ಕಾಂಗ್ರೆಸ್ ಪಕ್ಷದ ಟಿಕೆಟ್ ಯಾರಿಗೆ?

ಪರಶುರಾಮ ಕೆರಿ ಹಾವೇರಿ

ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ಸಮಾವೇಶವನ್ನೂ ನಡೆಸಿವೆ. ಬಿಜೆಪಿಯಿಂದ ಶಿವಕುಮಾರ ಉದಾಸಿಯವರೇ ಅಭ್ಯರ್ಥಿ ಎಂದು ನಿಶ್ಚಯವಾಗಿದ್ದು, ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ಪೈಪೋಟಿ ಆರಂಭಗೊಂಡಿದೆ.

16 ಲೋಕಸಭೆ ಚುನಾವಣೆಗಳಲ್ಲಿ 12 ಬಾರಿ ಗೆಲುವು ಸಾಧಿಸಿ, 2004ರಿಂದ ಸತತವಾಗಿ ಮೂರು ಬಾರಿ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷ ಮರಳಿ ಪ್ರಭುತ್ವ ಸಾಧಿಸಲು ರಣತಂತ್ರ ರೂಪಿಸಿದೆ.

ಕೈನಲ್ಲಿ ಫೈಟ್: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೆಂಬುದು ತಿಳಿಯದೇ ಕಾರ್ಯಕರ್ತರು ಹೈಕಮಾಂಡ್​ನತ್ತ ದೃಷ್ಟಿ ನೆಟ್ಟಿದ್ದಾರೆ. ಹಿಂದಿನ ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವ ಸಲೀಂ ಅಹ್ಮದ್ ಅವರು ಈ ಬಾರಿಯೂ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ ಮಾಜಿ ಶಾಸಕರಾದ ಬಸವರಾಜ ಶಿವಣ್ಣನವರ, ಡಿ.ಆರ್. ಪಾಟೀಲ, ಜಿ.ಎಸ್. ಪಾಟೀಲ, ಜಿ.ಎಸ್. ಗಡ್ಡದೇವರಮಠ ಹೆಸರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿರುವುದರಿಂದ ಟಿಕೆಟ್ ಯಾರಿಗೆ ಎಂಬ ಕುತೂಹಲ ಮೂಡಿದೆ.

ಯಾರ್ಯಾರ ಲಾಬಿ ಏನು?: ಸಲೀಂ ಅಹ್ಮದ್ ಸದ್ಯ ಎಐಸಿಸಿಯಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಎರಡು ಬಾರಿ ಸೋತ ಅನುಕಂಪವು ಈ ಸಾರಿ ತಮಗೆ ಪ್ಲಸ್ ಆಗಲಿದೆ. ಹಿಂದಿನ ಚುನಾವಣೆಯಲ್ಲಿ ಮೋದಿಯವರ ಪ್ರಭಾವದ ನಡುವೆಯೂ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದೇನೆ. ಹೀಗಾಗಿ, ತಮಗೆ ಟಿಕೆಟ್ ಕೊಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಸಲೀಂ ಅವರಿಗೆ ಮಾಜಿ ಶಾಸಕ ಮನೋಹರ ತಹಶೀಲ್ದಾರ್ ಸಾಥ್ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ಸಿದ್ದರಾ ಮಯ್ಯ ಪ್ರಭಾವದಿಂದ ಮಾಜಿ ಶಾಸಕ ಬಸವರಾಜ ಶಿವಣ್ಣನವರಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲರು ತಮ್ಮ ಸಹೋದರ ಸಂಬಂಧಿ ಡಿ.ಆರ್. ಪಾಟೀಲರಿಗೆ ಟಿಕೆಟ್

ಕೊಡಿಸಲು ಹೈಕ ಮಾಂಡ್ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇವರಿಗೆ ಹಾವೇರಿ ಮಾಜಿ ಶಾಸಕರಾದ ರುದ್ರಪ್ಪ ಲಮಾಣಿ, ಕೆ.ಬಿ. ಕೋಳಿವಾಡ ಸಾಥ್ ನೀಡಿದ್ದಾರೆ. ರೋಣದ ಮಾಜಿ ಶಾಸಕ ಜಿ.ಎಸ್. ಪಾಟೀಲರು ಸಹ ಹೈಕಮಾಂಡ್​ನಲ್ಲಿ ಪ್ರಭಾವಶಾಲಿಯಾಗಿದ್ದು, ವೀರಶೈವ ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ, ತಮಗೆ ಕೊಡಬೇಕು ಎಂಬ ದಾಳವನ್ನು ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲರ ಮೂಲಕ ಉರುಳಿಸಿದ್ದಾರೆ. ವೀರಶೈವ ಲಿಂಗಾಯತರ ಕೋಟಾದಲ್ಲಿ ಜಿ.ಎಸ್. ಪಾಟೀಲರಿಗೆ ತಪ್ಪಿದರೆ ತಮಗೆ ಟಿಕೆಟ್ ಕೊಡಬೇಕು ಎಂದು ಜಿ.ಎಸ್. ಗಡ್ಡದೇವರಮಠ ತಮ್ಮ ಅಹವಾಲು ಮಂಡಿಸಿದ್ದಾರೆ.

ಲಿಂಗಾಯತರಿಗೆ ಕೈ ಮಣೆ?: ಸೂಕ್ತ ಅಭ್ಯರ್ಥಿಯ ಆಯ್ಕೆಗಾಗಿ ಹೈಕಮಾಂಡ್ ತಾಲೀಮು ನಡೆಸಿದೆ. ಧಾರವಾಡ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಲಭಿಸಿದರೆ ಹಾವೇರಿ ಕ್ಷೇತ್ರದಿಂದ ಸಲೀಂ ಅಹ್ಮದ್ ಬದಲಾಗಿ ಲಿಂಗಾಯತ ಕೋಮಿಗೆ ಸೇರಿದವರಿಗೆ ಟಿಕೆಟ್ ಖಾತ್ರಿ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಬೆಂಗಳೂರು ಸೆಂಟ್ರಲ್, ಬೀದರ್, ಹಾವೇರಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ. ಧಾರವಾಡದಲ್ಲಿ ಲಿಂಗಾಯತರಿಗೆ ಟಿಕೆಟ್ ಸಿಕ್ಕರೆ ಸಲೀಂ ಅಹ್ಮದ್ ಹಾದಿ ಸುಗಮವಾಗಲಿದೆ. ಕೊಪ್ಪಳದಲ್ಲಿ ಕುರುಬ ಸಮಾಜಕ್ಕೆ ಟಿಕೆಟ್ ಸಿಕ್ಕರೆ ಬಸವರಾಜ ಶಿವಣ್ಣನವರಿಗೆ ಹಾವೇರಿ ಕೈ ತಪ್ಪಲಿದೆ. ಹೈಕಮಾಂಡ್​ನ ಜಾತಿ ಲೆಕ್ಕಾಚಾರದ ನಡುವೆಯೇ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಅವರು, ‘ವೀರಶೈವ ಲಿಂಗಾಯತರಿಗೆ ಟಿಕೆಟ್ ಕೊಡಿ. ಹಾವೇರಿಯನ್ನು ಕೈ ವಶ ಮಾಡಿಕೊಳ್ಳುತ್ತೇವೆ’ ಎಂದು ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ. ಬಿ.ಸಿ. ಪಾಟೀಲರಿಗೆ ಹಾವೇರಿ ಹಾಗೂ ಗದಗ ಜಿಲ್ಲೆಯ ಕಾಂಗ್ರೆಸ್​ನ ವೀರಶೈವ ಲಿಂಗಾಯತರು ಸಾಥ್ ನೀಡಿದ್ದಾರೆ.