ಯಾರ ಕೊರಳಿಗೆ ವಿಜಯಮಾಲೆ

ಮಂಡ್ಯ: ಎರಡು ತಿಂಗಳಿಂದ ಆರಂಭವಾದ ಲೋಕಸಭಾ ಚುನಾವಣೆ ಕಾವು ತಣ್ಣಗಾಗುವ ಕಾಲ ಹತ್ತಿರವಾಗಿದ್ದು, ಮಂಡ್ಯದಿಂದ ಯಾರು ಲೋಕಸಭೆಗೆ ಪ್ರವೇಶಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲು ಕ್ಷಣಗಣನೆ ಆರಂಭವಾಗಿದೆ.

ಇಡೀ ದೇಶದಲ್ಲಿ ಚುನಾವಣೆ ಪ್ರಚಾರ ನಡೆಯುತ್ತಿದ್ದರೂ, ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ ಏನೋ ಎಂಬಷ್ಟರ ಮಟ್ಟಿಗೆ ಅತಿ ಹೆಚ್ಚು ಗಮನ ಸೆಳೆದ, ದೇಶದ ಜನತೆ ತುದಿಗಾಲ ಮೇಲೆ ನಿಲ್ಲಿಸಿರುವ ಮಂಡ್ಯ ಕ್ಷೇತ್ರ ಸ್ವಾಭಿಮಾನ ಹಾಗೂ ಅಭಿಮಾನದ ನಡುವೆ ಯಾರನ್ನು ಆಯ್ಕೆ ಮಾಡಲಿದೆ ಎಂಬುದು ಗುರುವಾರ ಮಧ್ಯಾಹ್ನದ ವೇಳೆಗೆ ಬಹಿರಂಗವಾಗಲಿದೆ.

ಸ್ವಾಭಿಮಾನದ ಹೆಸರಿನಲ್ಲಿ ಚುನಾವಣೆ ಎದುರಿಸಿರುವ ಅಂಬರೀಷ್ ಪತ್ನಿ ಸುಮಲತಾರಿಗೆ ದರ್ಶನ್, ಯಶ್ ಬಿಟ್ಟರೆ ಬಹಿರಂಗವಾಗಿ ಯಾವುದೇ ನಾಯಕರು ಸಾಥ್ ನೀಡಲಿಲ್ಲ. ಬದಲಿಗೆ ಕಾರ್ಯಕರ್ತರೇ ಖುದ್ದು ನಿಂತು ಚುನಾವಣೆ ಮಾಡಿದ್ದಾರೆ.
ಸುಮಲತಾ ಪ್ರಚಾರದ ಉದ್ದಕ್ಕೂ ತಮ್ಮ ಗಂಭೀರವಾದ ಮಾತುಗಳ ಮೂಲಕ ಮಹಿಳೆಯರು ಸೇರಿ, ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದ ವರ್ಗದ ಜನರ ಮನಗೆದ್ದಿದ್ದಾರೆ. ಜತೆಗೆ ದರ್ಶನ್, ಯಶ್, ಸುಮಲತಾ, ಅಭಿಷೇಕ್ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ಜನಸಾಗರವೇ ಹರಿದು ಬರುತ್ತಿತ್ತು.

ಜೆಡಿಎಸ್ ನಾಯಕರು ಕಾಂಗ್ರೆಸ್ ಪರಾಜಿತರನ್ನು ನಿರ್ಲಕ್ಷೃ ಮಾಡಿದ ಪರಿಣಾಮ ಅವರೆಲ್ಲರೂ ತೆರೆಮರೆಯಲ್ಲೇ ಸುಮಲತಾಗೆ ಬೆಂಬಲ ವ್ಯಕ್ತಪಡಿಸಿ, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಸುಮಲತಾ ಗೆಲ್ಲಲೇಬೇಕೆಂಬ ಪಣವನ್ನು ಪಣ ತೊಟ್ಟಿದ್ದರು.

ಸುಮಲತಾ ನಾಮಪತ್ರ ಸಲ್ಲಿಸಿದ ದಿನ ಹಾಗೂ ಬಹಿರಂಗ ಪ್ರಚಾರ ನಡೆಸಿದ ಕೊನೆಯ ದಿನ ಹರಿದು ಬಂದ ಜನಸಾಗರ ಸುಮಲತಾ ಸೇರಿದಂತೆ ಅವರ ಬೆಂಬಲಿಗರ ಆತ್ಮವಿಶ್ವಾಸ ಹೆಚ್ಚಿಸಿತ್ತು. ಜತೆಗೆ ಅಂಬಿ ಪಾರ್ಥಿವ ಶರೀರದ ರಾಜಕಾರಣಕ್ಕೆ ಅಂದು ವೈರಲ್ ಆದ ದಿಗ್ವಿಜಯ ನ್ಯೂಸ್‌ನ ವಿಡಿಯೋ ತುಣುಕು ಸಾಕಷ್ಟು ಬಲ ತಂದುಕೊಟ್ಟಿದೆ.

ಒಟ್ಟಾರೆ, ಸುಮಲತಾ ಕಾರ್ಯಕ್ರಮ ಹಾಗೂ ಪ್ರಚಾರಕ್ಕೆ ಹೋದ ಕಡೆ ಕೇವಲ ಅಭಿಮಾನದಿಂದ ಬಂದ ಜನಸಾಗರವೋ ಅಥವಾ ಮತವಾಗಿ ಪರಿವರ್ತನೆ ಆಗಿದೆಯೋ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಮತ್ತೊಂದೆಡೆ ಚುನಾವಣೆ ಘೋಷಣೆಯಾಗುವ ಕೆಲದಿನಗಳ ಮುನ್ನ 8 ಸಾವಿರ ಕೋಟಿಗೂ ಅಧಿಕ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್‌ರನ್ನು ಜಿಲ್ಲೆಯ ಸಚಿವ, ಶಾಸಕರ ಒತ್ತಡಕ್ಕೆ ಮಣಿದು ಕಣಕ್ಕಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದರೂ ಮಂಡ್ಯದಲ್ಲಿ ಸಿಎಂ ಸೇರಿದಂತೆ ಜೆಡಿಎಸ್ ನಾಯಕರು ಮಿತ್ರ ಪಕ್ಷದ ನಾಯಕರ ಸಹಕಾರ ಕೋರಲಿಲ್ಲ. ಬದಲಿಗೆ ಮೂವರು ಸಚಿವರು, ಐವರು ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಜಿಪಂ, ತಾಪಂ, ನಗರಸಭೆ, ಪುರಸಭೆಯಲ್ಲಿ ಅಧಿಕಾರ ಇರುವುದರಿಂದ ತಮಗೆ ಅಡ್ಡಿಯಾಗದು ಎಂಬ ನಂಬಿಕೆಯಿಂದ ಹೋರಾಟ ಮಾಡಿದ್ದಾರೆ.

ವಿಧಾನ ಸಭೆ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಜೆಡಿಎಸ್ ಪಡೆದ ಲೀಡ್‌ನಲ್ಲಿ ಕೊಂಚ ಇಳಿಕೆಯಾದರೂ ತಮ್ಮ ಪಕ್ಷಕ್ಕೆ ಸಮಸ್ಯೆ ಆಗದು ಎಂಬುದು ಒಂದು ನಂಬಿಕೆಯಾದರೆ, ಸಾಲ ಮನ್ನಾ, ದೇವೇಗೌಡ, ಕುಮಾರಸ್ವಾಮಿ ಅವರ ಮೇಲೆ ಜಿಲ್ಲೆಯ ಜನರಿಗೆ ಇರುವ ಅಭಿಮಾನ, ಒಕ್ಕಲಿಗರ ಗೌರವ ಪ್ರಶ್ನೆ ತಮಗೆ ಸಹಕಾರಿಯಾಗಲಿದೆ ಎಂಬುದರ ಜತೆಗೆ ಹಣಕಾಸು ಕೂಡ ಸಾಕಷ್ಟು ವರ್ಕ್ ಮಾಡಿದೆ.
ಖುದ್ದು ಸಿಎಂ ಕ್ಷೇತ್ರದಲ್ಲಿಯೇ ಹೆಚ್ಚು ದಿನ ಉಳಿದು, ಚುನಾವಣೆ ಮಾಡಿದ್ದು, ದೋಸ್ತಿ ಪಕ್ಷದ ಜತೆಗೆ ಬಿಜೆಪಿಯ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸೆಳೆಯುವ ಪ್ರಯತ್ನ ಮಾಡಿ, ಕೆಲವೆಡೆ ಯಶ ಕಂಡಿದ್ದಾರೆ.

ಆದರೆ, ಹೊರ ಜಿಲ್ಲೆಯವರು ಎಂಬ ಆರೋಪ, ಸುಮಲತಾರನ್ನು ನಿಂದನೆ ಮಾಡಿದ್ದು, ಅಂಬಿ ಪಾರ್ಥಿವ ಶರೀರದ ರಾಜಕೀಯ, ದರ್ಶನ್ ಮತ್ತು ಯಶ್ ವಿರುದ್ಧ ಟೀಕೆ ಫಲ ಕೊಡುವುದೋ… ಕೈ ಕೊಡುವುದೋ…? ಕಾದು ನೋಡಬೇಕಿದೆ.

ಒಟ್ಟಾರೆ, ಇಬ್ಬರ ಪೈಕಿ ಯಾರೇ ಗೆದ್ದರೂ ಅಂತರ ಕಡಿಮೆ ಇರಲಿದೆ ಎಂದು ಹಲವು ಸಮೀಕ್ಷೆಗಳು ಹೇಳುತ್ತಿದ್ದು, ಯಾರೇ ಆಯ್ಕೆಯಾದರು ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಲಿದ್ದಾರೆ.

Leave a Reply

Your email address will not be published. Required fields are marked *