ಮೇಲುಕೋಟೆ ಕ್ಷೇತ್ರದಲ್ಲಿ ಯಾರಿಗೆ ಲೀಡ್?

ಪಾಂಡವಪುರ: ಜೆಡಿಎಸ್‌ನ ಭದ್ರಕೋಟೆ ಹಾಗೂ ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ಲೀಡ್ ತಂದು ಕೊಡುತ್ತಿರುವ ಮೇಲುಕೋಟೆ ಕ್ಷೇತ್ರ ಈ ಬಾರಿ ಕೂಡ ಜೆಡಿಎಸ್ ಕೈ ಹಿಡಿಯಲಿದೆ ಎಂದು ಎಲ್ಲ ಸಮೀಕ್ಷೆಗಳು ಹೇಳುತ್ತಿವೆ.

ಆದರೆ ಕ್ಷೇತ್ರದಲ್ಲಿ ಈ ಬಾರಿ ಬೇರೆಯದೇ ಆಗಲಿದೆ ಎಂದು ರೈತಸಂಘ, ಕಾಂಗ್ರೆಸ್ ಹಾಗೂ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ದಿ.ಅಂಬರೀಷ್ ಪತ್ನಿ ಸುಮಲತಾ ನಡುವೆ ಭಾರಿ ಪೈಪೋಟಿ ನಡೆದಿರುವ ಹಿನ್ನೆಲೆಯಲ್ಲಿ ಚರ್ಚೆ ತೀವ್ರಗೊಂಡಿದ್ದು, ಬೆಟ್ಟಿಂಗ್ ದಂಧೆಯೂ ಮಿತಿ ಮೀರುತ್ತಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.80.31ರಷ್ಟು ಮತದಾನವಾಗಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೇಲುಕೋಟೆ ಕ್ಷೇತ್ರದಲ್ಲಿ ಅಧಿಕ ಅಂದರೆ, ಶೇ. 86.54ರಷ್ಟು ಮತದಾನವಾಗಿದೆ. 1,96,995 ಮತದಾರರ ಪೈಕಿ 1,70,476 ಜನ ಮತ ಚಲಾಯಿಸಿದ್ದಾರೆ.

11 ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಎಲ್ಲ ಸಮೀಕ್ಷೆಗಳನ್ನು ಬುಡಮೇಲು ಮಾಡಿ ಗೆಲುವು ಸಾಧಿಸಿದ್ದರು. ಈಗ ಸಚಿವರಾಗಿದ್ದು, ಮತ್ತಷ್ಟು ಚುರುಕಾಗಿರುವ ಕಾರಣದಿಂದ ಪಕ್ಷಕ್ಕೆ ಹೆಚ್ಚಿನ ಲೀಡ್ ತಂದು ಕೊಡಲು ಸಾಕಷ್ಟು ಶ್ರಮಿಸಿದ್ದಾರೆ. ಪರಿಣಾಮ ಜೆಡಿಎಸ್‌ಗೆ ಲೀಡ್ ಸಿಗಲಿದೆ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ.

ಆದರೆ ಈ ಸಮೀಕ್ಷೆಗಳನ್ನು ಸುಮಲತಾ ಪರ ಕೆಲಸ ಮಾಡಿರುವ ರೈತಸಂಘ, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಪ್ಪಲು ಸಿದ್ಧರಿಲ್ಲ. ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಜತೆಗೆ ಬಿಜೆಪಿ, ಕಾಂಗ್ರೆಸ್ ಸೇರಿ ರೈತ ಸಂಘದ ಕೆಲವರು ಕೈ ಜೋಡಿಸಿದ್ದರು. ಆದರೀಗ ಮೂವರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದು, ಸುಮಲತಾರಿಗೆ ಲೀಡ್ ಸಿಗಲಿದೆ ಎಂದು ವಾದ ಮಂಡಿಸುತ್ತಿದ್ದಾರೆ.
ಕುಂತಲ್ಲಿ, ನಿಂತಲ್ಲಿ ಯಾವ ಹೋಬಳಿಯಲ್ಲಿ ಯಾರಿಗೆ ಲೀಡ್ ಸಿಗುತ್ತದೆ, ಯಾವ್ಯಾವ ನಾಯಕರು ಯಾರಿಗೆ ಕೈ ಕೊಟ್ಟಿದ್ದಾರೆ ಎಂಬಿತ್ಯಾದಿ ವಿಚಾರವಾಗಳು ವ್ಯಾಪಕವಾಗಿ ಚರ್ಚೆಯಾಗುತ್ತಿವೆ.

ಬೆಟ್ಟಿಂಗ್ ದಂಧೆ ಜೋರು
ರೈತ ಸಂಘ, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಆತ್ಮವಿಶ್ವಾಸದಿಂದ ಇದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದರೆ, ಜೆಡಿಎಸ್ ಕಾರ್ಯಕರ್ತರು ನಿಖಿಲ್ ಪರ ಲಕ್ಷಗಟ್ಟಲೇ ಬೆಟ್ಟಿಂಗ್‌ಗೆ ಆಹ್ವಾನಿಸುತ್ತಿದ್ದಾರೆ.

ಕೆಲವೆಡೆ, ಕುರಿ, ಕೋಳಿ, ಮೇಕೆ, ಬೈಕ್, ಟ್ರಾೃಕ್ಟರ್, ಜಮೀನನ್ನು ಜನರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎನ್ನಲಾಗುತ್ತಿದೆ. ಗೆಲುವು ಸೋಲು ಮಾತ್ರವಲ್ಲದೆ, ಮೇಲುಕೋಟೆ ಕ್ಷೇತ್ರದಲ್ಲಿ ನಿಖಿಲ್‌ಗೆ 30ರಿಂದ 50ಸಾವಿರದವರೆಗೆ ಲೀಡ್ ಬರುತ್ತದೆ. ಚಿನಕುರಳಿ ಹಾಗೂ ದುದ್ದ ಹೋಬಳಿಯಲ್ಲಿ ಜೆಡಿಎಸ್ ಹೆಚ್ಚಿನ ಲೀಡ್ ಗಳಿಸಲಿದೆ ಎಂಬ ವಿಚಾರಗಳ ಮೇಲೂ ಬೆಟ್ಟಿಂಗ್ ನಡೆಯುತ್ತಿದೆ.

ನಿಖಿಲ್ 2.5ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹೇಳಿಕೆ ಬಗ್ಗೆಯೂ ಕ್ಷೇತ್ರದೊಳಗೆ ಚರ್ಚೆ ಹೆಚ್ಚಿದ್ದು, ಸುಮಲತಾ ಗೆದ್ದರೆ, ಸಚಿವರು ರಾಜಕೀಯ ನಿವೃತ್ತಿ ಆಗಿ ಕೊಟ್ಟ ಮಾತು ಉಳಿಸಿಕೊಳ್ಳುವರೇ ಎಂದು ಪಕ್ಷೇತರ ಅಭ್ಯರ್ಥಿ ಬೆಂಬಲಿಗರು ಸವಾಲೊಡ್ಡುತ್ತಿದ್ದಾರೆ.

ಒಟ್ಟಾರೆ ಫಲಿತಾಂಶ ಪ್ರಕಟಗೊಳ್ಳಲು ಒಂದು ದಿನ ಬಾಕಿ ಇದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಸೋಲು-ಗೆಲುವಿನ ಲೆಕ್ಕಾಚಾರದ ಬಗ್ಗೆ ಚರ್ಚೆಗಳು ಬಿರುಸುಗೊಂಡಿವೆ.

 

Leave a Reply

Your email address will not be published. Required fields are marked *