ಇಂದಿರಾ ಗಾಂಧಿಯ ಮೂರನೇ ಮಗ ಎಂದೇ ಕರೆಸಿಕೊಳ್ಳುವ ಕಮಲ್​ ನಾಥ್​ ಬಗ್ಗೆ ಗೊತ್ತಿರದ ಸಂಗತಿಗಳಿವು!

ಭೋಪಾಲ್​: ತೀವ್ರ ಸೆಣಸಾಟದ ನಡುವೆ ಮಧ್ಯಪ್ರದೇಶವನ್ನು ಬಿಜೆಪಿ ಕೈಯಿಂದ ಕಿತ್ತುಕೊಂಡಿರುವ ಕಾಂಗ್ರೆಸ್​ 15 ವರ್ಷದ ನಂತರ ಇದೇ ಮೊದಲ ಬಾರಿಗೆ ಅಧಿಕಾರ ಸ್ಥಾಪಿಸಲು ಹೊರಟಿದೆ. ವಿಧಾನಸಭೆ ಅಖಾಡದಲ್ಲಿ ಕಾಂಗ್ರೆಸ್​ ಪಕ್ಷ ಬಿಜೆಪಿ ಎದುರು ಎಷ್ಟು ಸೆಣಸಿತೋ ಅಷ್ಟೇ ಸೆಣಸಾಟ ನಡೆಸಿ ಕಮಲ್​ ನಾಥ್​ ಮುಖ್ಯಮಂತ್ರಿ ಸ್ಥಾನಕ್ಕೇರುತ್ತಿದ್ದಾರೆ.

ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಪ್ರಬಲ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಹೈಕಮಾಂಡ್​ ಹಿರಿಯ ನಾಯಕ ಕಮಲ ನಾಥ್​ ಅವರಿಗೇ ಅವಕಾಶ ನೀಡಿದೆ. ಹಾಗೆ ಅವಕಾಶ ನೀಡಲೂ ಕಾರಣಗಳಿವೆ. ಅವರ ಹಿರಿತನ, ತಂತ್ರಗಾರಿಕಗೆ ಮತ್ತು ಗಾಂಧಿ ಕುಟುಂಬದ ಬಗೆಗೆ ಅವರಿಗಿರುವ ನಿಷ್ಟೆ ಅವರನ್ನು ಮುಖ್ಯಮಂತ್ರಿ ಹುದ್ದೆ ಬಳಿಗೆ ಕರೆದು ತಂದು ನಿಲ್ಲಿಸಿದೆ.

ಮುಖ್ಯಮಂತ್ರಿಯಾಗಿ ಕಮಲ್​ ನಾಥ್​ ಅವರನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ರಾಹುಲ್​ ಗಾಂಧಿ ಅವರು ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಕಮಲ್​ ನಾಥ್​ ಅವರನ್ನು ಎಡ ಬಲದಲ್ಲಿ ನಿಲ್ಲಿಸಿಕೊಂಡು ಟ್ವೀಟ್​ವೊಂದನ್ನು ಮಾಡಿದ್ದರು. “The two most powerful warriors are patience and time” ( ಪ್ರಮುಖ ಇಬ್ಬರು ಯೋಧರೆಂದರೆ ತಾಳ್ಮೆ ಮತ್ತು ಸಮಯ) ಅದರಲ್ಲಿ ಸಮಯ ಎಂಬ ಪದ ಕಮಲ್​ ನಾಥ್​ ಅವರನ್ನು ಸೂಚಿಸುತ್ತಿತ್ತು. ಮುಖ್ಯಮಂತ್ರಿ ಹುದ್ದೆಗೇರಲು ತಾಳ್ಮೆಯಿಂದ ಕಾದಿದಿದ್ದ ಕಮಲ್​ ಈ ಬಾರಿಯ ಸಮಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಷ್ಟಕ್ಕೂ ಯಾರು ಈ ಕಮಲ್​ ನಾಥ್?​ ಅವರ ಕುರಿತ ಗೊತ್ತಿರದ ಮಾಹಿತಿಗಳು ಇಲ್ಲಿವೆ.

 • ಕಮಲ್​ ನಾಥ್​ ಕೇಂದ್ರದ ಮಾಜಿ ಸಚಿವ. ಅಲ್ಲದೆ, ಸಂಸತ್​ನ ಅತಿ ಹಿರಿಯ ಸದಸ್ಯರಲ್ಲಿ ಒಬ್ಬರು.
 • ಮಧ್ಯಪ್ರದೇಶದ ಚಿಂದ್ವಾರ ಕ್ಷೇತ್ರದಿಂದ ಅವರು ಈ ವರೆಗೆ 9 ಬಾರಿ ಆಯ್ಕೆಯಾಗಿ ತ್ರಿವಿಕ್ರಮ ಮೆರೆದಿದ್ದಾರೆ.
 • ಚಿಂದ್ವಾರದಿಂದ ಮೊದಲ ಬಾರಿಗೆ ಆಯ್ಕೆಯಾದ ನಂತರ ಅವರು ಸತತ ನಾಲ್ಕು ಬಾರಿ ಸಂಸತ್​ಗೆ ಆಯ್ಕೆಯಾಗಿದ್ದರು.
 • ಕಮಲ್​ ಈಗಲೂ ಸಂಸತ್ ಸದಸ್ಯರೇ. ಈ ಬಾರಿ ವಿಧಾನಸಭೆಗೆ ಅವರು ಸ್ಪರ್ಧಿಸಿರಲಿಲ್ಲ.
 • ಕಮಲ್​ ನಾಥ್​ ಉದ್ಯಮ ಮನೆತನದ ಕುಟುಂಬದಿಂದ ಬಂದವರು. ಅವರು ಪ್ರತಿಷ್ಠಿತ ಡೂನ್​ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಅದೇ ಅವರನ್ನು ಮುಂದೆ ರಾಜಕೀಯಕ್ಕೆ ಎಳೆದು ತಂದಿತ್ತು. 
 • ತಾವು ಓದುತ್ತಿದ್ದ ಡೂನ್​ ಶಾಲೆಯಲ್ಲಿ ಇಂದಿರಾ ಪುತ್ರ ಸಂಜಯ್​ ಗಾಂಧಿ ಕೂಡ ಓದುತ್ತಿದ್ದರು. ಇಬ್ಬರ ನಡುವೆ ಗಾಢ ಸ್ನೇಹವಿತ್ತು. ಇದೇ ಅವರನ್ನು ಗಾಂಧಿ ಕುಟುಂಬಕ್ಕೆ ಆಪ್ತರನ್ನಾಗಿಸಿತ್ತು. ಇದೇ ಕಾರಣದಿಂದಲೇ ಅವರು ಇಂದು ಮುಖ್ಯಮಂತ್ರಿಯೂ ಆಗುತ್ತಿದ್ದಾರೆ.
 • ಕಮಲ್​ ನಾಥ್​ ಅವರನ್ನು ಇಂದಿರಾಗಾಂಧಿ ಅವರ ಮೂರನೇ ಪುತ್ರ ಎಂದೇ ಕರೆಯಲಾಗುತ್ತದೆ. ಎಂಥದ್ದೇ ಸಂದರ್ಭದಲ್ಲೂ ಇಂದಿರಾ ಅವರ ನೆರವಿಗೆ ನಿಲ್ಲುತ್ತಿದ್ದ ಕಮಲ್​ರನ್ನು ಇಂದಿರಾ ಗಾಂಧಿ ಅವರೇ ನನ್ನ ಮೂರನೇ ಮಗ ಎನ್ನುತ್ತಿದ್ದರು.
 • 1984ರ ಸಿಖ್​ ದಂಗೆಯನ್ನು ಕಮಲ್​ ಮುನ್ನಡೆಸಿದ್ದರು ಎಂಬ ವಾದಗಳೂ ಇವೆ. ಆದರೆ, ಅದೆಲ್ಲವನ್ನೂ ಅವರು ನಿರಾಕರಿಸಿದ್ದಾರೆ.
 • ಈ ಚುನಾವಣೆಯಲ್ಲಿ ಕಮಲ್​ ನಾಥ್​ ಅವರು ಹೂಡಿದ್ದ ಹಿಂದುವಾದದ ದಾಳವೊಂದು ಕಾಂಗ್ರೆಸ್​ಗೆ ಬಹುದೊಡ್ಡ ಲಾಭ ತಂದುಕೊಟ್ಟಿತ್ತು.
 • ಬಿಜೆಪಿಯ ಅಧಿಕಾರ ಅಂತ್ಯಗೊಳಿಸುವಂತೆ ‘ಶಿವ’ನಿಗೆ ಅವರು ಬರೆದಿದ್ದ ಬಹಿರಂಗ ಪತ್ರ, ಕಾಂಗ್ರೆಸ್​ಗೆ ಹಿಂದು ಸಹಾನುಭೂತಿ ಸಿಗುವಂತೆ ಮಾಡಿತ್ತು.
 • ಕಮಲ್​ ನಾಥ್​ ಅವರು ತಮ್ಮ ಕ್ಷೇತ್ರದಲ್ಲಿ ಬರೋಬ್ಬರಿ 101.8 ಅಡಿ ಎತ್ತರದ ಹನುಮನ ಪ್ರತಿಮೆಯನ್ನೂ ಸ್ಥಾಪಿಸಿದ್ದಾರೆ. ಇದೂ ಕೂಡ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ಗೆ ಹಿಂದು ಮತಗಳನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
 • ಈ ಬಾರಿಯ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಎಲ್ಲ ರೀತಿಯ ಜವಾಬ್ದಾರಿ ಹೊತ್ತಿದ್ದವರು ಕಮಲ್ ​ನಾಥ್​ ಅವರೇ.

ಇದೇ ಹಿನ್ನೆಲೆಯಲ್ಲೇ, ಜ್ಯೋತಿರಾದಿತ್ಯರಂಥ ಪ್ರಮುಖ ಯುವನಾಯಕನೊಬ್ಬ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಠವಿಡಿದು ಕುಳಿತಿದ್ದರೂ, ಪಕ್ಷಕ್ಕಾಗಿ ದುಡಿದಿರುವ, ಹಿರಿತನ ಹೊಂದಿರುವ ಕಮಲ್​ ನಾಥ್​ ಅವರನ್ನು ಕಾಂಗ್ರೆಸ್​ ಹೈಕಮಾಂಡ್​ ಮುಖ್ಯಮಂತ್ರಿಯನ್ನಾಗಿ ಆರಿಸಿಕೊಂಡಿದೆ.