ಉಪ ಮಹಾಸಮರದಲ್ಲಿ ಯಾರಿಗೆ ಹೆಚ್ಚು ಸ್ಥಾನ: ಇಲ್ಲಿದೆ ದಿಗ್ವಿಜಯ ನ್ಯೂಸ್​ ಸಮೀಕ್ಷೆ

ಬೆಂಗಳೂರು: ಮಹಾ ಮೈತ್ರಿ ಮತ್ತು ಬಿಜೆಪಿ ಎಂಬಂತಾಗಿದ್ದ ರಾಜ್ಯ ಉಪಸಮರದ ದಿಗ್ವಿಜಯ ನ್ಯೂಸ್​ ಮತಗಟ್ಟೆ ಸಮೀಕ್ಷೆ ಬಹಿರಂಗಗೊಂಡಿದ್ದು, ಮೈತ್ರಿ ಕೂಟಕ್ಕೆ 4 ಕ್ಷೇತ್ರ ಮತ್ತು ಬಿಜೆಪಿಗೆ ಒಂದು ಕ್ಷೇತ್ರ ಲಭ್ಯವಾಗುವ ಮುನ್ಸೂಚನೆ ಸಿಕ್ಕಿದೆ.

ಜೆಡಿಎಸ್​ನ ಭದ್ರ ಕೋಟೆಯಾಗಿರುವ ರಾಮನಗರವನ್ನು ಕಾಂಗ್ರೆಸ್​ನ ನೆರವಿನೊಂದಿಗೆ ಜೆಡಿಎಸ್​ ತನ್ನಲ್ಲಿಯೇ ಉಳಿಸಿಕೊಳ್ಳುವುದು ಸಷ್ಟವಾಗಿ ಗೋಚರಿಸುತ್ತಿದೆ. ಸಮೀಕ್ಷೆ ಪ್ರಕಾರ ರಾಮನಗರದಲ್ಲಿ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 84% ರಷ್ಟು ಮತಗಳಿಸಿದರೆ, ಬಿಜೆಪಿ ಕೇವಲ 11 %ರಷ್ಟು ಮತ ಪಡೆಯಲಿದೆ.

ಜಮಖಂಡಿಯಲ್ಲಿ ತಂದೆಯ ಸಾವಿನ ಅನುಕಂಪದ ಅಲೆಯ ಪ್ರಭಾವ ಮತ್ತು ಅದನ್ನೇ ಬಲವೆಂದು ನೆಚ್ಚಿಕೊಂಡಿರುವ ಕಾಂಗ್ರೆಸ್​ ಅಭ್ಯರ್ಥಿ ಆನಂದ್​ ನ್ಯಾಮಗೌಡ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳೂ ಕಾಣಿಸಿವೆ. ಮೈತ್ರಿ ಕೂಟ ಮತ್ತು ಬಿಜೆಪಿ ನಡುವಿನ ತುರುಸಿನ ಪೈಪೋಟಿಯಲ್ಲಿ 49% ಮತಗಳನ್ನು ಗಳಿಸಲಿರುವ ಕಾಂಗ್ರೆಸ್​ ಅಭ್ಯರ್ಥಿ 47.5 % ಮತ ಪಡೆಯಲಿರುವ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ವಿರುದ್ಧ ಜಯ ದಾಖಲಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಜೆಡಿಎಸ್​ ಅಭ್ಯರ್ಥಿ ಎಲ್​.ಆರ್​ ಶಿವರಾಮೇಗೌಡರು ಜಯ ದಾಖಲಿಸಲಿದ್ದಾರೆ ಎನ್ನುತ್ತಿದೆ ಸಮೀಕ್ಷೆ. ಜೆಡಿಎಸ್​ 60.5% ರಷ್ಟು ಭಾರಿ ಮತ ಗಳಿಸಲಿದೆ. ಬಿಜೆಪಿ 35.5% ರಷ್ಟು ಮತ ಪಡೆದು ತನಗೆ ನೆಲೆಯೇ ಇಲ್ಲದ ಪ್ರದೇಶದಲ್ಲಿ ಗಣನೀಯ ಸಾಧನೆ ಮಾಡಲಿದೆ. ಹಾಗಾಗಿ ಈ ಕ್ಷೇತ್ರದ ಮಟ್ಟಿಗೆ ಅಂಥ ದೊಡ್ಡ ಕುತೂಹಲವೇನೂ ಉಳಿದಿಲ್ಲ.

ಜಾತಿ, ಗಣಿ, ಕನ್ನಡ ಭಾಷೆ ವಿಚಾರಕ್ಕೆ ಈ ಬಾರಿ ಹೆಚ್ಚು ಸುದ್ದಿಯಾದ ಬಳ್ಳಾರಿಯೂ ಕಾಂಗ್ರೆಸ್​ಗೆ ಒಲಿಯುವ ಸಾಧ್ಯತೆಗಳು ಕಾಣಿಸಿವೆ. ಆದರೆ, ಮೈತ್ರಿ ಕೂಟದ ಅಭ್ಯರ್ಥಿ ವಿ.ಎಸ್​ ಉಗ್ರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಜೆ. ಶಾಂತ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 50.5%, ಬಿಜೆಪಿಗೆ 46.5 % ರಷ್ಟು ಮತ ಸಿಗುವ ಸಾಧ್ಯತೆಗಳಿವೆ. ಅಂತಿಮವಾಗಿ ಕ್ಷೇತ್ರ ಕಾಂಗ್ರೆಸ್​ಗೆ ದಕ್ಕುವ ಮುನ್ಸೂಚನೆ ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಹಾಗೇನಾದರೂ ಆದರೆ, ಬಿಜೆಪಿ ತನ್ನ ಸ್ಥಾನವನ್ನು ಕಳೆದುಕೊಳ್ಳಲಿದೆ.

ಇನ್ನು ಶಿವಮೊಗ್ಗ. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ ಲೋಕಸಭೆ ಕ್ಷೇತ್ರ ಬಿಜೆಪಿ ಮಟ್ಟಿಗೆ ಪ್ರತಿಷ್ಠೆ. ಬಿಜೆಪಿಗೆ ಸುಲಭವಾಗಿ ದಕ್ಕಬಹುದಾಗಿದ್ದ ಈ ಕ್ಷೇತ್ರ ಮಧು ಬಂಗಾರಪ್ಪ ಅವರ ಸ್ಪರ್ಧೆಯಿಂದಾಗಿ ಜಿದ್ದಾ ಜಿದ್ದಿಗೆ ಸಾಕ್ಷಿಯಾಗಿತ್ತು. ಈ ಚುನಾವಣೆ ಬಂಗಾರಪ್ಪ ಅವರ ಸಿದ್ಧಾಂತಗಳು ಮತ್ತು ಯಡಿಯೂರಪ್ಪ ಅವರ ಕುಟುಂಬದ ನಡುವಿನ ಹೋರಾಟ ಎಂದೇ ಬಿಂಬಿಸಲಾಗಿತ್ತು. ಮೈತ್ರಿ ಕೂಟ ಕೂಡ ಬಂಗಾರಪ್ಪ ನಾಮ ಬಲದ ಮೇಲೆಯೇ ಚುನಾವಣೆ ಎದುರಿಸಿದೆ. ಹಾಗಾಗಿ ಬಿಜೆಪಿಯ ಬಿ.ವೈ ರಾಘವೇಂದ್ರ ಮತ್ತು ಮೈತ್ರಿ ಕೂಟದ ಜೆಡಿಎಸ್​ ಅಭ್ಯರ್ಥಿ ಮಧು ಬಂಗಾರಪ್ಪ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಕೊನೆಗೆ ಬಿಜೆಪಿಯ ರಾಘವೇಂದ್ರ ಗೆಲ್ಲವ ಸಾಧ್ಯತೆಗಳು ಗೋಚರಿಸಿವೆ. ಬಿಜೆಪಿ- 47.5%, ಜೆಡಿಎಸ್- 45 %, ಜೆಡಿಯು& ಇತರೆ-07.5% ರಷ್ಟು ಮತ ಗಳಿಸುವ ಸಾಧ್ಯತೆಗಳಿವೆ. ಐದು ಕ್ಷೇತ್ರಗಳ ಪೈಕಿ ಶಿವಮೊಗ್ಗ ಹೆಚ್ಚು ಕುತೂಹಲ ಉಳಿಸಿಕೊಂಡಿದೆ.

ಅದರಂತೆ, ಭಾರಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದ್ದ ಈ ಚುನಾವಣೆಯಲ್ಲಿ ಮೈತ್ರಿ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ.

 

ರಾಮನಗರ
ಜೆಡಿಎಸ್​ -84%
ಬಿಜೆಪಿ – 11 %

ಜಮಖಂಡಿ
ಕಾಂಗ್ರೆಸ್​- 49%
ಬಿಜೆಪಿ -47.5 %

ಮಂಡ್ಯ
ಜೆಡಿಎಸ್- ​60.5%
ಬಿಜೆಪಿ – 35.5%

ಬಳ್ಳಾರಿ
ಕಾಂಗ್ರೆಸ್​- 50.5%
ಬಿಜೆಪಿ -46.5 %

ಶಿವಮೊಗ್ಗ
ಬಿಜೆಪಿ -47.5%
ಜೆಡಿಎಸ್​- 45 %