ಶಿಶುವೇಕೆ ಹೀಗಿದೆ?

ಪುಟಾಣಿ ಮಕ್ಕಳ ಲೋಕವೇ ಚಂದ. ಅವರ ಹಾವಭಾವಗಳ ಮಧ್ಯೆ ಭೇದಭಾವಗಳೆಲ್ಲ ಕಳೆದುಹೋಗಿ ಪ್ರೀತಿಭಾವ ಆವಿರ್ಭಾವವಾಗಿ ಮನಸ್ಸು ಹಗುರವಾಗುತ್ತದೆ. ಅಂತಹ ಶಿಶುಗಳು ಗರಬಡಿದಂತೆ ಕುಳಿತುಕೊಂಡರೆ ಹೇಗಾಗಬೇಡ? ನಿದ್ರೆ ಜಾಸ್ತಿ ಮಾಡಲು ಆರಂಭಿಸಿದರೆ ಏನನಿಸಬೇಡ? ಹಾಲು ಕುಡಿಯಲು ಒಲ್ಲೆ ಎಂದು ಮುಖ ತಿರುವಿದರೆ ಬಾಣಂತಿ ತಾಯಿಗೆ ಏನಾಗಬೇಡ? ಈ ವಿಚಾರದಲ್ಲಿ ಆಯುರ್ವೆದ ಅರುಹಿದ ವಿಚಾರಗಳು ಯಾರನ್ನಾದರೂ ನಿಬ್ಬೆರಗಾಗಿಸುತ್ತದೆ. ಇವೆಲ್ಲ ಆಗುಹೋಗುಗಳಿಗೂ ದೋಷಗಳಿಂದ ಕೂಡಿದ ತಾಯಿ ಹಾಲಿಗೂ ಇರುವ ಸಂಬಂಧವನ್ನು ಮನಮುಟ್ಟುವಂತೆ ಬಿಡಿಸಿಟ್ಟಿದೆ ಆಯುರ್ವೆದ.

ತಾಯಿಹಾಲಿನ ಬಣ್ಣ, ದಪ್ಪ ಹಾಗೂ ಸಾಂದ್ರತೆಗಳಲ್ಲಿ ವ್ಯತ್ಯಾಸ ಇರುವುದನ್ನು ವಿವರಿಸಲಾಗಿದ್ದು ವಾತ, ಪಿತ್ತ, ಕಫಗಳೊಂದಿಗೆ ಇದಕ್ಕೆ ನೇರಾನೇರ ಸಂಬಂಧವಿದೆ! ವಾತದಿಂದ ತಾಯಿಹಾಲು ಹಾಳಾಗಿದ್ದರೆ ನೀರು ಬೆರೆಸಿದಂತೆ ತೆಳುವಾಗಿದ್ದು ದುರ್ಗಂಧದಿಂದ ಕೂಡಿರುತ್ತದೆ. ನೊರೆಯಿದ್ದರೆ ಮಗು ಅಳುವಾಗ ಕ್ಷೀಣಧ್ವನಿ, ಮಲಮೂತ್ರ ಪ್ರವೃತ್ತಿಯು ಸರಿಯಾಗಿ ಆಗುವುದಿಲ್ಲ, ತಲೆಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಸುಬೂದು ಬಣ್ಣವಿದ್ದು ನೀರಿಗೆ ಹಾಕಿದರೆ ತೇಲುತ್ತದೆ. ಕುಡಿದ ಬಳಿಕ ಕೊನೆಯಲ್ಲಿ ಒಗರು ರುಚಿ ನೀಡುತ್ತದೆ. ಶಿಶುವಿಗೆ ಬಾಯಿರುಚಿ ಇಲ್ಲದಾಗಿ ಬೆಳವಣಿಗೆಯೇ ಕುಂಠಿತವಾಗುತ್ತದೆ. ಚರ್ಮದ ತೊಂದರೆಗಳು ಕಾಣಿಸಿಕೊಂಡು ವಾತರೋಗಗಳಿಗೆ ಕಾರಣವಾಗುತ್ತದೆ. ಈ ಹಾಲನ್ನು ಎಷ್ಟು ಕುಡಿದರೂ ಮಗುವಿಗೆ ತೃಪ್ತಿಯೇ ಆಗದು! ಸ್ನಿಗ್ಧತೆ ಕಡಿಮೆಯಿದ್ದರೆ ಶಿಶು ಬಲಹೀನವಾಗಿ ದೇಹವು ಕೃಶವಾಗುತ್ತದೆ.

ಪಿತ್ತದೋಷದಿಂದ ಕೂಡಿದ್ದರೆ ತುಸು ನೀಲಿ, ತಾಮ್ರ, ಬೂದು, ಕೆಂಪು ಅಥವಾ ಹಳದಿಬಣ್ಣ ಹೊಂದಿರುತ್ತದೆ. ಬಣ್ಣ ವ್ಯತ್ಯಾಸವಾದಾಗ ಶಿಶುವಿನ ಬಣ್ಣವೂ ಕೆಡುತ್ತದೆ! ಅತಿಯಾದ ಬೆವರು, ಅತಿ ಬಾಯಾರಿಕೆ, ಭೇದಿ, ಬಿಸಿದೇಹ, ಹಾಲು ಕುಡಿಯುವ ಇಚ್ಛೆ ಇಲ್ಲದಿರುವುದೂ ಇದರಿಂದಲೇ! ತಾಮ್ರದ ಅಥವಾ ರಕ್ತದ ವಾಸನೆ ಇದ್ದು ಈ ದುರ್ಗಂಧದಿಂದಾಗಿ ರಕ್ತಹೀನತೆ, ಕಾಮಾಲೆ ಉಂಟಾಗುತ್ತದೆ. ಕುಡಿದಾಗ ಕೊನೆಯಲ್ಲಿ ಕಹಿ, ಹುಳಿ, ಅಥವಾ ಖಾರ ರುಚಿ ಬಾಯಿಯಲ್ಲಿ ಇದ್ದ ಅನುಭವವಾಗುತ್ತದೆ. ನೀರಿನಲ್ಲಿ ಹಾಕಿದಾಗ ಹಳದಿ ಗೆರೆಗಳು ಕಾಣಿಸಿಕೊಂಡು ತಳ ಸೇರುತ್ತದೆ. ಶಿಶುವಿಗೆ ಮೈಉರಿ, ಪಿತ್ತದಗಂಧೆ, ವಾಂತಿ, ಹೊಟ್ಟೆಉರಿ, ಎದೆನೋವು ಉಂಟಾಗುತ್ತದೆ. ಕಫದ ವೈಪರೀತ್ಯದಿಂದ ತುಪ್ಪ, ಎಣ್ಣೆ, ಕೊಬ್ಬಿನ ವಾಸನೆಯೊಂದಿಗೆ ಅತಿ ಬಿಳಿಯಾಗಿ, ಶೀತಲವಾಗಿರುತ್ತದೆ. ಅತಿಸ್ನಿಗ್ಧಗುಣವಿದ್ದರೆ ವಾಂತಿ, ಅತಿಯಾದ ನಿದ್ರೆ, ಶೀತ, ಕೆಮ್ಮು, ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಜೊಲ್ಲು ಸ್ರಾವ ಹೆಚ್ಚಾಗಲೂ ಕಾರಣ ಇದೇ ಕಫದೋಷ! ದಪ್ಪನಾಗಿದ್ದು ನೀರಿನಲ್ಲಿ ಬೇಗನೆ ತಳಸೇರುತ್ತದೆ, ಹೃದ್ರೋಗಗಳಿಗೂ ಕಾಣವಾಗುತ್ತದೆ! ಮೈನವೆ, ಊತ, ಸುಸ್ತು ಹಾಗೂ ಕಫರೋಗಗಳು ಕಾಣಿಸಿಕೊಳ್ಳುತ್ತವೆ. ಅಂಟುವಿಕೆಯಿಂದ ಕಣ್ಣು, ಮುಖ ಊತ, ಶಿಶುವು ಮಂಕಾಗಿರುವುದು ಕಂಡುಬರುತ್ತದೆ. ವಾತ, ಪಿತ್ತ, ಕಫಗಳು ಸಮ್ಮಿಶ್ರವಾಗಿ ದೋಷಪೂರಿತವಾದಾಗ ಮಿಶ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೇವಿಸಿದಾಗ ಅಂತ್ಯದಲ್ಲಿ ಉಪ್ಪುರುಚಿ ಭಾಸವಾಗುತ್ತದೆ. ತಾಯಿಹಾಲಿನ ಲೋಪದೋಷಗಳನ್ನು ಮಾತ್ರ ಆಯುರ್ವೆದ ವಿವರಿಸಿದ್ದಲ್ಲ. ತಾಯಿಹಾಲನ್ನು ಶುದ್ಧಿಗೊಳಿಸುವ ಮಾಹಿತಿ ನಿಜಕ್ಕೂ ಅಪೂರ್ವವಾದುದು.

ಪಂಚಸೂತ್ರಗಳು

  • ಕೇಸರಿ: ಯಕೃತ್ ಊತ ನಿವಾರಕ.
  • ಶಂಖಪುಷ್ಪಿ: ಕ್ಷಯರೋಗದಲ್ಲಿ ಪರಿಣಾಮಕಾರಿ.
  • ತೊಂಡೆಕಾಯಿ: ಆಸ್ತಮಾ ಹತೋಟಿ ಮಾಡುವುದು.
  • ಗರಿಕೆಹುಲ್ಲು: ಯೋನಿಯ ರಕ್ತಸ್ರಾವ ನಿಲ್ಲಿಸಲು ಸಹಕಾರಿ.
  • ಮಾದಲಹಣ್ಣು: ಸ್ತ್ರೀಯರಲ್ಲಿ ಮಾಸಿಕ ಋತುವೇದನೆ ಶಮನಕಾರಿ.

Leave a Reply

Your email address will not be published. Required fields are marked *