ರಾಡಿಯಲ್ಲಿ ಮಿಂದವರು ಕೆಲವರು, ನೊಂದವರು ಹಲವರು

blank

ರಾಡಿಯಲ್ಲಿ ಮಿಂದವರು ಕೆಲವರು, ನೊಂದವರು ಹಲವರು(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ದ್ವಿತೀಯ ಮಹಾಯುದ್ಧದ ಅಂತ್ಯದೊಂದಿಗೆ ಆರಂಭವಾದ ಸೋವಿಯತ್ ವಿಸ್ತರಣಾವಾದವನ್ನು ತಡೆಗಟ್ಟಲು ಪಶ್ಚಿಮ ಯೂರೋಪಿಯನ್ ಸಹಯೋಗಿಗಳ ಜತೆಗೂಡಿ ಒಂದು ಸೇನಾಕೂಟವನ್ನು ಕಟ್ಟುವ ಸೂಚನೆಯನ್ನು ಅಧ್ಯಕ್ಷ ಟ್ರೂಮನ್ ನೀಡಿದ್ದು 1947ರ ಮಾರ್ಚ್ 11ರಂದು. ಅದೇ ನೀತಿಯನ್ನು ಏಷ್ಯಾಗೂ ವಿಸ್ತರಿಸಿ ವಸಾಹತುಶಾಹಿಯಿಂದ ಹೊರಬರತೊಡಗಿದ್ದ ಪೌರ್ವಾತ್ಯ ರಾಷ್ಟ್ರಗಳಲ್ಲಿ ಸೋವಿಯತ್-ಪ್ರಚೋದಿತ ಕಮ್ಯೂನಿಸ್ಟ್ ಕ್ರಾಂತಿಗಳನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕಾದ ಅಗತ್ಯವನ್ನೂ ಅವರು ಮನಗಂಡಿದ್ದರು. ಹಿಂದೂ ಮಹಾಸಾಗರ ವಲಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಇರುವುದರೊಂದಿಗೆ ಜನಭರಿತ ಹಾಗೂ ಪ್ರಾಕೃತಿಕವಾಗಿ ಸಂಪದ್ಭರಿತವೂ ಆದ ಭಾರತವನ್ನು ತಮ್ಮ ಆ ಕಮ್ಯೂನಿಸ್ಟ್-ವಿರೋಧಿ ಜಾಗತಿಕ ರಣನೀತಿಯಲ್ಲಿ ಅಮೆರಿಕದ ಪ್ರಮುಖ ಸಹಯೋಗಿಯಾಗಿ ಇರಿಸಿಕೊಳ್ಳಬೇಕೆನ್ನವುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಅದಕ್ಕೆ ಸ್ವತಂತ್ರ ಭಾರತದ ಸಹಕಾರ ಸಿಗಲಾರದೆನ್ನುವ ಸೂಚನೆ ಅವರಿಗೆ ಸಿಕ್ಕಿದ್ದು ಬಹಳ ಬೇಗನೆಯೇ.

ಇನ್ನೇನು ಸ್ವತಂತ್ರವಾಗಲಿದ್ದ ಭಾರತದ ಆಂತರಿಮ ಪ್ರಧಾನಮಂತ್ರಿಯಾಗಿದ್ದ ಜವಾಹರ್​ಲಾಲ್ ನೆಹರು 1947ರ ಮಾರ್ಚ್ 21ರಂದು ನವದೆಹಲಿಯಲ್ಲಿ ಕರೆದ ‘ಪ್ರಥಮ ಏಷ್ಯನ್ ಸಮಾವೇಶ’ದಲ್ಲಿ ಉದ್ಘಾಟನಾ ಭಾಷಣ ನೀಡುತ್ತ, ‘ಯಾವುದೇ ಶಕ್ತಿಕೂಟಗಳಿಗೆ ಸೇರದೆ ಅಲಿಪ್ತ ನೀತಿಯನ್ನು ಅನುಸರಿಸುವುದು ಸ್ವತಂತ್ರ ಭಾರತದ ವಿದೇಶ ನೀತಿಯಾಗಿರುತ್ತದೆ’ ಎಂದು ಘೋಷಿಸಿದರು. ಇದಕ್ಕೆ ವಿರುದ್ಧವಾಗಿ ಮಹಮದ್ ಆಲಿ ಜಿನ್ನಾ ತಾವು ಸದ್ಯದಲ್ಲೇ ಗಳಿಸಿಕೊಳ್ಳಲಿರುವ ಪಾಕಿಸ್ತಾನ ಕಮ್ಯುನಿಸ್ಟ್ ನೀತಿಯನ್ನು ಆಳವಡಿಸಿಕೊಂಡು ಅಮೆರಿಕಾಗೆ ಸಹಕಾರಿಯಾಗಿ ನಿಲ್ಲುವುದೆಂದು 1947ರ ಮೇ 2ರಂದು ತಮ್ಮನ್ನು ಭೇಟಿಯಾದ ಇಬ್ಬರು ಅಮೆರಿಕನ್ ರಾಜತಂತ್ರಜ್ಞರಿಗೆ ನೇರವಾಗಿ ಹೇಳಿದರು. ಭಾರತದ ಬದಲು ಪಾಕಿಸ್ತಾನವನ್ನು ಆಯ್ಕೆಮಾಡಿಕೊಳ್ಳಬೇಕಾದ ಅನಿವಾರ್ಯತೆಯ ಪ್ರಾರಂಭಿಕ ಚಿಂತನೆಗಳನ್ನು ವಾಷಿಂಗ್​ಟನ್​ನಲ್ಲಿ ಮೂಡಿಸಿದ್ದು ಈ ಎರಡು ಪ್ರಕರಣಗಳು. ಅಲ್ಲಿಂದಾಚೆಗೆ ಇತಿಹಾಸ ಯಾವ ದಿಕ್ಕಿನಲ್ಲಿ ಸಾಗುತ್ತ ಬಂದಿತೆನ್ನುವುದು ಎಲ್ಲರಿಗೂ ತಿಳಿದಿರುವಂತಹದೇ. ಇಷ್ಟಾಗಿಯೂ, ಭಾರತೀಯ ಸಮಾಜವನ್ನು ಅಮೆರಿಕಾ ಪರವಾಗಿ ಪ್ರಭಾವಿಸುವ ಪ್ರಯತ್ನವನ್ನು ಅಮೆರಿಕಾ ಆರಂಭಿಸಿದ್ದನ್ನು ನಾವು ಗುರುತಿಸಬೇಕು. ಈ ಪ್ರಯತ್ನದ ಒಂದೆರಡು ಪ್ರಮುಖ ಹೆಜ್ಜೆಗಳನ್ನಿಲ್ಲಿ ನೆನಪಿಸಿಕೊಳ್ಳೋಣ.

ಫೋರ್ಡ್ ಫೌಂಡೇಶನ್ ಅಮೆರಿಕಾದಿಂದ ಹೊರಗೆ ತನ್ನ ಶಾಖೆಯನ್ನು ಮೊದಲಿಗೆ ಸ್ಥಾಪಿಸಿದ್ದು ನವದೆಹಲಿಯಲ್ಲಿ, 1952ರಲ್ಲಿ. ಅಮೆರಿಕಾದ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಭಾರತೀಯರಿಗೆ ಫೆಲೋಶಿಪ್ ನೀಡುವುದು ಇದರ ಮುಖ್ಯ ಕಾರ್ಯಕ್ರಮ. ದಶಕದ ನಂತರ ಇದು ಯುಎಸ್​ಎಐಡಿಯ ಒಂದು ಅಘೊಷಿತ ಅಂಗವಾಗಿ ಬದಲಾಗಿಹೋಯಿತು. ‘ಏಷ್ಯನ್ ನೊಬೆಲ್’ ಎಂದು ಕರೆಯಲಾಗುವ ‘ರೇಮನ್ ಮ್ಯಾಗ್​ಸೇಸೇ ಅವಾರ್ಡ್’ ನೀಡುವ ‘ರೇಮನ್ ಮ್ಯಾಗ್​ಸೇಸೇ ಫೌಂಡೇಷನ್’ ಅನ್ನು 1957ರಲ್ಲಿ ಫಿಲಿಪೀನ್ಸ್ ಸರ್ಕಾರದ ಜತೆಗೂಡಿ ಹುಟ್ಟುಹಾಕಿದ್ದು ರಾಕ್​ಫೆಲರ್ ಫೌಂಡೇಶನ್. ಅದು ಅದಾಗಲೇ ಆಯಿಲ್ ಲಾಬಿ ಮತ್ತು ಫಾರ್ವ ಲಾಬಿಯ ಮುಖ್ಯ ಸಂಚಾಲಕನಾಗಿ ಅಮೆರಿಕಾದ ‘ಡೀಪ್ ಸ್ಟೇಟ್’ನ ಪ್ರಮುಖ ಪಾತ್ರಧಾರಿಗಳಲ್ಲಿ ಒಂದಾಗಿದ್ದುದನ್ನು ನೆನಪಿಸಿಕೊಂಡರೆ ಮ್ಯಾಗ್​ಸೇಸೇ ಅವಾರ್ಡ್​ಗಳ ಹಿಂದಿರುವ ಉದ್ದೇಶ ಸ್ಪಷ್ಟವಾದೀತು. ಶಾಂತಿ ಮತ್ತು ಅರ್ಥಶಾಸ್ತ್ರ ವಿಭಾಗಗಳಲ್ಲಿನ ನೊಬೆಲ್ ಪಾರಿತೋಷಕ ಸಹ ಕಳಂಕಪೂರಿತವಾದದ್ದೇ.

ಕೆನಡಿ ಆಡಳಿತ 1961ರಲ್ಲಿ ಯುಎಸ್​ಎಐಡಿಯನ್ನು ಸ್ಥಾಪಿಸಿದ ಸಂದರ್ಭ ಭಾರತ-ಅಮೆರಿಕಾ ಸಂಬಂಧಗಳಲ್ಲಿ ಒಂದು ಮಹತ್ವದ ತಿರುವಿನ ಕಾಲ. 1961ರ ನವೆಂಬರ್ 3ರಂದು ಯುಎಸ್​ಎಐಡಿಯನ್ನು ಚಾಲನೆಗೊಳಿಸಿದ ಮೂರನೆಯ ದಿನ ಅಂದರೆ ನವೆಂಬರ್ 6ರಂದು ಅಧ್ಯಕ್ಷ ಕೆನಡಿ ಪ್ರಧಾನಿ ನೆಹರುರನ್ನು ಭೇಟಿಯಾದರು. ಆ ಭೇಟಿಯಲ್ಲಿ ನೆಹರು ಅಧ್ಯಕ್ಷರೊಂದಿಗಿನ ಮಾತುಕಥೆಗಳಲ್ಲಿ ತೋರಿದ ನಿರಾಸಕ್ತಿ ಮತ್ತು ಪ್ರಥಮ ಮಹಿಳೆ ಜಾಕೆಲೀನ್ ಕೆನಡಿಯವರ ಉಪಸ್ಥಿತಿಯಲ್ಲಿ ತೋರಿದ ಉತ್ಸಾಹ ಮತ್ತು ಆಸಕ್ತಿ ಅಧ್ಯಕ್ಷ ಕೆನಡಿಯವರನ್ನು ಅತೀವವಾಗಿ ಬೇಸರಗೊಳಿಸಿತು. ಯಾವುದೇ ವಿದೇಶಿ ನಾಯಕರೊಂದಿಗಿನ ತಮ್ಮ ‘ಅತ್ಯಂತ ಕೆಟ್ಟ ಭೇಟಿ’ ಇದು ಎಂದು ತಮ್ಮ ಆಪ್ತ ಕಾರ್ಯದರ್ಶಿ ಕಿರಿಯ ಅರ್ಥರ್ ಶ್ಲೇಷಿಂಗರ್ ಅವರೊಂದಿಗೆ ಬೇಸರ ತೋಡಿಕೊಂಡಿದಲ್ಲದೆ, ‘ನೆಹರು ಭಾರತಕ್ಕೆ ತಮ್ಮ ಅಗತ್ಯವನ್ನು ಮೀರಿ ಇನ್ನೂ ಪ್ರಧಾನಮಂತ್ರಿಯಾಗಿ ಉಳಿದುಕೊಂಡಿದ್ದಾರೆ’ ಎಂದು ರಾಜತಂತ್ರಜ್ಞ ಡೇನಿಯಲ್ ಪ್ಯಾಟ್ರಿಕ್ ಮೊಹ್ನಿಹಾನ್ ಅವರಿಗೂ ಹೇಳಿದ ಅಧ್ಯಕ್ಷ ಕೆನಡಿ ನೆಹರು ಸರ್ಕಾರವನ್ನು ನಿರ್ಲಕ್ಷಿಸಿ ಭಾರತೀಯ ಸಮಾಜದೊಂದಿಗೆ ಅಮೆರಿಕಾದ ಸಂಬಂಧಗಳನ್ನು ಬಲಿಷ್ಠಗೊಳಿಸುವ ತೀರ್ವನಕ್ಕೆ ಬಂದರು.

ಅದಕ್ಕಾಗಿ ಯುಎಸ್​ಎಐಡಿಯ ವ್ಯಾಪಕ ಬಳಕೆ ಅವರ ಲೆಕ್ಕಾಚಾರದಲ್ಲಿ ಮುನ್ನೆಲೆಗೆ ಬಂತು ಮತ್ತು ಆ ನಿಟ್ಟಿನಲ್ಲಿ ಕೆಲಸಕಾರ್ಯಗಳೂ ಆರಂಭವಾದವು. ಫೋರ್ಡ್ ಫೌಂಡೇಶನ್ ಮತ್ತು ವಿವಿಧ ಅಮೆರಿಕನ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಭಾರತೀಯರಿಗೆ ನೀಡುವ ಫೆಲೋಶಿಪ್​ಗಳಲ್ಲಿ ವೃದ್ಧಿಯಾಯಿತು. ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿದ್ದ ‘ಯುನೈಟೆಡ್ ಸ್ಟೇಟ್ಸ್ ಇನ್​ಫಮೇಷನ್ ಸರ್ವೀಸ್’ (ಯುಎಸ್​ಐಎಸ್) ಕೇಂದ್ರಗಳ ಮೂಲಕ ಅಮೆರಿಕಾ ಪರವಾದ ಪ್ರಚಾರ ಸಾಮಗ್ರಿಗಳ ವಿತರಣೆಯೂ ವಿಸ್ತಾರಗೊಂಡಿತು. ಹೀಗೆ ಭಾರತೀಯ ಸಮಾಜವನ್ನು ಅಮೆರಿಕಾಗೆ ಹತ್ತಿರವಾಗಿಸುವ ಕಾರ್ಯಕ್ರಮಗಳಿಗೆ ಮತ್ತಷ್ಟು ಚಾಲನೆ ದೊರೆತದ್ದು 1962ರ ಭಾರತ ಚೀನಾ ಯುದ್ಧದ ಪರಿಣಾಮವಾಗಿ. ಅಮೆರಿಕಾದ ಎಚ್ಚರಿಕೆಯನ್ನೂ ಮೀರಿ ಕಮ್ಯೂನಿಸ್ಟ್ ಚೀನಾ ಜತೆ ಚಕ್ಕಂದವಾಡುತ್ತಿದ್ದ ನೆಹರು ಸರ್ಕಾರ ಪಾಠ ಕಲಿತು ಅಮೆರಿಕಾದ ಕಡೆಗೇ ತಿರುಗಿದ್ದು ಆಗ. ಭಾರತದ ಸರ್ಕಾರಕ್ಕೆ ಹತ್ತಿರವಾಗುವ ಅಮೆರಿಕಾದ ಹದಿನೈದು ದೀರ್ಘ ವರ್ಷಗಳ ಪ್ರಯತ್ನ ಆಗ ಫಲ ನೀಡುವ ದಿನಗಳು ಕಾಣಿಸಿಕೊಂಡವು.

ಆದರೆ ಮುಂದಿನ ಒಂದು ವರ್ಷದಲ್ಲಿ ಅಧ್ಯಕ್ಷ ಕೆನಡಿಯವರ ಹತ್ಯೆಯಾಗಿ ಲಿಂಡನ್ ಜಾನ್ಸನ್ ಅಧ್ಯಕ್ಷರಾದ ನಂತರ ಯುಎಸ್​ಎಐಡಿ ಜಾಗತಿಕವಾಗಿ ತನ್ನ ಧನಾತ್ಮಕ ಮುಖವನ್ನು ಪೂರ್ಣವಾಗಿ ಕಳೆದುಕೊಂಡು ಋಣಾತ್ಮಕ ಕಾರ್ಯಯೋಜನೆಗಳ ಹಾದಿಗಿಳಿಯಿತು. ಅದರ ಪರಿಣಾಮ ಭಾರತದ ಮೇಲೂ ಆಯಿತು. ವಿದೇಶಾಂಗ ಮತ್ತು ರಕ್ಷಣಾ ನೀತಿಗಳ ಕುರಿತಂತೆ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿಯವರ ಕೈ ತಿರುಚಲು ಯುಎಸ್​ಎಐಡಿ ನೆರವಿನ ಹಣವನ್ನು ಜಾನ್ಸನ್ ಆಡಳಿತ ಬಳಸಿಕೊಂಡ ಉದಾಹರಣೆಗಳಿವೆ. ನಂತರ ನಿಕ್ಸನ್ ಆಡಳಿತಾವಧಿಯಲ್ಲಿ ಅದು ಇನ್ನಷ್ಟು ಹೆಚ್ಚಾಯಿತು. ಅಧ್ಯಕ್ಷ ರಿಕ್ಸನ್ ಮತ್ತವರ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಹೆನ್ರಿ ಕಿಸಿಂಜರ್ ಅವರ ಎಚ್ಚರಿಕೆ ಹಾಗೂ ಬೆದರಿಕೆಗಳಿಗೆ ವಿರುದ್ಧವಾಗಿ ಪೂರ್ವ ಪಾಕಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಗೆ ಮುಂದಾಗಿ ಪಾಕಿಸ್ತಾನವನ್ನು ತುಂಡರಿಸಿದ ಇಂದಿರಾ ಗಾಂಧಿಯವರ ಕುರಿತಾಗಿ ಅಮೆರಿಕಾಗೆ ಸಹಜವಾಗಿಯೇ ಆಕ್ರೋಶ.

ಹೀಗಾಗಿ ಇಂದಿರಾ ವಿರುದ್ಧ ಪಶ್ಚಿಮದ ಮಾಧ್ಯಮಗಳಲ್ಲಿ ಅಪಪ್ರಚಾರ ಆರಂಭವಾಯಿತು. ಅಮೆರಿಕಾದ ರಾಯಭಾರ ಕಚೇರಿಯಿದ್ದ ನವದೆಹಲಿ ಮತ್ತು ಉಪರಾಯಭಾರ ಕಚೇರಿಗಳಿದ್ದ ಮುಂಬೈ, ಕೊಲ್ಕಾತಾ ಮತ್ತು ಚೆನ್ನೈ ನಗರಗಳ ಹೊರತಾಗಿ ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿದ್ದ ಯುಎಸ್​ಐಎಸ್ ಕೇಂದ್ರಗಳನ್ನು ಇಂದಿರಾ ಸರ್ಕಾರ ಬಂದ್ ಮಾಡಿತು. ಅದರಿಂದೇನೂ ಪ್ರಯೋಜನವಾಗಲಿಲ್ಲ. ಜಾಗತಿಕವಾಗಿ ಯುಎಸ್​ಎಐಡಿ ಮತ್ತು ಸಿಐಎ ಸಹಸ್ರಾರು ಪತ್ರಕರ್ತರನ್ನು ಮತ್ತು ನೂರಾರು ಪತ್ರಿಕೆಗಳನ್ನು ಅದಾಗಲೇ ತನ್ನ ಧನಜಾಲದಲ್ಲಿ ಸೇರಿಸಿಕೊಂಡಾಗಿತ್ತು. ಪರಿಣಾಮ ಇಂದಿರಾ ವಿರುದ್ಧ ಜಾಗತಿಕವಾಗಿ ಉಲ್ಬಣಗೊಂಡ ಅಪಪ್ರಚಾರ ಮತ್ತು ಆಂತರಿಕವಾಗಿ ಇಂದಿರಾ-ವಿರೋಧಿ ಶಕ್ತಿಗಳಿಗೆ ಧನ ಹಾಗೂ ಪ್ರಶಸ್ತಿ ಜಾಲಗಳ ಮೂಲಕ ಯುಎಸ್​ಎಐಡಿ ವ್ಯಾಪಕ ಕುಮ್ಮಕ್ಕು ನೀಡಿತು. ಪರಿಣಾಮವಾಗಿ ಇಂದಿರಾ ಸರ್ಕಾರ ಅಮೆರಿಕಾದಿಂದ ದೂರದೂರ ಸರಿದು ಸೋವಿಯತ್ ಯೂನಿಯನ್​ಗೆ ಹತ್ತಿರವಾಗತೊಡಗಿತು. ಭಾರತದ ರಾಜಕೀಯ ವ್ಯವಸ್ಥೆಗಿಂತಲೂ ಕಮ್ಯೂನಿಸ್ಟ್ ಚೀನಾದ ಸರ್ವಾಧಿಕಾರಿ ವ್ಯವಸ್ಥೆ ಮತ್ತು ಪಾಕಿಸ್ತಾನದ ಸೇನಾ ಸರ್ವಾಧಿಕಾರಿ ವ್ಯವಸ್ಥೆಯನ್ನು ಉತ್ತಮವೆಂದು ಪರಿಗಣಿಸಿ ನಿಕ್ಸನ್ ಸರ್ಕಾರ ಅವುಗಳ ಪರವಾಗಿ ನಿಂತದ್ದು ಅಂತಿಮವಾಗಿ 1971ರ ಆಗಸ್ಟ್​ನಲ್ಲಿ ‘ಭಾರತ-ಸೋವಿಯತ್ ಸ್ನೇಹ ಮತ್ತು ಸಹಕಾರ ಒಪ್ಪಂದ’ಕ್ಕೆ ಕಾರಣವಾಯಿತು. ನಂತರ ‘ನಿರ್ವಿಘ್ನ’ವಾಗಿ ಬಾಂಗ್ಲಾದೇಶದ ಸ್ಥಾಪನೆಗೆ ಇಂದಿರಾ ಅವರಿಗೆ ಸಹಕಾರಿಯಾದದ್ದೇ ಈ ಒಪ್ಪಂದ.

ಆಗ ಮುಖಭಂಗ ಅನುಭವಿಸಿದ ನಿಕ್ಸನ್ ಆಡಳಿತ ಇಂದಿರಾರನ್ನು ಮಣಿಸಲು ಯುಎಸ್​ಎಐಡಿಯನ್ನು ಇನ್ನಷ್ಟು ರೋಷದಿಂದ ಬಳಸತೊಡಗಿತು. ಇಂದಿರಾ ವಿರುದ್ಧ ಆರಂಭವಾದ ಆಂದೋಲನದಲ್ಲಿ ಯುಎಸ್​ಎಐಡಿ ಹಣದ ಪಾತ್ರ ಮತ್ತು ಪ್ರಶಸ್ತಿಗಳ ಪ್ರಭಾವ ದೊಡ್ಡದಾಗಿತ್ತು. ಇಂದಿರಾ ‘ವಿದೇಶಿ ಕೈ’ ಎಂದು ಮತ್ತೆಮತ್ತೆ ಹೇಳುತ್ತಿದ್ದುದು ಅದನ್ನೇ. ಖಲಿಸ್ತಾನ್ ಸಂಚಿಗೆ ಖುದ್ದು ನಿಕ್ಸನ್ ಆಡಳಿತ 1971ರ ನವೆಂಬರ್​ನಿಂದಲೇ ಪೋ›ತ್ಸಾಹ ನೀಡತೊಡಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ತಮ್ಮ ವಿರುದ್ಧ ಅಮೆರಿಕಾದ ಕಾರಸ್ಥಾನ ಹಿಗ್ಗುತ್ತ ಹೋದಷ್ಟೂ ಇಂದಿರಾ ಮಾಸ್ಕೋ ಕಡೆಗೆ ವೇಗವಾಗಿ ಸರಿಯತೊಡಗಿದ್ದು 1970ರ ದಶಕದ ಆದಿಭಾಗದಲ್ಲಿ. ಆ ದಿನಗಳಲ್ಲಿ ಇಂದಿರಾ ಪರವಾಗಿ ನಿಂತ ಏಕೈಕ ರಾಷ್ಟ್ರೀಯ ಸೋವಿಯತ್ ಕೈಗೊಂಬೆ ಎಸ್.ಎ. ಡಾಂಗೆ ಮತ್ತು ಸಿ. ರಾಜೇಶ್ವರ ರಾವ್ ನೇತೃತ್ವದ ಸಿಪಿಐ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿದ ಏಕೈಕ ಪ್ರಮುಖ ಜಾಗತಿಕ ಸಕ್ತಿ ಸೋವಿಯತ್ ಯೂನಿಯನ್.

ತನ್ನ ಬೆಂಬಲಕ್ಕೆ ಪ್ರತಿಯಾಗಿ ಭಾರತದ ಶಿಕ್ಷಣ, ಮಾಧ್ಯಮ, ಸಂಸ್ಕೃತಿ ಚಿಂತನೆ ಕ್ಷೇತ್ರಗಳನ್ನು ತನ್ನ ಹಸ್ತಕರ ಕೈಗೊಪ್ಪಿಸುವಂತೆ ಕ್ರೆಮ್ಲಿನ್ ಇಂದಿರಾರ ಕೈ ತಿರುಚಿತು. ಪರಿಣಾಮವಾಗಿ ಆ ಕ್ಷೇತ್ರಗಳೆಲ್ಲವೂ ಎಡಪಂಥೀಯರ ಕೈಗೆ ಬಿದ್ದವು. ಅದರಿಂದಾದ ಅನಾಹುತಗಳಿಗೆ ಮಿತಿಯಿಲ್ಲ. ನಮ್ಮ ಇತಿಹಾಸ ತಿರುಚಲ್ಪಟ್ಟಿತು, ನಮ್ಮ ಮೌಲ್ಯಗಳು ಅನಾದರ ಹಾಗೂ ಅಗೌರವಕ್ಕೆ ತುತ್ತಾದವು, ಸೆಕ್ಯೂಲರಿಸಂ 1976ರಲ್ಲಿ ಅಧಿಕೃತವಾಗಿ ಸಂವಿಧಾನಕ್ಕೆ ಸೇರಿ ಅದರ ಮುಖವಾಡದಲ್ಲಿ ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ಸರ್ಕಾರಗಳ ನೀತಿಯಾಯಿತು, ಹಿಂದೂಗಳು ತಮ್ಮ ದೇಶದಲ್ಲೇ ನಿಂದನೆ, ನಿರ್ಲಕ್ಷ್ಯ ಹಾಗೂ ತಿರಸ್ಕಾರಕ್ಕೆ ಗುರಿಯಾಗತೊಡಗಿದರು. ಇದೆಲ್ಲವನ್ನೂ ಸರಿಪಡಿಸಲು ಮೋದಿ ಸರ್ಕಾರ ಇಂದು ಹೆಣಗುತ್ತಿದೆ.

ಯುಎಸ್​ಎಐಡಿ ಮತ್ತು ಸಿಐಎ ಜತೆ ಸಂಪರ್ಕವಿದ್ದುಕೊಂಡು ಇಂದಿರಾ ವಿರುದ್ಧ ಆಂದೋಲನದಲ್ಲಿ ತೊಡಗಿದ್ದ ಕೆಲವರು ನಂತರ ಬಂದ ಜನತಾ ಸರ್ಕಾರದಲ್ಲಿ ಸ್ಥಾನ ಪಡೆದರು. ಖುದ್ದು ಪ್ರಧಾನಿ ಮೊರಾರ್ಜಿ ದೇಸಾಯಿ ಸಿಐಎ ಪೇರೋಲ್​ನಲ್ಲಿದ್ದರು ಎಂದು ಅಮೆರಿಕಾದ ಪತ್ರಕರ್ತ ಸೇಮರ್ ಹರ್ಶ್ ಲಿಖಿತವಾಗಿಯೇ ಆಪಾದಿಸಿದ್ದು ಮತ್ತು ಅದು ಸುಳ್ಳು ಎಂದು ಅಮೆರಿಕಾದ ನ್ಯಾಯಾಲಯದ ಮುಂದೆ ಸಾಬೀತುಪಡಿಸಲು ದೇಸಾಯಿ ವಿಫಲರಾದದ್ದು ನಾವು ಗಂಭೀರವಾಗಿ ಗಮನಿಸಬೇಕಾದ ವಿಷಯ. ಇದೇ ದೇಸಾಯಿ ಪಾಕಿಸ್ತಾನದ ಅಣು ರಿಯಾಕ್ಟರ್ ಅನ್ನು ನಾಶಪಡಿಸಲು ಇಂದಿರಾ ಆದೇಶದ ಮೇರೆಗೆ ನಮ್ಮ ‘ರೀಸರ್ಚ್ ಆಂಡ್ ಅನ್ಯಾಲಿಸಿಸ್’ (ಆರ್​ಎಡಬ್ಲೂ್ಯ, ರಾ) ತಯಾರಿಸಿದ್ದ ಯೊಜನೆಯನ್ನು ಪಾಕ್ ಸರ್ವಾಧಿಕಾರಿ ಜಿಯಾ-ಉಲ್-ಹಕ್​ಗೆ ತಿಳಿಸಿ, ಆತ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಅಣ್ವಸ್ತ್ರ ಯೋಜನೆಯನ್ನು ರಹಸ್ಯವಾಗಿ ಮುಂದುವರಿಸಲು ಕಾರಣವಾದದ್ದು ಇನ್ನೊಂದು ದೇಶದ್ರೋಹಿ ಕೃತ್ಯ. ಅವರಿಗೆ ನಮ್ಮ ‘ಭಾರತರತ್ನ’ಕ್ಕೆ ಸಮಾನವಾದ ತನ್ನ ಅತ್ಯುನ್ನತ ನಾಗರಿಕ ಗೌರವ ‘ನಿಶಾನ್-ಎ-ಪಾಕಿಸ್ತಾನ್’ ಅನ್ನು ಪಾಕ್ ಸರ್ಕಾರ ಕೊಟ್ಟದ್ದು ಈ ‘ಮಹಾನ್ ಸೇವೆ’ಗೇ ಇರಬೇಕು. ಆದರೆ ಅದಕ್ಕಾಗಿ ಭಾರತ ತೆತ್ತ ಬೆಲೆ!

1970ರ ದಶಕದಲ್ಲಿ ದೇಶ ಅನುಭವಿಸಿದ ದುರಂತಗಳಿಗೆ ಯಾರನ್ನು ದೂಷಿಸಬೇಕು? ತನ್ನ ಜಾಗತಿಕ ರಾಜಕಾರಣಕ್ಕಾಗಿ ಪಾಕಿಸ್ತಾನ ಮತ್ತು ಚೀನಾ ಜತೆ ನಿಂತು ಭಾರತಕ್ಕೆ ವಿರುದ್ಧವಾಗಿ ನಿಂತ ನಿಕ್ಸನ್ ಆಡಳಿತವನ್ನೇ? ಅದರ ಕೈಗೊಂಬೆಯಾಗಿ ಇಂದಿರಾ ವಿರುದ್ಧ ಆಂದೋಲನಕ್ಕೆ ಕುಮ್ಮಕ್ಕು ನೀಡಿದ ಯುಎಸ್​ಎಐಡಿಯನ್ನೇ? ಅದರ ಹಣ ತಿಂದು ತಮ್ಮ ಬೇಳೆ ಬೇಯಿಸಿಕೊಳ್ಳಹೊರಟ ಇಂದಿರಾ-ವಿರೋಧಿ ಅಧಿಕಾರಲಾಲಸಿ ಮಾಜಿ ಕಾಂಗ್ರೆಸ್ಸಿಗರನ್ನೇ? ಅವರ ನಿಜವಾದ ಬಣ್ಣವನ್ನು ಗುರುತಿಸಲಾಗದೆ ಹೋದ ಆರ್​ಎಸ್​ಎಸ್ ಅನ್ನೇ? ಅವರನ್ನು ಮುಂದಿಟ್ಟುಕೊಂಡು ಸರ್ಕಾರ ರಚಿಸಿದ ಭಾರತೀಯ ಜನಸಂಘವನ್ನೇ? ಒಟ್ಟಿನಲ್ಲಿ ತಪ್ಪನ್ನು ಎಲ್ಲರೂ ಮಾಡಿದ್ದಾರೆ.

ಇಂದು ಅಧಿಕಾರಲಾಲಸಿ ದೇಶದ್ರೋಹಿ ಮಾಜಿ ಕಾಂಗ್ರೆಸ್ಸಿಗರು ರಾಷ್ಟ್ರ ರಾಜಕಾರಣದ ಮುಂಚೂಣಿಯಲ್ಲಿಲ್ಲ. ಅಂತಹವರನ್ನು ಗುರುತಿಸಿ ರಾಷ್ಟ್ರನಾಯಕತ್ವದಿಂದ ದೂರವಿಡುವ ವಿವೇಕವನ್ನು ಹೊಂದಿರುವುದಲ್ಲದೆ ರಾಷ್ಟ್ರಹಿತ ಕಾಯುವವರನ್ನು ಮುನ್ನೆಲೆಯಲ್ಲಿ ನಿಲ್ಲಿಸುವ ಸತ್ಕಾರ್ಯದಲ್ಲಿ ಆರ್​ಎಸ್​ಎಸ್ ತೊಡಗಿದೆ. ಭಾರತೀಯ ಜನಸಂಘ ಹೊಸ ರೂಪ ತಳೆದು, ಮತ್ತಾರೋ ಸ್ವಾರ್ಥಿಗಳ ಹಿಂಬಾಲಕನಾಗದೆ ತಾನೇ ಮುಂದಾಳಾಗಿ ನಿಂತು ರಾಷ್ಟ್ರದ ಸಮಾಜೋ-ರಾಜಕೀಯ ಗತಿಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಪ್ರಬುದ್ಧತೆ ಪಡೆದಿದೆ. ಮುಖ್ಯವಾಗಿ ಭಾರತೀಯ ಮತದಾರ ಇದೆಲ್ಲಕ್ಕೂ ಅವಕಾಶ ನೀಡುತ್ತಿದ್ದಾನೆ.

ಆದರೆ, ಯುಎಸ್​ಎಐಡಿ ತಿಂಗಳ ಹಿಂದಿನವರೆಗೂ ಇತ್ತು, ರಾಡಿಯೆಬ್ಬಿಸುವ ತನ್ನ ಕುಕಾರ್ಯದಲ್ಲಿ ತೊಡಗಿಯೇ ಇತ್ತು, ದೇಶದಲ್ಲಾಗುತ್ತಿರುವ ಎಲ್ಲ ಧನಾತ್ಮಕ ಬೆಳವಣಿಗೆಗಳನ್ನು ತಡೆಯಲು ಇನ್ನಿಲ್ಲದ ಆಟಗಳನ್ನು ಆಡುತ್ತಿತ್ತು. ಅದೀಗ ಐಸಿಯುಗೆ ಹೊಗಿರಬಹುದು, ಆದರೆ ಅದರ ಕೆಟ್ಟ ಸಂತಾನಗಳು ದೇಶದ ಒಳಗೆ ಹೊರಗೆ ಇನ್ನೂ ಇವೆ. ಅವಿನ್ನೂ ಸೋಲು ಒಪ್ಪಿಕೊಂಡಿಲ್ಲ. ಇದನ್ನು ನಿಮ್ಮ ಮುಂದಿಡಲು ಲೇಖನಸರಣಿಯನ್ನು ಇನ್ನೊಂದು ವಾರಕ್ಕೆ ಮುಂದುವರಿಸಲೇಬೇಕಾದ ಅನಿವಾರ್ಯತೆಗೆ ನಾನು ಒಳಗಾಗಿದ್ದೇನೆ.

 

Share This Article

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…

ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್​ ಯಾವುದು ಉತ್ತಮ! | Better In Summer

Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ…

ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ! ಅಕಸ್ಮಾತ್​ ನೀರು ಕುಡಿದ್ರೆ ಏನಾಗುತ್ತದೆ ಗೊತ್ತಾ? Fruits

Fruits: ಕೆಲವು ಸಂದರ್ಭಗಳಲ್ಲಿ, ಕೆಲವು ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಅತಿಸಾರದ ಅಪಾಯ ಹೆಚ್ಚಾಗುತ್ತದೆ.…