ಪ್ರಧಾನಿ ಮೋದಿಗೆ ವಾರಾಣಸಿಯಲ್ಲಿ ಪೈಪೋಟಿ ಕೊಡುತ್ತಿರುವ ಕಾಂಗ್ರೆಸ್​ನ ಅಜಯ್​ ರಾಯ್​ ಹಿನ್ನೆಲೆ ಗೊತ್ತೇ?

ವಾರಾಣಸಿ: ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ನ ಅಜಯ್​ ರಾಯ್​ ಸ್ಪರ್ಧಿಸುತ್ತಿದ್ದಾರೆ. ಇಂಥ ಅಜಯ್​ ರಾಯ್​ ಬಿಜೆಪಿ ಟಿಕೆಟ್​ ಮೇಲೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಅಲ್ಲದೆ 2009 ಮತ್ತು 2014ರಲ್ಲಿ ಲೋಕಸಭಾ ಸ್ಥಾನಕ್ಕೆ ಎರಡು ಬಾರಿ ಸ್ಪರ್ಧಿಸಿ, ಎರಡೂ ಬಾರಿ ಭಾರಿ ಸೋಲಿನ ಮುಖಭಂಗ ಅನುಭವಿಸಿದ್ದರು ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ.

ಹೌದು. ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ಅಜಯ್​ ಸಿಂಗ್​ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ (ಎಬಿವಿಪಿ) ಮೂಲದವರು. ವಿದ್ಯಾರ್ಥಿ ಸಂಘಟನೆ, ಹೋರಾಟದ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಅಜಯ್​ ಅವರಿಗೆ 1996ರಿಂದ 2007ರವರೆಗೆ ಉತ್ತರ ಪ್ರದೇಶದ ಕೋಸ್ಲಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಟಿಕೆಟ್​ ಕೊಟ್ಟಿದ್ದ ಬಿಜೆಪಿ ಶಾಸಕರಾಗಲು ಸಹಕರಿಸಿತ್ತು.

ಆದರೆ, 2007ರ ವಿಧಾನಸಭೆ ಚುನಾವಣೆಯಲ್ಲಿ ಇವರಿಗೆ ಟಿಕೆಟ್​ ಕೊಡಲು ಬಿಜೆಪಿ ಹೈಕಮಾಂಡ್​ ನಿರಾಕರಿಸಿತು. ಬ್ರಾಹ್ಮಣರು ಮತ್ತು ಭೂಮಿಹಾರ್​ ಸಮುದಾಯದ ಅಪಾರ ಬೆಂಬಲ ಹೊಂದಿರುವ ಅಜಯ್​ ರಾಯ್​ ಇದರಿಂದ ಬೇಸರಗೊಂಡು ಸಮಾಜವಾದಿ ಪಕ್ಷಕ್ಕೆ ಜಿಗಿದಿದ್ದರು. 2009ರಲ್ಲಿ ಬಿಜೆಪಿಯ ಮುರಳಿ ಮನೋಹರ್​ ಜೋಷಿ ಅವರ ವಿರುದ್ಧ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಇವರು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬಿಎಸ್​ಪಿಯ ಮುಖ್ತಾರ್​ ಅನ್ಸಾರಿಗೆ 2ನೇ ಸ್ಥಾನ ದೊರೆತಿತ್ತು.

ಇದೇ ವರ್ಷ ಕೋಸ್ಲಾ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಜಯ್​ ರಾಯ್​ ಶಾಸಕರಾಗಿ ಆಯ್ಕೆಯಾಗಿದ್ದರು. ಕೋಸ್ಲಾ ವಿಧಾನಸಭಾ ಕ್ಷೇತ್ರ ಮರವಿಂಗಡಣೆಗೊಂಡು ಪಿಂಡ್ರಾ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ 2012ರಲ್ಲಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ಆದರೆ, 2017ರಲ್ಲಿ ಬಿಜೆಪಿಯ ಅವದೇಶ್​ ಸಿಂಗ್​ ವಿರುದ್ಧ ಸೋಲುಂಡಿದ್ದರು.

ಕೇವಲ 75 ಸಾವಿರ ಮತಗಳು ಬಂದಿದ್ದವು
2014ರ ಲೋಕಸಭಾ ಚುನಾವಣೆಯಲ್ಲಿ ಅಜಯ್​ ರಾಯ್​ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದರು. ದೆಹಲಿ ಸಿಎಂ ಹಾಗೂ ಆಪ್​ ನಾಯಕ ಅರವಿಂದ ಕೇಜ್ರಿವಾಲ್​ ಹಾಗೂ ನರೇಂದ್ರ ಮೋದಿ ಅವರ ಪ್ರಬಲ ಪೈಪೋಟಿಯಿಂದಾಗಿ ಕೇವಲ 75 ಸಾವಿರ ಮತಗಳನ್ನು ಗಳಿಸಿದ್ದ ಇವರು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಇದೀಗ ಅವರು ಕಾಂಗ್ರೆಸ್​ ಹೈಕಮಾಂಡ್​ ಸೂಚನೆ ಮೇರೆಗೆ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಸೆಣೆಸಲು ಸಜ್ಜಾಗುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಬೆನ್ನಲ್ಲೇ ಶುಕ್ರವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ಕೊನೆಯ ಹಂತದಲ್ಲಿ ಅಂದರೆ ಮೇ 19ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *