ಉಡುಪಿ: ವಿಶ್ವ ಆರೋಗ್ಯ ಸಂಸ್ಥೆ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳು ಬುಧವಾರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ, ಮಾಹಿತಿ ಪಡೆದಿದ್ದಾರೆ.
ಈ ನಡುವೆ, ಕಾರ್ಕಳ ತಾಲೂಕಿನ ಶಿರ್ಲಾಲು, ಬೆಳ್ಮಣ್, ಕುಂದಾಪುರ ತಾಲೂಕಿನ ವಲ್ತೂರು, ಆವರ್ಸೆ ಗ್ರಾಪಂ ವ್ಯಾಪ್ತಿಯ ಹಿಲಿಯಾಣ ಮುಂದ್ಲಬೆಟ್ಟು ಎಂಬಲ್ಲಿ ಬುಧವಾರ ಒಟ್ಟು 4 ಮಂಗಗಳ ಶವ ಸಿಕ್ಕಿದ್ದು, 2 ಮಂಗಗಳ ದೇಹದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಳ್ಳಿಹೊಳೆಯಲ್ಲಿ ಶಂಕಿತ ಮಂಗನ ಕಾಯಿಲೆ ಸಂಬಂಧಿಸಿ ವ್ಯಕ್ತಿಯೊಬ್ಬರ ರಕ್ತ ಮಾದರಿ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ಜ.19ರಿಂದ ಫೆ.4ರವರೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ ಮಂಗಗಳ ಅಂಗಾಂಗ ಪರೀಕ್ಷೆ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ.
ದ.ಕ. ಜಿಲ್ಲೆ ಮಂಗನಕಾಯಿಲೆ ಇಲ್ಲ
ಮಂಗಳೂರು: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಪತ್ತೆಯಾದ ಸತ್ತ ಮಂಗಗಳಲ್ಲಿಯೂ ಕಾಯಿಲೆ ಇಲ್ಲದಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 22 ಸತ್ತ ಮಂಗಗಳು ಪತ್ತೆಯಾಗಿದ್ದು, ಕೊಲ, ಕಾಣಿಯೂರು, ಚಾರ್ಮಾಡಿ, ಶಿರಾಡಿ ಅಡ್ಡಹೊಳೆ, ನಾರಾವಿಯಲ್ಲಿನ ಒಟ್ಟು ಐದು ಮೃತದೇಹದ ಮಾದರಿಯನ್ನು ಕಾಯಿಲೆ ಇರುವ ಬಗ್ಗೆ ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿತ್ತು. ಎಲ್ಲ ಮಾದರಿಗಳ ವರದಿಗಳು ಬಂದಿದ್ದು, ಕಾಯಿಲೆ ಇಲ್ಲದಿರುವುದು (ನೆಗೆಟಿವ್) ದೃಢಪಟ್ಟಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ 11 ಮಂದಿ ಶಂಕಿತ ರೋಗಿಗಳ ರಕ್ತ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ರೋಗ ಇಲ್ಲದಿರುವುದು ದೃಢಪಟ್ಟಿದೆ ಎಂದರು.