Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ರಾಜಧಾನಿಗೆ ಏಕೀಕೃತ ಭೂ ಸಾರಿಗೆ ಪ್ರಾಧಿಕಾರ

Friday, 06.07.2018, 3:05 AM       No Comments

ರಾಜಧಾನಿ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇರಿಸಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಅಚ್ಚುಕಟ್ಟಾಗಿ ನಿರ್ವಹಿಸಲು ಸಹಕಾರಿಯಾಗುವಂತೆ ‘ಏಕೀಕೃತ ಭೂ ಸಾರಿಗೆ ಪ್ರಾಧಿಕಾರ’ ರಚಿಸಲು ನಿರ್ಧರಿಸಿದೆ. ಮೆಟ್ರೋ, ಬಿಎಂಟಿಸಿ ಸೇರಿ ಇತರೆ ಸಾರಿಗೆ ಹಾಗೂ ನಗರ ಅಭಿವೃದ್ಧಿ ಸಂಸ್ಥೆಗಳ ನಡುವೆ ಸಮನ್ವಯ ರೂಪಿಸಿ ಪ್ರಯಾಣಿಕ ಸ್ನೇಹಿ ಸಾರಿಗೆ ವ್ಯವಸ್ಥೆ ತರಲು ಉದ್ದೇಶಿಸಲಾಗಿದೆ. ನಷ್ಟದಲ್ಲಿರುವ ಬಿಎಂಟಿಸಿಗೆ ಆರ್ಥಿಕ ಚೇತರಿಕೆ ನೀಡಲು 100 ಕೋಟಿ ರೂ. ನೇರ ಸಹಾಯಧನ, ಬಿಎಂಟಿಸಿಗೆ 1,625 ಹೊಸ ಬಸ್, ನಗರಲ್ಲಿನ ವಾಯುಮಾಲಿನ್ಯ ಪರಿಹಾರಕ್ಕೆ ಎಲೆಕ್ಟ್ರಿಕ್ ಬಸ್ ಸಂಚಾರ, ರಿಚಾರ್ಜ್ ಘಟಕ ಸ್ಥಾಪನೆ ಯೋಜನೆ ಘೋಷಿಸಲಾಗಿದೆ.

ಬಿಎಂಟಿಸಿ, ಬಿಎಂಆರ್​ಸಿಎಲ್, ಬಿಬಿಎಂಪಿ, ಬಿಡಿಎ, ನಗರ ಭೂ ಸಾರಿಗೆ ನಿರ್ದೇಶನಾಲಯ ಸೇರಿ ನಗರದಲ್ಲಿನ ಹಲವು ಸಂಸ್ಥೆಗಳನ್ನು ಒಂದೇ ಸೂರಿನಡಿ ತರಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಬೆಂಗಳೂರು ಸಾರಿಗೆ ಸೇವೆಯ ಸಮಗ್ರ ಸುಧಾರಣೆಗಾಗಿ ‘ಏಕೀಕೃತ ಭೂ ಸಾರಿಗೆ ಪ್ರಾಧಿಕಾರ’ (ಯುನೈಟೆಡ್ ಮೆಟ್ರೋಪಾಲಿಟನ್ ಟ್ರಾನ್ಸ್​ಪೋರ್ಟ್ ಅಥಾರಿಟಿ- ಉಮ್ಟಾ) ರಚನೆಗೆ ಸರ್ಕಾರ ನಿರ್ಧರಿಸಿದೆ.

ಬಿಎಂಟಿಸಿ, ಬಿಎಂಆರ್​ಸಿಎಲ್, ಬಿಬಿಎಂಪಿ, ಬಿಡಿಎ ಮುಂತಾದ ಸಂಸ್ಥೆಗಳ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಮಹಾನಗರದಲ್ಲಿ ಹಲವು ಸಮಸ್ಯೆಗಳು ಉದ್ಭವವಾಗಿವೆ. ಮೆಟ್ರೋ ರೈಲು ನಿಲ್ದಾಣಗಳಿಗೆ ಸೂಕ್ತ ಬಿಎಂಟಿಸಿ ಬಸ್ ಸಂಪರ್ಕ ಕೊರತೆಯಿದೆ. ಬಿಎಂಟಿಸಿಯ ಫೀಡರ್ ಬಸ್ ಸೇವೆ ನಷ್ಟ ಅನುಭವಿಸುತ್ತಿದ್ದರೂ ಬಿಎಂಆರ್​ಸಿಎಲ್​ನಿಂದ ಸಹಾಯಹಸ್ತ ದೊರೆತಿಲ್ಲ. ಮೆಟ್ರೋ, ರೈಲು ಹಾಗೂ ಬಸ್ ನಿಲ್ದಾಣ ಅಕ್ಕಪಕ್ಕದಲ್ಲೇ ಇದ್ದರೂ ಇವುಗಳ ನಡುವೆ ಸೂಕ್ತ ಪಾದಚಾರಿ ಮಾರ್ಗವಿಲ್ಲ. ಇಂತಹ ಹಲವು ಅವ್ಯವಸ್ಥೆಗಳು ಸಿಲಿಕಾನ್ ಸಿಟಿಯಲ್ಲಿವೆ.

ತಮ್ಮ ವ್ಯಾಪ್ತಿಗಷ್ಟೇ ಸೀಮಿತವಾಗಿ ರಸ್ತೆ ಸಾರಿಗೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಬಸ್ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳೆಕೆಯಿಂದ ದೂರ ಉಳಿದು ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಬಿಎಂಆರ್​ಸಿಎಲ್, ಬಿಎಂಟಿಸಿ, ಬಿಡಿಎ ಹಾಗೂ ಬಿಬಿಎಂಪಿ ಹಾಗೂ ಇತರೆ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿ, ಕೈಗೆಟುಕುವ ದರದಲ್ಲಿ ಅಡೆತಡೆಗಳಿಲ್ಲದ ಅನುಕೂಲಕರ ಸಾರಿಗೆ ವ್ಯವಸ್ಥೆ ರೂಪಿಸುವುದಕ್ಕೆ ಬೇಕಾದ ಸಮಗ್ರ ಕಾರ್ಯತಂತ್ರ ಹಾಗೂ ಕ್ರಿಯಾಯೋಜನೆ ರೂಪಿಸುವುದು ಪ್ರಾಧಿಕಾರದ ಜವಾಬ್ದಾರಿಯಾಗಿರಲಿದೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ.

ಏಕೀಕೃತ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರಲಿದ್ದಾರೆ. ಈ ಕುರಿತು ಕರಡುನೀತಿಯೂ ಸಿದ್ಧವಾಗಿದ್ದು, ಶೀಘ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ.

ಏಕೀಕೃತ ಟಿಕೆಟ್ ವ್ಯವಸ್ಥೆ ಜಾರಿ

ಎಲ್ಲ ರಸ್ತೆ ಸಾರಿಗೆ ಸಂಸ್ಥೆಗಳನ್ನು ಒಂದೇ ಸೂರಿನಡಿ ತಂದಲ್ಲಿ ಪ್ರಯಾಣಿಕರಿಗೆ ಹಲವು ಲಾಭ ದೊರೆಯಲಿದೆ. ಒಂದೇ ಸ್ಮಾರ್ಟ್ ಕಾರ್ಡ್ ಬಳಸಿಕೊಂಡು ಮೆಟ್ರೋ, ಬಿಎಂಟಿಸಿ ಬಸ್ ಅಥವಾ ಉಪನಗರ ರೈಲುಗಳಲ್ಲೂ ಸಂಚರಿಸಬಹುದಾದ ವ್ಯವಸ್ಥೆ ರೂಪಿಸುವ ಕಾರ್ಯಯೋಜನೆಯನ್ನು ಪ್ರಾಧಿಕಾರ ರಚಿಸಬಹುದಾಗಿದೆ. ಈ ಕುರಿತು ಈಗಾಗಲೇ ನಗರಾಭಿವೃದ್ಧಿ ಇಲಾಖೆ ಕಾರ್ಯೋನ್ಮುಖವಾಗಿದ್ದು ಬಿಎಂಟಿಸಿ, ಕೆಎಸ್​ಆರ್​ಟಿಸಿ, ಬಿಎಂಆರ್​ಸಿಎಲ್ ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯಕ್ಕೆ ಪತ್ರ ಬರೆದು ಪ್ರಸ್ತಾವನೆ ಆಹ್ವಾನಿಸಿದೆ.

ಸಾರಿಗೆ ಸಂಪರ್ಕ ನೀಡಿಕೆಗೆ ಆದ್ಯತೆ

ಮೆಟ್ರೋ, ರೈಲು ಮತ್ತು ಬಸ್ ಸೇವೆ ಜತೆಯಾಗುವ ಯಶವಂತಪುರ, ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಕೆಂಗೇರಿ, ಪೀಣ್ಯ ಸೇರಿ ನಗರದ ಹಲವೆಡೆ ಸಾರಿಗೆ ಸೇವೆಗಳನ್ನು ಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮೊದಲು ಇಂತಹ ಪ್ರದೇಶ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸುವುದು ಪ್ರಾಧಿಕಾರದ ಜವಾಬ್ದಾರಿ ಎನ್ನಲಾಗಿದೆ.

100 ವಿದ್ಯುತ್ ಮರುಪೂರಣ ಘಟಕ

ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಪೋ›ತ್ಸಾಹಿಸಲು ಸರ್ಕಾರ ಹೆಜ್ಜೆ ಇರಿಸಿದೆ. ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿದ ಬಳಿಕ ಇದೀಗ 4 ಕೋಟಿ ರೂ. ವೆಚ್ಚದಲ್ಲಿ 100 ರೀಚಾರ್ಜಿಂಗ್ ಘಟಕ ಸ್ಥಾಪಿಸಲು ನಿರ್ಧರಿಸಿದೆ. ರಾಜಧಾನಿಯಲ್ಲಿ 6,275 ಎಲೆಕ್ಟ್ರಿಕ್ ವಾಹನಗಳಿವೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ಕೂಡ ಎಲೆಕ್ಟ್ರಿಕ್ ವಾಹನ ಉತ್ತೇಜನಕ್ಕೆ ಪ್ರಸಕ್ತ ವರ್ಷದಿಂದ ಹೊಸ ಕ್ರಮ ಕೈಗೊಂಡಿದೆ. ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರ ಸ್ಥಾಪಿಸುವವರಿಗೆ ಪ್ರತಿ ಯೂನಿಟ್​ಗೆ 4.85 ರೂ.ನಲ್ಲಿ ವಿದ್ಯುತ್ ದೊರೆಯಲಿದೆ.

ಸಂಘ-ಸಂಸ್ಥೆಗಳಿಗೆ ಅನುದಾನ

ರಾಜ್ಯದಲ್ಲಿ ಜಾತ್ಯತೀತವಾಗಿ ದಾಸೋಹ, ಶಿಕ್ಷಣ, ಸಾಮಾಜಿ ಸೇವೆ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಠಗಳು ಮತ್ತು ಸಂಘಗಳ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಬಜೆಟ್​ನಲ್ಲಿ 25 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅದರಂತೆ ಬೆಂಗಳೂರಿನ ರಾಜ್ಯ ಕುಂಬಾರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗಂಗಾಮತಸ್ಥ, ಮೊಗವೀರ, ಬೆಸ್ತ, ಕೋಳಿ ಸಮಾಜ ಮತ್ತು ಸವಿತಾ ಸಮಾಜಗಳ ಸಂಘ ಮತ್ತು ಧಾರ್ವಿುಕ ಪೀಠಗಳನ್ನು ಸೇರಿಸಲಾಗಿದೆ.

ಅತ್ಯಾಧುನಿಕ ಕೈಮಗ್ಗ ಕೇಂದ್ರ ಸ್ಥಾಪನೆ

ಜವಳಿ ಮತ್ತು ಸಿದ್ಧ ಉಡುಪು ವಲಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವುದು ಹಾಗೂ ಉದ್ಯೋಗ ಸೃಷ್ಟಿಗೆ ಹೊಸ ಜವಳಿ ನೀತಿಯನ್ನು ರೂಪಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಅದರ ಜತೆಗೆ ಬೆಂಗಳೂರಿನ ಎಚ್​ಎಂಟಿ ಲಿಂಕ್ ರಸ್ತೆಯಲ್ಲಿನ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಡಿಸೈನ್​ನಲ್ಲಿ ಅತ್ಯಾಧುನಿಕ ಕೈಮಗ್ಗ ಕೇಂದ್ರ ಸ್ಥಾಪನೆ ಕುರಿತು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಹೊಸ ತಂತ್ರಜ್ಞಾನವನ್ನು ನೇಕಾರರಿಗೆ ಪರಿಚಯಿಸಲಾಗುವುದು ಎಂದು ತಿಳಿಸಲಾಗಿದೆ.

ಮೆಟ್ರೋ, ಬಿಎಂಟಿಸಿ ಜತೆ ರೈಲ್ವೆಯೂ ಭೂ ಸಾರಿಗೆಯ ಪ್ರಮುಖ ಅಂಗ. ಸರ್ಕಾರ ಇವುಗಳ ನಡುವೆ ಹೆಚ್ಚಿನ ಸಮನ್ವಯ ತರಬೇಕು. ಈ ಪ್ರಾಧಿಕಾರ ಸರ್ಕಾರದ ಅಧೀನದಲ್ಲಿರದೆ ಸ್ವತಂತ್ರ ಸಂಸ್ಥೆಯಾಗಬೇಕು. ಹೀಗಿದ್ದಲ್ಲಿ ಮಾತ್ರ ಸೂಕ್ತ ವ್ಯವಸ್ಥೆ ತರಲು ಸಾಧ್ಯ. ಸರ್ಕಾರ ಪ್ರಾಧಿಕಾರಕ್ಕೆ ಕನಿಷ್ಠ 500 ಕೋಟಿ ರೂ. ಮೂಲಧನ ನೀಡಬೇಕು.

| ಸಂಜೀವ್ ದ್ಯಾಮಣ್ಣವರ್ ನಗರ ಸಾರಿಗೆ ತಜ್ಞ

ಬಿಬಿಎಂಪಿ ಟ್ರೇಡ್ ಲೈಸೆನ್ಸ್ ರದ್ದು ಮಾಡಬೇಕೆಂಬುದು ಉದ್ಯಮಿಗಳ ಬಹುದಿನದ ಬೇಡಿಕೆಯಾಗಿತ್ತು. ಆದರೆ, ಬಜೆಟ್​ನಲ್ಲಿ ಆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಉದ್ಯಮಿಗಳು ಸಮಸ್ಯೆ ಅನುಭವಿಸುವುದು ಮುಂದುವರಿಯುವಂತಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ಜಾಸ್ತಿ ಮಾಡಿರುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಪಕ್ಷ ಕಾಂಗ್ರೆಸ್ ಹೋರಾಟಕ್ಕೆ ವಿರುದ್ಧವಾದ ನಿರ್ಧಾರ ಪ್ರಕಟಿಸಿದ್ದಾರೆ. ಇದರಿಂದ ಜನರ ಮೇಲಷ್ಟೇ ಅಲ್ಲದೆ, ಕೈಗಾರಿಕೆ ಸೇರಿ ಇನ್ನಿತರ ವಲಯಗಳ ಮೇಲೆ ಭಾರಿ ಹೊರೆ ಬೀಳಲಿದೆ.

| ಸಜ್ಜನ್ ರಾಜ್ ಮೆಹ್ತಾ ಉದ್ಯಮಿ

ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತಮವಾದ ಬಜೆಟ್ ಮಂಡಿಸಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಬಂಧಿಸಿದಂತೆ ಎಲಿವೇಟೆಡ್ ಕಾರಿಡಾರ್ ಅನುಷ್ಠಾನದ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಕಾಮಗಾರಿಗಾಗಿ 1 ಸಾವಿರ ಕೋಟಿ ರೂ. ನೀಡಲಾಗಿದೆ. ಅದರಂತೆ ಸಿದ್ದರಾಮಯ್ಯ ನೀಡಿರುವ ಯೋಜನೆಗಳನ್ನು ಮುಂದುವರಿಸಿರುವುದು ಸ್ವಾಗತಾರ್ಹ.

| ಆರ್.ಸಂಪತ್​ರಾಜ್ ಮೇಯರ್

ಬೊಮ್ಮಸಂದ್ರ- ಅತ್ತಿಬೆಲೆ ಮೆಟ್ರೋ ರೈಲು ಸಂಪರ್ಕ ಯೋಜನೆ ರದ್ದು!

ನಮ್ಮ ಮೆಟ್ರೋ 3ನೇ ಹಂತದಲ್ಲಿ ನಿರ್ವಿುಸಲು ಉದ್ದೇಶಿಸಲಾಗಿದ್ದ ಬೊಮ್ಮಸಂದ್ರ- ಅತ್ತಿಬೆಲೆ ಮಾರ್ಗವನ್ನು ಪ್ರಸಕ್ತ ಬಜೆಟ್​ನಲ್ಲಿ ಕೈಬಿಡಲಾಗಿದೆ.

ಮೆಟ್ರೋ 3ನೇ ಹಂತದಲ್ಲಿ ಜೆ.ಪಿ. ನಗರದಿಂದ ಹೆಬ್ಬಾಳ ಮೂಲಕ ಕೆ.ಆರ್. ಪುರದವರೆಗೆ 42.75 ಕಿ.ಮೀ., ಟೋಲ್​ಗೇಟ್​ನಿಂದ ಕಡಬಗೆರೆವರೆಗೆ 12.5 ಕಿ.ಮೀ., ಗೊಟ್ಟಿಗೆರೆಯಿಂದ ಬಸವಪುರದವರೆಗೆ 3.07 ಕಿ.ಮೀ., ಆರ್.ಕೆ. ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್​ವರೆಗೆ 18.95 ಕಿ.ಮೀ., ಕೋಗಿಲು ಕ್ರಾಸ್​ನಿಂದ ರಾಜಾನುಕುಂಟೆಯವರೆಗೆ 10.6 ಕಿ.ಮೀ. ಹಾಗೂ ಇಬ್ಬಲೂರಿನಿಂದ ಕಾರ್ಮಲ್​ರಾಮ್ರೆಗೆ 6.67 ಕಿ.ಮೀ., ಹೀಗೆ ಒಟ್ಟು 95 ಕಿ.ಮೀ. ಮಾರ್ಗಗಳ ಅಧ್ಯಯನ ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ.3ನೇ ಹಂತದಲ್ಲಿ ವರ್ತಲ ಮೆಟ್ರೋ ಯೋಜನೆ ಜಾರಿಯಾಗುತ್ತಿದೆ. ಮೆಟ್ರೋ 1 ಮತ್ತು 2ನೇ ಹಂತವನ್ನು ಸಂರ್ಪಸುವಂತೆ ವೃತ್ತಾಕಾರದ ರೀತಿ ಹೊಸ ಮಾರ್ಗ ನಿರ್ವಣವಾಗಲಿದೆ.

ಅತ್ತಿಬೆಲೆಯವರೆಗೆ ಮೆಟ್ರೋ: ನಮ್ಮ ಮೆಟ್ರೋ 2ನೇ ಹಂತದಲ್ಲಿ ಆರ್.ವಿ. ರಸ್ತೆಯಿಂದ ಸಿಲ್ಕ್​ಬೋರ್ಡ್ ಮಾರ್ಗವಾಗಿ ಬೊಮ್ಮಸಂದ್ರದವರೆಗೆ ಮೆಟ್ರೋ ಮಾರ್ಗ ನಿರ್ವಣವಾಗುತ್ತಿದೆ. 3ನೇ ಹಂತದಲ್ಲಿ ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೂ ಮೆಟ್ರೋ ವಿಸ್ತರಣೆ ಮಾಡುವುದಾಗಿ ಹಿಂದಿನ ಬಜೆಟ್​ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದರು.

ಬೆಳ್ಳಂದೂರು ಕೆರೆ ನೊರೆ ಸಮಸ್ಯೆ ಬಗ್ಗೆ ಮತ್ತೆ ನಿರ್ಲಕ್ಷ್ಯ

ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆ ನಿವಾರಿಸುವ ಯಾವುದೇ ಪ್ರಸ್ತಾಪ ಕುಮಾರಸ್ವಾಮಿ ಮಂಡಿಸಿರುವ ಬಜೆಟ್​ನಲ್ಲಿಲ್ಲ. ಬೆಳ್ಳಂದೂರು ಕೆರೆಯಲ್ಲಿನ ನೊರೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಾಗುವಂತಾಗಿತ್ತು. ಅಲ್ಲದೆ, ಕೆರೆಯ ಉಸ್ತುವಾರಿ ಹೊತ್ತಿರುವ ಬಿಡಿಎ ಮತ್ತು ಬಿಬಿಎಂಪಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಛೀಮಾರಿ ಹಾಕಿತ್ತು. ಇದಾದ ನಂತರ ಎಚ್ಚೆತ್ತುಕೊಂಡ ಸರ್ಕಾರ ಬೆಳ್ಳಂದೂರು ಕೆರೆ ನೊರೆ ಸಮಸ್ಯೆ ನಿವಾರಣೆಗೆ 50 ಕೋಟಿ ರೂ. ಘೋಷಿಸಿತ್ತು. ಆದರೆ, ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಯೋಜನೆ ರೂಪಿಸಿರಲಿಲ್ಲ. ಇದೀಗ ಕುಮಾರಸ್ವಾಮಿ ಮಂಡಿಸಿರುವ ಬಜೆಟ್​ನಲ್ಲಿ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಹೊಸ ಅನುದಾನ ನೀಡಿಲ್ಲ. ಬದಲಿಗೆ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮದ ಸಹಭಾಗಿತ್ವದೊಂದಿಗೆ ಕೆರೆಯ ನೀರನ್ನು ಶುದ್ಧೀಕರಿಸಲಾಗುತ್ತದೆ ಎಂದಿದ್ದಾರೆ. ಆದರೆ, ಯೋಜನೆಗೆ ಎಷ್ಟು ಹಣ ಬೇಕು, ಸರ್ಕಾರ ಎಷ್ಟು ಅನುದಾನ ನೀಡಲಿದೆ ಎಂಬ ಬಗ್ಗೆ ಪ್ರಸ್ತಾಪವಿಲ್ಲ.

ನೊರೆ ಸಮಸ್ಯೆಗೆ ಅಂಟುವಾಳ ಪರಿಹಾರ: ಬೆಳ್ಳಂದೂರು ಕೆರೆ ಮತ್ತು ಬೈರಮಂಗಲ ಕೆರೆ ನೀರು ಕಲುಷಿತವಾಗಿ, ನೊರೆ ಉತ್ಪತ್ತಿಯಾಗಲು ಸೋಪು ಹಾಗೂ ಡಿಟರ್ಜೆಂಟ್​ಯುುಕ್ತ ನೀರನ್ನು ಕೆರೆಗೆ ಬಿಡುತ್ತಿರುವುದು ಕಾರಣ ಎಂದು ತಿಳಿಸಿರುವ ಕುಮಾರಸ್ವಾಮಿ, ಅದಕ್ಕೆ ಪರ್ಯಾಯವಾಗಿ ಅಂಟುವಾಳ ಕಾಯಿ ಆಧಾರಿತ ಸೋಪು ಮತ್ತು ಡಿಟರ್ಜೆಂಟ್ ಬಳಕೆಗೆ ಉತ್ತೇಜಿಸಲು ಅಂಟುವಾಳ ಕಾಯಿ ಬೇಸಾಯಕ್ಕಾಗಿ 10 ಕೋಟಿ ರೂ. ನೀಡಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಿದ್ದಾರೆ.


ಬಿಬಿಎಂಪಿಗೆ ಯೋಜನೆ ಸಾಕೇ..?

|ಸಿ.ಎಸ್. ಸುಧೀರ್ ಸಿಇಒ ಸಂಸ್ಥಾಪಕರು ಇಂಡಿಯನ್ ಮನಿ ಡಾಟ್ ಕಾಂ

ಬೆಂಗಳೂರು ರಾಜ್ಯದ ಆರ್ಥಿಕ ಶಕ್ತಿ ಕೇಂದ್ರ. ರಾಜ್ಯದ ಆದಾಯದಲ್ಲಿ ಸಿಂಹಪಾಲು ಬರುವುದೇ ಇಲ್ಲಿಂದ. ಆದರೆ ಬಜೆಟ್​ನ ಯೋಜನೆಗಳ ವಿಚಾರಕ್ಕೆ ಬಂದಾಗ ಬಹುತೇಕ ಸಂದರ್ಭದಲ್ಲಿ ಮಹಾನಗರ ನಿರ್ಲಕ್ಷ್ಯಕ್ಕೊಳಪಟ್ಟಿದೆ. ಸಿಎಂ ಕುಮಾರಸ್ವಾಮಿ ಮಂಡಿಸಿರುವ ಬಜೆಟ್​ನಲ್ಲೂ ಐಟಿ ಸಿಟಿಗೆ ಹೆಚ್ಚು ಮಹತ್ವ ಸಿಕ್ಕಿಲ್ಲ.

ಬೆಂಗಳೂರಿನ ಸಮಗ್ರ ಸಾರಿಗೆ ಸೇವೆ ಸುಧಾರಣೆಗೆ ಬಿಎಂಟಿಸಿ, ಬಿಎಂಆರ್​ಸಿಎಲ್, ಬಿಡಿಎ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಏಕೀಕೃತ ಭೂ ಸಾರಿಗೆ ಪ್ರಾಧಿಕಾರ ರಚಿಸುವುದಾಗಿ ಬಜೆಟ್​ನಲ್ಲಿ ಘೊಷಿಸಲಾಗಿದೆ. ಇದೊಂದು ಉತ್ತಮ ತೀರ್ವನವೇ ಆದರೂ ಯೋಜನೆಗೆ ಹಣಕಾಸು ನಿಗದಿ ಮಾಡದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೆಂಗಳೂರಿನಲ್ಲಿ 15,825 ಕೋಟಿ ರೂ. ವೆಚ್ಚದಲ್ಲಿ 6 ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವುದಾಗಿ ತಿಳಿಸಲಾಗಿದೆ. 6 ಹಂತಗಳಲ್ಲಿ 4 ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಘೊಷಣೆ ಮಾಡಿರುವ ಉಪ ನಗರ ರೈಲು ಯೋಜನೆಗೆ ಸರ್ಕಾರ ಹಣ ಮೀಸಲಿಟ್ಟಿಲ್ಲ. 10 ಕೋಟಿ ರೂ. ವೆಚ್ಚದಲ್ಲಿ ಪೀಣ್ಯದಲ್ಲಿ ತ್ಯಾಜ್ಯವಸ್ತುಗಳ ಶುದ್ಧೀಕರಣ ಘಟಕ ಸ್ಥಾಪನೆ ಮಾಡಲು ತೀರ್ವನಿಸಿರುವುದು ಒಳ್ಳೆಯ ನಿರ್ಧಾರವಾದರೂ ಸಮಸ್ಯೆಯ

ತೀವ್ರತೆಗೆ ಹೋಲಿಸಿದಾಗ ಅದು ಸಾಲದು. ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 11,950 ಕೋಟಿ ರೂ. ಸಂಗ್ರಹಕ್ಕೆ ಕ್ರಮ ವಹಿಸುವುದಾಗಿ ಬಜೆಟ್​ನಲ್ಲಿ ತಿಳಿಸಲಾಗಿದೆ. ಆದರೆ ಅದಕ್ಕೆ ಸಂಪನ್ಮೂಲ ಹೇಗೆ ಎನ್ನುವ ಸ್ಪಷ್ಟತೆ ಇಲ್ಲ. ನಗರದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸುವ ಯೋಜನೆ ಬಗ್ಗೆ ವಾಸ್ತವದಲ್ಲಿ ಸರ್ಕಾರ ಚಿಂತಿಸಿದಂತಿಲ್ಲ. ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ 3 ಸಾವಿರ ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಳ್ಳುವ ಪ್ರಸ್ತಾವನೆ ಹೊಸದೇನೂ ಅಲ್ಲ. ಬಿಬಿಎಂಪಿಯ 110 ಹಳ್ಳಿಗಳು ಮತ್ತು ವಿಸ್ತರಣೆಯಾಗುತ್ತಿರುವ ಹೊಸ

ಲೇಔಟ್​ಗಳಿಗೆ ನೀರಿನ ಪೂರೈಕೆ ಮಾಡುವ ಯೋಜನೆಗಳು ಬಜೆಟ್​ನಲ್ಲಿ ಇಲ್ಲ. ಬಿಎಂಟಿಸಿಗೆ 100 ಕೋಟಿ ನೀಡಿ ಅನುತ್ಪಾದಕತೆಯನ್ನು ಪ್ರೋತ್ಸಾಹಿಸುತ್ತಿದೆ. ಬಜೆಟ್ ಎನ್ನುವುದು ಅಂಕಿ-ಅಂಶಗಳ ಗಣಿತ ಎನ್ನುವುದನ್ನು ಕುಮಾರಸ್ವಾಮಿ ಸಾಬೀತುಪಡಿಸಿದ್ದಾರೆ.


ಸರ್ಕಾರದಿಂದ ಬಿಎಂಟಿಸಿಗೆ 100 ಕೋಟಿ ರೂ. ನೇರ ಸಹಾಯಧನ

ನೂರಾರು ಕೋಟಿ ರೂ. ಸಾಲ ಹಾಗೂ ಅಂದಾಜು 260 ಕೋಟಿ ರೂ. ನಷ್ಟದ ಸುಳಿಯಲ್ಲಿ ಸಿಲುಕಿರುವ ಬಿಎಂಟಿಸಿಗೆ ಸರ್ಕಾರ ಕೊಂಚ ಆರ್ಥಿಕ ಚೇತರಿಕೆ ನೀಡಿದೆ. ಬಜೆಟ್​ನಲ್ಲಿ ನಿಗಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ 100 ಕೋಟಿ ರೂ. ಸಹಾಯಧನ ಘೋಷಿಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಸಾರ್ವಜನಿಕ ಸಾರಿಗೆ ಸೇವೆ ಬಲಪಡಿಸಲು ಸರ್ಕಾರ ನಿರ್ಧರಿಸಿದೆ. ಕೇವಲ ಟಿಕೆಟ್ ಆದಾಯದಿಂದ ನಗರ ಸಾರ್ವಜನಿಕ ಸಾರಿಗೆ ಸಂಸ್ಥೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಬಿಎಂಟಿಸಿಗೆ 100 ಕೋಟಿ ರೂ.ಗಳ ನೇರ ಸಹಾಯಧನ ನೀಡಲಿದೆ ಎಂದು ಸಿಎಂ ಘೋಷಿಸಿದರು.

3 ವರ್ಷದಿಂದ ಸಹಾಯ

ಒಂದು ಸಾವಿರ ಬಸ್​ಗಳ ಖರೀದಿಗೆ ನಿಗಮ ತೆಗೆದುಕೊಳ್ಳುವ ಸಾಲಕ್ಕೆ ಆಗುವ ಬಡ್ಡಿ ಮೊತ್ತವನ್ನು ಪಾವತಿಸುವುದಾಗಿ 2016-17ನೇ ಸಾಲಿನಲ್ಲಿ ಸರ್ಕಾರ ಘೋಷಿಸಿತ್ತು. 2017-18ನೇ ಸಾಲಿನ ಬಜೆಟ್​ನಲ್ಲಿ 1,500 ಬಸ್​ಗಳ ಖರೀದಿಗೆ ಅಗತ್ಯವಿರುವ ಹಣ ನೀಡುವುದಾಗಿ ತಿಳಿಸಿತ್ತು. ಇದೀಗ 100 ಕೋಟಿ ರೂ. ನೇರ ಸಹಾಯಧನ ನೀಡಲಾಗುತ್ತಿದೆ.

4,236 ಹೊಸ ಬಸ್ ಸೇರ್ಪಡೆ

ನಾಲ್ಕೂ ನಿಗಮಗಳಿಗೆ ಒಟ್ಟು 4,236 ಹೊಸ ಬಸ್​ಗಳನ್ನು ನೀಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ. ಇದರಲ್ಲಿ ಕೆಎಸ್​ಆರ್​ಟಿಸಿಗೆ 801 ಬಸ್, ಈಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1,160, ವಾಯವ್ಯ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 650 ಹಾಗೂ ಬಿಎಂಟಿಸಿಗೆ ಹೆಚ್ಚುವರಿ 1,625 ಬಸ್​ಗಳು ದೊರೆಯಲಿವೆ. ಕರ್ನಾಟಕ ಸರ್ಕಾರದ ವಿದ್ಯುತ್ ವಾಹನ ನೀತಿ-2017ರಡಿ ಎಲೆಕ್ಟ್ರಿಕ್ ಬಸ್ ಬಳಸುವ ನಿಟ್ಟಿನಲ್ಲಿ ಬಿಎಂಟಿಸಿ 80 ಎಲೆಕ್ಟ್ರಿಕ್ ಬಸ್​ಗಳನ್ನು ಕಾರ್ಯಾಚರಣೆಗೊಳಿಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

5 ವರ್ಷದಲ್ಲೇ ಅತ್ಯಧಿಕ ನಷ್ಟ

2015-16ನೇ ಆರ್ಥಿಕ ವರ್ಷ ಹೊರತುಪಡಿಸಿ ಕಳೆದ 5 ವರ್ಷಗಳಲ್ಲಿ ಬಿಎಂಟಿಸಿ ಸತತ ನಷ್ಟದಲ್ಲೇ ಸಾಗುತ್ತಿದೆ. 2016-17ನೇ ಸಾಲಿನಲ್ಲಿ ನಿಗಮ 260 ಕೋಟಿ ರೂ. ನಷ್ಟದಲ್ಲಿತ್ತು. ಇದು ನಿಗಮದ ಇತಿಹಾಸದಲ್ಲೇ ಅಧಿಕ ನಷ್ಟವಾಗಿದೆ. ನಷ್ಟದ ಹೊರೆ ಇಳಿಸಿಕೊಳ್ಳಲು ನಿಗಮ 2016-17ರಲ್ಲಿ 80 ಕೋಟಿ ಮತ್ತು 2017-18ರಲ್ಲಿ 192 ಕೋಟಿ ರೂ. ಸಾಲ ಮಾಡಿಕೊಂಡಿದೆ. ಹೀಗಿದ್ದರೂ ನಷ್ಟದಿಂದ ಚೇತರಿಸಿಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.

Leave a Reply

Your email address will not be published. Required fields are marked *

Back To Top