ಸಾಲ ಮರುಪಾವತಿಸುತ್ತೇನೆಂದರೂ ಹಣ ಪಡೆಯಲು ಬ್ಯಾಂಕ್​ಗಳಿಗೆ ಪ್ರಧಾನಿ ಮೋದಿ ಸೂಚಿಸುತ್ತಿಲ್ಲವೇಕೆ: ವಿಜಯ ಮಲ್ಯ

ನವದೆಹಲಿ: ಬ್ಯಾಂಕ್​ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸುತ್ತೇನೆಂದರೂ ಪ್ರಧಾನಿ ನರೇಂದ್ರ ಮೋದಿ ಅವರು ಹಣ ಪಡೆದುಕೊಳ್ಳುವಂತೆ ಬ್ಯಾಂಕ್​ಗಳಿಗೆ ಯಾಕೆ ಸೂಚಿಸುತ್ತಿಲ್ಲ ಎಂದು ಸಾಲ ತೀರಿಸಲಾಗದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ಉದ್ಯಮಿ ವಿಜಯ ಮಲ್ಯ ಗುರುವಾರ ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ. 

ಸರಣಿ ಟ್ವೀಟ್​ ಮಾಡಿರುವ ವಿಜಯ ಮಲ್ಯ ತಮ್ಮ ಮೊದಲ ಟ್ವೀಟ್​ನಲ್ಲಿ ನಾನು ಗೌರವಾನ್ವಿತವಾಗಿ ಕೇಳುತ್ತಿದ್ದೇನೆ ನಾನು ಮೇಜಿನ ಮೇಲಿಟ್ಟಿರುವ ಹಣವನ್ನು ಪಡೆದುಕೊಳ್ಳುವಂತೆ ಪ್ರಧಾನಿ ಮೋದಿ ಬ್ಯಾಂಕ್​ಗಳಿಗೆ ಯಾಕೆ ಸೂಚಿಸುತ್ತಿಲ್ಲ. ಕನಿಷ್ಠ ಪಕ್ಷ ಕಿಂಗ್​ಫಿಶರ್​ಗೆ ನೀಡಿದ್ದ ಸಾರ್ವಜನಿಕ ಹಣವನ್ನಾದರೂ ಮರುಪಾವತಿಸಲು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ.

ಸಂಸತ್​ನಲ್ಲಿ ಬುಧವಾರ ಪ್ರಧಾನಿ ಮೋದಿ ಅವರು ತಮ್ಮ ಕೊನೆಯ ಭಾಷಣ ಮಾಡುವಾಗ ಹೆಸರೇಳದೇ ಓರ್ವ ವ್ಯಕ್ತಿ 9,000 ಕೋಟಿಯೊಂದಿಗೆ ಓಡಿ ಹೋದ ಎಂದು ಹೇಳಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ ಮಲ್ಯ, ಪ್ರಧಾನಿ  ಒಬ್ಬ ನಿರರ್ಗಳ ಮಾತುಗಾರ. ನೀವು ಮಾಧ್ಯಮಗಳ ಜತೆ ಮಾತನಾಡುವಾಗ ನನ್ನ ಬಗ್ಗೆಯೇ ಉಲ್ಲೇಖಿಸುತ್ತಿದ್ದೀರಿ ಎಂದು ನಾನು ಊಹಿಸಬಲ್ಲೆ ಎಂದು ಮತ್ತೊಂದು ಟ್ವೀಟ್​ನಲ್ಲಿ ತಿಳಿಸಿದ್ದು, ಹಣ ಮರುಪಾವತಿಸುವ ಅವಕಾಶ ಕೊಟ್ಟರೆ ನಾನು ಕರ್ನಾಟಕ ಹೈಕೋರ್ಟ್​ ಮುಂದೆಯೇ ಹಣ ಹಿಂತಿರುಗಿಸುವುದಾಗಿ ಪ್ರಸ್ತಾಪ ಮಾಡಿದ್ದಾರೆ.

ಈ ಪ್ರಸ್ತಾಪವು ನಿಷ್ಪ್ರಯೋಜಕವಾಗಲಿ ಅಥವಾ ವಜಾ ಮಾಡಲು ಆಗುವುದಿಲ್ಲ. ಇದು ಸಂಪೂರ್ಣವಾಗಿ ಸ್ಪಷ್ಟವಾದ, ಪ್ರಾಮಾಣಿಕವಾದ ಹಾಗೂ ಮನಃಪೂರ್ವಕವಾದ ಪ್ರಸ್ತಾಪವಾಗಿದೆ. ಶೂ ಈಗ ಇನ್ನೊಂದು ಪಾದದಲ್ಲಿದೆ. ಕಿಂಗ್​ಫಿಶರ್​ಗೆ ನೀಡಿದ ಹಣವನ್ನು ಬ್ಯಾಂಕ್​ಗಳೇಕೆ ತೆಗೆದುಕೊಳ್ಳಬಾರದು ಎಂದು ಪ್ರಶ್ನಿಸಿದ್ದು, 14 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕೋರ್ಟ್​ ಮುಂದಿಡುವುದಾಗಿ ಹೇಳಿದ್ದಾರೆ. 

ಭಾರತದ ವಿವಿಧ ಬ್ಯಾಂಕ್​ಗಳಿಂದ​ 9,000 ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿದ್ದ ವಿಜಯ ಮಲ್ಯರನ್ನು ಜನವರಿ 2 ರಂದು ದೇಶದ ಮೊದಲ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಮುಂಬೈ ನ್ಯಾಯಾಲಯ ಘೋಷಿಸಿತ್ತು. (ಏಜೆನ್ಸೀಸ್​)