ಉನ್ನಾವೋ: ಉತ್ತರ ಪ್ರದೇಶದ ಸರ್ಕಾರಿ ಶಾಲೆಯೊಂದರ ಬೋಧನಾ ಗುಣಮಟ್ಟವನ್ನು ತೋರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉನ್ನಾವೋ ಜಿಲ್ಲೆಯ ಶಾಲೆಯೊಂದರ ಶಿಕ್ಷಕಿಯು 8ನೇ ತರಗತಿ ಇಂಗ್ಲಿಷ್ ಪುಸ್ತಕ ಓದಲು ತಡವರಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ ಏನಿದೆ?: ಉನ್ನಾವೋ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ದೇವೇಂದ್ರ ಕುಮಾರ್ ಪಾಂಡೆ ಶಾಲಾ ಪರಿಶೀಲನೆ ವೇಳೆ ಶಿಕ್ಷಕಿಯೊಬ್ಬರಿಗೆ ಒಂದು ಪ್ಯಾರ ಓದುವಂತೆ ಇಂಗ್ಲಿಷ್ ಬುಕ್ ನೀಡುತ್ತಾರೆ. ಆದರೆ, ಇಂಗ್ಲಿಷ್ ಓದಲು ವಿದ್ಯಾರ್ಥಿಗಳ ಮುಂದೆಯೇ ತಡವರಿಸಿದ ಶಿಕ್ಷಕಿಯನ್ನು ಕಂಡು ಕೋಪಗೊಂಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿಕ್ಷಕಿಯನ್ನು ತಕ್ಷಣ ಅಮಾನತುಗೊಳಿಸಿ ಆದೇಶಿಸುತ್ತಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದೇನು?
ಅವರೊಬ್ಬ ಶಿಕ್ಷಕಿಯಾಗಿ ಸರಿಯಾಗಿ ಓದಲು ಬರುವುದಿಲ್ಲ. ತತ್ಕ್ಷಣವೇ ಅವರನ್ನು ಅಮಾನತು ಮಾಡಲಾಗಿದೆ ಎಂದು ತಮ್ಮ ಪಕ್ಕದಲ್ಲಿದ್ದ ಇತರೆ ಅಧಿಕಾರಿಗಳಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದಾಗ, ಶಿಕ್ಷಕಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡುತ್ತಾರೆ. ಆದರೆ, ಅರ್ಥ ಹೇಳುವಂತೆ ಕೇಳಲಿಲ್ಲ. ತರ್ಜುಮೆ ಮಾಡಿ ಎಂದು ಹೇಳಲಿಲ್ಲ. ಕೇವಲ ಓದಲು ಮಾತ್ರ ಹೇಳಿದೆ ಎಂದು ಶಿಕ್ಷಕಿ ವಿರುದ್ಧ ದೇವೇಂದ್ರ ಪಾಂಡೆ ಆಕ್ರೋಶ ವ್ಯಕ್ತಪಡಿಸಿದರು.
ಉನ್ನಾವೋ ಜಿಲ್ಲೆಯ ಸಿಕಂದರಪುರ್ ಸರೌಸಿ ಏರಿಯಾದಲ್ಲಿರುವ ಸರ್ಕಾರಿ ಶಾಲೆಗೆ ತಪಾಸಣೆಗೆಂದು ದಿಢೀರ್ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ. ತಪಾಸಣೆ ವೇಳೆ 8ನೇ ತರಗತಿ ವಿದ್ಯಾರ್ಥಿನಿಯನ್ನು ಪುಸ್ತಕ ಓದುವಂತೆ ದೇವೇಂದ್ರ ಪಾಂಡೆ ಕೇಳಿದ್ದಾರೆ. ಆದರೆ, ವಿದ್ಯಾರ್ಥಿನಿ ಕೈಯಲ್ಲಿ ಆಗದಿದ್ದಾಗ ಶಿಕ್ಷಕಿಯನ್ನು ಕೇಳಿದ್ದಾರೆ. ಬಳಿಕ ಈ ಪ್ರಸಂಗ ಜರುಗಿದೆ. (ಏಜೆನ್ಸೀಸ್)
#WATCH Unnao: An English teacher fails to read a few lines of the language from a book after the District Magistrate, Devendra Kumar Pandey, asked her to read during an inspection of a govt school in Sikandarpur Sarausi. (28.11) pic.twitter.com/wAVZSKCIMS
— ANI UP (@ANINewsUP) November 30, 2019