More

    ಡಯಾಬಿಟೀಸ್​ಗೆ ಹೆದರಿ ಅಧೀರರಾಗುವಿರೇಕೆ?

     

    ನಾನು 27ವರ್ಷದ ಬಿ.ಇ ಪದವಿಧರ. ಈಗ ನನ್ನ ದುಡಿಮೆ ಅಷ್ಟಕ್ಕಷ್ಟೆ. ಹೆಚ್ಚು ದುಡಿಯಬೇಕೆಂಬ ಆಸೆ. ಡಯಾಬಿಟೀಸ್ ಇರುವ ಕಾರಣ, ಮೆಡಿಕಲ್ ಟೆಸ್ಟ್​ನಲ್ಲಿ ಫೇಲಾಗಿ ನನ್ನಿಷ್ಟದ ಸರ್ಕಾರಿ ಕೆಲಸ ನನಗೆ ಸಿಗಲ್ಲ. ನನ್ನ ಮದುವೆಯಾಗುವ ಆಸೆಗೂ ಡಯಾಬಿಟೀಸ್ ಅಡ್ಡಗಾಲು ಹಾಕುತ್ತಿದೆ. ಇದರಿಂದ ಎಲ್ಲದ್ದಕ್ಕೂ ಹಿಂಜರಿಕೆ. ನನ್ನ ಜತೆ ಓದಿದವರು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇರಿಂದ ಡಿಪ್ರೆಷನ್​ಗೆ ಒಳಗಾಗುತ್ತಿದ್ದೇನೇನೋ ಎನಿಸುತ್ತದೆ. ಪರಿಹಾರ ಇದೆಯೆ?

    ಡಯಾಬಿಟೀಸ್​ಗೆ ಹೆದರಿ ಅಧೀರರಾಗುವಿರೇಕೆ?ಖಂಡಿತಾ ಪರಿಹಾರವಿದೆ. ಡಯಾಬಿಟೀಸ್ ಬಗ್ಗೆ ಸರಿಯಾದ ತಿಳಿವಳಿಕೆ ಅಗತ್ಯ. 6ನೇ ವಯಸ್ಸಿನಲ್ಲೇ ಡಯಾಬಿಟೀಸ್ ಬಂದು 80ನೇ ವಯಸ್ಸಿನವರೆಗೆ ಸುಖವಾಗಿ ಬದುಕಿದ ಹಿರಿಯರನ್ನು ನಾನು ನೋಡಿದ್ದೇನೆ. ಅವರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನೂ ನೋಡಿದರು. ನಿಜವಾಗಿ ನೋಡಿದರೆ ಡಯಾಬಿಟೀಸ್ ಒಂದು ಕಾಯಿಲೆಯೇ ಅಲ್ಲವೆಂದು ತಜ್ಞ ವೈದ್ಯರೇ ಹೇಳುತ್ತಾರೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾದರೆ ಅಥವಾ ನಿಂತುಹೋದರೆ ಹೊರಗಿನಿಂದ ಅದನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೇಗೆ ದೇಹದಲ್ಲಿ ವಿಟಮಿನ್, ಕ್ಯಾಲ್ಶಿಯಂ ಕಡಿಮೆಯಾದರೆ ಹೊರಗಿನಿಂದ ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳುತ್ತೇವೋ ಹಾಗೆಯೇ. ಆದರೆ ಇದನ್ನು ಬದುಕಿರುವವರೆಗೂ ತೆಗೆದುಕೊಳ್ಳಬೇಕಾಗುತ್ತದೆ ಅಷ್ಟೇ. ನಮ್ಮ ಜೀವನ ಶೈಲಿಯಲ್ಲಿ ಮೂರು ಸಂಗತಿಗಳನ್ನು ಅಳವಡಿಸಿಕೊಂಡರೆ ಡಯಾಬಿಟೀಸ್ ಅನ್ನು ಸದಾ ಹತೋಟಿಯಲ್ಲಿಡಬಹುದು ಎನ್ನುತ್ತದೆ ವೈದ್ಯಶಾಸ್ತ್ರ. 1 ದಿನಕ್ಕೆ ಸ್ವಲ್ಪ ಸ್ವಲ್ಪವೇ ಮೂರು ಅಥವಾ ನಾಲ್ಕು ಬಾರಿ ಸಮಯಕ್ಕೆ ಸರಿಯಾಗಿ ಆಹಾರ ಮತ್ತು ವೈದ್ಯರು ಹೇಳಿದ ಮಾತ್ರೆಗಳನ್ನು ಸೇವಿಸುವುದು. 2 ಪ್ರತಿನಿತ್ಯ ತಪ್ಪದೇ ಒಂದು ಗಂಟೆ ಯೋಗ ಅಥವಾ ನಡಿಗೆಯನ್ನು ಮಾಡುವುದು. 3 ಮುಖ್ಯವಾದುದು, ಸದಾ ಸಕಾರಾತ್ಮಕವಾದ ಚಿಂತನೆಗಳನ್ನು ಮಾಡುತ್ತಿರುವುದು. ‘ನಾನೂ ಒಳ್ಳೆಯದನ್ನೇ ಮಾಡುತ್ತೇನೆ ನನಗೂ ಒಳ್ಳೆಯದೇ ಆಗುತ್ತದೆ’ ಎನ್ನುವ ನಂಬಿಕೆಯೇ ಸಕಾರಾತ್ಮಕವಾದ ಚಿಂತನೆ. ಈ ಮೂರರ ಜತೆಗೆ ಆಗಾಗ್ಗೆ ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳುವುದೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದೂ ಅನಿವಾರ್ಯ. ಡಯಾಬಿಟೀಸ್ ಇದ್ದವರಿಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎನ್ನುವುದು ಸರಿಯಲ್ಲ. ಈ ಬಗ್ಗೆ ವೈದ್ಯರ ಹತ್ತಿರ ಮಾತನಾಡಿ. ಮದುವೆಯ ಬಗ್ಗೆಯೂ ವೈದ್ಯರ ಸಲಹೆ ಪಡೆಯಬೇಕು. ಡಯಾಬಿಟೀಸ್ ಬಗ್ಗೆ ಬಹಳ ಸಂಶೋಧನೆಗಳು ನಡೆಯುತ್ತಿವೆ. ಗರ್ಭಿಣಿಯರಿಗಿದ್ದರೆ ಡಯಾಬಿಟೀಸ್ ಅನ್ನು ಹತೋಟಿಗೆ ತಂದು ಸುಸೂತ್ರವಾಗಿ ಹೆರಿಗೆಯಾಗುವಂತೆ ಮಾಡಲಾಗುತ್ತದೆ. ವೃದ್ಧರಿಗೆ ಕಣ್ಣು ಮಂಜಾದರೆ ಲೇಸರ್ ಕಿರಣಗಳನ್ನು ಹರಿಸಿ ಅವರ ಕಣ್ಣು ಕಾಣುವಂತೆ ಮಾಡಲಾಗುತ್ತದೆ. ಇಷ್ಟೆಲ್ಲಾ ವಿದ್ಯಾವಂತರೂ, ಯುವಕರೂ ಆದ ನೀವು ಇಷ್ಟು ಚಿಕ್ಕ ವಿಷಯಕ್ಕೆ ಅಧೀರಾದರೆ ಹೇಗೆ?

    ಇನ್ನು ಹಣದ ವಿಷಯ. ಸಂಬಳ ಗಳಿಸುವ ವಿಚಾರದಲ್ಲಿ ನಿಮ್ಮನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳಲೇ ಬೇಡಿ. ನಿಮಗೆ ಅವರು ತೆಗೆದುಕೊಳ್ಳುವ ಸಂಬಳ ಮಾತ್ರ ಕಾಣುತ್ತಿದೆ, ಅವರ ಇತರ ಒತ್ತಡಗಳು ನಿಮಗೆ ಕಾಣಿಸುವುದಿಲ್ಲ. ತುಂಬಾ ಹಣ ಸಂಪಾದಿಸುವವರು ಸುಖವಾಗಿರುತ್ತಾರೆ ಎಂದು ಭಾವಿಸುವುದು ನಮ್ಮ ಭ್ರಮೆಯಷ್ಟೆ! ನಿಮಗೆ ಈಗಿರುವ ಕೆಲಸ ನಿಮ್ಮ ಮನಸ್ಸಿಗೆ ಮೆಚ್ಚುಗೆಯಾಗಿದ್ದರೆ, ಹೆಚ್ಚು ಒತ್ತಡ ಭರಿತ ಕೆಲಸವಲ್ಲದಿದ್ದರೆ, ಇದರಲ್ಲೇ ಮುಂದುವರೆಯುವುದು ಸೂಕ್ತವಲ್ಲವೇ? ಸರಳ ಬದುಕನ್ನು ರೂಢಿಸಿಕೊಂಡವರಿಗೆ ನೆಮ್ಮದಿಯೆನ್ನುವುದು ಕರಗತವಾಗುತ್ತದೆ. ಹಣದ ಬೆನ್ನಟ್ಟಿದವರಿಗೆ ನೆಮ್ಮದಿ ಮರೀಚಿಕೆಯಾಗುತ್ತದೆ, ಮತ್ತು ಅದನ್ನು ಪಡೆಯಲು ಅದರ ಹಿಂದೆಯೇ ಓಡುತ್ತಲೇ ಇರಬೇಕಾಗುತ್ತದೆ. ವೈದ್ಯರ ಸಲಹೆ ಪಡೆದು ಉದ್ಯೋಗಸ್ಥ ಮಹಿಳೆಯನ್ನು ಮದುವೆಯಾಗಿ. ಇಬ್ಬರಿಗೂ ಬರುವ ಹಣದಲ್ಲಿ ನೆಮ್ಮದಿಯನ್ನು ಕಾಣಲು ಪ್ರಯತ್ನಿಸಿ. ಒಂದು ಮಾತು – ನಿಮಗೆ ಡಯಾಬಿಟೀಸ್ ಇರುವುದನ್ನು ಯಾವಕಾರಣಕ್ಕೂ ಹುಡುಗಿಯಿಂದ ಮುಚ್ಚಿಡಬೇಡಿ. ಇದನ್ನು ತಿಳಿದೇ ನಿಮ್ಮನ್ನು ಒಪ್ಪಿಕೊಳ್ಳುವ ಹುಡುಗಿಯನ್ನು ಮಾತ್ರ ಮದುವೆಯಾಗಿ. ನಮ್ಮ ನಾಡಿನಲ್ಲಿ ಲಕ್ಷ ಲಕ್ಷ ಜನರಿಗೆ ಡಯಾಬಿಟೀಸ್ ಇದೆ. ಅವರೆಲ್ಲರೂ ಸುಖವಾಗಿಯೇ ಬದುಕುತ್ತಿದ್ದಾರೆ. ಆದ್ದರಿಂದ ಡಯಾಬಿಟೀಸ್ ಎನ್ನುವ ಪದವನ್ನೇ ತಲೆಯಿಂದ ದೂರಮಾಡಿ ವೈದ್ಯರ ಸಲಹೆಯನ್ನು ತಪ್ಪದೇ ಪಾಲಿಸಿ. ಶುಭವಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts