನ ನಡೆಸಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ.

ಅಪೋಲೋ ಅಧ್ಯಯನ

ಅಪೋಲೋ ಗಗನಯಾನಿಗಳು 1960 ಮತ್ತು 1970ರ ದಶಕದಲ್ಲೇ ಚಂದ್ರನ ಗರ್ಭದಲ್ಲಿ ಕಂಪನ ಪ್ರಕ್ರಿಯೆ ಸಕ್ರಿಯವಾಗಿರುವುದನ್ನು ಕಂಡುಕೊಂಡಿದ್ದರು. ಅಪೋಲೋ 11,12,14,15 ಮತ್ತು 16ರಲ್ಲಿ ಚಂದ್ರನಲ್ಲಾಗುವ ಕಂಪನ ಅಧ್ಯಯನ ನಡೆಸಲು ಸಲಕರಣೆ ಇರಿಸಲಾಗಿತ್ತು. ಇದರಲ್ಲಿ ಅಪೋಲೋ 11 ಕಂಪನಮಾಪಕ 3 ವಾರ ಮಾತ್ರವೇ ಕಾರ್ಯನಿರ್ವಹಿಸಿತ್ತು.