ನಾಲ್ಕು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರಂತೆ ದೀಪ್‌ವೀರ್‌ ಜೋಡಿ!

ಮುಂಬೈ: ಬಾಲಿವುಡ್‌ನ ಹಾಟ್‌ ಫೇವರಿಟ್‌ ಜೋಡಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್‌ವೀರ್‌ ಸಿಂಗ್‌ ಅವರ ವಿವಾಹವು ಕೊಂಕಣಿ ಮತ್ತು ಸಿಂಧಿ ಶೈಲಿಯಲ್ಲಿ ಅದ್ದೂರಿಯಾಗಿ ಇಟಲಿಯ ಲೇಕ್‌ ಕೊಮೊದಲ್ಲಿರುವ ಡೆಲ್ ಬಾಲ್ಬಿನೆಲ್ಲೋ ರೆಸಾರ್ಟ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ನ.14 ಮತ್ತು 15ರಂದು ನಡೆದದ್ದು ಎಲ್ಲರಿಗೂ ತಿಳಿದೇ ಇದೆ.

ದಂಪತಿಗಳು ಮದುವೆಯ ಫೋಟೊ, ವಿಡಿಯೋ ಮೂಲಕ ಭಾರಿ ಸುದ್ದಿ ಮಾಡಿದ್ದರು. ಇದೀಗ ದೀಪ್‌ವೀರ್‌ ಜೋಡಿ ಬಗ್ಗೆ ಹೊಸದೊಂದು ವಿಚಾರ ರಿವೀಲ್‌ ಆಗಿದ್ದು, ಅಭಿಮಾನಿಗಳಿಗೆ ಶಾಕ್‌ ನೀಡಿದೆ. ದೀಪಿಕಾ ಮತ್ತು ರಣ್‌ವೀರ್‌ ಕಳೆದ ನಾಲ್ಕು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರಂತೆ!

ಹೌದು, ಫಿಲ್ಮ್‌ಫೇರ್‌ ಮ್ಯಾಗಜೀನ್‌ನ ಜ. 2019ರ ಸಂಚಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳಲಿರುವ ದೀಪಿಕಾ, ನಿಯತಕಾಲಿಕೆಯ ಸಂದರ್ಶನದಲ್ಲಿ ಹೊಸ ಬಾಂಬ್‌ ಸಿಡಿಸಿದ್ದಾರೆ.

2016ರಲ್ಲೇ ದೀಪ್‌ವೀರ್‌ ಜೋಡಿ ಎಂಗೇಜ್‌ ಆಗಿರುವ ಕುರಿತು ವದಂತಿಗಳು ಎದ್ದಿದ್ದವು. ಆದರೆ ಅವರಿಬ್ಬರು ಈ ವಿಚಾರವನ್ನು ದೃಢಪಡಿಸಲೂ ಇಲ್ಲ ಅಥವಾ ನಿರಾಕರಿಸಿರಲೂ ಇಲ್ಲ. ಸ್ವಲ್ಪ ಸಮಯದ ನಂತರ ವಿಚಾರವೇ ಮರೆಯಾಗಿತ್ತು. (ಏಜೆನ್ಸೀಸ್)