ಬ್ಲ್ಯೂ ವೇಲ್​ ಆಯ್ತು, ಇದೀಗ ಮಕ್ಕಳನ್ನು ಕಾಡಲು ಬಂತು ಡೆಡ್ಲಿ ಗೇಮ್​ ಮೊಮೊ!

ಅರ್ಜಿಂಟೀನಾ: ಸುಮಾರು ಒಂದು ವರ್ಷದ ಹಿಂದೆ ಅಪಾಯಕಾರಿ ಬ್ಲ್ಯೂ ವೇಲ್​ ಚಾಲೆಂಜ್​ನಿಂದ ವಿಶ್ವದಾದ್ಯಂತ ಹಲವಾರು ಟೀನೇಜರ್ಸ್​ ಪ್ರಾಣ ಕಳೆದುಕೊಂಡಿದ್ದನ್ನು ಮರೆಯವುದಕ್ಕೂ ಮುಂಚೆಯೇ, ಮತ್ತೊಂದು ಭಯಾನಕ ಚಾಲೆಂಜಿಂಗ್​ ಗೇಮ್​ ಸಾಮಾಜಿಕ ಜಾಲತಾಣಗಳಲ್ಲಿ ತಲೆ ಎತ್ತಿದೆ. ಹೌದು, ಈ ಹೊಸ ಚಾಲೆಂಜಿಂಗ್​ ಗೇಮ್​ ಹೆಸರೇ ‘ಮೊಮೊ ಚಾಲೆಂಜ್​’.

ಏನಿದು ಮೊಮೊ ಚಾಲೆಂಜ್​?
ಮೊಮೊ ಚಾಲೆಂಜ್​ ಪ್ರಥಮವಾಗಿ ಆರಂಭವಾಗಿದ್ದು ಫೇಸ್​ಬುಕ್​ನಲ್ಲಿ. ನಂತರ ವಾಟ್ಸ್​ ಆ್ಯಪ್​ಗೂ ತನ್ನ ಪರಿಮಿತಿ ವಿಸ್ತರಿಸಿಕೊಂಡಿದೆ. ಈ ಮೊಮೊ ಚಾಲೆಂಜ್​ ಸ್ವೀಕರಿಸುವಂತೆ ಅನಾಮಿಕ ಮೊಬೈಲ್​ ಸಂಖ್ಯೆಯಿಂದ ಮೆಸೇಜ್​ ಬರುತ್ತದೆ. ಆ ಸಂಖ್ಯೆಯ ಬಳಕೆದಾರರಿಗೆ ಮೊಮೊ ನೀಡುವ ಚಾಲೆಂಜ್ ಪೂರ್ಣಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಒಂದು ವೇಳೆ ಈ ಚಾಲೆಂಜ್​ ತೆಗೆದುಕೊಂಡರೆ ಅಷ್ಟೆ! ಹಂತಹಂತವಾಗಿ ಚಾಲೆಂಜ್​ಗಳನ್ನು ನೀಡುತ್ತಾ ನಂತರ ಹಿಂಸಾತ್ಮಕ ಕೃತ್ಯಗಳನ್ನು ಮಾಡಿ ಚಿತ್ರೀಕರಿಸಿ ನಮಗೆ ಕಳುಹಿಸುವಂತೆ ಸೂಚಿಸಲಾಗುತ್ತದೆ. ಹೀಗೆ ಹಿಂಸಾತ್ಮಕ ಕೃತ್ಯಗಳಿಗೆ ಪ್ರೇರೇಪಿಸುತ್ತಾ ಕೊನೆ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಅಪಾಯಕಾರಿ ಚಾಲೆಂಜ್​ ನೀಡಿ ಮೊಮೊ ಚಾಲೆಂಜ್​ ಮುಗಿಯುವಂತೆ ಆದೇಶಿಸಲಾಗುತ್ತದೆ.

ಚಾಲೆಂಜ್​ ತೆಗೆದುಕೊಳ್ಳದಿದ್ದರೆ ಮೊಬೈಲ್​ ಹ್ಯಾಕ್​!
ಒಂದು ವೇಳೆ ನಿರ್ದಿಷ್ಟ ಬಳಕೆದಾರ ಚಾಲೆಂಜ್​ ತೆಗೆದುಕೊಳ್ಳದಿದ್ದರೆ ಅವರ ಮೊಬೈಲ್​ ಸಂಖ್ಯೆಯನ್ನು ಹ್ಯಾಕ್​ ಮಾಡಲಾಗಿದೆ ಎಂದೆಲ್ಲಾ ಹೇಳಿ ಅವರಿಗೆ ಹೆದರಿಸಿ ಚಾಲೆಂಜ್​ ಪೂರೈಸುವಂತೆ ಬೆದರಿಕೆ ಒಡ್ಡಲಾಗುತ್ತಿದೆ. ಇದೇ ರೀತಿ ಒಂದೊಂದೇ ಚಾಲೆಂಜ್​ಗಳನ್ನು ಮಾಡಿಸುತ್ತಾ, ಕೊನೆ ಹಂತದಲ್ಲಿ ಆತ್ಮಹತ್ಯೆ ಚಾಲೆಂಜ್​ ಅನ್ನೂ ನೀಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೊಮೊಗೆ 12 ವರ್ಷದ ಬಾಲಕಿ ಬಲಿ
ಅರ್ಜೆಂಟೀನಾದಲ್ಲಿ 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಾವನ್ನು ಮೊಮೊ ಚಾಲೆಂಜ್​ಗೆ ಪೊಲೀಸರು ಲಿಂಕ್​ ಮಾಡಿದ್ದಾರೆ. ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಕ್ಷಣಗಳ ಮುಂಚೆ ಆಕೆಯ ಚಟುವಟಿಕೆಗಳನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾಳೆ. ಹಾಗಾಗಿ ತನಿಖೆ ವೇಳೆ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಯಾರೋ ಪ್ರೇರೇಪಿಸಿರುವುದು ತಿಳಿದು ಬಂದಿದೆ ಎಂದು ಬ್ಯೂನೊಸ್ ಏರ್ಸ್​ ಟೈಮ್ಸ್​ ವರದಿ ಮಾಡಿದೆ.

ಮಕ್ಕಳೇ ಮೊಮೊ ಟಾರ್ಗೆಟ್​
ಈ ಮೊಮೊ ಚಾಲೆಂಜ್​ಗೆ ಮಕ್ಕಳೇ ಪ್ರಮುಖ ಟಾರ್ಗೆಟ್​! ಅವರಿಂದ ಹಂತ ಹಂತವಾಗಿ ಸರಣಿ ಹಿಂಸಾತ್ಮಕ ಕೃತ್ಯ ಮಾಡಿಸುವುದರ ಜತೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೊಮೊ ಚಾಲೆಂಜ್​ ಕುರಿತು ಅನೇಕರು ಜಾಗೃತಿ ಮೂಡಿಸುತ್ತಿದ್ದು, ಒಂದು ವೇಳೆ ನಿಮ್ಮ ಮಕ್ಕಳು ಯಾವಾಗಲೂ ಮೊಬೈಲ್​ ಬಳಸುತ್ತಿದ್ದರೆ ಅವರ ಮೇಲೆ ಕಣ್ಣಿಡಿ ಎಂದು ಪಾಲಕರಿಗೆ ತಿಳಿ ಹೇಳಲಾಗುತ್ತಿದೆ.

ಭಾರತದಲ್ಲಿ ಕಾಲಿಟ್ಟಿದೆಯೇ ಡೆಡ್ಲಿ ಮೊಮೊ?
ವರದಿಗಳ ಪ್ರಕಾರ ಮೊಮೊ ಚಾಲೆಂಜ್​ ಇನ್ನೂ ದೇಶಕ್ಕೆ ಕಾಲಿಟ್ಟಿಲ್ಲ. ಆದರೆ, ಸೈಬರ್​ ತಜ್ಞರು ತಿಳಿಸಿರುವಂತೆ ಇಂಥ ಚಾಲೆಂಜ್​ಗಳ ಮುಖ್ಯ ಉದ್ದೇಶ ವ್ಯಕ್ತಿಗಳ ವೈಯಕ್ತಿಕ ಡೇಟಾಗಳನ್ನು ಮತ್ತು ಮಾಹಿತಿಯನ್ನು ಕದಿಯುವುದು. (ಏಜೆನ್ಸೀಸ್​)