ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ: ವಿಜಯೇಂದ್ರ ಪ್ರಶ್ನೆ |Complete halt in development

blank

ಬೆಂಗಳೂರು: ಯಾವ ಪುರುಷಾರ್ಥಕ್ಕೆ ನೀವು ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಮುಖ್ಯಮಂತ್ರಿಗಳೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

blank

ಮಾಧ್ಯಮಗಳ ಜತೆ ಸೋಮವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಎರಡು ವರ್ಷಗಳ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಆದರೆ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ ಬಂದಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಸತತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ರೈತರಿಗೆ ಯಾವುದೇ ಹೊಸ ಯೋಜನೆ ನೀಡಲು ಸಾಧ್ಯವಾಗಿಲ್ಲ.

ಮಹಿಳೆಯರಿಗೆ ಯಾವುದೇ ಅಭಿವೃದ್ಧಿ ಯೋಜನೆ ಪ್ರಕಟಿಸಿಲ್ಲ; ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿ ಸ್ವಾಭಿಮಾನದ ಬದುಕನ್ನು ನೀಡಿಲ್ಲ ಎಂದು ಆಕ್ಷೇಪಿಸಿದರು.

ಗ್ರೇಟರ್ ಬೆಂಗಳೂರು ಇವತ್ತು ವಾಟರ್ ಬೆಂಗಳೂರಾಗಿದೆ. ಸ್ವಲ್ಪ ಮಳೆಯಾದರೂ ಬೆಂಗಳೂರು ಮಹಾನಗರ ನೀರಿನಲ್ಲಿ ಮುಳುಗುವಂತಾಗಿದೆ ಎಂದು ಹರಿಹಾಯ್ದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಯೋಜನೆಗಳ ಮಾತನಾಡುತ್ತಾರೆ. ಬೆಂಗಳೂರು ನಗರದಲ್ಲಿ ವೇಗದಿಂದ ಮತ್ತು ಸಕಾಲದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿಲ್ಲ. ಮೆಟ್ರೊವನ್ನು ತುಮಕೂರಿಗೆ ಒಯ್ಯುವ ಮಾತನಾಡುತ್ತಾರೆ ಎಂದು ದೂರಿದರು.

ಅಭಿವೃದ್ಧಿ ಸ್ಥಗಿತ

ಅಭಿವೃದ್ಧಿ ಎಂಬುದು ಸಂಪೂರ್ಣವಾಗಿ ನಿಂತುಹೋಗಿದೆ. ಎರಡು ವರ್ಷದಲ್ಲಿ ಏನು ಮಾಡಿದ್ದಾರೆ? ಆಡಳಿತ ಪಕ್ಷದ ಶಾಸಕರು ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ಬೇಸತ್ತಿರುವುದು ಜಗಜ್ಜಾಹೀರಾಗಿದೆ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದರು.

ಮೊದಲ ಬಾರಿ ಗೆದ್ದ ಶಾಸಕರಾದ ನಾವು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಶಾಲಾ ಕೊಠಡಿ ಕಟ್ಟಿಸಲೂ ಸಾಧ್ಯವಾಗುತ್ತಿಲ್ಲ ಎಂದೂ ಗಮನ ಸೆಳೆದರು.

ಶಾಸಕರಿಗೆ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕೊಡಲಾಗುತ್ತಿಲ್ಲ; ನೀರಾವರಿ ಸೌಕರ್ಯ ನೀಡಲು ಆಗುತ್ತಿಲ್ಲ; ಇಷ್ಟೆಲ್ಲ ಇದ್ದರೂ ರಾಜ್ಯ ಸರ್ಕಾರ ದುಂದು ವೆಚ್ಚ ಮಾಡುತ್ತಿದೆ. ಸರ್ಕಾರದ ಬಗ್ಗೆ ರಾಜ್ಯದ ಜನರು ನಗುತ್ತಿದ್ದಾರೆ; ಸರ್ಕಾರದ ನಡವಳಿಕೆಯನ್ನು ಜನರು ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶೂನ್ಯ ಸಾಧನೆಯ ಸಾಧನಾ ಸಮಾವೇಶ

ಇದೊಂದು ಭಂಡ ಸರ್ಕಾರ. ಜಾಹೀರಾತು ನೀಡುವ ಜಾಹೀರಾತಿನ ಸರಕಾರ ಇದು. ಗ್ಯಾರಂಟಿಗಳನ್ನೂ ಸರಿಯಾಗಿ ತಲುಪಿಸದೆ ನಾಡಿನ ಜನರಿಗೆ ಮೋಸ ಮಾಡಿದ್ದಾರೆ. ಶೂನ್ಯ ಸಾಧನೆಯ ಸಾಧನಾ ಸಮಾವೇಶವಿದು. ರಾಜ್ಯದ ಜನರಿಗೆ ಈ ಸರ್ಕಾರದ ಬಗ್ಗೆ ಏನೂ ಒಳ್ಳೆಯ ಅಭಿಪ್ರಾಯ ಇಲ್ಲ ಎಂದು ವಿಜಯೇಂದ್ರ ವಿಶ್ಲೇಷಿಸಿದರು.

ಗ್ಯಾರಂಟಿಗಳನ್ನು ಪೂರೈಸಲು ಹಣ ಹೊಂದಿಸುವುದನ್ನು ಸರಕಾರ ಮಾಡಲೇಬೇಕು. ಆದರೆ, ಗ್ಯಾರಂಟಿ ಕೊಡುವುದೇ ಸಾಧನೆಯೇ? ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸ ಆಗಬಾರದೇ? ಎಂದು ಪ್ರಶ್ನೆಗೆ ಉತ್ತರ ನೀಡಿದರು. ಶಾಸಕರು ತಲೆ ಎತ್ತಿಕೊಂಡು ಓಡಾಡಲು ಆಗದ ಸ್ಥಿತಿ ಬಂದಿದೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು ಆಗುತ್ತಿಲ್ಲ; ಸೂರಿಲ್ಲದ ಬಡವರಿಗೆ ಮನೆ ಕೊಡಲು ಇವರಿಗೆ ಸಾಧ್ಯವಾಗಿದೆಯೇ? ಗಂಗಾ ಕಲ್ಯಾಣ ಯೋಜನೆಯಡಿ ಬಿಜೆಪಿ ಸರಕಾರ ಇದ್ದಾಗ ಪ್ರತಿ ಕ್ಷೇತ್ರಕ್ಕೆ 20-25 ಸಂಪರ್ಕ ಕೊಡುತ್ತಿದ್ದರು. ಈಗ ಒಂದು ಎರಡು ಎಂಬಂತೆ ಭಿಕ್ಷೆ ರೀತಿಯಲ್ಲಿ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರೈತರಿಗೆ ನೆರವಿಲ್ಲ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪ ಅವರು ಹೆಚ್ಚುವರಿ ಮೊತ್ತ ಕೊಡುತ್ತಿದ್ದರು. ಅದನ್ನೂ ನಿಲ್ಲಿಸಿದ್ದಾರೆ. ರೈತ ವಿದ್ಯಾನಿಧಿಯನ್ನೂ ನಿಲ್ಲಿಸಿದ್ದಾರೆ. ಒಂದೆಡೆ ಬಿಜೆಪಿ ಸರ್ಕಾರದ ಯೋಜನೆಗಳನ್ನು ನಿಲ್ಲಿಸುತ್ತಾರೆ. ಅಭಿವೃದ್ಧಿಪರ ಚಿಂತನೆ ಸರಕಾರಕ್ಕೆ ಇಲ್ಲ. ಇದರ ನಡುವೆ ಸಾಧನಾ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ಜಾಹೀರಾತಿನ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ವಿಪಕ್ಷದವರು ಟೀಕಿಸುವುದಾಗಿ ಗೂಬೆ ಕೂರಿಸುತ್ತಾರೆ. ಆದರೆ, ಇವತ್ತು ಅಭಿವೃದ್ಧಿ ಇಲ್ಲದ ಕುರಿತು ಆಡಳಿತ ಪಕ್ಷದವರೇ ಮಾತನಾಡುತ್ತಿದ್ದಾರಲ್ಲವೇ ಎಂದು ಪ್ರಶ್ನಿಸಿದರು.

ನಾವು ರಾಜ್ಯ ಸರ್ಕಾರವನ್ನು ಎಚ್ಚರಿಸಲು ನಿರಂತರ ಹೋರಾಟ ಮಾಡುತ್ತಿದ್ದೇವೆ. ಈಚೆಗೆ ಜನಾಕ್ರೋಶ ಯಾತ್ರೆಯನ್ನೂ ಮಾಡಿದ್ದೇವೆ. ನಾಡಿನ- ಬೆಂಗಳೂರಿನ ಅಭಿವೃದ್ಧಿ ಶೂನ್ಯತೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹೊಣೆ ಹೊರಬೇಕು ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank