ಏನಿದು ನಾನ್​ಸೆನ್ಸ್​, ಸುಳ್ಳು ಸುದ್ದಿ ಹರಡಿ ಮಾನನಷ್ಟ ಪ್ರಕರಣ ದಾಖಲಿಸುವಂತೆ ಪ್ರೇರೇಪಿಸಬೇಡಿ

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ್ದೆನ್ನಲಾದ ಬಯೋಪಿಕ್​ ಚಿತ್ರವನ್ನು ಚುನಾವಣೆ ಮುಗಿಯೊವರೆಗೂ ಬ್ಯಾನ್​ ಮಾಡಬೇಕೆಂದು ಒಂದು ದಿನದ ಹಿಂದಷ್ಟೇ ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮನವಿ ಕುರಿತು ಮಮತಾ ಅವರು ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ನಾನ್​ಸೆನ್ಸ್​? ಯಾವುದೇ ಬಯೋಪಿಕ್​ ಮಾಡುವುದರಿಂದ ನನಗೇನು ಸಮಸ್ಯೆ ಇಲ್ಲ. ಕೆಲವು ಯುವಕರು ತಮ್ಮಷ್ಟಕ್ಕೆ ಕತೆಯನ್ನು ಸಂಗ್ರಹಿಸಿ ಅದನ್ನು ತೆರೆಯ ಮೇಲೆ ತರುವುದು ಅವರಿಗೆ ಬಿಟ್ಟಿದ್ದು, ಅದು ನನಗೆ ಸಂಬಂಧಿಸಿದ್ದಲ್ಲ. ನಾನು ನರೇಂದ್ರ ಮೋದಿಯಲ್ಲ. ಸುಳ್ಳು ಹರಡುವ ಮೂಲಕ ನನ್ನನ್ನು ಮಾನನಷ್ಟ ಪ್ರಕರಣ ದಾಖಲಿಸಲು ಪ್ರೇರೆಪಿಸಬೇಡಿ ಎಂದು ಬಿಜೆಪಿಗರಿಗೆ ಟ್ವೀಟ್​ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಏ. 17ರಂದು ಬಿಜೆಪಿ ತೃಣಮೂಲ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಜೀವನಾಧರಿತ ಚಿತ್ರವನ್ನು ಚುನಾವಣೆ ಮುಗಿಯುವವರೆಗೆ ಬ್ಯಾನ್​ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಮನವಿ ಮಾಡಿತ್ತು.

ಮೇ 3, 2019 ರಂದು ಮಮತಾ ಬ್ಯಾನರ್ಜಿ ಕುರಿತಾದ ಬಯೋಪಿಕ್​ ಚಿತ್ರ ಬಿಡುಗಡೆಯಾಗಲಿದೆ ಎಂದು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಜನರ ಗಮನ ಆ ಕಡೆ ಕೇಂದ್ರಿಕೃತವಾಗಿತ್ತು. ಇದರ ಆಧಾರದ ಮೇಲೆ ಪಶ್ಚಿಮ ಬಂಗಾಳದ ಬಿಜೆಪಿ, ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಚಿತ್ರ ಬಿಡುಗಡೆಯಾಗುವ ಮುನ್ನ ಒಮ್ಮೆ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿತ್ತು. ನರೇಂದ್ರ ಮೋದಿ ಅವರು ಬಯೋಪಿಕ್​ ಚಿತ್ರ ಬ್ಯಾನ್​ ಮಾಡುವ ವಿಚಾರದಲ್ಲಿಯೂ ಇದೇ ರೀತಿ ಉಲ್ಲೇಖವಾಗಿದೆ ಎಂದು ಹೇಳಿ ಬಿಜೆಪಿ ಉಪಾಧ್ಯಕ್ಷ ಜೊಯ್​ ಪ್ರಕಾಶ್​ ಮಜುಮ್ದಾರ್​ ಮತ್ತು ಮುಖಂಡ ಶಿಶಿರ್​ ಬಜೊರಿಯಾ ಮನವಿ ಮಾಡಿಕೊಂಡಿದ್ದರು. (ಏಜೆನ್ಸೀಸ್​)