More

    ನಮ್ಮನಮ್ಮಲ್ಲಿ: ಒಲ್ಲೆ ಅನ್ನಬೇಕಾದಲ್ಲೆಲ್ಲ ಆಯ್ತು ಅಂತ ಏಕನ್ನುತ್ತೇವೆಂದರೆ…

    ನಮ್ಮನಮ್ಮಲ್ಲಿ: ಒಲ್ಲೆ ಅನ್ನಬೇಕಾದಲ್ಲೆಲ್ಲ ಆಯ್ತು ಅಂತ ಏಕನ್ನುತ್ತೇವೆಂದರೆ...

    ‘ನಿಂಗೆ ಒಂಚೂರೂ ಡಿಸಿಪ್ಲೀನಿಲ್ಲ, ಮಟ್ಟಸ ಇಲ್ಲ’ ಅಂತ ಅಮ್ಮ, ತಾನು ಬದುಕಿರುವಷ್ಟು ದಿನ ಬೈದಳು. ಆಕೆ ಇಡೀ ಅರವತ್ತೇಳು ವರ್ಷದ ಬದುಕನ್ನ ಎಂಥ ಕಾಯಿಲೆಯಲ್ಲೂ ಕೂದಲೆಳೆಯಷ್ಟು ಶಿಸ್ತು ಆಚೀಚೆಯಾಗದೆ ಬದುಕಿದಳು. ನನಗೆ ಆ ತೆರನಾದ ಡಿಸಿಪ್ಲೀನು ಬರಲಿಲ್ಲ. ಅನೇಕ ಸಲ ಪತ್ರಿಕೆ ಲೇಟು ಮಾಡಿಕೊಳ್ಳುತ್ತೇನೆ. ಕೋರ್ಟುಗಳಿಗೆ ವಿಪರೀತ ತಡವಾಗಿ ಹೊರಟು ಪ್ರಾಣ ಹೋಗುವಂಥ ಅಪಾಯಕಾರಿ ವೇಗದಲ್ಲಿ ಕಾರಿನಲ್ಲಿ ಹೋಗುತ್ತೇನೆ. ಅಂದುಕೊಂಡ ಅವಧಿಯಲ್ಲಿ ಪುಸ್ತಕ ಬರೆದು ಮುಗಿಸಲಾಗದೆ ಫಜೀತಿ ಪಡುತ್ತೇನೆ. ನನ್ನನ್ನು ನಂಬಿ ಕಾಯುತ್ತ ನಿಂತವರಿಗೆ ಭಯಂಕರ ತೊಂದರೆ ಕೊಡುತ್ತೇನೆ.

    ಇದೆಲ್ಲ ನನಗೆ ಗೊತ್ತಿಲ್ಲವೆಂದಲ್ಲ. ಇವೆಲ್ಲ ಯಾಕಾಗುತ್ತವೆ ಅಂತಲೂ ಗೊತ್ತಿದೆ. ಆದರೂ ಒಂದು ನಿರ್ಣಯಕ್ಕೆ ಬಂದು ನಾಳೆಯಿಂದ ‘ಹ್ಯಾಗಿರ್ತೇನ್ನೋಡು’ ಅಂತ ಅವಡುಗಚ್ಚಲಿಕ್ಕೆ ನನಗೆ ಬರುವುದಿಲ್ಲ. ಏಕೆಂದರೆ, ‘no’ ಅನ್ನಬೇಕಾದ ಅನೇಕ ಕಡೆ ‘yes’ ಅಂದಿರುತ್ತೇನೆ. ಇದನ್ನು ಉತ್ತರ ಕರ್ನಾಟಕದ ಕಡೆ ‘ಭಿಡೆಗೆ ಬಿದ್ದು ಬಸಿರಾಗಿ ಹಡೀಲಾರದೆ ಸತ್ತರು’ ಅಂತಾರೆ. ನನ್ನಂಥವನಿಗೆ ಸಾಯಲಿಕ್ಕೂ ಭಿಡೆಯಾಗಿ ಹಡೆದು ಸಾಯಲು ಸಿದ್ಧನಾಗಿಬಿಡುತ್ತೇನೆ! ನಿಮಗೂ ಆ ಸಮಸ್ಯೆಯಿದ್ದರೆ ದಯವಿಟ್ಟು ಮುಂದಕ್ಕೆ ಓದಿ. ಒಟ್ಟಿಗೆ ಕುಳಿತು ಇದಕ್ಕೊಂದು ಪರಿಹಾರ ಹುಡುಕೋಣ.

    ಮೊನ್ನೆ ಆಫೀಸಿನ ಬಳಿ ಒಬ್ಬ ಹುಡುಗ ನಿಂತಿದ್ದ. ತುಂಬ ಹೊತ್ತಿನಿಂದ ನಿಂತಿದ್ದಾನೆ ಅಂತ ಆಫೀಸಿನ ಹುಡುಗ ಹೇಳಿದ್ದ. ‘ಏನಪ್ಪಾ?’ ಅಂದೆ. ‘ಒಬ್ಬ ಹುಡುಗೀನ ಪ್ರೀತಿಸಿದ್ದೇನೆ. ಅವಳೂ ಪ್ರೀತಿಸಿದ್ದಾಳೆ. ಆದರೆ ಅವಳ ಮನೆಯವರು ಒಪ್ಪುತ್ತಿಲ್ಲ. ‘ನೀವು’ ಒಪ್ಪಿಸಿದರೆ ಅವರು ಖಂಡಿತ ಒಪ್ಪುತ್ತಾರೆ. ನಂಗೋಸ್ಕರ ಸರ್… ಪ್ಲೀಸ್!’ ಅಂದ. ಇನ್ನು ಎರಡೇ ಎರಡು ನಿಮಿಷ ಅವನೆದುರಿಗೆ ನಿಂತಿದ್ದರೆ ಅವನ ವಿನಂತಿಗೆ ಕರಗಿ, ತಕ್ಷಣ ಕಾರಿನಲ್ಲಿ ಕೂಡಿಸಿಕೊಂಡು ಆ ಹುಡುಗಿ ಮನೆಗೆ ಹೋಗಿ, ಅವನ ಪರವಾಗಿ ಕನ್ಯೆ ಕೇಳಿಯೇ ಬಿಡುತ್ತಿದ್ದೆನೇನೋ ಅನ್ನಿಸಿ, ಗಾಬರಿಯಾಗಿ ‘ನಾನು ಈ ನಡುವೆ ಅದನ್ನೆಲ್ಲ ಮಾಡ್ತಿಲ್ಲ ಕಣಯ್ಯ’ ಅಂತ ಕಡ್ಡಿ ಮುರಿದಂತೆ ಹೇಳಿ ಹೊರಟುಬಿಟ್ಟೆ. ಮೊದಲಾದರೆ ಹೀಗಾಗುತ್ತಿರಲಿಲ್ಲ. ಅವರ ಮನೆಗೆ ಹೋಗಿ ಹುಡುಗೀನ ಒಪ್ಪಿಸಿ, ಒಪ್ಪದಿದ್ದರೆ ಅವರ ಅಪ್ಪ-ಅಮ್ಮನ ಕಣ್ಣು ತಪ್ಪಿಸಿ, ಅವಳನ್ನು ಕರೆತಂದು ಇವನಿಗೆ ಮದುವೆ ಮಾಡಿ, ಮನೆ ಮಾಡಿಕೊಳ್ಳಲು ಅಡ್ವಾನ್ಸ್ ಕೊಟ್ಟು, ಪಾತ್ರೆ ಪಡಗ ಕೊಡಿಸಿ, ಅವರ ಜಗಳ ಕದನ ಬಗೆಹರಿಸಿ – ಓ ರಾಮಾ! ನನ್ನ ಭಿಡೆಯ ಅಂತಿಮ ಪರಿಣಾಮವಾಗಿ ನಾನು ಮದುವೆ ಮಾಡಿಸಿದ ಹೆಣ್ಣುಮಕ್ಕಳ ಬಾಣಂತನಗಳನ್ನು ಕಡೆಗೆ ಲಲಿತೆ ಮಾಡಿದ್ದೂ ಆಗಿದೆ. ಇಷ್ಟೆಲ್ಲ ಆಗಿ ಹುಡುಗ-ಹುಡುಗಿಗೆ ಒಳ್ಳೆಯದಾಯಿತಾ? ಅವನು ಅವಳನ್ನು ಬಿಟ್ಟುಹೋಗುತ್ತಾನೆ. ಅವಳ ತಂದೆತಾಯಿ ನನಗೆ ಹಿಡಿಶಾಪ ಹಾಕುತ್ತಾರೆ. ಇದು ಬೇಕಿತ್ತಾ ಅಂತ ಎಲ್ಲರೂ ಛೀಮಾರಿ ಮಾಡುತ್ತಾರೆ. ‘ಯಾಕೆ ಬೇಕಿತ್ತು ನಂಗಿದು’ ಅಂತ ಯೋಚಿಸಿದರೆ, ಇದೇ ಉತ್ತರ. ‘ನಾನು ‘ನೋ’ ಅನ್ನಬೇಕಾಗಿತ್ತು ‘ಯಸ್’ ಅಂದುಬಿಟ್ಟೆ!’

    ಯಾಕೆ ‘ಯಸ್’ ಅಂದೆ ಅಂದರೆ ಅದು ಮತ್ತೊಂದು ರಗಳೆ! ಅನೇಕ ಸಲ ನಮ್ಮನ್ನು ನಾವು ಪರೋಪಕಾರಿಗಳು, ನಮ್ಮ ಮಾತು ನಡೆಯುತ್ತೆ ಅಂದುಕೊಂಡು ಬಿಟ್ಟಿರುತ್ತೇವೆ. ‘ಅವನು ತುಂಬ ಉದಾರಿ, ದೊಡ್ಡ ಕೈಯಿ’ ಅಂತ ಯಾರೋ ಆರೋಪಿಸಿದ ಒಳ್ಳೆಯತನವನ್ನು ‘ಹೌದು’ ಅಂದುಕೊಂಡಿರುತ್ತೇವೆ. ಒಳ್ಳೆಯವರಂತೆ, ರಕ್ಷಕರಂತೆ ಆಕ್ಟ್ ಮಾಡ್ತಾ ಮಾಡ್ತಾ ನಿಜವಾಗ್ಯೂ ಒಳ್ಳೆಯವರಾಗಿಬಿಟ್ಟಿರುತ್ತೇವೆ. ಅಥವಾ ಹಾಗಂತ ಅಂದುಕೊಂಡು ಸಂಭ್ರಮಿಸುತ್ತಿರುತ್ತೇವೆ. ಇದೇ ಗುಂಗಿಗೆ ಬಿದ್ದು ಭಯಂಕರ ‘ego’ ಬೆಳೆಸಿಕೊಂಡುಬಿಟ್ಟಿರುತ್ತೇವೆ. ನಿಮ್ಮ ಮಗು ಚರಂಡಿಯಲ್ಲಿ ಬಿದ್ದ ಕಜ್ಜಿ ನಾಯಿಮರಿಯೊಂದನ್ನ ಎರಡೂ ಕೈಲಿ ಎತ್ತಿಕೊಂಡು ಬಂದು ‘ಇದನ್ನ ಸಾಕ್ತೀನಿ’ ಅಂತ ಕೇಳಿದರೆ, ತುಂಬ ಕರುಣೆಯ ಮನಸ್ಸಿನದು ಅಂದುಕೊಂಡುಬಿಡಬೇಡಿ. ಅದಕ್ಕೆ ನಾಯಿಮರಿಯೆಂದರೆ ಇಷ್ಟ. ಹಾಗೆ ಎತ್ತಿಕೊಂಡು ಬಂದರೆ ನೀವು ‘ಎಷ್ಟು ಒಳ್ಳೇ ಮನ್ಸು ಮುಂಡೇದಕ್ಕೆ’ ಅಂತ ಹೊಗಳಿರುತ್ತೀರಿ ಒಮ್ಮೆ. ಹಾಗೆ ಹೊಗಳುವುದು ನೀವೇ. ಆಮೇಲೆ ಮಗು ನಾಯಿಮರಿಯನ್ನು ಬಿಟ್ಟು ಆಟಕ್ಕೆ ಹೋಗುತ್ತದೆ. ಸಾಕಬೇಕಾದವರು ನೀವೇ!

    ಭಿಡೆ, ಸಂಕೋಚಕ್ಕೆ ಬಿದ್ದು, ‘ನೋ’ ಅನ್ನಲಾರದೆ ‘ಯಸ್’ ಅಂದು ಉಪಕಾರ ಮಾಡಲು ಹೊರಟುಬಿಡುವವರ ಪೈಕಿ ಹೆಚ್ಚಿನವರದು ಇಂಥದೇ ‘ನಾಯಿಮರಿ ತಂದ’ ಮಗುವಿನ ಮನಸ್ಸಿನಂತಹುದು. ಖಂಡಿತವಾಗ್ಯೂ ಈ ಗೆಳೆಯ ಸಾಲ ಹಿಂತಿರುಗಿಸುವ ಸ್ಥಿತಿಯಲ್ಲಿ ಇಲ್ಲ ಅಂತ ಗೊತ್ತಿದ್ದರೂ ಅವನು ಕೇಳಿದಾಗ ‘ಆಯ್ತು, ನಾಳೆ 50 ಸಾವಿರ ಕೊಡ್ತೀನಿ’ ಅಂದುಬಿಟ್ಟಿರುತ್ತಾರೆ. ಅಂದ ತಪ್ಪಿಗೆ ತಾವು ಇನ್ನೊಂದು ಕಡೆಯಿಂದ ಸಾಲ ತಂದುಕೊಟ್ಟಿರುತ್ತಾರೆ. ಸಂಕೋಚ, ದಾಕ್ಷಿಣ್ಯಕ್ಕೆ ಬಿದ್ದು ಬ್ಯಾಂಕಿನಲ್ಲಿ ಯಾರದೋ ಸಾಲಕ್ಕೆ ಷೂರಿಟಿ ಹಾಕುವವರ ಫಜೀತಿಗಳಿವೆಯಲ್ಲ? ಅವರಿಗೆ ಸೈನು ಮಾಡಿದ ಕ್ಷಣದಿಂದಲೇ ನಿದ್ದೆ ಕಳೆದು ಹೋಗಿರುತ್ತದೆ. ಮಾಡಿದ್ದು ವ್ಯರ್ಥ ಉಪಕಾರ ಅಂತ ಆಗಲೇ ಅನ್ನಿಸತೊಡಗುತ್ತದೆ. ಆಮೇಲೆ ಪಡಬಾರದ ಫಜೀತಿ ಪಡುತ್ತಾರೆ. ಆದರೆ ಬುದ್ಧಿ ಕಲಿಯುತ್ತಾರಾ? ನೋ ಚಾನ್ಸ್. ಪದೇ ಪದೆ ದಾಕ್ಷಿಣ್ಯಕ್ಕೆ ಬೀಳುತ್ತಲೇ ಇರುತ್ತಾರೆ. ನನ್ನ ದಾಕ್ಷಿಣ್ಯಗಳು ತೀರ ಎಂಥವಿರುತ್ತವೆಂದರೆ, ಒಂದು ಗುಂಪಿನಲ್ಲಿ ಯಾರೋ ಮೊಬೈಲ್ ನಂಬರು ಕೇಳಿದರೆ ಇಲ್ಲ ಎನ್ನಲಾಗದೆ ಹೇಳಿಬಿಡುತ್ತೇನೆ. ಸುತ್ತಲಿದ್ದ ಅಷ್ಟೂ ಜನ ಅದನ್ನು ಬರೆದುಕೊಳ್ಳುತ್ತಾರೆ. ಸಂತೆಯಲ್ಲಿ ವಸ್ತ್ರ ಕಳಕೊಂಡವರ ಸ್ಥಿತಿ. ನಾಳೆ ಎದ್ದವನೇ ಮೊಬೈಲ್ ನಂಬರು ಬದಲಿಸಬೇಕು. ಗೆಳೆಯರಿಗೆಲ್ಲ ಫಜೀತಿ!

    ಇದಕ್ಕೆ ನಾನು ಕಂಡುಕೊಂಡ ಪರಿಹಾರವೆಂದರೆ, ಪದೇಪದೆ ಹಣ ಕೇಳಿ ಹಿಂತಿರುಗಿಸದ ಗೆಳೆಯ ‘ಯಾಕೋ ನಿನ್ನನ್ನು ನೋಡಬೇಕೆನ್ನಿಸ್ತಿದೆ’ ಅಂತ ಫೋನು ಮಾಡಿದಾಗ ‘ಇನ್ನೆರಡು ತಿಂಗಳು ಸಾಧ್ಯವೇ ಇಲ್ಲ’ ಅನ್ನುವುದು. ಎದುರಿಗಿರುವವರು ನನ್ನ ಸಮಯ ಕೇಳುತ್ತಿದ್ದಾರಾ ಅಂತ ಗೊತ್ತಾದ ಕೂಡಲೆ ಮಾತು ಮುಗಿಸಿ ಎದ್ದೇಬಿಡುವುದು. ಯಾರವೋ ವ್ಯಕ್ತಿಗತ ಸಮಸ್ಯೆಗಳನ್ನು ನಾನೇ ಕೂತು ಬಗೆಹರಿಸುತ್ತೇನೆ ಎಂಬ ಭ್ರಮೆ ಬಿಟ್ಟು ಹೋಗಿರುವುದರಿಂದ ಅಂಥವಕ್ಕೆ ಕೈ ಹಾಕದಿರುವುದು. ಇಡೀ ಕಾದಂಬರಿ ಓದಿ ಮುನ್ನುಡಿ ಬರೆಯಿರಿ ಅಂತ ಯಾರಾದರೂ ಕೇಳಿದರೆ, ‘ಕಾದಂಬರಿ ಓದಲು ನನಗೆ ಕನಿಷ್ಠ ಎರಡು ವರ್ಷ ಬೇಕಾಗುತ್ತೆ, ಪರವಾಗಿಲ್ವ?’ ಅಂತ ಕೇಳುವುದು. ಪಾರ್ಟಿಗಳಿಂದ ಕಡ್ಡಾಯವಾಗಿ ದೂರವಿರುವುದು. ಮೊಬೈಲನ್ನು ಆಫ್ ಮಾಡಿಡುವುದು- ಇವೇ ಮುಂತಾದ ದೈವಿಕ ವಿಧಾನಗಳನ್ನು ಕಲಿತಿದ್ದೇನೆ. ಫಾರ್ ಎ ಚೇಂಜ್ ಪಾಲಿಸುತ್ತಲೂ ಇದ್ದೇನೆ.

    ಏಕೆಂದರೆ, ನನಗೆ ಸಹಾಯ ಮಾಡುವುದೇ ಬೇರೆ ಮತ್ತು ದಾಕ್ಷಿಣ್ಯಕ್ಕೆ ಬಿದ್ದು ಒಲ್ಲದ ಕೆಲಸವನ್ನು ಮಾಡುವುದೇ ಬೇರೆ ಎಂಬುದು ತುಂಬ ಚೆನ್ನಾಗಿ ಅರ್ಥವಾಗಿದೆ. ಸ್ವಲ್ಪ ಮಟ್ಟಿಗಿನ ಸಾರ್ವಜನಿಕ ಜೀವನದಲ್ಲಿ ಇದ್ದವರಾದರೆ, ಇದು ನಿಮಗೂ ಅರ್ಥವಾಗಿಬಿಡುತ್ತದೆ. ಮೊನ್ನೆ ನನ್ನ ಗೆಳೆಯ ಯಾರ ಮೇಲೋ ರೇಗುತ್ತಿದ್ದುದನ್ನು ಗಮನಿಸಿದೆ. ‘ಹಾಗೆಲ್ಲ ಮೊಬೈಲ್ ನಂಬರು ಕೇಳಬಾರದು!’ ಅಂತಿದ್ದರು.

    ಹೌದಲ್ಲಾ ಅನ್ನಿಸಿ, ಈಗ ಲ್ಯಾಂಡ್​ಫೋನಿನ ನಂಬರು ಹೇಳತೊಡಗಿದ್ದೇನೆ. ‘no’ ಅನ್ನಲಿಕ್ಕಾಗದವನಿಗೆ ಲ್ಯಾಂಡ್​ಲೈನಿನ ನಂಬರಾದರೂ ಜ್ಞಾಪಕವಿರಬೇಕು- ಎಂಬುದು ಹೊಸ ಗಾದೆ!

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts