ನಾವೆಲ್ಲ ಅಣ್ತಮ್ಮಾಸ್…ಬಂದ್ ಬಿಡಿ, ಯಾಕ್ ಸುಮ್ನೆ ಎಂದ ಡಿ ಕೆ ಶಿವಕುಮಾರ್‌! ಕೈ ಶಾಸಕರಿಗೆ ವಿಪ್‌ ಜಾರಿ

ಬೆಂಗಳೂರು: ನಾವೆಲ್ಲ ಅಣ್ಣ-ತಮ್ಮಂದಿರಿದ್ದಂತೆ, ವಾಪಸ್ ಬಂದುಬಿಡಿ ಎಂದು ಅತೃಪ್ತ ಶಾಸಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ವೇಣುಗೋಪಾಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ ನಾಯಕರು ನಿಮ್ಮನ್ನು ಯಾಮಾರಿಸುತ್ತಿದ್ದಾರೆ. ಅತೃಪ್ತ ಶಾಸಕರು ಇದನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಜೀವನವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ. ಇದು ನಿಮ್ಮ ಮನೆ, ನೀವೇ ಕಟ್ಟಿದ ಮನೆ. ವಾಪಸ್ ಬನ್ನಿ, ಯಾವ ತ್ಯಾಗಕ್ಕೂ ಸಿದ್ಧವಿದ್ದೇವೆ ಎಂದು ಮುಂಬೈನಲ್ಲಿ ತಂಗಿರುವ ಅತೃಪ್ತ ಕಾಂಗ್ರೆಸ್‌ ಶಾಸಕರಿಗೆ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದ ನಮಗೆ ಅನ್ಯಾಯವಾಗುವುದಿಲ್ಲ. ನಮ್ಮ ಮೈತ್ರಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ನಮ್ಮ ಪರ ತೀರ್ಪು ಬರಲಿದೆ ಎನ್ನುವ ನಿರೀಕ್ಷೆ ಇದೆ ಎಂದು ಹೇಳಿದರು.

ಅತೃಪ್ತ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದ ಹಿನ್ನೆಲೆ ಕೆ.ಕೆ.ಗೆಸ್ಟ್​ಹೌಸ್​ಗೆ ಆಗಮಿಸಿದ ಸಚಿವ ಡಿಕೆಶಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಜತೆ ಚರ್ಚೆ ನಡೆಸಿದರು.

ಕೈ ಶಾಸಕರಿಗೆ ವಿಪ್‌ ಜಾರಿ

ಕಾಂಗ್ರೆಸ್ ಪಕ್ಷದ ಮುಖ್ಯಸಚೇತಕ ಗಣೇಶ್ ಹುಕ್ಕೇರಿ ಕಾಂಗ್ರೆಸ್‌ ಶಾಸಕರಿಗೆ ವಿಪ್‌ ಜಾರಿಗೊಳಿಸಿದ್ದಾರೆ. ಗುರುವಾರ ಸಿಎಂ HDK ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ಜಾರಿ ಮಾಡಲಾಗಿದೆ. ಒಂದು ವೇಳೆ ಸದನಕ್ಕೆ ಗೈರಾದರೆ ಅನರ್ಹ ಮಾಡುತ್ತೇವೆಂದು ಉಲ್ಲೇಖಿಸಲಾಗಿದೆ. ಶಾಸಕರ ಕೊಠಡಿಗೆ ವಿಪ್ ಪತ್ರ ಅಂಟಿಸಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *