ಸಿನಿಮಾ

ಊರಿಗೆ ತೆರಳಲು ದಾರಿ ಯಾವುದಯ್ಯ…

ಗೋಕರ್ಣ: ಇಲ್ಲಿನ ತದಡಿ ಬಂದರು ಪ್ರದೇಶಕ್ಕೆ ಹೊಂದಿಕೊಂಡಿರುವ ಬೇಲೆಕಾನು ಮಜರೆಯ ಬಡ ಪರಿಶಿಷ್ಟ ಮುಕ್ರಿ ಸಮಾಜದವರು ಬಹು ದಶಕಗಳಿಂದ ಅನುಭವಿಸುತ್ತ ಬಂದಿರುವ ವ್ಯಥೆಯ ಕತೆಯಿದು.
ಈ ಊರಿನಲ್ಲಿ ಶಾಲೆಗೆ ಹೋಗುವ ನೂರಾರು ಮಕ್ಕಳಿದ್ದಾರೆ. ಅವರ ಬಳಿ ಸರ್ಕಾರ ಒದಗಿಸಿದ ಸೈಕಲ್‌ಗಳಿವೆ. ಆದರೆ ಅದನ್ನು ನಿತ್ಯ ಶಾಲೆಗೆ ತರುವ ಭಾಗ್ಯ ಮಕ್ಕಳಿಗಿಲ್ಲ!
ಮನೆಯಲ್ಲಿ ಯಾರಾದರೂ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದರೆ ಕನಿಷ್ಠ ರಿಕ್ಷಾ ಕೂಡ ಇವರ ಕೇರಿಗೆ ಬರಲು ಸಾಧ್ಯವಿಲ್ಲ. ಪ್ರಾಣಾಪಾಯದಲ್ಲಿ ಇರುವವರನ್ನು ಹೊತ್ತುಕೊಂಡೇ ತರಬೇಕಾದ ಅನಿವಾರ್ಯತೆ ಇದೆ.
ಪ್ರತಿದಿನ ಕೂಲಿಯನ್ನು ಅವಲಂಬಿಸಿ ಬದುಕುತ್ತಿರುವ ಇವರು ಕಿರಿದಾದ ಕಾಲು ದಾರಿ, ಕಾಲು ಸಂಕ ಮತ್ತು ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳವನ್ನು ದಾಟಿ ಸಂಚರಿಸುವ ದುಸ್ಥಿತಿಯನ್ನು ನಿತ್ಯ ಎದುರಿಸುತ್ತ ಬಂದಿದ್ದಾರೆ.
ಸಣ್ಣ ಮಜರೆಯ ದೊಡ್ಡ ಸಮಸ್ಯೆ: ತದಡಿಯ ದಕ್ಷಿಣದಲ್ಲಿರುವ ಬೇಲೆಕಾನು ಸಮುದ್ರಕ್ಕೆ ಹೊಂದಿಕೊಂಡು ಸಾಗಬೇಕಾದ ಸಣ್ಣ ಮಜರೆ. ಇಲ್ಲಿ ಪರಿಶಿಷ್ಟ ಮುಕ್ರಿ ಜನಾಂಗದ ಅಂದಾಜು 105 ಮನೆಗಳಿವೆ. ಶಾಲೆಗೆ ಹೋಗುವ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು 200 ಮತದಾರರನ್ನು ಈ ಮಜರೆ ಹೊಂದಿದೆ. ಬೇಲೆಕಾನಿನಿಂದ ಅಂದಾಜು 1.5 ಕಿಮೀ ಅಂತರದಲ್ಲಿರುವ ಇವರ ಕೇರಿಗೆ ಹೋಗಲು ಹಿಂದಿನಿಂದಲೂ ಸರಾಗ ಸಂಚಾರದ ರಸ್ತೆ ಇಲ್ಲ. ಹಿಂದಿನ ಜನ ತಮ್ಮ ಹಣೆ ಬರಹವೇ ಹೀಗೆ ಎಂದು ಈ ಅವ್ಯವಸ್ಥೆಯಲ್ಲಿಯೇ ಬದುಕು ಸಾಗಿಸಿದರು .ಆದರೆ ಇಂದು ಇಲ್ಲಿನ ಜನಸಂಖ್ಯೆ ಏರಿದೆ. ನಿತ್ಯ ಶಾಲೆಗೆ, ಕೂಲಿಗೆ ಮತ್ತು ವಿವಿಧ ಕೆಲಸಕ್ಕೆ ಹೋಗುವವರ ಪ್ರಮಾಣವೂ ಹೆಚ್ಚಿದೆ. ಇದನ್ನು ಅನುಸರಿಸಿ ತಮ್ಮ ಕೇರಿಗೆ ಕನಿಷ್ಠ ಒಂದು ರಿಕ್ಷಾ ಸಂಚರಿಸುವಷ್ಟಾದರೂ ಅಗಲದ ರಸ್ತೆ ಮಾಡಿಕೊಡಿ ಎಂದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ನಿವಾಸಿಗಳು ಜನ ಪ್ರತಿನಿಧಿಗಳು ಮತ್ತು ಸರ್ಕಾರವನ್ನು ಮೇಲಿಂದ ಮೇಲೆ ಆಗ್ರಹಿಸುತ್ತ ಬಂದಿದ್ದಾರೆ.
150 ಮೀ. ಮಾತ್ರ ಇಕ್ಕಟ್ಟು: ಬೇಲೆಕಾನು ಗ್ರಾಮದಿಂದ ಈ ಸಮಾಜದವರ ಕೇರಿಗೆ ಹೋಗಲು ಒಂದೂವರೆ ಕಿಮಿ ಬೇಕಾದರೂ,ಈ ಪೈಕಿ ಅಂದಾಜು 150 ಮೀ. ಭಾಗ ಮಾತ್ರ ಇಕ್ಕಟ್ಟಾಗಿದ್ದು ಖಾಸಗಿಯವರ ತೋಟವನ್ನು ಹಾದು ಹೋಗುತ್ತಿದೆ. ಉಳಿದ ಭಾಗ ತಕ್ಕ ಮಟ್ಟಿಗೆ ಅಗಲವಾಗಿದ್ದು ಚಿಕ್ಕದಾದ ಕಾಂಕ್ರೀಟ್ ರಸ್ತೆ ನಿರ್ಮಿಸಲು ಅನುಕೂಲವಾಗಿದೆ.ಈ ಹಿನ್ನೆಲೆಯಲ್ಲಿ ಇಕ್ಕಟ್ಟಾದ ಈ ಭಾಗವನ್ನು ಕೈಬಿಟ್ಟು ಇಲ್ಲಿರುವ ಸಾರ್ವಜನಿಕ ಹಳ್ಳದ ಮೇಲೆ 150 ಮೀ. ಉದ್ದದ ಕಿರು ಸೇತುವೆ ನಿರ್ಮಿಸಿ ಉಳಿದ ಭಾಗದ ರಸ್ತೆಗೆ ಅದನ್ನು ಜೋಡಿಸುವ ಬಗ್ಗೆ ಈಗ ಯೋಚಿಸಲಾಗಿದೆ.
ಮತದಾನ ಬಹಿಷ್ಕಾರದ ಸೂತ್ರ: ರಸ್ತೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಈ ಬಾರಿಯ 2023ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಹೆಚ್ಚಿನ ಜನ ಮತದಾನದಿಂದ ದೂರ ಉಳಿದರು. ಕಳೆದ 2018ರ ಸಾರ್ವಜನಿಕ ಚುನಾವಣೆ ಮತ್ತು ಆನಂತರ ನಡೆದ ಗ್ರಾಪಂ ಚುನಾವಣೆಗಳಲ್ಲಿಯೂ ಇವರೆಲ್ಲ ಒಟ್ಟಾಗಿ ಮತದಾನವನ್ನು ಬಹಿಷ್ಕರಿಸುವ
ನಿರ್ಧಾರಕ್ಕೆ ಮುಂದಾದರು. ಆಗ ಸ್ಥಳಕ್ಕೆ ಭೇಟಿಯಿತ್ತ ವಿವಿಧ ಇಲಾಖೆ ಅಧಿಕಾರಿಗಳು ರಸ್ತೆ ಮಾಡಿಕೊಡುವ ಭರವಸೆ ನೀಡಿ ಎಲ್ಲರೂ ಮತದಾನ ಮಾಡಲು ಮನವೊಲಿಸಿದರು. ನಂತರದಲ್ಲಿ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿ ಅವರು ಗ್ರಾಪಂ ಚುನಾವಣೆ ನಂತರ ಇಲ್ಲಿಗೆ ಖುದ್ದಾಗಿ ಭೇಟಿಯಿತ್ತು ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ರಸ್ತೆ ನಿರ್ಮಿಸಲು ಸಂಬಂಧಿಸಿದ ಎಲ್ಲ ಸರ್ಕಾರಿ ಇಲಾಖೆಗಳಿಗೆ ಅಗತ್ಯ ಕ್ರಮಕ್ಕೆ ಆದೇಶಿಸಿದರು. ಇದನ್ನು ಅನುಸರಿಸಿ 2022ರ ನವೆಂಬರ್‌ನಲ್ಲಿ ಶಾಸಕರ ಆದೇಶದ ಮೇರೆಗೆ ಲೋಕೋಪಯೋಗಿ, ಸಮಾಜ ಕಲ್ಯಾಣ ಮತ್ತು
ಸ್ಥಳೀಯ ಗ್ರಾಪಂ ಅಧಿಕಾರಿಗಳು ಒಟ್ಟಾಗಿ ಸ್ಥಳ ಪರಿಶೀಲನೆ ನಡೆಸಿ ಪರಿಶಿಷ್ಟ ಸಮುದಾಯದವರಿಗೆ ರಸ್ತೆಯ ತೀವ್ರ ಅವಶ್ಯಕತೆ ಇರುತ್ತದೆ. ಇಲ್ಲಿನ ಜನರಿಗೆ ನಿತ್ಯ ಉಂಟಾಗುತ್ತಿರುವ ತೊಂದರೆಯನ್ನು ನಿವಾರಿಸಲು ಕಿರು ಸಂಕದ ಮೂಲಕ ರಸ್ತೆ ನಿರ್ಮಿಸಲು ಸರ್ಕಾರಕ್ಕೆ ಲಿಖಿತವಾಗಿ ಮನವಿ ಮಾಡಿಕೊಂಡರು.


ಬೇಲೆಕಾನು ಬಳಿಯ ಪರಿಶಿಷ್ಟ ಮುಕ್ರಿ ಸಮಾಜದವರು ಕಳೆದ ಅನೇಕ ದಶಕಗಳಿಂದ ಸುಗಮ ಸಂಚಾರದ ರಸ್ತೆ ಇಲ್ಲದೆ ವಿವಿಧ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ನಿವಾರಿಸಲು ಐದಾರು ತಿಂಗಳ ಹಿಂದೆಯೇ ಸಂಬಂಧಿಸಿದ ಲೋಕೋಪಯೋಗಿ, ಸಮಾಜ ಕಲ್ಯಾಣ, ತಾಪಂ ಮತ್ತು ಗೋಕರ್ಣ ಗ್ರಾಪಂ ಅಧಿಕಾರಿಗಳ ಮೂಲಕ ಅಗತ್ಯ ಸಮೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 1.5 ಕೋ.ರೂ. ಅನುದಾನದ ಬೇಡಿಕೆಯನ್ನು ಸಲ್ಲಿಸಲಾಗಿದೆ. ಈ ನಡುವೆ ಚುನಾವಣೆ ಎದುರಾದ ಕಾರಣ ಕಾಮಗಾರಿಗೆ ಹಿನ್ನಡೆ ಉಂಟಾಗಿದ್ದು, ಹೊಸ ಸರ್ಕಾರ ರಚನೆಯಾದ ತಕ್ಷಣ ಈ ಬಗ್ಗೆ ಎಲ್ಲ ತುರ್ತು ಕ್ರಮ ಕೈಗೊಳ್ಳಲಾಗುವುದು.
ದಿನಕರ ಶೆಟ್ಟಿ ಶಾಸಕ

Latest Posts

ಲೈಫ್‌ಸ್ಟೈಲ್