More

  ಚಾಲುಕ್ಯರ ನಾಡಲ್ಲಿ ಬಿರುಸಿನ ಸಮರಾಭ್ಯಾಸ

  ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಬಾಗಲಕೋಟೆ ಲೋಕಸಭಾ ಕ್ಷೇತ್ರವನ್ನು ಛಿದ್ರ ಮಾಡಿ ತನ್ನ ಅಭೇದ್ಯ ಕೋಟೆಯನ್ನಾಗಿಸಿಕೊಂಡಿರುವ ಬಿಜೆಪಿಗೆ ಈಗ ಆ ಗೆಲುವಿನ ನಾಗಾಲೋಟ ಮುಂದುವರಿಸುವ ಸವಾಲಿದೆ. ಸೋಲಿನ ಸರಪಳಿ ಬಿಡಿಸಿಕೊಂಡು ಗೆಲುವಿನ ಸಿಹಿ ಅನುಭವಿಸಲು ಕಾಂಗ್ರೆಸ್ ಶತಪ್ರಯತ್ನ ನಡೆಸಿದೆ.

  | ಅಶೋಕ ಶೆಟ್ಟರ ಬಾಗಲಕೋಟೆ

  ಬಾಗಲಕೋಟೆ ಲೋಕಸಭಾ ಕ್ಷೇತ್ರ ಬಿಜೆಪಿ ಬುಟ್ಟಿಗೆ ಬಿದ್ದು 20 ವರ್ಷ ಕಳೆದಿವೆ. ಈ ಬಾರಿಯ ಲೋಕ ಸಮರದಲ್ಲಿ ಹಾಲಿ ಸಂಸದ, ಬಿಜೆಪಿ ಪಾಲಿಗೆ ಗೆಲುವಿನ ರತ್ನವಾಗಿರುವ ಪಿ.ಸಿ.ಗದ್ದಿಗೌಡರಗೆ 5ನೇ ಸಲವೂ ಅವಕಾಶ ಸಿಗುವುದೇ ಅಥವಾ ಬದಲಾವಣೆ ಗಾಳಿ ಬೀಸಲಿದೆಯೇ? ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಪ್ರತಿ ಸಲವೂ ಹೊಸಮುಖವನ್ನು ಅಖಾಡಕ್ಕೆ ಇಳಿಸುತ್ತಾ ಬಂದಿದ್ದರೂ ಸೋಲಿನ ಸರಪಳಿ ಕಳಚಿಲ್ಲ. ಈ ಸಲ ಬಿಜೆಪಿಗೆ ಮೋದಿ ಗ್ಯಾರಂಟಿ ಶಕ್ತಿ ಇದ್ದರೆ, ಕಾಂಗ್ರೆಸ್​ಗೆ ಐದು ಗ್ಯಾರಂಟಿಗಳ ಬಲವಿದೆ. ಜಿದ್ದಾಜಿದ್ದಿ ಜೋರಾಗಿಯೇ ನಡೆಯಲಿದೆ.

  ಕ್ಷೇತ್ರದ ಫಲಿತಾಂಶ ಇತಿಹಾಸ: ಲೋಕಸಭೆ ಕ್ಷೇತ್ರವು ಜಿಲ್ಲೆಯ 7 ಹಾಗೂ ಗದಗ ಜಿಲ್ಲೆ ನರಗುಂದ ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಎದುರಾಳಿಗಳು. ವಿಧಾನಸಭೆ ಚುನಾವಣೆಯಲ್ಲಿ ‘ಕೈ’ ಮೇಲುಗೈ ಸಾಧಿಸಿ, ಐದು ಕಡೆ ಗೆಲುವು ದಾಖಲಿಸಿದ್ದರೆ 3 ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟಿದೆ. 2004ರಿಂದ ವಿಧಾನಸಭೆ ಚುನಾವಣೆಗಳಲ್ಲಿ ಏರುಪೇರಾಗಿದ್ದರೂ ಲೋಕಸಭೆಯಲ್ಲಿ ಬಿಜೆಪಿಯದ್ದೇ ದಿಗ್ವಿಜಯ.

  ಟಿಕೆಟ್ ಪೈಪೋಟಿ ಹೇಗಿದೆ?: ಸತತ ನಾಲ್ಕು ಸಲ ಗೆದ್ದಿರುವ ಪಿ.ಸಿ. ಗದ್ದಿಗೌಡರ ಅವರಿಗೆ ಈ ಸಲ ಟಿಕೆಟ್​ಗಾಗಿ ಪೈಪೋಟಿ ಏರ್ಪಟ್ಟಿದೆ. ಚಿತ್ರದುರ್ಗ ಮೂಲದ, ಆರ್ಥಿಕ ಇಲಾಖೆಯಲ್ಲಿ ಡಿಸಿಯಾಗಿ ಸ್ವಯಂ ನಿವೃತ್ತಿ ಪಡೆದ ಡಾ. ಪ್ರಕಾಶ್ ಪರಪ್ಪ, ತಾನು ಆಕಾಂಕ್ಷಿ ಎಂದು ಬಾಗಲಕೋಟೆಯಲ್ಲಿ ಮನೆ ಮಾಡಿ, ಬಹಿರಂಗ ಪ್ರಚಾರ ನಡೆಸಿದ್ದಾರೆ. ಗುಳೇದಗುಡ್ಡದ ಮಾಜಿ ಶಾಸಕ ರಾಜಶೇಖರ ಶೀಲವಂತ ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದು, ಅವರೂ ಬಾಗಲಕೋಟೆ ನಗರದಲ್ಲಿ ಮನೆ ಮಾಡಿದ್ದಾರೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಹೆಸರು ಈಗೀಗ ಕೇಳಿ ಬರತೊಡಗಿದೆ. ಅರ್ಧ ಡಜನ್ ಆಕಾಂಕ್ಷಿತರು ಪೈಪೋಟಿ ನಡೆಸಿರುವುದು ಎರಡು ದಶಕಗಳ ಅವಧಿಯಲ್ಲಿ ಹೊಸ ಬೆಳವಣಿಗೆ.

  ಕಾಂಗ್ರೆಸ್​ನಲ್ಲಿ ಕಳೆದ ಸಲ ಪರಾಜಿತ ಅಭ್ಯರ್ಥಿ, ಹುನಗುಂದ ಶಾಸಕ ವಿಜಯಾನಂದ ಅವರ ಪತ್ನಿ ವೀಣಾ ಕಾಶಪ್ಪನವರ ಟಿಕೆಟ್​ಗಾಗಿ ಪ್ರಬಲ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವ ಅಜಯಕುಮಾರ ಸರನಾಯಕ, ಬಸವಪ್ರಭು ಸರನಾಯಕ, ರಕ್ಷಿತಾ ಈಟಿ ಪೈಪೋಟಿ ನಡೆಸಿದ್ದಾರೆ. ಮಾಜಿ ಶಾಸಕ ಆನಂದ ನ್ಯಾಮಗೌಡ ಹೆಸರು ಕೇಳಿ ಬರುತ್ತಿದೆ. ಪಕ್ಕದ ವಿಜಯಪುರ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಹೆಸರು ಚಾಲ್ತಿಗೆ ಬಂದಿದೆ. ಕಾಂಗ್ರೆಸ್​ನಲ್ಲೂ ಹತ್ತು ಆಕಾಂಕ್ಷಿಗಳಿದ್ದಾರೆ.

  ಚುನಾವಣೆ ವಿಷಯ
  ಅಯೋಧ್ಯೆ ರಾಮಮಂದಿರ, ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು ಎನ್ನುವುದೇ ಬಿಜೆಪಿ ಮಂತ್ರ. ಸ್ಥಳೀಯ ಅಭ್ಯರ್ಥಿ ಇಲ್ಲಿ ಗೌಣ, 4 ಸಲ ಗೆದ್ದಿದ್ದರೂ ಹಾಲಿ ಸಂಸದರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ವತಃ ಅನೇಕ ಬಿಜೆಪಿಗರಿಗೆ ತೃಪ್ತಿ ಇಲ್ಲ ಎಂಬ ಮಾತಿದೆ. ಆದರೆ, 20 ವರ್ಷಗಳ ಅವಧಿಯಲ್ಲಿ ಸರ್ಕಾರದ ವಾಡಿಕೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ ಎನ್ನುತ್ತಾರೆ ಹಾಲಿ ಸಂಸದರು.

  ಮತ ಲೆಕ್ಕಾಚಾರ
  2004 ರಿಂದ 2019 ರವರೆಗೂ ನಡೆದ ನಾಲ್ಕು ಚುನಾವಣೆಯಲ್ಲೂ ಪಿ.ಸಿ. ಗದ್ದಿಗೌಡರ ಭರ್ಜರಿ ಗೆಲುವು ದಾಖಲಿಸಿದ್ದಾರೆ. 2009ರಲ್ಲಿ ಮಾತ್ರ ಗೆಲುವಿನ ಅಂತರ 35446 ಬಿಟ್ಟರೆ ಉಳಿದೆಲ್ಲ ಚುನಾವಣೆಯಲ್ಲಿ ಒಂದು ಲಕ್ಷದ ಮೇಲೆಯೇ ಗೆಲುವಿನ ಅಂತರ. 2019ರಲ್ಲಿ 1,68,187 ಮತಗಳ ಅಂತರದಲ್ಲಿ ಜಯಶೀಲರಾಗಿದ್ದು ಭರ್ತಿ 6,64,638 ಮತಗಳನ್ನು ಗದ್ದಿಗೌಡರ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ 4,96,451 ಮತ ಪಡೆದಿದ್ದರು.

  ಕೈ ಗ್ಯಾರಂಟಿ-ಪ್ರಧಾನಿ ಮೋದಿ ಹವಾ
  ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಗ್ಯಾರಂಟಿಗಳನ್ನೇ ನೆಚ್ಚಿ ಕೊಂಡಿದೆ. ಅರ್ಧದಷ್ಟಿರುವ ಮಹಿಳಾ ಮತದಾರರು ಕಾಂಗ್ರೆಸ್​ಗೆ ಮತ ಕೊಡುತ್ತಾರೆ ಎನ್ನುವ ವಿಶ್ವಾಸದಲ್ಲಿ ಕೈಪಡೆಗಿದೆ. ರಾಮಮಂದಿರ, ಹಿಂದುತ್ವ, ರಾಷ್ಟ್ರೀಯ ವಿಚಾರ ಗೆಲುವಿನ ದಡ ತಲುಪಿಸುತ್ತದೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ಬೀಗುತ್ತಿದೆ.

  ಪ್ರಭಾವ ಬೀರುವ ಅಂಶಗಳು
  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು. 8 ವಿಧಾನಸಭೆ ಕ್ಷೇತ್ರಗಳಲ್ಲಿ ಐದು ಕಡೆಗೆ ಕಾಂಗ್ರೆಸ್ ಶಾಸಕರು ಇರುವುದು. ಹಾಗೆಯೇ ಬಿಜೆಪಿಗೆ ರಾಮಮಂದಿರ, ಹಿಂದುತ್ವ, ರಾಷ್ಟ್ರೀಯತೆ, ಮೋದಿ ಹವಾ.

  ನೇರ ಹಣಾಹಣಿ
  ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಯಾರೇ ಆದರೂ ನೇರಾನೇರ ಸ್ಪರ್ಧೆ. ಜೆಡಿಎಸ್-ಬಿಜೆಪಿ ಹೊಂದಾಣಿಕೆ ಆಗಿರುವುದರಿಂದ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿಗೆ ಒಂದಷ್ಟು ಬಲ ಹೆಚ್ಚಿದೆ.

  ಸ್ಥಳೀಯ ವರ್ಚಸ್ಸು

  ಗದ್ದಿಗೌಡರ ಗುಣಸ್ವಭಾವವೇ ಅವರ ಗೆಲುವಿನ ಪ್ಲಸ್ ಪಾಯಿಂಟ್. ಎಲ್ಲರ ಜತೆಗಿನ ಉತ್ತಮ ಒಡನಾಟ, ವಿವಾದಗಳಿಂದ ಸದಾ ದೂರ.

  ಪಿ.ಸಿ.ಗದ್ದಿಗೌಡರ ಬಾಗಲಕೋಟೆ ರಿಪೋರ್ಟ್​ ಕಾರ್ಡ್​

  ಕ್ಷೇತ್ರಕ್ಕಿಲ್ಲ ವಿಶೇಷ ಯೋಜನೆ

  2019ರಿಂದ ಇಲ್ಲಿಯವರೆಗೆ ಬಂದಿರುವ 17 ಕೋಟಿ ರೂ. ಅನುದಾನವನ್ನು ಧಾರ್ವಿುಕ, ಸಾಮಾಜಿಕ, ಅಂಗವಿಕಲರಿಗೆ ಸಲಕರಣೆಗಾಗಿ ಹಂಚಿಕೆ ಮಾಡಿದ್ದು, ಕೆಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಸರ್ಕಾರದಿಂದ ನಡೆಯುವ ವಾಡಿಕೆ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಕ್ಷೇತ್ರಕ್ಕೆ ವಿಶೇಷವಾದ ಯೋಜನೆ ರೂಪಿಸಿಲ್ಲ. ಕೆಲವು ದೀರ್ಘಾವಧಿಯ ಕಾಮಗಾರಿಗಳು ದಶಕ ಕಳೆದರೂ ಮುಗಿದಿಲ್ಲ ಎನ್ನುವ ಆರೋಪಗಳಿವೆ. 14 ವರ್ಷಗಳಿಂದ ನಡೆದಿರುವ 142 ಕಿ.ಮೀ. ಉದ್ದದ ಬಾಗಲಕೋಟೆ-ಕುಡಚಿ ರೈಲು ಮಾರ್ಗದಲ್ಲಿ ಇನ್ನೂ 40 ಕಿ.ಮೀ. ಹಳಿ ಜೋಡಣೆ ಮುಗಿದಿಲ್ಲ. ಅದಕ್ಕೆ ರಾಜ್ಯ ಸರ್ಕಾರ ನಿಗದಿತ ಸಮಯಕ್ಕೆ ಜಮೀನು ಒದಗಿಸಿಲ್ಲ ಎನ್ನುವ ಮಾತನ್ನು ಸಂಸದರು ಹೇಳುತ್ತಿದ್ದಾರೆ. ಗದಗ-ಹುಟಗಿ ಡಬ್ಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಬಾದಾಮಿ ಹಾಗೂ ಗುಳೇದಗುಡ್ಡ ಮೇಲ್ಸೇತುವೆ ಮಂಜೂರಾಗಿವೆ. ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಭರದಿಂದ ನಡೆದಿವೆ.

  ಶೇ. 91 ಹಾಜರಾತಿ: ಸಂಸದ ಪಿ.ಸಿ. ಗದ್ದಿಗೌಡರು ಸಂಸತ್​ನಲ್ಲಿ ಶೇ.91 ಹಾಜರಾತಿ ಹೊಂದಿದ್ದಾರೆ. 5 ಚರ್ಚೆಗಳಲ್ಲಿ ಭಾಗವಹಿಸಿದ್ದು, 76 ಪ್ರಶ್ನೆಗಳನ್ನು ಕೇಳಿದ್ದಾರೆ. ಕೇಂದ್ರ ಕೃಷಿ ಸಮಿತಿ ಅಧ್ಯಕ್ಷರಾಗಿಯೂ ಉತ್ತಮ ಕಾರ್ಯ ಮಾಡಿದ್ದು, ಅದಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಗೆಯೇ ಸಂಸದ ರತ್ನ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.

  ನೀನು ಯಾವ… ನಟ ದರ್ಶನ್ ಆಡಿದ ಆ ಒಂದು ಮಾತಿಗೆ​ ಕೆರಳಿ ಕೆಂಡವಾದ ಅಹೋರಾತ್ರ, ಅಶ್ಲೀಲ ಪದ ಬಳಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts