ಸರಣಿ ಗೆಲುವಿನತ್ತ ಚಿತ್ತ: ಇಂದು ಕೊನೆಯ ಏಕದಿನ, ಗೇಲ್​ಗೆ ವಿದಾಯದ ಪಂದ್ಯ

ಪೋರ್ಟ್​ಆಫ್​ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ದಾಖಲೆಯ 9ನೇ ದ್ವಿಪಕ್ಷೀಯ ಸರಣಿ ಗೆಲುವಿನಿಂದ ಟೀಮ್ ಇಂಡಿಯಾ ಒಂದು ಜಯದ ದೂರದಲ್ಲಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕ್ವೀನ್ಸ್ ಪಾಕ್ ಓವಲ್ ಸ್ಟೇಡಿಯಂನಲ್ಲಿ ಬುಧವಾರ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಎದುರಾಗಲಿವೆ. ಈ ಪಂದ್ಯದಲ್ಲಿ ಭಾರತಕ್ಕೆ ಮಾತ್ರವೇ ಸರಣಿ ಗೆಲುವಿನ ಅವಕಾಶವಿದ್ದರೆ, ವಿಂಡೀಸ್ ಸಮಬಲ ಸಾಧಿಸುವ ಗುರಿಯೊಂದಿಗೆ ಆಡಲಿದೆ.

ಮಧ್ಯಮ ಓವರ್​ಗಳಲ್ಲಿ ವಿಂಡೀಸ್​ನ ನೀರಸ ಬ್ಯಾಟಿಂಗ್ 2ನೇ ಏಕದಿನ ಪಂದ್ಯದಲ್ಲಿ ತಂಡದ ಸೋಲಿಗೆ ಕಾರಣವಾಗಿತ್ತು. ಆದರೆ, ಕೊನೆಯ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಿರ್ವಹಣೆ ತೋರುವ ಮೂಲಕ ಸರಣಿ ಸಮಬಲ ಸಾಧಿಸುವ ವಿಶ್ವಾಸದಲ್ಲಿ ವಿಂಡೀಸ್ ತಂಡವಿದೆ. ವಿಶ್ವಕಪ್​ನಲ್ಲಿ ಆಡಿದ ರೀತಿಯಲ್ಲಿಯೇ 2ನೇ ಏಕದಿನದಲ್ಲಿ ವೆಸ್ಟ್ ಇಂಡೀಸ್ ನಿರ್ವಹಣೆ ತೋರಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವ ತಂಡ ಪಂದ್ಯ ಸಾಗಿದಂತೆ ಎದುರಾಳಿ ತಂಡದ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳುತ್ತಿತ್ತು. ಅಂತಿಮ ಏಕದಿನ ಆಡುವ ಮುನ್ನ, ವೆಸ್ಟ್ ಇಂಡೀಸ್ ತಂಡ ಇನ್ನೊಂದು ಸರಣಿ ಸೋಲು ಎದುರಿಸುವ ಭೀತಿಯಲ್ಲಿದೆ. ಸರಣಿ ಸೋಲನ್ನು ತಪ್ಪಿಸಿಕೊಳ್ಳುವುದರೊಂದಿಗೆ ಏಕದಿನ ರ್ಯಾಂಕಿಂಗ್​ನಲ್ಲಿ 8ನೇ ಸ್ಥಾನಕ್ಕೆ ಕುಸಿಯುವ ಅಪಾಯದಿಂದ ತಪ್ಪಿಸಿಕೊಳ್ಳಬೇಕಾದಲ್ಲಿ ಜೇಸನ್ ಹೋಲ್ಡರ್ ನೇತೃತ್ವದ ತಂಡಕ್ಕೆ ಜಯ ಅನಿವಾರ್ಯವಾಗಿದೆ.

ಭಾರತದ ಆಯಾಮದಲ್ಲಿ ನೋಡುವುದಾದರೆ, ಏಕದಿನ ಮಾದರಿಯಲ್ಲಿ ಕೊಹ್ಲಿ ಪ್ರಭುತ್ವ ಮುಂದುವರಿಸಿದ್ದಾರೆ. ಆದರೆ, ಧವನ್​ರಿಂದ ಟೀಮ್ ಇಂಡಿಯಾ ದೊಡ್ಡ ಇನಿಂಗ್ಸ್​ನ ನಿರೀಕ್ಷೆ ಯಲ್ಲಿದೆ. ಏಕದಿನ ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್, ಆಕರ್ಷಕ 71 ರನ್ ಬಾರಿಸುವ ಮೂಲಕ ಗಮನಸೆಳೆದಿದ್ದಾರೆ.

ಕಳೆದ 20 ಏಕದಿನ ಸರಣಿ/ಟೂರ್ನಮೆಂಟ್​ಗಳ ಪೈಕಿ ವಿಂಡೀಸ್ ತಂಡ ಜಯ ಸಾಧಿಸಿರುವುದು ಒಂದರಲ್ಲಿ ಮಾತ್ರ. 2014ರಲ್ಲಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಂಡೀಸ್ ತಂಡ ಕ್ಲೀನ್​ಸ್ವೀಪ್ ಮಾಡಿತ್ತು. ಆ ಬಳಿಕ ವಿಂಡೀಸ್, ವಿಶ್ವಕಪ್ ಅರ್ಹತಾ ಟೂರ್ನಿ, ವಿಶ್ವಕಪ್ ಟೂರ್ನಿ, ಹಲವು ದ್ವಿಪಕ್ಷೀಯ ಸರಣಿ ಹಾಗೂ ಒಂದು ತ್ರಿಕೋನ ಏಕದಿನ ಸರಣಿ ಆಡಿದರೂ, ಗೆಲುವು ಸಾಧಿಸುವಲ್ಲಿ ಯಶ ಕಂಡಿಲ್ಲ. ಈ ನಡುವೆ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಿನ ಸರಣಿಯನ್ನು ಡ್ರಾ ಮಾಡಿಕೊಂಡಿತ್ತು. ಈಗ ಮತ್ತೊಂದು ಸರಣಿ ಸೋಲಿನ ಅಂಚಿನಲ್ಲಿ ವಿಂಡೀಸ್ ಬಂದು ನಿಂತಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಸಂಪೂರ್ಣ 100 ಓವರ್​ಗಳ ಪಂದ್ಯ ಸಾಗುವುದು ಅನುಮಾನ. ಇಡೀ ದಿನ ಮಳೆ ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಪಿಚ್ ರಿಪೋರ್ಟ್

ಕ್ವೀನ್ಸ್ ಪಾರ್ಕ್ ಓವಲ್ ಮೈದಾನ ಬ್ಯಾಟಿಂಗ್ ಸ್ನೇಹಿ. 2ನೇ ಏಕದಿನ ಪಂದ್ಯದ ರೀತಿಯ ಪಿಚ್ ಇರಲಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಕಳೆದ 6 ಪಂದ್ಯಗಳಲ್ಲಿ 5 ಬಾರಿ ಜಯ ಸಾಧಿಸಿದೆ. ಆ ಕಾರಣದಿಂದಾಗಿ ಪಂದ್ಯಕ್ಕೆ ಟಾಸ್ ಪ್ರಮುಖ ಪಾತ್ರ ವಹಿಸಲಿದೆ.

80-ಕೊಹ್ಲಿಗೆ ಇದು ನಾಯಕನಾಗಿ 80ನೇ ಪಂದ್ಯ ಎನಿಸಲಿದೆ. ಆ ಮೂಲಕ ಗರಿಷ್ಠ ಏಕದಿನಗಳಲ್ಲಿ ತಂಡ ಮುನ್ನಡೆಸಿದ ಆಟಗಾರನ ಪಟ್ಟಿಯಲ್ಲಿ ದ್ರಾವಿಡ್​ರನ್ನು (79) ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಲಿದ್ದಾರೆ.

ಕ್ರಿಸ್ ಗೇಲ್​ಗೆ ವೃತ್ತಿಜೀವನದ ಅಂತಿಮ ಏಕದಿನ

ಕಳೆದ ಪಂದ್ಯದಲ್ಲಷ್ಟೇ ವಿಂಡೀಸ್ ಪರ 300 ಏಕದಿನ ಪಂದ್ಯವಾಡಿದ ಮೊದಲ ಆಟಗಾರ ಎನ್ನುವ ಗೌರವಕ್ಕೆ ಪಾತ್ರರಾಗಿದ್ದ ಕ್ರಿಸ್ ಗೇಲ್​ಗೆ ಇದು ವೃತ್ತಿಜೀವನದ ಕೊನೇ ಅಂತಾರಾಷ್ಟ್ರೀಯ ಪಂದ್ಯ. ಟಿ20 ಮಾದರಿಯಲ್ಲಿ ಅವರು ಉಳಿದುಕೊಳ್ಳಲಿದ್ದರೂ, ಏಕದಿನ ಹಾಗೂ ಟೆಸ್ಟ್ ಮಾದರಿಯಿಂದ ನಿವೃತ್ತರಾಗಲಿ ದ್ದಾರೆ. ಭಾರತ ವಿರುದ್ಧ ಕಿಂಗ್​ಸ್ಟನ್​ನಲ್ಲಿ ಆಡುವ ಟೆಸ್ಟ್ ಪಂದ್ಯದ ಮೂಲಕ ಕ್ರಿಕೆಟ್​ಗೆ ವಿದಾಯ ಹೇಳಲು ಗೇಲ್ ಬಯಸಿದ್ದರು. ಆದರೆ, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಅವರು ವಿಫಲರಾಗಿದ್ದಾರೆ. 1999ರಲ್ಲಿ ಭಾರತ ವಿರುದ್ಧ ಟೊರಾಂಟೊದಲ್ಲಿ ಏಕದಿನಕ್ಕೆ ಗೇಲ್ ಪದಾರ್ಪಣೆ ಮಾಡಿದ್ದರು.

04- ಕುಲದೀಪ್ ಯಾದವ್ ಇನ್ನು ನಾಲ್ಕು ವಿಕೆಟ್ ಉರುಳಿಸಿದರೆ, ಏಕದಿನ ಕ್ರಿಕೆಟ್​ನಲ್ಲಿ 100 ವಿಕೆಟ್ ಸಾಧನೆ ಮಾಡಲಿದ್ದಾರೆ.

62- ಭಾರತ ತಂಡ ಈ ಪಂದ್ಯ ಗೆದ್ದರೆ, ವಿಂಡೀಸ್ ವಿರುದ್ಧ ಆಡಿದ 130 ಪಂದ್ಯದಲ್ಲಿ 62 ಗೆಲುವು ಕಂಡ ಸಾಧನೆ ಮಾಡಲಿದೆ. ಭಾರತ 62 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದರಿಂದ ತಂಡದ ಸೋಲು-ಗೆಲುವಿನ ಅನುಪಾತ ಶೇ.50ಕ್ಕೆ ಏರಲಿದೆ. ಇದರಿಂದಾಗಿ ಆಸೀಸ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರವೇ ಭಾರತ ತಂಡ ಗೆಲುವಿಗಿಂದ ಹೆಚ್ಚಾಗಿ ಸೋಲನ್ನೇ ಕಂಡಿದೆ.

ಟೀಮ್ ನ್ಯೂಸ್

ಭಾರತ: ಯಾವುದೇ ಬದಲಾವಣೆ ಕಾಣು ವುದು ಅನುಮಾನ. ಸರಣಿ ವಶಪಡಿಸಿಕೊಳ್ಳಲು ಗೆಲುವು ಅಗತ್ಯವಾಗಿರು ವುದರಿಂದ ಭಾರತ ಪ್ರಯೋಗವಿಲ್ಲದೆ, ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಆದ್ಯತೆ ನೀಡಲಿದೆ.

ವೆಸ್ಟ್ ಇಂಡೀಸ್: ಆರಂಭಿಕ ಎವಿನ್ ಲೆವಿಸ್ 2ನೇ ಏಕದಿನ ಪಂದ್ಯದಲ್ಲಿ 65 ರನ್ ಸಿಡಿಸಿ ಮಿಂಚಿದ್ದರು. ಆದರೆ ಈ ವೇಳೆ ಅವರು ಮೀನಖಂಡದ ಗಾಯಕ್ಕೆ ತುತ್ತಾಗಿದ್ದು, ಅಂತಿಮ ಪಂದ್ಯಕ್ಕೆ ಫಿಟ್ ಆಗುವುದು ಅನುಮಾನವೆನಿಸಿದೆ. ಅವರು ಅಲಭ್ಯರಾದರೆ ಜಾನ್ ಕ್ಯಾಂಪ್​ಬೆಲ್ ಅವಕಾಶ ಪಡೆಯಲಿದ್ದಾರೆ.

ಟೀಮ್ ಇಂಡಿಯಾ ಮ್ಯಾನೇಜರ್​ಗೆ ಛೀಮಾರಿ?

ನವದೆಹಲಿ: ಟ್ರಿನಿಡಾಡ್​ನಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳ ಜತೆ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕೆ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಸುನೀಲ್ ಸುಬ್ರಮಣ್ಯಂಗೆ ಬಿಸಿಸಿಐ ಗರಿಷ್ಠ ದರ್ಜೆಯ ಛೀಮಾರಿ ಹಾಕುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿ ಜತೆ ಮ್ಯಾನೇಜರ್ ಸುನೀಲ್ ಕೂಡ 45 ದಿನಗಳ ವಿಸ್ತರಣೆ ಪಡೆದುಕೊಂಡಿದ್ದಾರೆ. ಆದರೆ, ಈ ಪ್ರಕರಣದ ಕಾರಣದಿಂದಾಗಿ ಅವರು ಇದೇ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನವಾಗಿದೆ.

‘ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ, ಭಾರತ ತಂಡದ ಆಟಗಾರರು ಜಲ ಸಂರಕ್ಷಣೆಯ ಕುರಿತಾಗಿ ಸಣ್ಣ ಜಾಹೀರಾತಿನಲ್ಲಿ ಭಾಗವಹಿಸಬೇಕಿತ್ತು. ಭಾರತ ತಂಡ ಕೆರಿಬಿಯನ್ ದ್ವೀಪರಾಷ್ಟ್ರವಾದ ಗಯಾನದಲ್ಲಿ ಇದ್ದ ಕಾರಣ ಅಲ್ಲಿನ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಇದರ ಜವಾಬ್ದಾರಿ ನೀಡಲಾಗಿತ್ತು. ಬಿಸಿಸಿಐ ಕೂಡ ಟೀಮ್ ಮ್ಯಾನೇಜರ್ ಸುನೀಲ್ ಸುಬ್ರಮಣ್ಯಂ ಅವರನ್ನು ಸಂಪರ್ಕ ಮಾಡುವಂತೆ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ತಿಳಿಸಿತ್ತು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಸುನೀಲ್​ರನ್ನು ಸಂರ್ಪಸಿ, ಸಹಕರಿಸುವಂತೆ ಹೇಳಿದ್ದಾರೆ. ಈ ವೇಳೆ ಸುನೀಲ್, ‘ರಾಶಿಗಟ್ಟಲೆ ಮೆಸೇಜ್ ಕಳಿಸಿ ತೊಂದರೆ ನೀಡಬೇಡಿ’ ಎಂದಿದ್ದಲ್ಲದೆ, ಅವರ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ ಎಂದಿದ್ದಾರೆ. ಟೀಮ್ ಮ್ಯಾನೇಜರ್ ಸಹಕಾರ ನೀಡದ ಬಗ್ಗೆ ರಾಯಭಾರ ಕಚೇರಿಯಿಂದ ಸರ್ಕಾರಕ್ಕೆ ಮಾಹಿತಿ ಬಂದಿತ್ತು. ಸರ್ಕಾರ ಇದನ್ನು ಬಿಸಿಸಿಐಗೆ ತಲುಪಿಸಿತ್ತು. -ಪಿಟಿಐ

Leave a Reply

Your email address will not be published. Required fields are marked *