ಪ್ರಾಣಾಯಾಮ ಸಾಧಕನ ಆಹಾರ ಹೇಗಿರಬೇಕು?

ನಾವು ತಿನ್ನುವ ಆಹಾರದಲ್ಲಿ ಸಾತ್ವಿಕ, ರಾಜಸಿಕ, ತಾಮಸಿಕ ಎಂಬ ಮೂರು ಬಗೆಗಳಿವೆ. ಯಾವ ಆಹಾರವನ್ನು ಸೇವಿಸಿದರೆ ನಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆಯೋ, ದೈಹಿಕ – ಮಾನಸಿಕ ಸುಖ ವರ್ಧಿಸಿ ಆಯುಷ್ಯ ಹೆಚ್ಚಿಸುತ್ತದೆಯೋ ಅಂತಹ ಆಹಾರವೇ ಸಾತ್ತಿ್ವಕ ಆಹಾರ. ಯಾವ ಆಹಾರ ಉತ್ಸಾಹ-ಉಲ್ಲಾಸಗಳನ್ನು ಹೆಚ್ಚಿಸುತ್ತದೆ, ಇನ್ನಷ್ಟು ಬೇಕೆಂಬ ಅಭಿಲಾಷೆ ಯನ್ನು ಪ್ರೇರಿಸುತ್ತದೆಯೋ ಅದು ರಾಜಸಿಕ ಆಹಾರ. ಇಂತಹ ಪ್ರೇರಣೆಯಾದ ಮನಸ್ಸು ಮತ್ತೆ ಆ ರುಚಿ-ಸುಖಗಳತ್ತ ಧಾವಿಸುತ್ತದೆ. ಆದ್ದರಿಂದ ಅದು ತರುವ ಉತ್ಸಾಹ ತಾತ್ಕಾಲಿಕ! ತಾಮಸಿಕ ಆಹಾರವಾದರೋ ಮನುಷ್ಯನ ಮನಸ್ಸು, ಬುದ್ಧಿಗಳನ್ನು ಶುಚಿಗೊಳಿಸುವ ಅಂಶವಿಲ್ಲದ, ಸೋಮಾರಿತನಕ್ಕೆ ತಳ್ಳುವ ಗುಣ ಹೊಂದಿರುವುದಾಗಿದೆ. ಆಹಾರ ಹೇಗೆಯೋ ಹಾಗೆ ನಮ್ಮ ವ್ಯಕ್ತಿತ್ವ ಇರುತ್ತದೆ. ಅದಕ್ಕಾಗಿಯೇ ಉಪನಿಷತ್ತುಗಳು ಹೇಳುವುದು – ಆಹಾರವೇ ಬ್ರಹ್ಮ! ಹಸಿವು ಹಿಂಗಿಸುವುದು ಮತ್ತು ಮನೋಬುದ್ಧಿಗಳನ್ನು ಅರಳಿಸುವುದು – ಈ ಎರಡು ಕೆಲಸಗಳನ್ನು ಯಾವ ಆಹಾರ ಮಾಡುತ್ತದೆಯೋ ಅದು   ಪ್ರಾಣಾಯಾಮ ಸಾಧಕ ಸಾತ್ವಿಕ ಆಹಾರವನ್ನೇ ಸೇವಿಸಬೇಕು. ತಿಂದ ಆಹಾರ ಸುಲಭವಾಗಿ ಜೀರ್ಣವಾಗುವಂತಿರಬೇಕು. ಸಕ್ಕರೆ ಅಂಶಗಳು, ಹಿಟ್ಟಿನ ಅಂಶಗಳು ಅದರಲ್ಲಿ ಸರಿಯಾದ ಪ್ರಮಾಣದಲ್ಲಿರಬೇಕು. ಅದು ಪೌಷ್ಟಿಕವೂ, ಜಿಡ್ಡಿನ ಅಂಶದಿಂದ ಕೂಡಿದ್ದು ಆಗಿದ್ದರೆ ಮನಸ್ಸು, ಬುದ್ಧಿ ಸರಿಯಾಗಿ ಕೆಲಸ ಮಾಡಬಲ್ಲವು ಎನ್ನುತ್ತದೆ ಯೋಗಶಾಸ್ತ್ರ. ಪ್ರಾಣಾಯಾಮದ ಮೂಲಕ ನಮ್ಮ ದೇಹದ ಪಚನಶಕ್ತಿ ಚುರುಕಾಗುತ್ತದೆ. ಅದಕ್ಕೆ ಇಂಧನವಾಗಿ ನಾವು ಸೇವಿಸುವ ಆಹಾರ ಸಾರ್ಥಕ ಪಾತ್ರವನ್ನು ನಿರ್ವಹಿಸಬೇಕು. ಅತಿಯಾಗಿ ತಿನ್ನುವವನಿಗೆ, ಏನೂ ತಿನ್ನದೆ ಉಪವಾಸವಿರುವವನಿಗೆ ಯೋಗ ಹೇಳಿಸಿದ್ದಲ್ಲ!

ಯೋಗಶಾಸ್ತ್ರ ಹೇಳುವುದೇನು?: ಹಸಿವಾದಾಗ ಬೇಕಾಗುವ ಆಹಾರದಲ್ಲಿ ಮುಕ್ಕಾಲು ಪಾಲು ತಿನ್ನು, ಕಾಲು ಭಾಗವನ್ನು ಪ್ರಾಣವಾಯು ಸಂಚರಿಸುವುದಕ್ಕಾಗಿ ಖಾಲಿಯಾಗಿಟ್ಟುಕೋ ಎನ್ನುತ್ತದೆ ಯೋಗಶಾಸ್ತ್ರ. ಕೆಂಪು ಅಕ್ಕಿ, ಜೋಳದ ಹಿಟ್ಟು, ಗೋಧಿಯ ಹಿಟ್ಟು, ಹೆಸರುಬೇಳೆ, ಉದ್ದು, ಕಡಲೆಬೇಳೆ- ಇವುಗಳ ಸಿಪ್ಪೆ ತೆಗೆದು ಒಳಗಿನ ಬಿಳಿ ಕಾಳುಗಳನ್ನು ತಿನ್ನಬೇಕು. ಪಡುವಲ, ಕಚ್ಚಾ ಗೋವಿನ ಜೋಳ, ಮಿಟ್ಟಿ, ಬಾಳೆಹಣ್ಣು, ಬಾಳೆಯ ದಿಂಡು, ಬಾಳೆಹೂ, ಮೂಲಂಗಿ, ಬದನೆಕಾಯಿ, ಚೌಳಿಕಾಯಿ, ಪಾಲಕ್ ಮುಂತಾದವನ್ನು ತಿನ್ನಲಡ್ಡಿಯಿಲ್ಲ. ಆರಂಭದಲ್ಲಿ ಹಾಲು, ತುಪ್ಪವನ್ನು ಸೇವಿಸಬೇಕು. ಹಾಲಿನ ಪ್ರಮಾಣವು ಹೆಚ್ಚಾಗಿರಬಹುದು. ಶಕ್ತಾ್ಯನುಸಾರವಾಗಿ ದಿನದಲ್ಲಿ 200 ಎಂ.ಎಲ್. ಗಿಂತ ಹೆಚ್ಚು ತೆಗೆದುಕೊಳ್ಳಲಾರದು. ರಾತ್ರಿ ಹಾಲು ಸೇವಿಸುವುದು ಸಲ್ಲ. ಪಚನಕ್ಕೆ ಹಗುರಾದ ಮತ್ತು ಸ್ನಿಗ್ಧ ಪದಾರ್ಥಗಳನ್ನು ಸೇವಿಸಬೇಕು. ಜಡ ಪದಾರ್ಥಗಳನ್ನು ಸೇವಿಸಬಾರದು.

ದುರ್ಗಂಧಯುಕ್ತ ಪದಾರ್ಥ: ಈರುಳ್ಳಿ, ಬೆಳ್ಳುಳ್ಳಿ ಮುಂತಾದ ದುರ್ಗಂಧಯುಕ್ತ ಪದಾರ್ಥಗಳನ್ನು ತಿನ್ನಬಾರದು. ಅತಿ ಉಷ್ಣ, ಅತಿ ಶೀತ, ತಂಗಳು ಹಾಗೂ ಉಗ್ರ ಪದಾರ್ಥ ಸೇವನೆ ಸಲ್ಲದು. ಶರೀರ ಹಾಗೂ ಮನಸ್ಸಿನ ಕಲ್ಯಾಣದ ಬಗ್ಗೆ ಲಕ್ಷ್ಯವಿಟ್ಟು ಆಹಾರ ಸೇವಿಸಬೇಕು. ಮಾಂಸಾಹಾರ ಸಂಪೂರ್ಣ ನಿಷಿದ್ಧ. ನಮ್ಮ ದೇಹದೊಳಗಿನ ಪ್ರಾಣ ಶಕ್ತಿ ಪೋಷಿಸುವ(ಪೌಷ್ಟಿಕ) ಆಹಾರವನ್ನು ಪ್ರಕೃತಿಯ ಭಾಗವೇ ಆದ ತರಕಾರಿಗಳಿಂದ ಪಡೆಯಬಹುದು. ನಮ್ಮ ಅಂಗರಚನೆ ಪ್ರಕೃತಿದತ್ತ ತರಕಾರಿಗಳನ್ನು ಸ್ವೀಕರಿಸಲು ಯೋಗ್ಯವೇ ಹೊರತು ಮಾಂಸಾಹಾರವನ್ನಲ್ಲ.

Leave a Reply

Your email address will not be published. Required fields are marked *