ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ ದಿನೇ ಕಡಿಮೆಯಾಗುತ್ತಿದೆ. ಡೈಮೆನ್ಸಿಯಾ, ಅಲ್ಜಮೈರ್ನಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಉದ್ವೇಗ, ಖಿನ್ನತೆ, ಆತಂಕ, ಮರೆವು ಮುಂತಾದ ತೊಂದರೆಗಳು ಬರುತ್ತಿವೆ. ಹಾಗಾಗಿ ಹೀಗೆ ಆಗಲು ಕಾರಣಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಇಂದು ತಿಳಿದುಕೊಳ್ಳೋಣ.
ಮೊದಲನೆಯದಾಗಿ, ‘ಆಹಾರ ಶುದ್ಧೋ ಸತ್ವ ಶುದ್ಧಿಃ’ ಅಂದರೆ ಹಿತ ಮಿತವಾದ, ಸ್ವಚ್ಛವಾದ, ಸಾತ್ವಿಕ ಗುಣವನ್ನು ಹೊಂದಿರುವ ಪೋಷಕಾಂಶ ಭರಿತ ಆಹಾರ ಸೇವನೆಯಿಂದ ಮಾತ್ರ ನಮ್ಮ ಮನಸ್ಸು, ಮಿದುಳು ಚೆನ್ನಾಗಿರಲು ಸಾಧ್ಯ. ಹಾಗಾಗಿ ಅಪರೂಪಕ್ಕೊಮ್ಮೆ ಬಾಯಿ ರುಚಿಗೆಂದು ತಿನ್ನಬಹುದೇ ಹೊರತು ನಿತ್ಯವೂ ಅದೇ ತಪ್ಪನ್ನು ಮಾಡಬಾರದು. ವಿಶೇಷವಾಗಿ 18-20 ವರ್ಷಗಳ ಒಳಗಿನವರು ಕುರುಕಲು ತಿಂಡಿಗಳನ್ನು ಅಥವಾ ರಾಸಾಯನಿಕಗಳು ತುಂಬಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಶಾಶ್ವತವಾಗಿ ಮಿದುಳಿನ ಬೆಳವಣಿಗೆಯಲ್ಲಿ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಹಲವು ಸಂಶೋಧನೆಗಳು ಹೇಳುತ್ತವೆ.
ನಾವು ಸೇವಿಸುವ ಆಹಾರ ಸರಿಯಿಲ್ಲದೇ ಹೋದರೆ ಆ ಆಹಾರ ಕರುಳಿಗೆ ಹೋಗಿ ಅಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ನಮ್ಮ ಮಿದುಳು ಹಾಳಾಗಿ ಹೋಗುತ್ತದೆ. ಏಕೆಂದರೆ ಮಿದುಳಿಗೂ ಕರುಳಿಗೂ ಅವಿನಾಭಾವ ಸಂಬಂಧವಿದೆ ಎಂದು ವಿಜ್ಞಾನ ಹೇಳುತ್ತದೆ. ತಿಂಡಿಯೋ ಊಟವೋ ರುಚಿಯಾಗಿದೆ ಎಂದು ಅತಿಯಾಗಿ ಸೇವಿಸುವುದರಿಂದ ಮಿದುಳು ಅಥವಾ ಬುದ್ಧಿಯ ವಿಷಯದಲ್ಲಿ ತೊಂದರೆಯಾಗುತ್ತದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧನೆಯು ಹೇಳುತ್ತದೆ. ಒಳ್ಳೆಯ ಕೊಬ್ಬಿನ ಸೇವನೆಯ ಕೊರತೆ ಕೂಡ ಮಿದುಳಿನ ಬೆಳವಣಿಗೆಗೆ ತೊಂದರೆ ಉಂಟು ಮಾಡಬಹುದು. ಏಕೆಂದರೆ ತುಪ್ಪ, ಗಾಣದ ಎಣ್ಣೆ, ಮೀನು, ಮೊಟ್ಟೆಗಳಲ್ಲಿ ಸಿಗುವ ಕೊಬ್ಬು ಮಿದುಳಿನ ಬೆಳವಣಿಗೆ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ.
ಹಾಗಾಗಿ ನಾವು ಮತ್ತು ನಮ್ಮ ಮಕ್ಕಳ ಮಿದುಳಿನ ಆರೋಗ್ಯಕ್ಕಾಗಿ ಒಳ್ಳೆಯ ಕೊಬ್ಬನ್ನು ಸೇವಿಸಲೇಬೇಕು. ಬೇರೆ ಬೇರೆ ಕಾರಣಗಳಿಗೆ ನಿದ್ದೆಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಮಾಡುವುದು ಕೂಡ ನೆನಪಿನ ಶಕ್ತಿ ಮತ್ತು ಮಿದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ತೊಂಬತ್ತು ನಿಮಿಷಗಳಲ್ಲಿ ನಿದ್ರೆಯ ಒಂದು ಚಕ್ರ ಪೂರ್ತಿಯಾಗುತ್ತದೆ. ಅಂತಹ ನಾಲ್ಕೈದು ಚಕ್ರಗಳನ್ನು ನಾವು ಮುಗಿಸಬೇಕು. ಹಾಗಾಗಿ ಪ್ರತಿನಿತ್ಯ ಕನಿಷ್ಠ 7 ರಿಂದ 8 ತಾಸು ನಿದ್ದೆಯನ್ನು ಮಾಡಲೇಬೇಕು. ಮಿದುಳು ನಿದ್ದೆಯಲ್ಲಿ ತನ್ನನ್ನು ತಾನು ದುರಸ್ತಿ ಮಾಡಿಕೊಳ್ಳುತ್ತದೆ.
ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಯ ವ್ಯಾಯಾಮವನ್ನಾದರೂ ಮಾಡಿದರೆ ನಮ್ಮ ನೆನಪಿನ ಶಕ್ತಿಗೆ ಬೇಕಾದ ಅತ್ಯಂತ ಮುಖ್ಯವಾದ ಮೆದುಳಿನ ಭಾಗವಾದ ಹಿಪ್ಪೊಕ್ಯಾಂಪಸ್ ಚೆನ್ನಾಗಿರಲು ಸಹಾಯವಾಗುತ್ತದೆ. ಮೆದುಳಿನ ಜೀವಕೋಶಗಳ ಬೆಳವಣಿಗೆ ಮತ್ತು ಅವುಗಳ ಜೀವಿತಾವಧಿ ಚೆನ್ನಾಗಿರಲು ಕೂಡ ವ್ಯಾಯಾಮ ಅತ್ಯವಶ್ಯ. ಅದರಲ್ಲೂ ಯೋಗಾಸನ, ಪ್ರಾಣಾಯಾಮಗಳನ್ನು ಸರಿಯಾಗಿ ಮಾಡಿದರೆ ಎಂಥವರ ಮಿದುಳು ಕೂಡ ಚೆನ್ನಾಗಿರಲು ಸಾಧ್ಯವಾಗುತ್ತದೆ. ಸಕ್ಕರೆ, ತಂಬಾಕು, ಮದ್ಯ, ಸಿಗರೇಟ್ ಇಂಥವುಗಳಲ್ಲಿ ಇರುವ ವಿಷಕಾರಿ ರಾಸಾಯನಿಕಗಳು ಮಿದುಳಿನ ಮೇಲೆ ನೇರವಾಗಿ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ. ಇವುಗಳ ಸೇವನೆಯ ಕಾರಣದಿಂದ ಡೊಪಮಿನ್ ಮತ್ತು ಡೊಪಮಿನ್ ಸಂವಾಹಕಗಳಲ್ಲಿ ಏರು-ಪೇರು ಉಂಟಾಗಿ ಚಟ, ಉದ್ವೇಗ ಅಥವಾ ಖಿನ್ನತೆಗಳಂತಹ ಸಮಸ್ಯೆಗಳು ಉಂಟಾಗುತ್ತವೆ.
ಕೆಲವು ಸಂಶೋಧನೆಗಳ ಪ್ರಕಾರ ಸಕ್ಕರೆಯ ಅತಿಯಾದ ಸೇವನೆಯಿಂದ ಮರೆವಿನ ಕಾಯಿಲೆ ಮತ್ತು ಮಾನಸಿಕ ಏರುಪೇರು ಉಂಟಾಗುತ್ತವೆ. ಹಾಗಾಗಿ ನಮ್ಮ ಮಕ್ಕಳಿಗೆ ಸಕ್ಕರೆಯನ್ನು ಕೊಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಮೊಬೈಲ್ನ ಅತಿ ಬಳಕೆಯಿಂದ ಮಕ್ಕಳಲ್ಲಿ ಪ್ರೀಫ್ರಂಟಲ್ ಕಾರ್ಟೆಕ್ಸ್ ಎಂಬ ಮಿದುಳಿನ ಅಂಗವು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ ಎಂಬುದನ್ನು ವಿಜ್ಞಾನ ಕಂಡುಕೊಂಡಿದೆ. ಜತೆಗೆ ಅವರಲ್ಲಿ ಮಾನಸಿಕ ಸ್ಥಿಮಿತ ಕಡಿಮೆಯಾಗುತ್ತ ಹೋಗುತ್ತದೆ. ಮಿದುಳಿಗೆ ಸಾಧ್ಯವಾದಷ್ಟು ಹೊಸ ಹೊಸ ಚಾಲೆಂಜ್ಗಳನ್ನು ಕೊಡುತ್ತಾ ಹೋಗಬೇಕು. ಉದಾಹರಣೆಗೆ ಚೆಸ್ ಆಡುವುದು, ನೆನಪಿನ ಶಕ್ತಿಗೆ ಸಂಬಂಧಪಟ್ಟ ಆಟಗಳನ್ನು ಆಡುವುದು ಇತ್ಯಾದಿ.
ವಿಟಮಿನ್ ಬಿ12 , ವಿಟಮಿನ್ ಡಿ ಮುಂತಾದವು ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಅಥವಾ ಇವುಗಳು ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸರಿಯಾಗಿ ಸೇವಿಸಬೇಕು. ಹಲವಾರು ಕಾರಣಗಳಿಂದ ನಾವು ನಮ್ಮ ಮಿದುಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇಷ್ಟನ್ನಾದರೂ ನಾವು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ನಮ್ಮ ಆಹಾರ, ದಿನಚರಿ ಮತ್ತು ಮಾನಸಿಕ ಸ್ಥಿತಿಯನ್ನು ಸರಿಯಾಗಿ ಇಟ್ಟುಕೊಂಡರೆ ನೂರು ವರ್ಷವಾದರೂ ಮಿದುಳು ಚೆನ್ನಾಗಿರಲು ಸಾಧ್ಯವಾಗುತ್ತದೆ.