ವಾಟ್ಸ್​ಆ್ಯಪ್​ನಲ್ಲಿ ಸೀರೆ ವ್ಯಾಪಾರ

| ಪಲ್ಲವಿ ಕುಲಕರ್ಣಿ

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ದೊಡ್ಡ ಉದ್ಯಮಿಯಾದ ಮಹಿಳೆ ಚೆನ್ನೈನ ಷಣ್ಮುಗ ಪ್ರಿಯಾ. ಎಲ್ಲರೂ ವಾಟ್ಸ್​ಆಪ್​ನಲ್ಲಿ ಜೋಕುಗಳನ್ನು ಓದುತ್ತ ಸಮಯ ಕಳೆಯುತ್ತಿದ್ದರೆ ಈಕೆ ಮಾತ್ರ ಕೋಟ್ಯಂತರ ಸೀರೆಗಳನ್ನು ಮಾರಾಟ ಮಾಡಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಒಂದೇ ಜಾಗದಲ್ಲಿ ಕುಳಿತು ವಾಟ್ಸ್​ಆಪ್ ಮೂಲಕವೇ ವಿದೇಶಕ್ಕೂ ಮಾರುಕಟ್ಟೆ ವಿಸ್ತರಿಸಿದ ಹೆಗ್ಗಳಿಕೆ ಪ್ರಿಯಾರದ್ದು.

ಸಾಮಾಜಿಕ ಜಾಲತಾಣಗಳು ಎರಡು ಅಂಚಿನ ಕತ್ತಿಯಂತೆ. ಅತಿಯಾಗಿ ಬಳಸಿದರೆ ಜೀವನವನ್ನೇ ಹಾಳು ಮಾಡುತ್ತವೆ. ಸಕಾರಾತ್ಮಕವಾಗಿ ಬಳಸಿದರೆ ಬೆಳವಣಿಗೆಗೂ ಆಧಾರವಾಗುತ್ತವೆ. ಇದಕ್ಕೆ ಸಾಕ್ಷಿ ಚೆನ್ನೈನ ಯಶಸ್ವಿ ಉದ್ಯಮಿ ಷಣ್ಮುಗ ಪ್ರಿಯಾ. ವಾಟ್ಸ್​ಆಪ್​ನಲ್ಲೇ ಸೀರೆಗಳ ಮಾರಾಟ ಮಾಡಿ ಆರ್ಥಿಕ ಬಲ ಪಡೆದುಕೊಂಡ ಹೆಗ್ಗಳಿಕೆ ಇವರದ್ದು. ವಾಟ್ಸ್​ಆಪ್ ಅಧ್ಯಯನದ ಪ್ರಕಾರ, ಇವರು ಇದುವರೆಗೆ 28 ಕೋಟಿ ರೂ. ಮೌಲ್ಯಕ್ಕೂ ಹೆಚ್ಚಿನ ಸೀರೆಗಳನ್ನು ಮಾರಾಟ ಮಾಡಿದ್ದಾರೆ!

ಸಾಮಾನ್ಯ ದಿನಗಳಲ್ಲಿ ದಿನಕ್ಕೆ 50 ರಿಂದ 80 ಸೀರೆಗಳ ಮಾರಾಟ ಮಾಡುವ ಇವರು, ಹಬ್ಬದ ದಿನಗಳಲ್ಲಿ ನೂರಕ್ಕೂ ಅಧಿಕ ಸೀರೆಗಳನ್ನು ಮಾರುತ್ತಾರೆ. ದೀಪಾವಳಿ ಹೊತ್ತಿನಲ್ಲಿ ಒಂದು ತಿಂಗಳಿಗೆ 22 ಲಕ್ಷ ಮೌಲ್ಯದ ಸೀರೆಗಳ ವ್ಯಾಪಾರವಾಗುತ್ತದೆ. ಇವರ 2016-17ರ ಆದಾಯವು 2.4 ಕೋಟಿಯಾಗಿದ್ದು, ಇತರ ದಿನಗಳಲ್ಲಿ ಸರಾಸರಿ 12ರಿಂದ 15 ಲಕ್ಷ ಮೌಲ್ಯದ ಸೀರೆಗಳು ಮಾರಾಟವಾಗುತ್ತವೆ! ಪ್ರಿಯಾ ಈ ವ್ಯಾಪಾರದಲ್ಲಿ ಶೇ. 10ರಷ್ಟು ಲಾಭಾಂಶವನ್ನು ಮರುಮಾರಾಟಗಾರರಿಗೂ ಹಂಚಿಕೆ ಮಾಡುತ್ತಾರೆ. ಈ ಮೂಲಕ, ಕೇವಲ ತಮ್ಮ ಜೀವನವನ್ನಷ್ಟೇ ಅಭಿವೃದ್ಧಿಗೊಳಿಸಿಕೊಳ್ಳದೆ ಇತರ ಮಹಿಳೆಯರ ಬದುಕನ್ನೂ ಉಜ್ವಲಗೊಳಿಸಿದ್ದಾರೆ. ಅವರನ್ನು ಸಹ ಆರ್ಥಿಕವಾಗಿ ಸದೃಢಗೊಳಿಸಿದ್ದಾರೆ.

2014ರಲ್ಲಿ ಕುಟುಂಬ ಹಾಗೂ ಸ್ನೇಹಿತರ ವಾಟ್ಸ್​ಆಪ್ ಗುಂಪಿನ ಮೂಲಕ ಪ್ರಾರಂಭವಾದ ಈ ಸೀರೆ ವಹಿವಾಟು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈಗ ಪ್ರಿಯಾ ತಮ್ಮದೇ ಆದ ಸೀರೆ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆ. ಕೇವಲ ಭಾರತಕ್ಕೆ ಸೀಮಿತವಾಗಿದ್ದ ವ್ಯಾಪಾರ ವಹಿವಾಟನ್ನು ಇಂಗ್ಲೆಂಡ್, ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳಿಗೂ ವಿಸ್ತರಿಸಿದ್ದಾರೆ.

ಅತ್ತೆಯೇ ಸ್ಪೂರ್ತಿ: ಪ್ರಿಯಾಳ ಈ ವ್ಯಾಪಾರಕ್ಕೆ ಸ್ಪೂರ್ತಿ, ಮನೆಮನೆಗೆ ಹೋಗಿ ಸೀರೆ ಮಾರುತ್ತಿದ್ದ ಅವರ ಅತ್ತೆ. ಆದರೆ, ದುರದೃಷ್ಟವಶಾತ್ 2014ರಲ್ಲಿ ಅತ್ತೆ ಸಾವಿಗೀಡಾದರು. ನಂತರ ಪ್ರಿಯಾ ತಾವು ಮಾಡುತ್ತಿದ್ದ ಕೆಲಸ ಬಿಡಬೇಕಾಯಿತು. ಮೂರು ವರ್ಷದ ಮಗನನ್ನು ಪೋಷಿಸುತ್ತ ಮನೆ ನೋಡಿಕೊಂಡಿದ್ದರು. ಇದರ ಮಧ್ಯೆ ಪರಿವಾರದ ಆರ್ಥಿಕ ಬಲ ಹೆಚ್ಚಿಸಲು ಪ್ರಯತ್ನ ನಡೆದೇ ಇತ್ತು. ಆಗ ತೋಚಿದ್ದೇ ಸೀರೆ ವ್ಯಾಪಾರ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾದ ಪತಿ ಈ ನಿರ್ಧಾರವನ್ನು ಪ್ರೋತ್ಸಾಹಿಸಿ ಬೆಂಬಲಿಸಿದರು. ಆದರೆ, ಆರಂಭಿಕ ದಿನಗಳಲ್ಲಿ ಗ್ರಾಹಕರ ಪ್ರತಿಕ್ರಿಯೆ ಋಣಾತ್ಮಕವಾಗಿತ್ತು. ‘ತಾಯಿ ಮನೆಗೆ ಹೊರಟರೆ ಚೀಲದಲ್ಲಿ ಸೀರೆಗಳನ್ನು ಕೊಂಡೊಯ್ಯುತ್ತಿದ್ದೆ, ಇದೆಲ್ಲ ನಿನಗೇಕೆ ಬೇಕೆಂದು ಜನ ಪ್ರಶ್ನೆ ಹಾಕುತ್ತಿದ್ದರು. ಆದರೆ ವ್ಯಾಪಾರ ಜಯದ ಹಾದಿ ಹಿಡಿದಾಗ ಜನರ ಅಭಿಪ್ರಾಯ ಬದಲಾಯಿತು. ಅವರೇ ಈಗ ವ್ಯಾಪಾರದ ಸಲಹೆಗಳಿಗೆ ನನ್ನ ಬಳಿ ಬರುತ್ತಾರೆ’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ವಾಟ್ಸ್​ಆಪ್​ನಲ್ಲಿ ಸೀರೆ ವ್ಯಾಪಾರ ಆರಂಭಿಸಿದಾಗ ಸ್ನೇಹಿತರು ಹಾಗೂ ಸಂಬಂಧಿಕರು ಮಾತ್ರ ಕೊಳ್ಳುತ್ತಿದ್ದರು. ನಂತರ ಬಾಯಿ ಮಾತಿನ ಪ್ರಚಾರದಿಂದ ಹಲವಾರು ಮಹಿಳೆಯರು ಸೀರೆಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಸ್ವತಃ ತಾವೇ ಮರುಮಾರಾಟ ಮಾಡತೊಡಗಿದರು. ತಿಳಿದೋ ತಿಳಿಯದೆಯೋ ಪ್ರಿಯಾ ಮಹಿಳಾ ಮರುಮಾರಾಟಗಾರರ ತಂಡವನ್ನು ನಿರ್ವಿುಸುತ್ತಿದ್ದರು. ಇಂದು ಎರಡು ಸಾವಿರಕ್ಕೂ ಅಧಿಕ ಮರುಮಾರಾಟಗಾರರಿಗೆ ಸೀರೆ ಮತ್ತು ಜವಳಿಯನ್ನು ಪೂರೈಸುತ್ತಿದ್ದಾರೆ. ‘ವಾಟ್ಸ್ ಆಪ್ ನಂತರ ಸೀರೆ ಮಾರಲೆಂದೇ ಫೇಸ್​ಬುಕ್ ಪುಟವನ್ನು ಪ್ರಾರಂಭಿಸಿದೆ. ಇಂದು ಆ ಪುಟ ಎಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿದೆ’ ಎನ್ನುವ ಹೆಮ್ಮೆ ಇವರದ್ದು. ಪ್ರಸ್ತುತ, 11 ವಾಟ್ಸ್​ಆಪ್ ಗುಂಪುಗಳನ್ನು ನಿರ್ವಹಿಸುತ್ತಾರೆ. ವಾಟ್ಸ್​ಆಪ್​ಇಲ್ಲದವರನ್ನು ಟೆಲಿಗ್ರಾಂ ಗ್ರೂಪ್ ಮೂಲಕ ಸಂರ್ಪಸುತ್ತಾರೆ ಹಾಗೂ ಫೇಸ್​ಬುಕ್​ನಲ್ಲಿ ಎಂಟು ಜನ ಸೀರೆಗಳನ್ನು ಮಾರಾಟ ಮಾಡುತ್ತಾರೆ.

ಉದ್ಯಮಿಯಾಗುವತ್ತ…

ಸೀರೆ ವ್ಯವಹಾರ ಅದ್ದೂರಿಯಾಗಿ ಸಾಗುತ್ತಿದ್ದಂತೆ ಪ್ರಿಯಾ ತಮ್ಮ ಮನೆಯನ್ನೇ ವ್ಯಾಪಾರ ಮಳಿಗೆಯನ್ನಾಗಿ ಮಾಡಿದರು. ಸದಾ ಸಗಟು ವ್ಯಾಪಾರದಲ್ಲೇ ತೊಡಗಿರುವ ಇವರು ಕೆಲವೊಮ್ಮೆ ನೆರೆಹೊರೆಯವರ ಹಾಗೂ ನಿಕಟ ಸ್ನೇಹಿತರ ಬಲವಂತಕ್ಕಾಗಿ ಅವರಿಗೆ ಪ್ರತ್ಯೇಕವಾಗಿ ಮಾರಾಟ ಮಾಡುತ್ತಾರೆ. ಪ್ರತಿದಿನ ಆರು ಗಂಟೆಗೆ ತಮ್ಮ ತಂಡದೊಂದಿಗೆ ದೇಶಾದ್ಯಂತ ಇರುವ ಮರುಮಾರಾಟಗಾರರಿಗೆ ಸೀರೆಗಳನ್ನು ರವಾನೆ ಮಾಡುತ್ತಾರೆ. ಎರಡು ವರ್ಷಗಳಿಂದ ಇವರ ವ್ಯಾಪಾರ ವ್ಯಾಪಕವಾಗಿ ಬೆಳೆಯುತ್ತಿದ್ದಂತೆ ಸ್ಪರ್ಧೆ ಸಹ ಹೆಚ್ಚಾಗುತ್ತಿದೆ. ಜತೆಗೆ, ಮರುಮಾರಾಟಗಾರರ ಸಂಖ್ಯೆಯೂ ಬೆಳೆಯುತ್ತಿದೆ. ಉತ್ಪನ್ನಗಳು ಚೆನ್ನಾಗಿರಬೇಕೆಂದು ತಾವೇ ಖುದ್ದಾಗಿ ಪ್ರತಿ ಸೀರೆಯ ವಿನ್ಯಾಸ, ಬಣ್ಣ ಹಾಗೂ ಗುಣಮಟ್ಟವನ್ನು ಪರಿಶೀಲನೆ ಮಾಡುತ್ತಾರೆ. ತಮಗೆ ಬೇಕಾಗುವಂತೆ ಸೀರೆಗಳನ್ನು ನೇಯಲು ಇಬ್ಬರು ನೇಕಾರರನ್ನು ನೇಮಿಸಿದ್ದಾರೆ. ‘ಕಳೆದ ಕೆಲವು ವರ್ಷಗಳಿಂದ ಯಾವ ಬಣ್ಣದ ಸೀರೆಗಳು ಹೆಚ್ಚಾಗಿ ಮಾರಾಟವಾಗುತ್ತವೆ ಎಂಬುದು ನನಗೆ ಅರಿವಾಗಿದೆ, ಅದರ ಆಧಾರದ ಮೇಲೆ ಸೀರೆಗಳನ್ನು ಉತ್ಪಾದಿಸುತ್ತೇನೆ. ನನ್ನ ಗಮನ ಯಾವಾಗಲೂ ಗುಣಮಟ್ಟ ಹಾಗೂ ಬಣ್ಣಗಳ ಮೇಲಿರುತ್ತದೆ’ ಎನ್ನುತ್ತಾರೆ. ಗ್ರಾಹಕರನ್ನು ವಿಶ್ವಾಸದಿಂದ ನೋಡಿಕೊಳ್ಳುವ ಇವರು, ಕಷ್ಟದಲ್ಲಿದ್ದ ಗ್ರಾಹಕರಿಗೆ ಹಣ ಪಾವತಿ ಸಮಯವನ್ನು ಮುಂದೂಡಿದ್ದೂ ಇದೆ. ಸೀರೆಗಳು ಇಷ್ಟವಾಗದಿದ್ದರೆ ಹಿಂದಿರುಗಿಸಬಹುದಾದ ಸೌಲಭ್ಯವೂ ಇಲ್ಲಿದೆ. ಈ ಗುಣವನ್ನು ಗ್ರಾಹಕರು ಮೆಚ್ಚುತ್ತಾರೆ. ಅಚ್ಚರಿಯೆಂದರೆ, ಕಳೆದ ನಾಲ್ಕೂ ವರ್ಷಗಳಿಂದಲೂ ಒಂದೇ ತಂಡ ಜವಾಬ್ದಾರಿಯಿಂದ ಇವರೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.