More

    ಗದಗ ಕ್ಷೇತ್ರಕ್ಕೇ ಮಣೆ ಏಕೆ?, ರೋಣಕ್ಕೆಸಚಿವ ಸ್ಥಾನ ನೀಡಲು ಕೂಗು

    ರೋಣ: ನಾಲ್ಕು ದಶಕಗಳಿಂದ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಕೊಂಡಿರುವ ಹಾಗೂ ನಾಲ್ಕು ಬಾರಿ ಶಾಸಕರಾಗಿರುವ ರೋಣ ಮತಕ್ಷೇತ್ರದ ಜಿ.ಎಸ್. ಪಾಟೀಲ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಕ್ಷೇತ್ರದಲ್ಲಿ ಜೋರಾಗಿದೆ.
    ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗದಗ ಮತಕ್ಷೇತ್ರದ ಶಾಸಕರನ್ನೇ ಸಚಿವರಾಗಿ ಮಾಡಲಾಗುತ್ತಿದೆ. ಈ ಬಾರಿ ಒಂದು ಅವಕಾಶ ರೋಣ ಮತಕ್ಷೇತ್ರಕ್ಕೆ ನೀಡಬೇಕು ಎಂಬುದು ಕಾರ್ಯಕರ್ತರ ನಿರೀಕ್ಷೆಯಾಗಿದೆ.
    ಕಾಂಗ್ರೆಸ್ ಅಧಿಕಾರದಲ್ಲಿರಲಿ, ಇಲ್ಲದಿರಲಿ, ಗೆದ್ದಾಗ- ಸೋತಾಗ ಎದೆಗುಂದದೆ ಕಾರ್ಯಕರ್ತರ ಪಡೆಯನ್ನು ಕಟ್ಟಿ ಬೆಳೆಸಿದ ಕೀರ್ತಿ ಶಾಸಕ ಜಿ.ಎಸ್. ಪಾಟೀಲರಿಗೆ ಸಲ್ಲುತ್ತದೆ. ಎಂತಹ ಸಂದರ್ಭದಲ್ಲಿಯೂ ಪಕ್ಷನಿಷ್ಠೆ ಮರೆತವರಲ್ಲ. ಪಕ್ಷದ ಗಟ್ಟಿತನಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಹೀಗಾಗಿ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಮತಕ್ಷೇತ್ರದ ಮುಖಂಡರ, ಕಾರ್ಯಕರ್ತ ವಾದವಾಗಿದೆ.
    1989, 1999, 2013 ಹಾಗೂ 2023ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಹಿರಿತನ ಹೊಂದಿದ್ದಾರೆ. ಈ ಬಾರಿ 24 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲವು ದಾಖಲಿಸಿದ್ದಾರೆ. 1990ರಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ, 2013ರಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವವಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ದುಡಿದಿದ್ದಾರೆ. ನಿಗಮ, ಜಿಲ್ಲಾಧ್ಯಕ್ಷ ಹುದ್ದೆಯಲ್ಲಿ ಕೆಲಸ ಮಾಡಿರುವ ಅವರಿಗೆ ಸಚಿವ ಸ್ಥಾನ ನೀಡಿ ಪಕ್ಷ ಗೌರವ ನೀಡಬೇಕು ಎಂಬ ಆಗ್ರಹವೂ ಬಲವಾಗಿದೆ.
    ‘ಜಿ.ಎಸ್. ಪಾಟೀಲ ಕಾಂಗ್ರೆಸ್ ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ. ಅವರ ಪಕ್ಷ ನಿಷ್ಠೆ ಯುವಕರಿಗೆ ಮಾದರಿಯಾಗಿದೆ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಪಾಟೀಲರ ಶಕ್ತಿಯನ್ನು ಬಳಸಿಕೊಳ್ಳಬೇಕು. ಪಾಟೀಲರು ಪ್ರಾಮಾಣಿಕ ಮತ್ತು ಮುತ್ಸದ್ದಿ ರಾಜಕಾರಣಿ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಪಕ್ಷಕ್ಕೂ ಜಿಲ್ಲೆಯಲ್ಲಿ ಶಕ್ತಿ ತುಂಬಬೇಕು’ ಎಂದು ತಾಪಂ ಮಾಜಿ ಸದಸ್ಯರಾದ ಪ್ರಭು ಮೇಟಿ, ಅಂದಪ್ಪ ಬಿಳ್ಳೂರ, ಶಿದ್ದಿಂಗಪ್ಪ ಯಾಳಗಿ, ಬಸವರಾಜ ಮಲ್ಲಾಪುರ ಹಾಗೂ ಇತರರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts