ವಿಘ್ನ ದಾಟಿದ ಮೇಕೆದಾಟು

ನವದೆಹಲಿ: ತಮಿಳುನಾಡಿನ ತೀವ್ರ ಆಕ್ಷೇಪದ ಹೊರತಾಗಿಯೂ ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ ಮೊದಲ ವಿಘ್ನ ದಾಟಿದೆ. ಯೋಜನೆಯ ಕಾರ್ಯಸಾಧ್ಯತಾ ವರದಿಗೆ ಸಮ್ಮತಿಯ ಮುದ್ರೆಯೊತ್ತಿರುವ ಕೇಂದ್ರ ಜಲ ಆಯೋಗ, ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕಾವೇರಿ ನದಿಯಲ್ಲಿ ಹರಿದು ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಪ್ರದೇಶದಲ್ಲಿ ಜಲಾಶಯ ನಿರ್ಮಾಣ ಮಾಡಲು ಅನುಮತಿ ಕೋರಿ ರಾಜ್ಯ ಸರ್ಕಾರ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಮತ್ತು ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ ಅಧ್ಯಯನ ನಡೆಸಿರುವ ಜಲ ಆಯೋಗ, ಯೋಜನೆ ಸಾಧ್ಯತೆ ಕುರಿತ ರಾಜ್ಯದ ವರದಿಗೆ ಸಮ್ಮತಿಸಿದೆ. ಆ ಮೂಲಕ ಮೇಕೆದಾಟು ಹೋರಾಟದಲ್ಲಿ ತಮಿಳುನಾಡಿನ ವಿರುದ್ಧ ರಾಜ್ಯಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ಮೇಕೆದಾಟುವಿನಲ್ಲಿ ಅಂದಾಜು 30-35 ಟಿಎಂಸಿ ನೀರನ್ನು ಸಂಗ್ರಹಿಸುವ ಮತ್ತು 400 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಜ್ಯ ಹಾಕಿಕೊಂಡಿದೆ. ಯೋಜನೆ ಅಂದಾಜು ವೆಚ್ಚ 6000 ಕೋಟಿ ರೂ. ಆಗಬಹುದೆನ್ನಲಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೇಳಿತ್ತು. ಆದರೆ ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಒತ್ತಡದಿಂದಾಗಿ ಕೇಂದ್ರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಹಾಲಿ ಸಿಎಂ ಎಚ್.ಡಿ.

ಕುಮಾರಸ್ವಾಮಿ ನೇತೃತ್ವದಲ್ಲಿ 2 ಬಾರಿ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಗಡ್ಕರಿ ಅವರಿಂದ ಪೂರಕ ಸ್ಪಂದನೆ ಸಿಕ್ಕಿತ್ತು.

ತಮಿಳುನಾಡು ಆಕ್ಷೇಪ: ಕೇಂದ್ರದ ನಿರ್ಧಾರದಿಂದ ಅಸಮಾಧಾನಗೊಂಡಿರುವ ತಮಿಳುನಾಡು ಸಿಎಂ ಪಳನಿಸ್ವಾಮಿ, ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ಮಂಗಳವಾರ ಮತ್ತೊಂದು ಪತ್ರ ಬರೆದಿದ್ದಾರೆ. ಅಲ್ಲದೆ, ಯೋಜನೆ ವಿರೋಧಿಸಿ ಮುಂದಿನ ಶುಕ್ರವಾರ ಅಥವಾ ಸೋಮವಾರದಂದು ಸುಪ್ರೀಂಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಲೂ ತಮಿಳುನಾಡು ಸರ್ಕಾರ ತೀರ್ವನಿಸಿದೆ. ಕಾವೇರಿ ಮೂಲ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮೇಕೆದಾಟು ವಿಚಾರವನ್ನೂ ಪ್ರಸ್ತಾಪಿಸಲಾಗಿತ್ತು. ಆದರೆ ಈ ಬಗ್ಗೆ ಕೋರ್ಟು ಯಾವುದೇ ಅಭಿಪ್ರಾಯ ಹೊರಹಾಕಿರಲಿಲ್ಲ ಮತ್ತು ತ.ನಾಡು ಅರ್ಜಿಯನ್ನು ಅಲ್ಲಿಗೆ ಇತ್ಯರ್ಥಪಡಿಸಲಾಗಿತ್ತು.

ತಮಿಳುನಾಡು ತಕರಾರು

ಯೋಜನೆ ಅನುಷ್ಠಾನ ಕುರಿತಂತೆ ಪೂರ್ವ ಪ್ರಾಥಮಿಕ ಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಜಲ ಆಯೋಗಕ್ಕೆ ಕಳಿಸಿತ್ತು. ಜಲ ಆಯೋಗ ಈ ಪ್ರಸ್ತಾಪಕ್ಕೆ ಆಕ್ಷೇಪ ಎತ್ತಿಲ್ಲ. ಮುಂದಿನ ಹಂತವಾಗಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರದ ಒಪ್ಪಿಗೆ ಪಡೆದುಕೊಳ್ಳಬಹುದು. ಆದರೆ, ಇದನ್ನು ತಡೆ ಹಿಡಿಯುವಂತೆ ತಮಿಳುನಾಡು ಸಿಎಂ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಯೋಜನೆ ಕೈಗೆತ್ತಿಕೊಂಡಿರುವುದು ಕುಡಿಯುವ ನೀರಿಗಾಗಿ ಮಾತ್ರ ಅಲ್ಲ, ಇದರಿಂದ ಕಾವೇರಿ ಜಲಾನಯನ ಪ್ರದೇಶಕ್ಕೂ ಹಾನಿಯಾಗುತ್ತದೆ. ಮತ್ತು ಕಾವೇರಿ ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧವಾಗಿದೆ ಎಂಬುದು ತಮಿಳುನಾಡಿನ ವಾದ.

ಮೇಕೆದಾಟು ಯೋಜನೆಯಿಂದ ತಮಿಳುನಾಡು ಪಾಲಿನ ನೀರಿಗೆ ತೊಂದರೆ ಇಲ್ಲ. ಅವರ ಪಾಲಿನ 177.25 ಟಿಎಂಸಿ ನೀರನ್ನು ಹಂಚಿದ ಬಳಿಕ ಬಾಕಿ ಉಳಿಯುವ ನೀರನ್ನು ನಾವು ಮೇಕೆದಾಟಿನಲ್ಲಿ ಸಂಗ್ರಹಿಸಲಿದ್ದೇವೆ. ನಮ್ಮ ರಾಜ್ಯದ ಕಾವೇರಿ ಕಣಿವೆಯಲ್ಲಿ ಜಲಾಶಯ ನಿರ್ಮಾಣ ಮಾಡಲು ನಮಗೆ ಪೂರ್ಣ ಹಕ್ಕಿದೆ

– ಮೋಹನ್ ಕಾತರಕಿ, ರಾಜ್ಯದ ಪರ ವಕೀಲರು

ಡಿ.6ರಂದು ಸಭೆ

ಮೇಕೆದಾಟು ಯೋಜನೆ ಅನುಷ್ಠಾನದ ಉತ್ಸಾಹದಲ್ಲಿರುವ ರಾಜ್ಯ ಸರ್ಕಾರ, ರಾಜಕೀಯ ಸಹಮತದೊಂದಿಗೆ ಮುಂದಡಿ ಇಡುವ ಉದ್ದೇಶದಿಂದ ಮಾಜಿ ಸಿಎಂಗಳು ಹಾಗೂ ಜಲಸಂಪನ್ಮೂಲ ಸಚಿವರ ಅಭಿಪ್ರಾಯ ಪಡೆಯಲು ನಿರ್ಧರಿಸಿದೆ. ಇದಕ್ಕಾಗಿ ಡಿ.6ರಂದು ವಿಧಾನಸೌಧದಲ್ಲಿ ಸಭೆ ಕರೆದಿದೆ.

ಜಲ ಆಯೋಗದ ನಿರ್ಧಾರದಿಂದಾಗಿ ಕಾವೇರಿ ಕಣಿವೆಯ ಜನ ಉಸಿರಾಡುವಂತಾಗಿದೆ. ಬೆಂಗಳೂರು ಸೇರಿದಂತೆ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ರಾಜ್ಯ ಸರ್ಕಾರ ತ್ವರಿತವಾಗಿ ಯೋಜನಾ ವರದಿ ಸಲ್ಲಿಸಬೇಕು. ಆಯೋಗ ಈ ನಿರ್ಧಾರ ಕೈಗೊಳ್ಳಲು ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹಾಗೂ ಜಲ ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

| ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಯಾರ್ಯಾರಿಗೆ ಲಾಭ

ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಪ್ರಯೋಜನವಾಗಲಿದೆ

ಪ್ರಾಣಿ ಸಂಕುಲಕ್ಕೆ ವರ

ಯೋಜನೆಯಿಂದಾಗಿ 4 ಸಾವಿರ ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ ಎನ್ನುವ ಭೀತಿ ಇದ್ದರೂ ಅಣೆಕಟ್ಟೆಯಿಂದಾಗಿ ನೀರು ಸಂಗ್ರಹವಾದರೆ ನೀರು ಮತ್ತು ಮೇವಿನ ಕೊರತೆ ನೀಗುತ್ತದೆ. ಜತೆಗೆ ಕಾಡಂಚಿನ ಗ್ರಾಮಗಳಿಗೆ ಆನೆ ಸೇರಿ ಇತರ ಕಾಡುಪ್ರಾಣಿಗಳ ಉಪಟಳವೂ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಅಲ್ಲದೆ ನೀರು ಸಂಗ್ರಹಣೆ ಯಿಂದಾಗಿ ಕಾವೇರಿ ವನ್ಯಜೀವಿಧಾಮ ಸುತ್ತ ಅಪರೂಪದ ದೈತ್ಯ ಅಳಿಲು ಸೇರಿ ಕಾಡುಪ್ರಾಣಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎನ್ನುವ ಲೆಕ್ಕಾಚಾರವೂ ಇದೆ.

ಮೇಕೆದಾಟು ಯೋಜನೆ ಸಂಬಂಧ 14ರಂದು ನ್ಯಾಯಾಲಯದಲ್ಲಿ ವಿಚಾರಣೆ ನಿಗದಿಯಾಗಿದೆ. ಕೋರ್ಟ್ ನಿರ್ಧಾರ ಗಮನಿಸಿ ಪ್ರತಿಕ್ರಿಯಿಸಲು ಸಾಧ್ಯ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ನಷ್ಟವಿಲ್ಲ. ಅಗತ್ಯಬಿದ್ದರೆ ಈ ವಿಚಾರವನ್ನು ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಸಿದ್ಧ.

| ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವ

ಮೂರು ಸ್ಥಳ ಗುರುತು

ಅಣೆಕಟ್ಟೆಗಾಗಿ ಸಂಗಮ ಅರಣ್ಯ ಪ್ರದೇಶ ವ್ಯಾಪ್ತಿಯ ಮೇಕೆದಾಟು, ಒಂಟಿಗುಂಡು ಹಾಗೂ ಬೊಮ್ಮಸಂದ್ರ ಸಮೀಪದ ಮಹಾಮಡು ಎಂಬ ಸ್ಥಳವನ್ನು ಅಧಿಕಾರಿಗಳು ಗುರುತಿಸಿದ್ದಾರೆ.