ಮೆಸೇಜಿಂಗ್​ ಆ್ಯಪ್​ ದುರ್ಬಳಕೆಯಾಗದಂತೆ ತಡೆಯಲು ಅಗತ್ಯ ಕ್ರಮ: ವಾಟ್ಸ್ಆ್ಯಪ್​

ನವದೆಹಲಿ: ವಾಟ್ಸ್​ಆ್ಯಪ್​ ವೇದಿಕೆ ದುರ್ಬಳಕೆಯಾಗದಂತೆ ತಡೆಯಲು ನಾವು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಾಟ್ಸ್​ಆ್ಯಪ್​ ಕಂಪನಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಅದರಲ್ಲೂ ಮುಖ್ಯವಾಗಿ ವಾಟ್ಸ್ಆ್ಯಪ್​ ಮೂಲಕ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಸೇರಿದಂತೆ ಕೆಲವೊಂದು ವದಂತಿಗಳು ಜನರ ಮಧ್ಯೆ ಹರಿದಾಡುತ್ತಿವೆ. ಇದರಿಂದಾಗಿ ಜನರು ಮಕ್ಕಳ ಕಳ್ಳರು ಎಂಬ ಶಂಕೆಯ ಮೇರೆಗೆ ಹಲವರನ್ನು ಹೊಡೆದು ಕೊಂದಿದ್ದರು. ಈ ಹಿನ್ನೆಲೆಯಲ್ಲಿ ವದಂತಿಗಳು, ಬೇಜವಾಬ್ದಾರಿಯುತ ಮತ್ತು ಸ್ಫೋಟಕ ಸಂದೇಶಗಳು ವೈರಲ್​ ಆಗುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ವಾಟ್ಸ್​ಆ್ಯಪ್​ ಕಂಪನಿಗೆ ಮಂಗಳವಾರ ನೋಟಿಸ್​ ನೀಡಿತ್ತು.

ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡಿದ್ದ ನೋಟಿಸ್​ಗೆ ವಾಟ್ಸ್​ಆ್ಯಪ್​ ಕಂಪನಿ ಬುಧವಾರ ಪ್ರತಿಕ್ರಿಯೆ ನೀಡಿದೆ. ವಾಟ್ಸ್​ಆ್ಯಪ್​ ಜನರ ಸುರಕ್ಷತೆಯನ್ನು ಕಾಪಾಡಲು ಬದ್ಧವಾಗಿದೆ. ಹಾಗಾಗಿ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆ್ಯಪ್​ ಅಭಿವೃದ್ಧಿ ಪಡಿಸಿದ್ದೇವೆ. ಸುಳ್ಳು ಸುದ್ದಿಗಳು, ವದಂತಿಗಳು ಹಬ್ಬದಂತೆ ತಡೆಯಲು ತಂತ್ರಜ್ಞಾನ ಕಂಪನಿ, ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕಂಪನಿ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​​)