ಅಂದಿಗಂದಿನ ಕೆಲಸ, ಸಂದನಿತರಲಿ ತೃಪ್ತಿ|
ಕುಂದದುಬ್ಬದ ಮನಸು ಬಂದುದೇನಿರಲಿ||
ಬಂಧುಮತಿ ಲೋಕದಲಿ, ಮುನ್ದೃಷ್ಟಿ ಪರಮದಲಿ|
ಹೊಂದಿರಲಿವದು ಪುಣ್ಯ-ಮಂಕುತಿಮ್ಮ||782||
ಆ ದಿನ ಯಾವ ಕೆಲಸವನ್ನು ಮಾಡಬೇಕೋ ಅದನ್ನು ಶ್ರದ್ಧೆಯಿಂದ ಮಾಡುವುದು. ಏನು ಲಭ್ಯವಾಯಿತೋ ಅಷ್ಟರಲ್ಲಿ ತೃಪ್ತಿಪಡುವುದು. ಏನೇ ಎದುರಾದರೂ ಕುಂದದಿರುವ, ಹಿಗ್ಗದಿರುವ ಮನಸ್ಸನ್ನು ಹೊಂದುವುದು. ಲೋಕದಲ್ಲಿರುವವರೊಡನೆ ಬಂಧುತ್ವ ವನ್ನು ಹೊಂದಿದ್ದರೂ ಆಂತರ್ಯದ ದೃಷ್ಟಿಯು ಪರಮಾತ್ಮನಲ್ಲಿ ನೆಲೆಯಾಗಿರುವುದು. ಈ ಬಗೆಯ ಮನೋಸ್ಥಿತಿಯನ್ನು ಹೊಂದಿ ದ್ದರೆ ಅದು ನಿಜಕ್ಕೂ ಪುಣ್ಯ ಎನ್ನುತ್ತದೆ ಈ ಕಗ್ಗ.
ನಾಳೆಗಳು ನಮ್ಮವು ಎನ್ನುವ ಭರವಸೆಯು ಸಾಕಾರವಾಗ ಬೇಕಾದರೆ ಆ ದಿನದ ಕೆಲಸವನ್ನು ಆಯಾ ದಿನವೆ ಮಾಡಿ ಮುಗಿಸಬೇಕು. ನಾಳೆ ಮಾಡೋಣ, ಇನ್ನೊಮ್ಮೆ ನೋಡೋಣ ಎಂದು ಮುಂದೆ ದೂಡುವ ಸೋಮಾರಿತನದಿಂದ ನಷ್ಟ-ಕಷ್ಟಗಳಿಗೆ ಒಳಗಾಗಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಕ್ರಿಯಾಶೀಲತೆಯು ಅವನಿರುವ ಸಮಾಜದ ಮೇಲೆ ಪ್ರಭಾವವನ್ನು ಬೀರುತ್ತದೆ. ಹೊಲದಲ್ಲಿ ದುಡಿಯುವ ರೈತರು, ನಾಡನ್ನು ಕಾಯುವ ಸೈನಿಕರು ಆ ಕ್ಷಣ, ಆ ದಿನ ಮಾಡಬೇಕಾದ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡುತ್ತಾರೆ. ನಾಳೆ ಮಾಡಿದರಾಯಿತು ಎಂದು ಉದಾಸೀನ ಮಾಡಿದರೆ ನಾಡಿಗೆ ನಾಡೆ ಪಾಡು ಪಡಬೇಕಾದೀತು. ಹಾಗೆಯೇ ಪ್ರತಿಯೊಬ್ಬರಿಗೂ ಅವರದ್ದೇ ಆದ ಕರ್ತವ್ಯಗಳು, ಮಾಡಲೆಬೇಕಾದ ಕೆಲಸ ಕಾರ್ಯಗಳು ಇದ್ದೇ ಇವೆ. ಕಳೆದ ನಿನ್ನೆಗಳ ಬಗೆಗೆ ಚಿಂತೆ, ಬರುವ ನಾಳೆಗಳ ಬಗೆಗೆ ಆತಂಕವನ್ನು ಹೊಂದಿದ್ದರೆ ವರ್ತಮಾನದ ಅಮೂಲ್ಯ ಕ್ಷಣಗಳು ಕೈತಪ್ಪಿ ಹೋಗುತ್ತವೆ. ತಾನು ಮಾಡಬೇಕಾದ ಕೆಲಸವನ್ನು ಇನ್ಯಾರದ್ದೋ ಹೆಗಲಿಗೇರಿಸದೆ, ಆಸಕ್ತಿ ಮತ್ತು ಪ್ರಾಮಾಣಿಕತೆಯಿಂದ ಕ್ಲಪ್ತ ಸಮಯಕ್ಕೆ ಕೆಲಸವನ್ನು ಮಾಡುವುದರಿಂದ ಆತ್ಮವಿಶ್ವಾಸವು ಹೆಚ್ಚುತ್ತದೆ. ತನಗೆ ತಾನು ಪ್ರಾಮಾಣಿಕನಾಗಿರುವವನು ಸಾಧಕನಾಗುತ್ತಾನೆ.
ಹೀಗೆ ಮಾಡಿದ ಕೆಲಸದಲ್ಲಿ ಏನು ಲಭ್ಯವಾಯಿತೋ ಅದರಲ್ಲಿ ಸಂತೃಪ್ತಿ ಹೊಂದಬೇಕು. ಕಡಿಮೆ ಕೆಲಸ ಹೆಚ್ಚು ಲಾಭ ಎನ್ನುವ ದೋರಣೆಯು ಆತ್ಮಸಂತೋಷವನ್ನು ನೀಡಲಾರದು. ಪಡೆದಷ್ಟೂ ಇಂಗದ ದಾಹವನ್ನು ಸೃಷ್ಟಿಸಿ ನೆಮ್ಮದಿಯನ್ನು ಕೆಡಿಸಬಹುದು. ಪ್ರತಿಫಲದ ಅಪೇಕ್ಷೆಯೇ ಮುಖ್ಯವಾಗಿರುವುದರಿಂದ ಮಾಡುವ ಕೆಲಸವು ಕಾಯಕಷ್ಟವೆನ್ನಿಸುತ್ತದೆ. ಮನವಿರದೆ ಮಾಡುವ ಯಾಂತ್ರಿಕ ಕೆಲಸದಲ್ಲಿ ಲೋಪ-ದೋಷಗಳು ಉಂಟಾಗಿ ಇನ್ನಷ್ಟು ಅಶಾಂತಿಗೆ ಕಾರಣವಾಗುತ್ತದೆ. ಕೆಲಸವು ಹೊರೆ ಎನ್ನಿಸಬಾರದೆಂದರೆ ಇಷ್ಟಪಟ್ಟು ಕೆಲಸ ಮಾಡಬೇಕು.
ಜೀವನದಲ್ಲಿ ಹಲವಾರು ಆಕಸ್ಮಿಕಗಳನ್ನು ಎದುರಿಸಬೇಕಾ ಗುತ್ತದೆ. ಭಾವಿಸಿದಂತಿರದ ಬದುಕಿನಲ್ಲಿ ಏನೇ ಬಂದರೂ ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಮರಗಿಡ, ಪ್ರಾಣಿ-ಪಕ್ಷಿಗಳು ಬದುಕನ್ನು ಬಂದಂತೆಯೇ ಒಪ್ಪಿಕೊಳ್ಳುತ್ತವೆ. ಅವುಗಳಲ್ಲಿ ಪ್ರತಿರೋಧ, ಪರಿತಾಪ, ಪ್ರತಿಷ್ಠೆಯ ಭಾವಗಳಿರುವುದಿಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯವನ್ನು ಕೈಬಿಡದೆ, ಅನುಕೂಲ ಸಂದರ್ಭಗಳಲ್ಲಿ ಬೀಗದೆ ಎಲ್ಲವೂ ದೈವಚಿತ್ತವೆಂಬ ನಿಲುವು ಸ್ವಭಾವವಾಗಬೇಕು. ಬದುಕಿನ ಭಾಗ್ಯಗಳ ಬಗೆಗೆ ಅರಿವು ಮತ್ತು ಸಂತೃಪ್ತಿ ಇದ್ದರೆ ಜೀವನದ ಪ್ರತಿಕ್ಷಣವು ಅನುಭವವಾಗಿ ಸ್ವೀಕರಿಸಲ್ಪಡುತ್ತದೆ, ಅದು ನೀಡುವ ಅರಿವಿನಿಂದ ವ್ಯಕ್ತಿತ್ವವು ವಿಸ್ತಾರವಾಗುತ್ತದೆ. ಜೀವನವು ಸಾರ್ಥಕತೆಯನ್ನು ಅನುಭವಿಸಬೇಕೆಂದರೆ ಲೋಕದ ಜನರೊಂದಿಗೆ ಬೆರೆತು ಬಾಳಬೇಕು. ಲೋಕ ಜೀವನದಿಂದ ಪಡೆದ ಶಿಕ್ಷಣವು ವ್ಯಕ್ತಿಯ ಅರಿವನ್ನಷ್ಟೇ ಹೆಚ್ಚಿಸುವುದಲ್ಲ, ಆತ್ಮಕ್ಕೂ ಶಿಕ್ಷಣವನ್ನು ನೀಡುತ್ತದೆ. ಬಂಧನಗಳಿಂದ ಮುಕ್ತರಾಗಿ ಉತ್ಕರ್ಷವನ್ನು ಹೊಂದಲು ಲೋಕ ಜೀವಿತವು ವೇದಿಕೆಯಾಗುತ್ತದೆ. ಹಾಗಾಗಿ ಲೋಕ ಜೀವನವನ್ನು ನಿರಾಕರಿಸದೆ, ತುಚ್ಛವೆಂದು ಪರಿಗಣಿಸದೆ ಎಲ್ಲರೊಂದಿಗೆ ಬೆರೆತು ಬಾಳಬೇಕು. ಇದರಿಂದ ಮನಸ್ಸು ಮಾಗುತ್ತದೆ. ಮನವು ಮಾಗಿದರೆ ಅರಿವು, ಮಾಗದಿರೆ ಸದಾ ಕೊರಗು.
ಜೀವನಾನುಭವದಿಂದ ಬೆಳೆದ ಅರಿವು ಗುರುವಿನಂತೆ ಮುನ್ನಡೆಸುತ್ತದೆ. ಜೀವಜಗತ್ತಿನ ಆಗುಹೋಗುಗಳಿಗೆ ಕಾರಣವಾಗಿರುವ ನಿಯಾಮಕ ಶಕ್ತಿಯನ್ನು ಅದು ಗುರುತಿಸುತ್ತದೆ. ಜಗದ ವಿಸ್ಮಯ, ಸೌಂದರ್ಯಗಳೆಲ್ಲವೂ ಪರಮಾತ್ಮನ ಲೀಲೆ, ಬದುಕಿನ ಸನ್ನಿವೇಶ
ಗಳೂ ಅವನದ್ದೇ ಎನ್ನುವುದನ್ನು ಗ್ರಹಿಸುತ್ತದೆ. ಆಗ ನಡೆ,ನುಡಿ, ಯೋಚನೆಗಳಲ್ಲೆಲ್ಲಾ ಪರಮಾತ್ಮ ತತ್ತ್ವವು ಸಹಜವಾಗಿ ಮಿಳಿತ ವಾಗುತ್ತದೆ. ಎಲ್ಲವೂ ದೇವರ ಚಿತ್ತ, ಬಾಂಧವ್ಯಗಳು ಅವನಿತ್ತ ವರ, ಜೀವನದ ಚಾಲಕ ಶಕ್ತಿಯೂ ಆತನೆ ಎಂಬ ಸಂಪೂರ್ಣ ಶರಣಾ ಗತ ಭಾವವು ಉಸಿರಾಟದಷ್ಟು ಸಹಜವಾಗುತ್ತದೆ. ಈ ಸ್ಥಿತಿಯನ್ನು ಪಡೆಯುವುದಕ್ಕಿಂತ ಮಿಗಿಲಾದ ಪುಣ್ಯವು ಇನ್ನೊಂದಿಲ್ಲ. ಇದರಿಂದಾಗಿ ಜೀವನದ ಪ್ರತಿಕ್ಷಣದಲ್ಲೂ ಧನ್ಯತೆಯನ್ನು ಮತ್ತೆಮತ್ತೆ ಅನುಭವಿಸುವಂತಾಗುತ್ತದೆ. ಕೆಲಸ ಕಾರ್ಯಗಳು ಯಜ್ಞವಾಗಿಜೀವನವು ಪರಮಾತ್ಮನಿಗೆ ಅರ್ಪಿಸುವ ಭಕ್ತಿಯ ಕುಸುಮವಾಗುತ್ತದೆ.
(ಲೇಖಕರು ಉಪನ್ಯಾಸಕರು, ಕವಯಿತ್ರಿ)
(ಪ್ರತಿಕ್ರಿಯಿಸಿ: [email protected], [email protected])
ಬಿಜೆಪಿ-ಜೆಡಿಎಸ್ ಪಾದಯಾತ್ರೆ: ನಾಳೆ ಒಂದು ಲಕ್ಷ ಕಾರ್ಯಕರ್ತರಿಂದ ಬೃಹತ್ ಸಮಾವೇಶ ಆಯೋಜನೆ