ಗಾಯಗೊಂಡ ಶಿಖರ್​ ಧವನ್​ ಅವರನ್ನು ವಾಪಸು ಕಳುಹಿಸದೆ ಉಳಿಸಿಕೊಂಡಿದ್ದೇಕೆ? ಪ್ರಶ್ನೆಗೆ ಕೊಹ್ಲಿ ಉತ್ತರ ಹೀಗಿದೆ

ನವದೆಹಲಿ: ಹೆಬ್ಬೆರಳಿಗೆ ಗಂಭೀರವಾಗಿ ಗಾಯವಾಗಿದ್ದರೂ ಆರಂಭಿಕ ಆಟಗಾರ ಶಿಖರ್​ ಧವನ್​ ಅವರನ್ನು ಟೀಂ ಇಂಡಿಯಾ ಇಂಗ್ಲೆಂಡ್​ನಲ್ಲಿ ತಂಡದೊಂದಿಗೆ ಉಳಿಸಿಕೊಂಡಿದ್ದೇಕೆ? ಗಾಯಗೊಂಡಿರುವ ಅವರಿಗೆ ಬದಲಿ ಆಟಗಾರನನ್ನು ಲಂಡನ್​ಗೆ ಕರೆಯಿಸಿಕೊಳ್ಳಲು ಇದ್ದ ಅವಕಾಶವನ್ನು ಬಳಸಿಕೊಳ್ಳಲು ಟೀಂ ಇಂಡಿಯಾ ಹಿಂದೇಟು ಹಾಕಿದ್ದೇಕೆ?

ಗ್ರೂಪ್​ ಹಂತದಲ್ಲಿ ಹಾಗೂ ನಂತರ ನಾಕೌಟ್​ ಹಂತದಲ್ಲಿ ಶಿಖರ್​ ಧವನ್​ ಸೇವೆ ಬಳಸಿಕೊಳ್ಳುವ ಉದ್ದೇಶದಿಂದ ಬದಲಿ ಆಟಗಾರನನ್ನು ಕರೆಯಿಸಿಕೊಳ್ಳುವ ಅವಕಾಶವನ್ನು ಬಳಸಿಕೊಳ್ಳದೆ, ಬೇರೆ ಆಟಗಾರರನ್ನು ಲಂಡನ್​ಗೆ ಕರೆಯಿಸಿಕೊಂಡು, ಅವರನ್ನೂ ಉಳಿಸಿಕೊಳ್ಳಲು ನಿರ್ಧರಿಸಲಾಯಿತು ಎಂದು ತಂಡದ ನಾಯಕ ವಿರಾಟ್​ ಕೊಹ್ಲಿ ತಿಳಿಸಿದ್ದಾರೆ.

ಕ್ರಿಕೆಟ್​ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪ್ಯಾಟ್​ ಕಮಿನ್ಸ್​ ಅವರ ಎಸೆತ ತಾಗಿ ಶಿಖರ್​ ಧವನ್​ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದೆ. ಮೂಳೆ ಮುರಿತವಾಗಿರುವುದರಿಂದ ಎರಡು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಧವನ್​ ಅವರನ್ನು ವಾಪಸು ಕಳುಹಿಸಿ, ಬದಲಿ ಆಟಗಾರನನ್ನು ಟೀಂ ಇಂಡಿಯಾ ಲಂಡನ್​ಗೆ ಕರೆಯಿಸಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಹಾಗೆ ಮಾಡದ ಟೀಂ ಇಂಡಿಯಾ ತೀರಾ ಅನಿವಾರ್ಯವಾದಲ್ಲಿ ಬಳಸಿಕೊಳ್ಳಲು ಅನುವಾಗುವಂತೆ ರಿಷಬ್​ ಪಂತ್​ ಅವರನ್ನು ಲಂಡನ್​ಗೆ ಕರೆಯಿಸಿಕೊಂಡಿದೆ.

ಧವನ್​ಗೆ ಆಗಿರುವ ಗಾಯ ಬೇಗನೆ ಗುಣವಾಗಿ, ಟೂರ್ನಿಯ ಎರಡನೇ ಹಂತದಲ್ಲಿ ಅಂದರೆ ಗ್ರೂಪ್​ ಹಾಗೂ ನಾಕೌಟ್​ ಹಂತದಲ್ಲಿ ವಿಶೇಷವಾಗಿ ಸೆಮಿಫೈನಲ್​ ಪಂದ್ಯಕ್ಕೆ ಲಭ್ಯವಾಗುವ ವಿಶ್ವಾಸವಿದೆ. ಹಾಗಾಗಿ ಅವರನ್ನು ತಂಡದೊಂದಿಗೆ ಉಳಿಸಿಕೊಳ್ಳಲಾಗಿದೆ ಎಂದು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ.
ಎರಡು ವಾರ ಅವರ ಹೆಬ್ಬೆರಳು ಫ್ರ್ಯಾಕ್ಚರ್​ ಕಟ್ಟಿನಲ್ಲೇ ಇರುತ್ತದೆ. ಬಳಿಕ ಅವರ ಚೇತರಿಕೆಯನ್ನು ಪರಿಗಣಿಸಿ ಅವರನ್ನು ಆಡಿಸುವ ಬಗ್ಗೆ ನಿರ್ಧರಿಸಲಾಗುವುದು. ಧವನ್​ ತುಂಬಾ ಸಕಾರಾತ್ಮಕ ಚಿಂತನೆಯುಳ್ಳ ವ್ಯಕ್ತಿ. ಶೀಘ್ರವಾಗಿ ಮೈದಾನಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಹಾಗಾಗಿ ಅವರು ಬೇಗನೆ ಚೇತರಿಸಿಕೊಳ್ಳುವ ವಿಶ್ವಾಸ ಇರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)