ಈ ಬಾರಿ ಮತದಾನ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದ ವಿರಾಟ್​ ಕೊಹ್ಲಿ ವೋಟ್​ ಹಾಕುವುದು ಎಲ್ಲಿ ಗೊತ್ತಾ?

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಿಲ್ಲ ಎಂದು ಹಲವು ಪ್ರಮುಖ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಅನುಷ್ಕಾ ಶರ್ಮ ಅವರನ್ನು ವರಿಸಿದ ನಂತರದಲ್ಲಿ ಮುಂಬೈಗೆ ಸ್ಥಳಾಂತರಗೊಂಡಿರುವ ವಿರಾಟ್​ ಕೊಹ್ಲಿ, ತಮ್ಮ ಮನೆಯ ವಿಳಾಸ ಬದಲಾಗಿರುವ ಬಗ್ಗೆ ಸ್ಥಳೀಯ ಆಡಳಿತ ಸಂಸ್ಥೆಯಲ್ಲಿನ ಮತದಾರ ನೋಂದಣಿ ಕೇಂದ್ರಕ್ಕೆ ಮಾಹಿತಿ ನೀಡಿ, ವಿಳಾಸ ಬದಲಿಸಿಕೊಳ್ಳದಿರುವುದು ಇದಕ್ಕೆ ಕಾರಣವಾಗಿತ್ತು.

ಆಗಿದ್ದೇನೆಂದರೆ, ವಿರಾಟ್​ ಕೊಹ್ಲಿ ಗುರ್​ಗಾಂವ್​ನಿಂದ ಮುಂಬೈನ ವರ್ಲಿ ಬಡಾವಣೆಗೆ ಮನೆ ಬದಲಿಸಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆಯಲ್ಲಿನ ಮತದಾರ ನೋಂದಣಿ ಕೇಂದ್ರದಲ್ಲಿ ವಿಳಾಸ ಬದಲಾವಣೆ ಕೋರಿ ಅರ್ಜಿ ಸಲ್ಲಿಸಬೇಕಿತ್ತು. ಆಗ ದೆಹಲಿ ವಿಳಾಸದಲ್ಲಿದ್ದ ಅವರ ಮತದಾರರ ಚೀಟಿ ಮುಂಬೈಗೆ ವರ್ಗಾವಣೆಗೊಳ್ಳುತ್ತಿತ್ತು. ಮಾ.30ರೊಳಗೆ ಅವರು ಈ ಅರ್ಜಿ ಸಲ್ಲಿಸಿ, ಮತದಾರರ ಚೀಟಿಯನ್ನು ವರ್ಗಾಯಿಸಿಕೊಳ್ಳಬೇಕಿತ್ತು. ಆದರೆ ಅವರು ಮಾ.30ರ ನಂತರದಲ್ಲಿ ವಿಳಾಸ ಬದಲಾವಣೆ ಕೋರಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಅವಧಿ ಮೀರಿದ ಬಳಿಕ ಸಲ್ಲಿಸಲಾಗಿದೆ. ಆದ್ದರಿಂದ, ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಮತದಾರ ನೋಂದಣಿ ಕೇಂದ್ರದ ಅಧಿಕಾರಿಗಳು ಹೇಳಿದ್ದರು. ಹಾಗಾಗಿ ಈ ಬಾರಿ ಅವರು ಮತಚಲಾಯಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆ ವೇಳೆಗೆ ಅರ್ಜಿಯನ್ನು ಪರಿಗಣಿಸಿ, ವಿಳಾಸದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಡುವುದಾಗಿ ಹೇಳಿತ್ತು. ಈ ಸಂಗತಿ ಕೊಹ್ಲಿ ಹಾಗೂ ಅವರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು. ಮಾಧ್ಯಮಗಳು ಕೂಡ ಇದೇ ವರದಿಗಳನ್ನು ಪ್ರಕಟಿಸಿದ್ದವು.

ಆದರೆ ಈಗ ವಿರಾಟ್​ ಕೊಹ್ಲಿ ತಾವು ಮೊದಲು ವಾಸವಾಗಿದ್ದ ಗುರ್​ಗಾಂವ್​ ಲೋಕಸಭಾ ಕ್ಷೇತ್ರದಿಂದಲೇ ಮತ ಚಲಾಯಿಸಬಹುದಾಗಿದೆ. ಈ ವಿಷಯವನ್ನು ಕೊಹ್ಲಿ ಅವರೇ ತಿಳಿಸಿದ್ದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮತದಾರರ ಚೀಟಿಯನ್ನು ಶೇರ್​ ಮಾಡಿಕೊಂಡಿದ್ದಾರೆ. ಮೇ 12ಕ್ಕೆ ಗುರ್​ಗಾಂವ್​ನಲ್ಲಿ ನಾನೂ ವೋಟು ಹಾಕುತ್ತೇನೆ. ನೀವು ಎಂಬ ಕ್ಯಾಪ್ಷನ್​ ಹಾಕಿದ್ದಾರೆ.

ವಿರಾಟ್​ ಕೊಹ್ಲಿಯವರ ಕುಟುಂಬಸ್ಥರು ಇನ್ನೂ ಗುರ್​ಗಾಂವ್​ನಲ್ಲಿ ವಾಸವಾಗಿದ್ದಾರೆ. ಹಾಗೇ ಅಲ್ಲಿನ ಮತದಾರರ ಪಟ್ಟಿಯಲ್ಲಿ ವಿರಾಟ್​ ಅವರ ಹೆಸರೂ ಇದೆ. ಪ್ರಧಾನಿ ಮೋದಿಯವರು ವಿರಾಟ್​ ಕೊಹ್ಲಿ ಸೇರಿ ಹಲವು ಸೆಲೆಬ್ರಿಟಿಗಳಿಗೆ ನೀವೂ ಮತದಾನ ಮಾಡಿ, ಅಭಿಮಾನಿಗಳನ್ನೂ ಹುರಿದುಂಬಿಸಿ ಎಂದು ಈ ಮೊದಲು ಹೇಳಿದ್ದರು.