ಅಹಮದಾಬಾದ್: ವರನ ತಂದೆ, ವಧುವಿನ ತಾಯಿಯೊಡನೆ ಓಡಿ ಹೋಗಿರುವ ಕಾರಣದಿಂದ ಮುಂದಿನ ತಿಂಗಳು ನಡೆಯಬೇಕಿದ್ದ ಮದುವೆಯೊಂದು ಮುರಿಬಿದ್ದಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ.
ವರನ ತಂದೆ ಮತ್ತು ವಧುವಿನ ತಾಯಿ 10 ದಿನಗಳಿಂದ ಕಾಣೆಯಾಗಿರುವುದು ಕುಟುಂಬದವರ ಗಮನಕ್ಕೆ ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳ ಮದುವೆಗೆ ಕೇವಲ ಒಂದು ತಿಂಗಳಿಗಿಂತ ಕಡಿಮೆ ಅವಧಿ ಇತ್ತು. ಇದೀಗ ಇಬ್ಬರೂ ಕಾಣೆಯಾಗಿರುವುದರಿಂದ ಮದುವೆ ಮುಂದೂಡಲಾಗಿದೆ.
ವರನ ತಂದೆ ಕತರ್ಗಾಮ್ನಲ್ಲಿ ಜವಳಿ ಉದ್ಯಮಿಯಾಗಿದ್ದಾರೆ. ವಧುವಿನ ತಾಯಿ ನವಸಾರಿ ಮೂಲದವರಾಗಿದ್ದು, ಗೃಹಣಿಯಾಗಿದ್ದರು. ಇಬ್ಬರ ಮಕ್ಕಳ ಮದುವೆ ಫೆಬ್ರವರಿ ಎರಡನೇ ವಾರದಲ್ಲಿ ನಿಗದಿಯಾಗಿತ್ತು. ಇದೀಗ ದಿಢೀರ್ ಬೆಳವಣಿಗೆ ಎರಡು ಕುಟುಂಬಕ್ಕೂ ಶಾಕ್ ನೀಡಿದೆ.
ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದು, ಪ್ರಕರಣ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ಮದುವೆಯನ್ನು ಮುಂದೂಡಲಾಗಿದೆ. ಜನವರಿ 10ರಿಂದ ಅವರಿಬ್ಬರು ಕಾಣೆಯಾಗಿದ್ದರೆ ಎಂದು ಎರಡು ಕುಟುಂಬದವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಿಕ್ಕಂದಿನಿಂದಲೇ ಪರಿಚಯವಿತ್ತು
ವರನ ತಂದೆ ಹಾಗೂ ವಧುವಿನ ತಾಯಿ ಮೊದಲೇ ಪರಿಚಿತರಾಗಿದ್ದರು. ಅವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಬಹಳ ಹಿಂದೆ ಇಬ್ಬರು ಸೂರತ್ ನಗರದ ಕತರಾಮ್ ಏರಿಯಾದಲ್ಲಿ ಅಕ್ಕಪಕ್ಕದ ಮನೆಯವರಾಗಿದ್ದರು. ಅನೇಕ ಬಾರಿ ಓಡಿಹೋಗಲು ಯತ್ನಿಸಿದ್ದರು. ಮೊದಲ ಬಾರಿ ಮದುವೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಳಿಕ ಆಕೆಯನ್ನು ಡೈಮಂಡ್ ದಲ್ಲಾಳಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು ಎಂದು ತಿಳಿದುಬಂದಿದೆ. (ಏಜೆನ್ಸೀಸ್)