ಬಿಇಒ ಕಚೇರಿಗೆ ಮುಕ್ತಿ ಎಂದು?

ರಟ್ಟಿಹಳ್ಳಿ: ರಟ್ಟಿಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೊಷಿಸಿ 2 ವರ್ಷ ಕಳೆಯುತ್ತ ಬಂದರೂ ಇಲ್ಲಿನ ಜನತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸೇವೆ ಲಭ್ಯವಾಗಿಲ್ಲ. ಕಾರ್ಯಾಲಯವು ನಾಮಫಲಕಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ.

ಅಖಂಡ ಹಿರೇಕೆರೂರು ತಾಲೂಕು ಒಟ್ಟು 126 ಗ್ರಾಮಗಳನ್ನು ಒಳಗೊಂಡಿತ್ತು. ಆಡಳಿತಾತ್ಮಕ ಅನುಕೂಲತೆ ದೃಷ್ಟಿಯಿಂದ ಸರ್ಕಾರ ರಟ್ಟಿಹಳ್ಳಿಯನ್ನು ಪ್ರತ್ಯೇಕ ತಾಲೂಕನ್ನಾಗಿ ಘೊಷಿಸಿ 63 ಗ್ರಾಮಗಳನ್ನು ನೂತನ ತಾಲೂಕಿನ ವ್ಯಾಪ್ತಿಗೆ ಒಳಪಡಿಸಿದೆ. ಈಗಾಗಲೇ ರಟ್ಟಿಹಳ್ಳಿ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಮೈದಾನದಲ್ಲಿ ಪ್ರತ್ಯೇಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ನಿಗದಿಪಡಿಸಿ ನಾಮಫಲಕ ಅಳವಡಿಸಲಾಗಿದೆ. ಆದರೆ, ಕಚೇರಿ ಬಾಗಿಲು ಮಾತ್ರ ಇಲ್ಲಿಯವರೆಗೂ ತೆರೆದಿಲ್ಲ. ಹೀಗಾಗಿ, ಈ ಭಾಗದ ಜನರಿಗೆ ಶೈಕ್ಷಣಿಕ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ.

ತಪ್ಪದ ಅಲೆದಾಟ: ಪಟ್ಟಣದಲ್ಲಿ ಬಿಇಒ ಕಚೇರಿಯನ್ನು ಸರ್ಕಾರಿ ಶಾಲೆ ಮೈದಾನದಲ್ಲಿ ನಿಗದಿಪಡಿಸಿದಾಗ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂತೋಷಪಟ್ಟಿದ್ದರು. ಸುಲಭವಾಗಿ ಶೈಕ್ಷಣಿಕ ಸೌಲಭ್ಯ ದೊರೆಯುತ್ತದೆ ಎಂದು ನಿರಾಳರಾಗಿದ್ದರು. ಆದರೆ, ಇಲ್ಲಿಯವರೆಗೆ ಕಚೇರಿ ಕಾರ್ಯಾರಂಭವಾಗದಿರುವುದು ನಿರಾಸೆ ಮೂಡಿಸಿದೆ.

ರಟ್ಟಿಹಳ್ಳಿ ತಾಲೂಕಿನ ಗಡಿ ಭಾಗದ ಹಳ್ಳೂರ, ಬೂಳ್ಳಾಪುರ, ಕಿರಗೇರಿ, ಅಣಜಿ, ನಗುವಂದ, ಗುಡ್ಡದಮಾದಾಪುರ ಸೇರಿ ಅನೇಕ ಗ್ರಾಮಗಳು ಹಿರೇಕೆರೂರಿನಿಂದ 30 ಕಿ.ಮೀ. ದೂರದಲ್ಲಿವೆ. ಪಟ್ಟಣದಲ್ಲಿ ಕಾರ್ಯಾಲಯ ಇದ್ದರೂ ಗ್ರಾಮೀಣ, ಮಾಧ್ಯಮ ಹಾಗೂ ವ್ಯಾಸಂಗ ಸಂಬಂಧಿಸಿದ ವಿವಿಧ ನಮೂನೆಯ ಪ್ರಮಾಣಪತ್ರಗಳಿಗೆ ಬಿಇಒ ಸಹಿ ಪಡೆಯಲು ವಿದ್ಯಾರ್ಥಿಗಳು ದೂರದ ಹಿರೇಕೆರೂರಿಗೆ ತೆರಳುವ ಅನಿವಾರ್ಯತೆ ಎದುರಾಗಿದೆ. ಶಾಲೆಗಳಿಗೆ ಅವಶ್ಯವಿರುವ ಪಠ್ಯಪುಸ್ತಕ, ಸಮವಸ್ತ್ರ ಸೇರಿ ವಿವಿಧ ನಮೂನೆಯ ದಾಖಲಾತಿಗಳಿಗೆ ಈ ಭಾಗದ ಶಿಕ್ಷಕರು ಹಿರೇಕೆರೂರಿಗೆ ಅಲೆದಾಡಬೇಕಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.

ಸೌಲಭ್ಯ ವಂಚಿತ: ನೂತನ ತಾಲೂಕಿನಲ್ಲಿ ಬಿಇಒ ಕಚೇರಿ ಪ್ರಾರಂಭವಾಗಿದ್ದರೆ ಸರ್ಕಾರದಿಂದ ಅನೇಕ ಶೈಕ್ಷಣಿಕ ಸೌಲಭ್ಯಗಳು ಒದಗಿಬರುತ್ತಿದ್ದವು. ಆದರೆ, ಕಚೇರಿ ಕಾರ್ಯಾರಂಭಿಸದ ಕಾರಣ ಹಲವು ಸೌಲಭ್ಯಗಳು ಕೈಬಿಟ್ಟು ಹೋಗುತ್ತಿವೆ. 2 ವರ್ಷದ ಹಿಂದೆ ತಾಲೂಕಿಗೆ ಒಂದು ಮೀಸಲಾಗಿದ್ದ ಕರ್ನಾಟಕ ಪಬ್ಲಿಕ್ ಶಾಲೆ ಹಿರೇಕೆರೂರು ತಾಲೂಕಿನಲ್ಲಿ ಪ್ರಾರಂಭವಾಗಿದೆ. ಇತ್ತೀಚೆಗೆ ಸರ್ಕಾರ ಪ್ರಾರಂಭಿಸಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಕೂಡ ರಟ್ಟಿಹಳ್ಳಿಗೆ ಒಲಿದುಬರಲಿಲ್ಲ. ಈ ಹಿಂದೆ ಮಂಜೂರಾಗಿದ್ದ 4 ಶಾಲೆಗಳಲ್ಲಿ ಹಿರೇಕೆರೂರು ತಾಲೂಕಿಗೆ 3 ಮತ್ತು ರಟ್ಟಿಹಳ್ಳಿ ತಾಲೂಕಿನ ಕಡೂರ ಗ್ರಾಮಕ್ಕೆ 1 ನೀಡಲಾಗಿದೆ. ದೊಡ್ಡ ಪಟ್ಟಣ ರಟ್ಟಿಹಳ್ಳಿಗೆ ಒಂದೇ ಒಂದು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ನೀಡದಿರುವುದು ಈ ಭಾಗದ ಶಿಕ್ಷಣ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರ ಹೆಸರಿಗೆ ಮಾತ್ರ ನೂತನ ತಾಲೂಕು ಎಂಬ ಹಣೆಪಟ್ಟಿ ಕೊಟ್ಟಿದ್ದು ಬಿಟ್ಟರೆ, ಯಥಾಸ್ಥಿತಿ ಇದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಕಾರ್ಯಾಲಯ ಶೀಘ್ರ ಕಾರ್ಯಾರಂಭಿಸುವಂತೆ ಮಾಡಬೇಕು ಎಂದು ತಾಲೂಕಿನ ಜನರು ಒತ್ತಾಯಿಸಿದ್ದಾರೆ.ಸರ್ಕಾರ ರಟ್ಟಿಹಳ್ಳಿ ಬಿಇಒ ಕಚೇರಿಗೆ ಯಾವುದೇ ಹುದ್ದೆಗಳನ್ನು ಮಂಜೂರು ಮಾಡಿಲ್ಲ. ಆದ್ದರಿಂದ, ಕಚೇರಿಯನ್ನು ಇಲ್ಲಿಯವರೆಗೆ ಪ್ರಾರಂಭಿಸಿಲ್ಲ. ಪ್ರಸ್ತುತ 2 ತಾಲೂಕುಗಳಲ್ಲಿ ನಾನೇ ಕಾರ್ಯ ನಿರ್ವಹಿಸುತ್ತಿದ್ದೇನೆ. ಸರ್ಕಾರ ಹುದ್ದೆಗಳನ್ನು ಮಂಜೂರು ಮಾಡಿದ ತಕ್ಷಣ ರಟ್ಟಹಳ್ಳಿಯಲ್ಲಿ ಬಿಇಒ ಕಚೇರಿ ಪ್ರಾರಂಭಿಸಲಾಗುವುದು.
| ಸಿದ್ದಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಹಿರೇಕೆರೂರು

Leave a Reply

Your email address will not be published. Required fields are marked *