More

    ಸುಖೀ ಅಂತ್ಯದಿಂದ ಸುಖವಾದದ್ದು ಯಾರಿಗೆ?

    ಸುಖೀ ಅಂತ್ಯದಿಂದ ಸುಖವಾದದ್ದು ಯಾರಿಗೆ?ಆಂಧ್ರ ಪ್ರದೇಶದ ಕೃಷ್ಣಾ ನದಿ ತೀರದ ಜಿಲ್ಲೆಯೊಂದರ ಜಮೀನ್ದಾರ ರಾಜೇಶ್ 150 ಎಕರೆ ಫಲವತ್ತಾದ ಗದ್ದೆಗಳ ಒಡೆಯನಾಗಿದ್ದು, ವರ್ಷಂಪ್ರತಿ ಅರ್ಧ ಕೋಟಿ ರೂ.ಗಳ ಆದಾಯ ಗಳಿಸುತ್ತಿದ್ದ. ಇತರ ಕೆಲವು ಶ್ರೀಮಂತ ರೈತರಂತೆ ಆತ ಯಾವುದೇ ದುರಭ್ಯಾಸಗಳನ್ನೂ ಹೊಂದಿರದೆ ದೈವಭಕ್ತನಾಗಿದ್ದು, ಧರ್ಮಬೀರುವಾಗಿದ್ದ. ಆತನ ಪತ್ನಿ ರಜನಿ ಸಹಾ ಅವನಂತೆಯೇ ಗುಣಶೀಲೆಯಾಗಿದ್ದಳು. ಈ ಜೋಡಿಗೆ ನಿರ್ಮಲಾ ಎಂಬ ಹೆಣ್ಣುಮಗಳೊಬ್ಬಳೇ ಸಂತಾನ. ಶ್ಯಾಮಲ ವರ್ಣದ ನಿರ್ಮಲಾ ಬುದ್ಧಿವಂತೆಯಾಗಿದ್ದು ಆಟೋಟಗಳಲ್ಲಿಯೂ ಮುಂದಿದ್ದಳು. ಮುದ್ದಿನ ಮಗಳ ಮೇಲೆ ರಾಜೇಶನಿಗೆ ಎಲ್ಲಿಲ್ಲದ ಪ್ರೀತಿ. ನಿರ್ಮಲಾಳಿಗೆ 18 ವರ್ಷಗಳಾದ ಕೂಡಲೇ ಸೂಕ್ತ ವರನೊಂದಿಗೆ ಅವಳ ಮದುವೆ ಮಾಡಬೇಕೆಂದು ರಾಜೇಶ್ ತೀರ್ವನಿಸಿದ್ದ.

    ನಿರ್ಮಲಾ 13ನೆಯ ವರ್ಷಕ್ಕೆ ಕಾಲಿಟ್ಟಾಗ ರಜನಿ ಕ್ಯಾನ್ಸರ್ ರೋಗಕ್ಕೆ ತುತ್ತಾದಳು. ಅತ್ಯುತ್ತಮ ಚಿಕಿತ್ಸೆ ಕೊಡಿಸಿದರೂ ಒಂದು ವರ್ಷ ನರಳಿದ ಆಕೆ ಆ ರೋಗದಿಂದ ಮುಕ್ತಿ ಪಡೆಯದೆ ದೈವಾಧೀನಳಾದಳು. ರಾಜೇಶನಿಗಂತೂ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿ ಮುಂದೇನು ಮಾಡುವುದೆಂದು ತೋಚದಾಯಿತು. ನಿನ್ನ ದುಃಖಕ್ಕೆ ನನ್ನ ಬಳಿ ಟಾನಿಕ್ ಒಂದಿದೆ, ಬಾ, ಎನ್ನುತ್ತಾ ಅವನ ಗೆಳೆಯನೊಬ್ಬ ರಾಜೇಶನಿಗೆ ಮದಿರೆಯ ಪರಿಚಯ ಮಾಡಿಸಿದ. ಕೆಲವೇ ದಿನಗಳ ನಂತರ ರಾಜೇಶ್ ವಿಸ್ಕಿಯ ಸೇವನೆಯಲ್ಲಿ ಪ್ರಪಂಚವನ್ನೇ ಮರೆಯತೊಡಗಿದ.

    ಯಾವುದೇ ಚಟಗಳನ್ನು ಹೊಂದಿರದಿದ್ದ ರಾಜೇಶ್ ಮದ್ಯವ್ಯಸನಿಯಾಗುತ್ತಿದ್ದುದನ್ನು ಕಂಡ ಅವನ ಹತ್ತಿರದ ಸಂಬಂಧಿಕರು ಚಿಂತೆಗೊಂಡರು. ಅವನಿಗೆ ಎರಡನೆಯ ಲಗ್ನ ಮಾಡಿದರೆ ಮಾತ್ರ ಆತ ಸರಿದಾರಿಗೆ ಬರಲು ಸಾಧ್ಯ ಎಂದವರು ಯೋಚಿಸಿ ಆತನಿಗೆ ಮತ್ತೊಮ್ಮೆ ಮದುವೆ ಮಾಡುವುದೇ ಸೂಕ್ತವೆಂದು ತೀರ್ವನಿಸಿದರು. ರಾಜೇಶ್, ‘ನಿನಗಿನ್ನೂ 45 ವರ್ಷವೂ ತುಂಬಿಲ್ಲ. ಮುಂದೆ ನೀನು ಹಲವಾರು ವರ್ಷಗಳ ಜೀವನ ಸಾಗಿಸಬೇಕಾಗಿದೆ. ನಿನಗೆ ಸಂಗಾತಿಯ ಅವಶ್ಯಕತೆ ಅತಿ ಮುಖ್ಯ. ಮೇಲಾಗಿ ನಿರ್ಮಲಾ ಈಗಷ್ಟೇ ಹರೆಯಕ್ಕೆ ಕಾಲಿಟ್ಟಿದ್ದಾಳೆ. ಹದಿಹರೆಯದ ಸಮಯ ತೀರಾ ಜಾಗ್ರತೆಯಿಂದಿರಬೇಕಾದ ಕಾಲ. ಈ ಕಾಲದಲ್ಲಿ ಆಕೆ ತನ್ನ ವೈಯುಕ್ತಿಕ ಸಮಸ್ಯೆಗಳನ್ನು ಹಂಚಿಕೊಳ್ಳಲು ಆಕೆಗೆ ತಾಯಿ ಇಲ್ಲವೇ ಸಖಿಯೊಬ್ಬಳ ಅವಶ್ಯಕತೆಯಿದೆ. ಅಕೆಯನ್ನು ನೋಡಿಕೊಳ್ಳಲು ನೀನು ಎಷ್ಟೇ ಆಳುಕಾಳುಗಳನ್ನು ನೇಮಿಸಿದರೂ ಅವರೆಲ್ಲರೂ ತಾಯಿಯ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಹೀಗಾಗಿ ನೀನು ಮದುವೆಯಾಗಲೇಬೇಕು’ ಎಂದು ಒತ್ತಾಯಿಸಿದರು.

    ಸಂಬಂಧಿಕರ ಬಲವಂತಕ್ಕೆ ಮಣಿದ ರಾಜೇಶ್ ಮದುವೆಯಾಗಲು ಒಪ್ಪಿದ. ನೆರೆಯ ಗ್ರಾಮದ 35 ವರ್ಷ ವಯಸ್ಸಿನ ಶಕುಂತಲಾ ಎನ್ನುವವಳನ್ನು ಸಮಾರಂಭವೊಂದರಲ್ಲಿ ನೋಡಿದ ರಾಜೇಶ್ ಅವಳನ್ನೇ ಮದುವೆಯಾಗಲು ತೀರ್ವನಿಸಿದ. ಆದರೆ, ಅವನ ಸಂಬಂಧಿಕರು ಇದಕ್ಕೊಪ್ಪಲಿಲ್ಲ. ಏಕೆಂದರೆ ಶಕುಂತಲಾಳನ್ನು ಲಗ್ನವಾದ ಎರಡೇ ವರ್ಷಗಳೊಳಗೆ ಆಕೆಯ ಗಂಡ ಸಾಯುತ್ತಾನೆಂದು ಜ್ಯೋತಿಷಿಗಳು ಹೇಳಿದ್ದರು. ಇದೇ ಕಾರಣದಿಂದಲೇ ಆಕೆಗೆ 35 ವರ್ಷಗಳು ತುಂಬಿದ್ದರೂ ಲಗ್ನವಾಗಿರಲಿಲ್ಲ. ಆದರೆ, ರಾಜೇಶ್ ಶಕುಂತಲಾಳ ಸೌಂದರ್ಯಕ್ಕೆ ಮಾರುಹೋಗಿದ್ದ. ಜಾತಕಗಳನ್ನು ತಾಳೆಹಾಕದೇ ಅವಳ ಕೈ ಹಿಡಿಯಲು ಮುಂದಾದ. ಇವರಿಬ್ಬರ ಮದುವೆ ವಿಜೃಂಭಣೆಯಿಂದ ನಡೆದು ಶಕುಂತಲಾ ಗಂಡನ ಮನೆಗೆ ಬಂದು ಸೇರಿದಳು. ನಿಧಾನವಾಗಿ ಗಂಡನ ಕುಡಿತದ ಚಟವನ್ನೂ ಬಿಡಿಸಿದಳು. ಆರಂಭದಲ್ಲಿ ನಿರ್ಮಲಾ, ತನ್ನ ಮಲತಾಯಿಯನ್ನು ತಾಯಿಯೆಂದು ಸ್ವೀಕರಿಸಲಿಲ್ಲ. ಆದರೆ, ಶಕುಂತಲಾ ತಾಳ್ಮೆಯನ್ನು ಕಳೆದುಕೊಳ್ಳದೇ ಹಂತಹಂತವಾಗಿ ನಿರ್ಮಲಾಳ ಮನವನ್ನು ಗೆಲ್ಲಲು ಪ್ರಯತ್ನಿಸತೊಡಗಿದಳು.

    ಮದುವೆಯಾಗಿ ಮೂರು ವರ್ಷಗಳು ಕಳೆದರೂ ರಾಜೇಶ್​ನಿಗೆ ಸಂತಾನ ಭಾಗ್ಯವು ಪ್ರಾಪ್ತಿಯಾಗಲಿಲ್ಲ. ಈ ಕಾರಣಕ್ಕಾಗಿ ಸಂಬಂಧಿಕರೆಲ್ಲರೂ ಶಕುಂತಲಾಳನ್ನೇ ದೂಷಿಸತೊಡಗಿದರು. ಶಕುಂತಲಾಗೆ 35 ವರ್ಷ ವಯಸ್ಸು ಮೀರಿರುವ ಕಾರಣ ಹೀಗಾಗಿರಬಹುದು ಎಂದು ಕೆಲವರು ಭಾವಿಸಿದರು. ಆದರೆ, ರಾಜೇಶನಾಗಲೀ, ಶಕುಂತಲಾ ಆಗಲೀ ನುರಿತ ವೈದ್ಯರಲ್ಲಿಗೆ ಹೋಗಿ ತೋರಿಸಲು ಸಿದ್ಧರಾಗಿರಲಿಲ್ಲ.

    ಏತನ್ಮಧ್ಯೆ ನಿರ್ಮಲಾಗೆ 18 ವರ್ಷ ತುಂಬಿತು. ತನ್ನ ಪೂರ್ವನಿರ್ಧಾರದಂತೆಯೇ ರಾಜೇಶ್ ಅವಳಿಗಾಗಿ ಸೂಕ್ತ ವರನನ್ನು ಹುಡುಕತೊಡಗಿದ. ಹಿತೈಷಿಗಳೆಲ್ಲರ ಸಲಹೆಯಂತೆ ಆತ ನಾಗರಾಜ ಎನ್ನುವವನನ್ನು ಆಯ್ಕೆ ಮಾಡಿದ. ಬಡಕುಟುಂಬವೊಂದರಿಂದ ಬಂದಿದ್ದ ನಾಗರಾಜ ಪದವೀಧರನಾಗಿದ್ದು ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಚುರುಕು ಬುದ್ಧಿಯುಳ್ಳವನಾಗಿದ್ದ. ಮದುವೆಗೆ ಮುಂಚೆ ರಾಜೇಶ್ ಅವನಿಗೆ ಕೆಲವು ಷರತ್ತುಗಳನ್ನು ಹಾಕಿದ. ತಾನು ಯಾವುದೇ ಕಾರಣಕ್ಕೂ ತನ್ನ ಮಗಳನ್ನು ತನ್ನ ಮನೆಯಿಂದ ಹೊರಗೆ ಕಳುಹಿಸುವುದಿಲ್ಲವಾದ್ದರಿಂದ ಮದುವೆಯಾದ ನಂತರ ನಾಗರಾಜ ನಿರ್ಮಲಾಳ ಜತೆಯಲ್ಲಿ ತನ್ನ ಮನೆಯಲ್ಲಿಯೇ ವಾಸಿಸಬೇಕು ಹಾಗೂ ನಾಗರಾಜ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ತನ್ನ ವ್ಯವಹಾರಗಳನ್ನು ನೋಡಿಕೊಳ್ಳಬೇಕು ಎನ್ನುವುದು ಆ ಷರತ್ತುಗಳಾಗಿದ್ದವು.

    ನಾಗರಾಜ ಆರಂಭದಲ್ಲಿ ಈ ಷರತ್ತುಗಳಿಗೊಪ್ಪಲಿಲ್ಲ. ಆದರೆ, ಆತ ತನ್ನ ಮಾತಾಪಿತರ ಹಾಗೂ ಬಂಧುಗಳ ಒತ್ತಾಯಕ್ಕೆ ತಲೆಬಾಗಿದ. ಕೆಲವೇ ದಿನಗಳ ನಂತರ ನಾಗರಾಜನೊಂದಿಗೆ ನಿರ್ಮಲಾಳ ಮದುವೆ ನಡೆಯಿತು. ಷರತ್ತಿನಂತೆ ನಾಗರಾಜ ತನ್ನ ನೌಕರಿಗೆ ರಾಜೀನಾಮೆಯಿತ್ತು ರಾಜೇಶನ ಮನೆಯಲ್ಲಿ ಬಂದು ವಾಸಿಸತೊಡಗಿದ. ನಿಧಾನವಾಗಿ ರಾಜೇಶ್ ಅವನಿಗೆ ತನ್ನ ವ್ಯವಹಾರಗಳ ಪರಿಚಯ ಮಾಡಿಕೊಟ್ಟ. ಬಲವಂತದ ಮದುವೆಯ ಕಾರಣವಿರಬಹುದೇನೋ ನಾಗರಾಜ ತನ್ನ ಪತ್ನಿಯ ಜತೆ ಹಾಸಿಗೆ ಹಂಚಿಕೊಳ್ಳಲಿಲ್ಲ. ತನ್ನ ವೈವಾಹಿಕ ಜವಾಬ್ದಾರಿಯನ್ನು ನಾಗರಾಜ ನಿರ್ವಹಿಸದೇ ಹೋದಾಗ, ಸ್ವಾಭಾವಿಕವಾಗಿಯೇ ನಿರ್ಮಲಾ ಆತಂಕಗೊಂಡಳು. ‘ನಿನಗೆ ನನ್ನ ಮೇಲೆ ಆಸಕ್ತಿಯಲ್ಲವೇ? ನೀನು ಬೇರೊಬ್ಬರನ್ನೇನಾದರೂ ಪ್ರೇಮಿಸುತ್ತಿದ್ದು ನನ್ನನ್ನು ಬಲವಂತಕ್ಕೆ ಲಗ್ನವಾದೆಯಾ?’ ಎಂದು ಧೈರ್ಯದಿಂದ ಒಂದು ರಾತ್ರಿ ಕೇಳಿಯೇಬಿಟ್ಟಳು. ನಾಗರಾಜ ಹಾರಿಕೆಯ ಉತ್ತರ ಕೊಟ್ಟ. ಕೆಲವು ದಿನಗಳಾದ ನಂತರ ನಿರ್ಮಲಾ ತನ್ನ ಮಲತಾಯಿ ಶಕುಂತಲಾಗೆ ನಾಗರಾಜನ ವರ್ತನೆಯ ಬಗ್ಗೆ ಮಾಹಿತಿ ನೀಡಿದಳು. ಕಾದುನೋಡೆಂದು ಶಕುಂತಲಾ ಮಗಳಿಗೆ ಸಲಹೆಯಿತ್ತಳು.

    ಇಷ್ಟರಲ್ಲಿ ಶಕುಂತಲಾಗೆ ಸ್ಪುರದ್ರೂಪಿ ನಾಗರಾಜನ ಮೇಲೆ ಕಣ್ಣು ಬಿದ್ದಿತ್ತು. ತನ್ನ ಗಂಡನಿಗಿಂತಲೂ ಕಿರಿಯನೂ, ಉತ್ತಮ ಮೈಕಟ್ಟನ್ನು ಹೊಂದಿರುವವನೂ ಆಗಿದ್ದ ಅವನ ಸಂಗ ಬೇಳೆಸಬೇಕೆಂಬ ಮನಸ್ಸು ಆಕೆಗೆ ಬಂದಿತು. ಹಾಗೂ ಹೀಗೂ ಮಾಡಿ ಆಕೆ ನಾಗರಾಜನನ್ನು ತನ್ನ ತೆಕ್ಕೆಗೆ ಹಾಕಿಕೊಂಡಳು. ಇಬ್ಬರೂ ಗುಟ್ಟಾಗಿ ಸಂಧಿಸತೊಡಗಿದರು. ತನ್ನ ಗಂಡ ಹಾಗೂ ಮಲತಾಯಿಯ ನಡುವೆ ಅನೈತಿಕ ಸಂಬಂಧವೇರ್ಪಡುತ್ತಿದ್ದುದನ್ನು ನಿರ್ಮಲಾ ಸೂಕ್ಷ್ಮವಾಗಿಯೇ ಗಮನಿಸಿದ್ದಳು. ಅವರಿಬ್ಬರನ್ನೂ ಸಾಕ್ಷ್ಯಸಮೇತ ಹಿಡಿಯಬೇಕೆಂದು ಆಕೆ ಕಾಯುತ್ತಿದ್ದಳು. ಒಂದಲ್ಲಾ ಒಂದು ದಿನ ತಮ್ಮ ಸಂಬಂಧವು ಬೆಳಕಿಗೆ ಬರುತ್ತದೆ ಎಂದು ಚಾಲಾಕಿ ಶಕುಂತಲಾಗೆ ಮನವರಿಕೆಯಾದಾಗ ಆಕೆ ನಾಗರಾಜನನ್ನುದ್ದೇಶಿಸಿ ತಾವು ಆ ಮನೆಯಿಂದ ಓಡಿಹೋಗಿ ಬೇರೊಂದು ಊರಿನಲ್ಲಿ ನೆಲೆಸಿ ಪತಿ-ಪತ್ನಿಯರಾಗಿ ಬಾಳಬೇಕೆಂದು ಸೂಚಿಸಿದಳು. ನಾಗರಾಜನೂ ಇದಕ್ಕೊಪ್ಪಿದ.

    ಒಂದು ರಾತ್ರಿ ನಾಗರಾಜ ರಾಜೇಶನಿಗೆ ತನ್ನ ಜತೆಯಲ್ಲಿ ಮದ್ಯಪಾನ ಮಾಡಲು ಆಹ್ವಾನಿಸಿದ. ಅದೇ ಮೊದಲ ಬಾರಿ ತನ್ನ ಅಳಿಯ ಆ ರೀತಿಯ ವಿನಂತಿ ಮಾಡಿದ್ದನ್ನು ಕಂಡ ರಾಜೇಶ್ ಖುಷಿಯಿಂದಲೇ ಒಪ್ಪಿದ. ಆ ರಾತ್ರಿ ನಾಗರಾಜ ರಾಜೇಶನಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ. ಸಂಪೂರ್ಣವಾಗಿ ನಶೆಗೆ ಜಾರಿದ ರಾಜೇಶ್ ನೆಲದ ಮೇಲೆಯೇ ನಿದ್ರಾಧೀನನಾದ. ಅಷ್ಟರಲ್ಲಿ ಶಕುಂತಲಾ ಮನೆಯಲ್ಲಿದ್ದ ನಗದು ಹಣ, ಬಂಗಾರದ ಒಡವೆಗಳು ಮುಂತಾದವನ್ನು ಬ್ಯಾಗೊಂದರಲ್ಲಿ ಹಾಕಿಕೊಂಡು ತಯಾರಾಗಿದ್ದಳು. ನಾಗರಾಜನಿಂದ ಸಂಕೇತ ಬಂದ ಕೂಡಲೇ ಅವರಿಬ್ಬರೂ ಮನೆಯಿಂದ ಪರಾರಿಯಾದರು. ರೈಲ್ವೇ ನಿಲ್ದಾಣಕ್ಕೆ ಹೋಗಿ ಮುಂಬೈಗೆ ಹೋಗುವ ರೈಲು ಹಿಡಿದರು.

    ಮಾರನೆಯ ಬೆಳಗ್ಗೆ ಮನೆಯಲ್ಲಿನ ಆಳುಕಾಳುಗಳು ಶಕುಂತಲಾ ಮನೆಯಲ್ಲಿರದಿರುವುದನ್ನು ಗಮನಿಸಿ ನಿರ್ಮಲಾಗೆ ತಿಳಿಸಿದರು. ಮನೆಯಲ್ಲಿ ಅವಳಿಗಾಗಿ ಹುಡುಕಾಡುವಾಗ ಶಕುಂತಲಾ ಮನೆಯಲ್ಲಿನ ಆಭರಣ ಮತ್ತು ನಗದನ್ನು ದೋಚಿಕೊಂಡು ನಾಗರಾಜನ ಜತೆಗೆ ಪರಾರಿಯಾಗಿರುವುದು ತಿಳಿಯಿತು. ಆಗ ರಾಜೇಶ್ ಸಮೀಪದ ಪೊಲೀಸ್ ಠಾಣೆಗೆ ಹೋಗಿ ನಾಗರಾಜ ತನ್ನ ಹೆಂಡತಿಯನ್ನು ಅಪಹರಿಸಿದ್ದಲ್ಲದೆ, ತನ್ನ ಮನೆಯಲ್ಲಿದ್ದ ಹಣ ಮತ್ತು ಆಭರಣಗಳನ್ನು ಕದ್ದು ತನ್ನ ಹೆಂಡತಿಯನ್ನು ಅಪಹರಿಸಿಕೊಂಡು ಹೋಗಿರುವುದಾಗಿ ದೂರನ್ನು ಕೊಟ್ಟ. ದೂರನ್ನು ದಾಖಲಿಸಿದ ಪೊಲೀಸರು ಶಕುಂತಲಾ ಮತ್ತು ನಾಗರಾಜ ಇವರಿಬ್ಬರ ಸೆಲ್ ಫೋನ್ ಲೊಕೇಷನ್ ಆಧಾರದ ಮೇಲೆ ಮುಂಬೈಗೆ ಹೋಗಿ ಇಬ್ಬರನ್ನೂ ಲಾಜ್ ಒಂದರಲ್ಲಿ ಪತ್ತೆ ಮಾಡಿದರು. ತಾನು ಸ್ವಇಚ್ಚೆಯಿಂದ ನಾಗರಾಜನ ಜತೆ ಓಡಿ ಬಂದಿದ್ದಾಗಿ ಹೇಳಿದ ಶಕುಂತಲಾ ನಗದು ಮತ್ತು ಆಭರಣಗಳನ್ನು ತಾನೇ ತಂದಿರುವುದಾಗಿ ಹೇಳಿ ಅವುಗಳ ಮೇಲೆ ತನಗೂ ಹಕ್ಕಿದೆ ಎಂದಳು.

    ಮುಂದೇನು ಮಾಡುವುದೆಂದು ಅಲ್ಲಿಗೆ ಹೋಗಿದ್ದ ಪೊಲೀಸರಿಗೆ ತಿಳಿಯಲಿಲ್ಲ. ಇಬ್ಬರನ್ನೂ ತಮ್ಮ ಜತೆಗೆ ತಮ್ಮೂರಿಗೆ ಕರೆತಂದರು. ಪೊಲೀಸ್ ಠಾಣೆಯಲ್ಲಿ ಶಕುಂತಲಾ ತಾನೇ ಸ್ವಯಂಪ್ರೇರಿತಳಾಗಿ ನಾಗರಾಜನ ಜತೆಗೆ ಹೋಗಿದ್ದಾಗಿಯೂ ಹಾಗೂ ತನ್ನಲ್ಲಿದ್ದ ಹಣ ಮತ್ತು ಆಭರಣಗಳು ತನ್ನವೆಂದೇ ಸಾಧಿಸಿದಳು. ಪೊಲೀಸರು ರಾಜೇಶನ ದೂರು ತಪ್ಪುಕಲ್ಪನೆಯಿಂದಾಗಿದ್ದೆಂದು ಪ್ರಕರಣವನ್ನು ಮುಕ್ತಾಯಗೊಳಿಸಿದರು. ಇದರಿಂದ ವಿಚಲಿತನಾದ ರಾಜೇಶ್ ತನ್ನ ಪತ್ನಿ ಇನ್ನೊಬ್ಬನ ಜತೆಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದಾಗಿ ಇನ್ನೊಂದು ದೂರಿತ್ತ. ಭಾರತ ದಂಡ ಸಂಹಿತೆಯನ್ವಯ ಈ ಕೃತ್ಯವು ಅಪರಾಧವಲ್ಲ ಎಂದು ಪೊಲೀಸರು ಹೇಳಿದರು. ಆಗಾತ ನಾಗರಾಜ ತನ್ನ ಪತ್ನಿಯೊಡನೆ ವ್ಯಭಿಚಾರ ಮಾಡಿದ್ದಾನೆಂದು ದೂರಿತ್ತ. ಇತ್ತೀಚೆಗಷ್ಟೇ ಸುಂಪ್ರೀಂ ಕೋರ್ಟ್ ವ್ಯಭಿಚಾರಕ್ಕೆ ಸಂಬಂಧಿಸಿದ ಅಪರಾಧವನ್ನು ರದ್ದುಗೊಳಿಸಿದೆ ಎಂದರು ಪೊಲೀಸರು. ಮುಂದೇನು ಮಾಡುವುದೆಂದು ತೋಚದಾದಾಗ ರಾಜೇಶ್ ಶಕುಂತಲಾಳಿಂದ ವಿಚ್ಛೇಧನ ಕೋರಿ ಅರ್ಜಿಯೊಂದನ್ನು ಸಲ್ಲಿಸಿದ. ಕೌಟುಂಬಿಕ ನ್ಯಾಯಾಲಯದ ವಿಚಾರಣೆ ವೇಳೆಯ ಸಮಾಲೋಚನೆಯಲ್ಲಿ ಶಕುಂತಲಾ ರಾಜೇಶನ ಮನೆಯಿಂದ ತೆಗೆದುಕೊಂಡು ಹೋಗಿದ್ದ ಆಭರಣ ಮತ್ತು ನಗದನ್ನು ಅವಳ ಬಳಿಯೇ ಬಿಡುವಂತೆ ಒಪ್ಪಂದವಾಗಿ ಅವರಿಬ್ಬರ ಲಗ್ನ ರದ್ದಾಯಿತು.

    ಇಷ್ಟರಲ್ಲಿ ನಿರ್ಮಲಾ ಸಹ ತನ್ನ ವಿವಾಹದ ವಿಚ್ಛೇಧನ ಕೋರಿ ನ್ಯಾಯಾಲಯದ ಮೊರೆಹೋದಳು. ಇದಲ್ಲದೆ, ನಾಗರಾಜ ತನಗೆ ಕೌಟುಂಬಿಕ ಕಿರುಕುಳವನ್ನು ಕೊಟ್ಟ ಎಂದು ದೂರಿದಳು. ನಾಗರಾಜನಿಂದ ಸೂಕ್ತ ಪರಿಹಾರವನ್ನೂ ಕೋರಿದಳು. ಹೆದರಿದ ನಾಗರಾಜ ನಿರ್ಮಲಾಳ ಕಾಲುಹಿಡಿದು ತನ್ನನ್ನು ಕ್ಷಮಿಸಲು ಕೋರಿದ. ಆಕೆ ಕೌಟುಂಬಿಕ ಕಿರುಕುಳದ ಕೇಸನ್ನು ವಾಪಸ್ ಪಡೆದಳು. ಅವರಿಬ್ಬರಿಗೂ ಪರಸ್ಪರ ಒಪ್ಪಂದದ ಮೇರೆಗೆ ಡೈವೋರ್ಸ್ ದೊರೆಯಿತು. ನಾಗರಾಜ-ಶಕುಂತಲಾ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. ಸುಖೀ ಅಂತ್ಯಗಳೆಲ್ಲಾ ಸುಖಕರವೇ ಎನ್ನುವ ಶೇಕ್ಸ್​ಪಿಯರ್​ನ ನಾಟಕದ ಶೀರ್ಷಿಕೆ ಅವರಿಬ್ಬರ ಮಟ್ಟಿಗೆ ಅನ್ವಯವಾದರೂ ರಾಜೇಶ್ ಹಾಗೂ ಮಗಳು ನಿರ್ಮಲಾರಿಗಾಗದಿದ್ದದ್ದು ವಿಪರ್ಯಾಸವೇ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts